ಕಾಯೌ ಶ್ರೀ ಗೌರಿ – ಮೈಸೂರು ಸಂಸ್ತಾನದ ನಾಡ ಗೀತೆ
– ಕೆ.ವಿ.ಶಶಿದರ.
ಇಂದಿನ ಪೀಳಿಗೆಯ ಬಹಳಶ್ಟು ಜನಕ್ಕೆ ಮೈಸೂರು ಸಂಸ್ತಾನದ ನಾಡ ಗೀತೆಯ ಬಗ್ಗೆ ಮಾಹಿತಿ ಇಲ್ಲ. ಮೈಸೂರು ಸಂಸ್ತಾನದ ನಾಡ ಗೀತೆಯ ಪೂರ‍್ಣ ಸಾಹಿತ್ಯ ಹೀಗಿದೆ.
ಕಾಯೌ ಶ್ರೀ ಗೌರಿ ಕರುಣಾಲಹರಿ
ತೋಯಜಾಕ್ಷಿ ಶಂಕರೀಶ್ವರಿವೈಮಾನಿಕ ಭಾಮಾರ್ಚಿತ ಕೋಮಲಕರ ಪಾದೇ
ಶ್ರೀಮಾನ್ವಿತ ಭೂಮಾಸ್ಪದೆ ಕಾಮಿತ ಫಲದೇ ||1||ಶುಂಭಾದಿಮ ದಾಂಭೋನಿಧಿ ಕುಂಭಜ ನಿಭ ದೇವೀ
ಜಂಭಾಹಿತ ಸಂಭಾವಿತೆ ಶಾಂಭವಿ ಶುಭವೀ ||2||ಶ್ರೀ ಜಯಚಾಮುಂಡಿಕೆ ಶ್ರೀ ಜಯಚಾಮೇಂದ್ರ
ನಾಮಾಂಕಿತ ಭೂಮೀಂದ್ರ ಲಲಾಮನ ಮುದದೇ ||3||
ಈ ಹಾಡಿನ ಹಿನ್ನೆಲೆ
ಕಾಯೌ ಶ್ರೀ ಗೌರಿ ಹಾಡಿನ ಸಾಹಿತ್ಯವು ಕನ್ನಡಿಗರಲ್ಲಿ ಬಕ್ತಿಗೀತೆಯಾಗಿ ಅತ್ಯಂತ ಜನಪ್ರಿಯವಾಗಿದೆ. ಕರ‍್ನಾಟಕದ ಇತಿಹಾಸದಲ್ಲಿ ಈ ಹಾಡಿಗೆ ಮಹಾಕಾವ್ಯದ ಮಾನ್ಯತೆಯಿದೆ. ಈ ಹಾಡಿನ ಗಾಯನಕ್ಕೆ “ಅಬಿವ್ಯಕ್ತಿ 1881” ಎಂದು ಕರೆಯಲಾಗುತ್ತದೆ. 1881ರಲ್ಲಿ, ಬ್ರಿಟೀಶರು ಮಹಾರಾಜ ಚಾಮರಾಜ ಒಡೆಯರ್ ಅವರ ನೇತ್ರುತ್ವದಲ್ಲಿ ಮೈಸೂರನ್ನು ತಮ್ಮದೇ ರಾಜ್ಯವನ್ನಾಗಿ ಮಾಡಲು ನಿರ‍್ದರಿಸಿದಾಗ, ಈ ಒಂದು ಸುಸಂದರ‍್ಬದ ಸ್ಮರಣೆಗಾಗಿ ನಾಡ ಗೀತೆಯನ್ನು ರಚಿಸುವಂತೆ ಆಸ್ತಾನ ಕವಿಗಳಲ್ಲಿ ಚಾಮರಾಜ ಒಡೆಯರ್ ರವರು ವಿನಂತಿಸಿದರು. ಮಹಾರಾಜ ಚಾಮರಾಜ ಒಡೆಯರ್ ನೇತ್ರುತ್ವದಲ್ಲಿ ಮೈಸೂರು ಸಾಮ್ರಾಜ್ಯದ ಆಸ್ತಾನ ಕವಿಯಾಗಿದ್ದ ಶ್ರೀ ಬಸವಪ್ಪ ಶಾಸ್ತ್ರಿಗಳು ಮೈಸೂರು ರಾಜ್ಯ ಗೀತೆಯನ್ನು ಬರೆದು, ಸಂಯೋಜಿಸಿದ್ದಾರೆ. ಈ ಹಾಡು ಒಡೆಯರ್ ರಾಜವಂಶದ ಅಡಿಯಲ್ಲಿ, ಮೈಸೂರು ಸಾಮ್ರಾಜ್ಯದ ಅದಿಕ್ರುತ ಗೀತೆಯಾಗಿದೆ. ಶ್ರೀ ಬಸವಪ್ಪ ಶಾಸ್ತ್ರಿಗಳ ಈ ನಾಡ ಗೀತೆ “ಕಾಯೌ ಶ್ರೀ ಗೌರಿ” ದೀರ ಶಂಕರಾಬರಣಂ (ಕರ‍್ನಾಟಕ) ಮತ್ತು ಬಿಲಾವಲ್(ಹಿಂದೂಸ್ತಾನಿ)ಯಲ್ಲಿ ರಚಿತವಾಗಿದೆ. ಈ ನಾಡ ಗೀತೆಯ ಮೂರನೇ ಚರಣದಲ್ಲಿ, ಹೊಸ ಉತ್ತರಾದಿಕಾರಿ ಅದಿಕಾರಕ್ಕೆ ಬಂದಾಗ, ಅವರ ಹೆಸರನ್ನು ಬಳಸಲಾಗುತ್ತದೆ. ಹೀಗಾಗಿ ಕೊನೆಯ ಚರಣ ನಿರಂತರವಾಗಿ ಮಾರ‍್ಪಾಡಿಗೆ ಒಳಾಗಾಗುತ್ತಿದೆ.
ಬದಲಾವಣೆಗೊಂಡ 3ನೇ ಚರಣಗಳು ಈ ಕೆಳಕಂಡಂತಿವೆ:
ಶ್ಯಾಮಾಲಿಕೆ ಚಾಮುಂಡಿಕೆ ಸೋಮಕುಲಜ ಕೃಷ್ಣ
ನಾಮಾಂಕಿತ ಭೂಮೀಂದ್ರ ಲಲಾಮನ ಮುದದೇ ||3||
ಶ್ರೀ ಜಯಚಾಮುಂಡಿಕೆ ಶ್ರೀ ಜಯಚಾಮೇಂದ್ರ
ನಾಮಾಂಕಿತ ಭುಮೀಂದ್ರ ಲಲಾಮನ ಮುದದೇ ||3||
ಯದುವೀರ ಶ್ರೀಕೃಷ್ಣದತ್ತ ಚಾಮೇಂದ್ರನೃಪನ;
ಮಹಿಶೂರ ಸಿರಿಪುರದ ಲಲಾಮನ ಮುದದೇ ||3||
ಮೂರನೇ ಚರಣದಲ್ಲಿ ಮೇಲಿನ ಯಾವುದೇ ಸಾಲುಗಳಿರಲಿ, ಮೈಸೂರು ನಾಡ ಗೀತೆಯನ್ನು ಕೇಳುತ್ತಿದ್ದರೆ, ಮನಸ್ಸು ಮುದಗೊಳ್ಳುವದಲ್ಲದೆ ಶಾಂತಿಯು ನೆಲಸುತ್ತದೆ. ಅಯಾಚಿತ ಆನಂದ ನಮ್ಮದಾಗುತ್ತದೆ.
(ಮಾಹಿತಿ ಮತ್ತು ಚಿತ್ರ ಸೆಲೆ: en.wikipedia.org, latestkannadalyrics.com, scroll.in, kavivani.wordpress.com )
ಒಳ್ಳೆಯ ಮಾಹಿತಿ ಸರ್