ಮಲೆನಾಡಿನ ವಿಶೇಶ – ಕರಿಮೀನು

– ಅಮ್ರುತ್ ಬಾಳ್ಬಯ್ಲ್.

ಮಲೆನಾಡು ತನ್ನದೇ ಆದ ಬೌಗೋಳಿಕತೆ, ಮಳೆಕಾಡು, ತಿಂಗಳುಗಟ್ಟಲೆ ಸುರಿಯುವ ಮಳೆ ಮತ್ತು ಹವಾಮಾನದಿಂದ ಪ್ರಸಿದ್ದಿ ಪಡೆದಿದೆ. ಇಲ್ಲಿ ಹೆಸರಿಸಿದ ಈ ಎಲ್ಲಾ ಅಂಶಗಳು ಮಲೆನಾಡಿಗರ ಸಂಸ್ಕ್ರುತಿಯ ಮೇಲೆ ತಮ್ಮ ಪರಿಣಾಮ ಬೀರಿ ಇಲ್ಲಿನ ಜನಜೀವನಕ್ಕೊಂದು ವಿಶಿಶ್ಟತೆಯನ್ನು ಮೂಡಿಸಿವೆ.

ಮುಂಗಾರು ಶುರುವಾಯಿತು ಎಂದರೆ ಮಲೆನಾಡಿಗರಿಗೆ ಒಂದು ಹಬ್ಬ. ಜೂನ್-ಜುಲೈ ತಿಂಗಳಿಂದ ಮಳೆಗಾಲ ಹಿಡಿದಾಗ ಹಡ್ಡೆ/ಕಾಡಿನಲ್ಲಿ ಏಳುವ ಕಳಲೆ(ಎಳೆ ಬಿದಿರು), ಕಾಡುಅಣಬೆಗಳು, ಹಳ್ಳದಲ್ಲಿ ಸಿಗುವ ಹತ್ಮೀನು, ಏಡಿಗಳು, ಕಾಡಿನಲ್ಲಿ ಸಿಗುವ ಹಲಸು, ಕಾಡುಹಣ್ಣುಗಳು ಹೀಗೆ ಇವೆಲ್ಲವನ್ನು ಆರಿಸಿ ತಂದು ತಿನಿಸುಗಳನ್ನು ಮಾಡಿ ತಿನ್ನುವುದು ಮಲೆನಾಡಿಗರ ವಿಶಿಶ್ಟ ಊಟದ ಸಂಸ್ಕ್ರುತಿಗೆ ಹಿಡಿದ ಕನ್ನಡಿಯಾಗಿದೆ.

ಏನಿದು ಹತ್ಮೀನು ?

ಮಳೆಗಾಲ ಶುರುವಾಗಿ ಜಮೀನಿನ ನೀರು ಹಳ್ಳಕ್ಕೆ ಬಿದ್ದು ಹಳ್ಳದ ನೀರು ಹೊಳೆಗೆ ಸೇರಲು ಶುರುವಾದಾಗ ಹೊಳೆಯಲ್ಲಿರುವ ಮೀನುಗಳು ನೀರಿನ ವಿರುದ್ದ ದಿಕ್ಕಿಗೆ ಈಜುತ್ತಾ ಹೊಳೆಯಿಂದ ಹಳ್ಳಕ್ಕೆ, ಹಳ್ಳದಿಂದ ಜಮೀನಿಗೆ ಮೊಟ್ಟೆ ಇಡಲು ಬಂದು ಸೇರುತ್ತವೆ. ಒಂದೆರಡು ದಿನ ಜೋರು ಮಳೆಯಾದಾಗ ಮಲೆನಾಡಿಗರು ನೀರು ಬೀಳುವ ಜಾಗಗಳಲ್ಲಿ ಇರುಳಿನ ಹೊತ್ತು ಕಾದು ಕುಳಿತು ಈ ರೀತಿ ಬಂದು ಸೇರುವ ಮೀನುಗಳನ್ನು ಬೇಟೆಯಾಡುತ್ತಾರೆ. ಇವುಗಳಿಗೆ ಹತ್ಮೀನು(ಹತ್ತುವ ಮೀನು) ಎಂದು ಕರೆಯುತ್ತಾರೆ.

ಏನಿದು ಕರಿಮೀನು ?

ರೈತರು ಕರಿಮೀನನ್ನು ಹಿಡಿಯುವ ಬಗೆಯನ್ನು ಕಡಿದಾಳು ಎಸ್ ರಾಮಪ್ಪಗೌಡ ಅವರು, ಅವರ ಪುಸ್ತಕ ‘ಮಲೆನಾಡು ಶ್ರೀ ವೈಶ್ಣವ ನಾಮಧಾರಿ ಗೌಡ ಸಂಸ್ಕೃತಿ’ಯಲ್ಲಿ ವಿವರಿಸಿದ್ದಾರೆ. ನಾಟಿಯಾದ ಮೇಲೆ ಬತ್ತದ ಸಸಿಗಳು ಸ್ವಲ್ಪ ಎತ್ತರಕ್ಕೆ ಬೆಳೆದ ಮೇಲೆ ಬಂದು ಸೇರುವ ಮೀನುಗಳು, ನೀರು ಕಟ್ಟಿದ ಬತ್ತದ ಗದ್ದೆಯಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಈ ಮರಿ ಮೀನುಗಳು ಬೆಳೆದು, ಮಳೆಗಾಲ ಕಡಿಮೆಯಾಗುವ ಹೊತ್ತಿಗೆ ಬರುವ ಮಳೆಗೆ, ಗದ್ದೆಯ ನೀರು ತುಂಬಿ ಹರಿಯುವಾಗ ಈ ಮೀನುಗಳು ಜಮೀನಿನಿಂದ ಹಳ್ಳಕ್ಕೆ, ಹಳ್ಳದಿಂದ ಹೊಳೆಗೆ ವಾಪಾಸು ಹೋಗುತ್ತವೆ. ಆ ಸಮಯದಲ್ಲಿ ರೈತರು ತಮ್ಮ ತಮ್ಮ ಜಮೀನಿನ, ಗದ್ದೆಯ ಎಲ್ಲಾ ನೀರು ಹರಿದು ಒಂದು ಕಡೆಯಿಂದ ಹೊರ ಹೋಗುವಂತೆ ಮಾಡಿ, ಗದ್ದೆಯ ನೀರು ಹೊರ ಹೋಗುವಾಗ, ಈ ಮೀನುಗಳನ್ನ ಹಿಡಿಯುವ ಏರ‍್ಪಾಟನ್ನು ಮಾಡಿಕೊಳ್ಳುತ್ತಾರೆ. ಈ ಮೀನುಗಳನ್ನು ಮನೆಗೆ ತಂದು ಅಡಿಕೆ ಒಣಗಿಸುವ ತಟ್ಟಿಯ ಮೇಲೆ ಹರಡಿ, ಅದನ್ನು ಮೂರ್‍ನಾಲ್ಕು ಅಡಿ ಎತ್ತರಕ್ಕೆ ಕಟ್ಟಿ, ಕೆಳಗಿನಿಂದ ಬೆಂಕಿಯನ್ನು ಹಾಕುತ್ತಾರೆ. ಈ ರೀತಿಯಲ್ಲಿ ಬೆಂಕಿ ಮತ್ತು ಹೊಗೆಯ ಶಾಕದಿಂದ ಒಣಗುವ ಮೀನುಗಳು ಕಪ್ಪನೆಯ ಬಣ್ಣಕ್ಕೆ ತಿರುಗುತ್ತವೆ, ಹಾಗಾಗಿ ಈ ಮೀನುಗಳಿಗೆ ‘ಕರಿಮೀನು’ ಎಂಬ ಹೆಸರಿದೆ ಎಂದು ರಾಮಪ್ಪಗೌಡ ಅವರು ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ (ಈಗಲೂ ಮಳೆಗಾಲದಲ್ಲಿ ಅಡಿಕೆ ಒಣಗಿಸಲು, ಮುರುಗನ ಹುಳಿಯನ್ನು ಒಣಗಿಸಲು ಹೀಗೆ ‘ಹೊಗೆದಟ್ಟಿ’ ಹಾಕುವ ಬಗೆ ಮಲೆನಾಡಿನಲ್ಲಿ ಇದೆ). ಒಣಗಿಸಿದ ಕರಿಮೀನುಗಳನ್ನು ಹೆಚ್ಚು ದಿನ ಕಾಯ್ದಿಟ್ಟುಕೊಳ್ಳಲು ಮಲೆನಾಡಿಗರು ಏನು ಮಾಡುತ್ತಾರೆ ಎಂಬುದನ್ನೂ ಮತ್ತು ಒಣಗಿದ ಕರಿಮೀನಿನ ಚಟ್ನಿ ಮಾಡುವ ಬಗೆಯನ್ನೂ ಅವರು ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ. ಕರಿಮೀನು ಮಾರಲು ಬರುವ ‘ಕರಿಮೀನು ಸಾಬಿ’ ಬಗ್ಗೆ ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಉಲ್ಲೇಕವಿದೆ.

ಹಿಂದೆ ಇದನ್ನು ಊಟಕ್ಕೆ ನೆಂಚಿಕೊಳ್ಳಲು ಅತವಾ ಬೈನೆ ಹೆಂಡದ(ಕಳ್ಳು) ಜೊತೆಗೆ ನೆಂಚಲು ಬಳಸುತ್ತಿದ್ದರು. ಈಗ ಬೇಸಾಯದಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಿರುವುದರಿಂದ, ಗದ್ದೆಗಳಲ್ಲಿ ಮೀನುಗಳ ಸಂತತಿ ಕಡಿಮೆಯಾಗಿದೆ. ಈಗ ಕರಿಮೀನು ಮಾಡುವವರು ಮಲೆನಾಡಲ್ಲಿ ಕಾಣಸಿಗುವುದು ಬಹಳ ಕಡಿಮೆ. ಇದಲ್ಲದೇ, ಸಮುದ್ರದ ಒಣಮೀನುಗಳು ಕರಿಮೀನಿನ ಜಾಗವನ್ನು ಆಕ್ರಮಿಸಿಕೊಂಡಿವೆ ಮತ್ತು ಅವುಗಳಿಂದ ಮೀನಿನ ಚಟ್ನಿಯನ್ನು ಮಾಡುತ್ತಾರೆ. ಕರಿಮೀನು ಚಟ್ನಿಯ ಕತೆಗಳು ಅಜ್ಜಿಯರ ಬಾಯಲ್ಲಿಯೇ ಉಳಿದು ಮಾಯವಾಗುವ ಮುನ್ನ ಎಲ್ಲರಿಗೂ ಇದರ ಬಗ್ಗೆ ತಿಳಿಯಲಿ ಎಂಬುದೇ ಈ ಬರಹದ ಆಶಯ.

(ಚಿತ್ರ ಸೆಲೆ: malnadtimes.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: