ಎಕ್ಸ್‌ಪೋ 2020 ದುಬೈ

–  ಪ್ರಕಾಶ್ ಮಲೆಬೆಟ್ಟು.

ಹಿನ್ನೆಲೆ

ಎಕ್ಸ್‌ಪೋ 2020 ಪ್ರಪಂಚದಾದ್ಯಂತ ತುಂಬಾನೇ ಸದ್ದು ಮಾಡುತ್ತಿದೆ! ಹಾಗಾದರೆ ಏನಿದು ಎಕ್ಸ್‌ಪೋ 2020 ಅಂತ ನಾವು ತಿಳಿದುಕೊಳ್ಳಬೇಕಾದಲ್ಲಿ ಕೊಂಚ ಇತಿಹಾಸವನ್ನು ಇಣುಕಿ ನೋಡಬೇಕಾಗುತ್ತದೆ. ವರ‍್ಡ್ ಎಕ್ಸ್‌ಪೋ (World Expo) ಎನ್ನುವುದು ವಿಶ್ವದ ಅತಿದೊಡ್ಡ ಸಾಂಸ್ಕ್ರುತಿಕ ಕೂಟ. ಬಹುಶಹ ಒಲಿಪಿಂಕ್ಸ್ ಮತ್ತು ಪುಟ್ಬಾಲ್ ಬಿಟ್ಟರೆ ಪ್ರಪಂಚದಾದ್ಯಂತ ಅತೀ ಹೆಚ್ಚು ಪ್ರವಾಸಿಗರನ್ನು ಆಕರ‍್ಶಿಸುವ ಮೇಳವೇ ಈ ಎಕ್ಸ್‌ಪೋ. ಎಕ್ಸ್‌ಪೋ ಒಂದು ಜಾಗತಿಕ ಮೇಳವಾಗಿದ್ದು , ಇದರ ಉದ್ದೇಶ ಮಾನವಕುಲ ಎದುರಿಸುತ್ತಿರುವ ಮೂಲಬೂತ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದಾಗಿದೆ. ಎಕ್ಸ್‌ಪೋ ನಡೆಯುವ ದೇಶದ ಸರ‍್ಕಾರಗಳು, ದೇಶಗಳನ್ನು ಮತ್ತು ಅಂತಾರಾಶ್ಟ್ರೀಯ ಸಂಸ್ತೆಗಳನ್ನು ಒಟ್ಟುಗೂಡಿಸಿ ನಡೆಸುವ ಈ ಸಾರ‍್ವಜನಿಕ ಕಾರ‍್ಯಕ್ರಮದಲ್ಲಿ ಲಕ್ಶಾಂತರ ಜನ ಬಾಗಿಯಾಗುತ್ತಾರೆ. ಈ ಸಮ್ಮೇಳನ ಹೊಸ ಕ್ರಿಯಾತ್ಮಕತೆಯನ್ನು ಉಂಟು ಮಾಡುವುದಲ್ಲದೇ ಆತಿತೇಯ ನಗರವನ್ನು ಆರ‍್ತಿಕವಾಗಿ ಬಲಪಡಿಸುವ ಸಾಮರ‍್ತ್ಯ ಹೊಂದಿದೆ. ಪ್ರಪಂಚದ ಮೊತ್ತ ಮೊದಲ ಎಕ್ಸ್‌ಪೋ ನಡೆದದ್ದು 1851 ರಲ್ಲಿ, ಲಂಡನ್ ನಗರದಲ್ಲಿ. ಪ್ರತಿ ಐದು ವರುಶಕ್ಕೆ ಒಮ್ಮೆ ನಡೆಯುವ ಈ ಮಹಾಸಮ್ಮೇಳನದ ಆತಿತೇಯ ದೇಶದ  ಆಯ್ಕೆ ಮತದಾನದ ಮೂಲಕ ನಡೆಯುತ್ತದೆ. ಕಡೆಯ ಎಕ್ಸ್‌ಪೋ ನಡೆದದ್ದು 2015 ರಲ್ಲಿ ಇಟಲಿಯ ಮಿಲನ್ ನಗರದಲ್ಲಿ.

ಎಕ್ಸ್‌ಪೋ 2020 ದುಬೈ

2020ರ ಎಕ್ಸ್‌ಪೋ ಯು.ಎ.ಇ ದೇಶದ ದುಬೈ ನಗರದಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ 19 ಪಿಡುಗು ಎಲ್ಲರ ಲೆಕ್ಕಾಚಾರಗಳನ್ನು ತೆಲೆಕೆಳಗೆ ಮಾಡಿಬಿಟ್ಟಿತು. 2020ರ ಎಕ್ಸ್‌ಪೋ‍‍ಗೆ ಆತಿತೇಯ ನಗರದ ಪಟ್ಟ ಪಡೆಯುವ ಮೊದಲು ದುಬೈ ಮತದಾನದಲ್ಲಿ ಟರ‍್ಕಿ, ರಶ್ಯಾ, ತೈಲ್ಯಾಂಡ್ ಮತ್ತು ಬ್ರೆಜಿಲ್ ಅನ್ನು ಸೋಲಿಸಿತ್ತು. ಎಕ್ಸ್‌ಪೋ 2020ರ ಮೂಲ ತೀಮ್(ವಿಶಯ) ಜನರ ಮನಸ್ಸುಗಳನ್ನು ಪರಸ್ಪರ ಬೆಸೆಯುವುದರ ಮೂಲಕ ಉತ್ತಮ ಬವಿಶ್ಯವನ್ನು ರೂಪಿಸುವುದಾಗಿದೆ. ಇದರ ಜೊತೆಗೆ ಎಕ್ಸ್‌ಪೋ 3 ಸಬ್ ತೀಮ್ ಗಳನ್ನು ಕೂಡ ಹೊಂದಿದೆ; ಅವು sustainability, mobility and opportunity ಅಂದರೆ ಒಂದು ಸುಸ್ತಿರ ವಾತಾವರಣದ ಮೂಲಕ ಅವಕಾಶಗಳನ್ನು ಸ್ರುಶ್ಟಿಸುವುದಾಗಿದೆ.

ದುಬೈ ಒಂದು ಪ್ರವಾಸಿ ರಾಶ್ಟ್ರ. ಇದು ಪ್ರವಾಸಿಗರ ಮತ್ತು ಕೊಳ್ಳುಗರ ಸ್ವರ‍್ಗ. ದುಬೈನ ಆರ‍್ತಿಕತೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿಲ್ಲ. ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳೇ ಅಲ್ಲಿನ ಸರ‍್ಕಾರಕ್ಕೆ ಬೇಕಾದ ಮೂಲ ಆದಾಯ ದೊರಕಿಸಿಕೊಡುತ್ತವೆ. ಹಾಗಾಗಿ ಪ್ರವಾಸಿಗರನ್ನು ಸೆಳೆಯಲು ಇಲ್ಲಿ ಏನಾದರೂ ಹೊಸತನ್ನು ಮಾಡುತ್ತಲೇ ಇರುತ್ತಾರೆ. ಉದಾಹರಣೆಗೆ ಪ್ರಪಂಚದ ಅತಿ ಎತ್ತರದ ಕಟ್ಟಡ ‘ಬುರ‍್ಜ್ ಕಲೀಪಾ’. ಇಡೀ ಪ್ರಪಂಚ ಆರ‍್ತಿಕ ಕುಸಿತದಿಂದ ಪರದಾಡುತ್ತಿದ್ದಾಗ, ತನ್ನ ದೇಶ ಆರ‍್ತಿಕವಾಗಿ ಕುಸಿಯದಂತೆ ಕಾಪಾಡಲು ಏನಾದರೂ ಯೋಜನೆ ನಿರ‍್ಮಿಸುವ ಅನಿವಾರ‍್ಯತೆ ಇಲ್ಲಿನ ಸರ‍್ಕಾರಕ್ಕಿತ್ತು. ಹಾಗಾಗಿ ಎಕ್ಸ್‌ಪೋ ಆತಿತೇಯತೆ ದೊರೆತಾಗ ಪ್ರತಿಯೊಬ್ಬರು ಸಂಬ್ರಮ ಪಟ್ಟರು. 27 ನವೆಂಬರ್ 2013 ರಂದು, ದುಬೈ ಎಕ್ಸ್‌ಪೋ 2020 ಅನ್ನು ಆಯೋಜಿಸುವ ಹಕ್ಕನ್ನು ಗೆದ್ದಾಗ, ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ‍್ಜ್ ಕಲೀಪಾದಲ್ಲಿ ಪಟಾಕಿ ಸಿಡಿಸಿ ಸಂಬ್ರಮಿಸಲಾಯಿತು. ಮರುದಿನ ದೇಶಾದಾದ್ಯಂತ ಎಲ್ಲಾ ಶಿಕ್ಶಣ ಸಂಸ್ತೆಗಳಿಗೆ ರಾಶ್ಟ್ರೀಯ ರಜೆ ಗೋಶಣೆ ಮಾಡಲಾಗಿತ್ತು. ದುಬೈ ಆಡಳಿತಗಾರ 2020ರಲ್ಲಿ ದುಬೈ “ವಿಶ್ವವನ್ನೇ ವಿಸ್ಮಯಗೊಳಿಸುತ್ತದೆ ” ಎಂದು ಬರವಸೆ ನೀಡಿದರು. ವಿಶ್ವ ಮೇಳದ ವೇದಿಕೆ ಮತ್ತು ಅದಕ್ಕೆ ಬೇಕಾಗುವ ಸಿದ್ದತೆಗಳು ಯು.ಎ.ಇ ಯಲ್ಲಿ 2,77,000 ಹೊಸ ಉದ್ಯೋಗಗಳಿಗೆ ಕಾರಣವಾಗುತ್ತದೆ. ಈ ಮೇಳದಿಂದಾಗಿ ಆರ‍್ತಿಕತೆಗೆ ಸುಮಾರು 40 ಬಿಲಿಯನ್ ಡಾಲರ್ ನಶ್ಟು ಒಳಹರಿವು ಬರುವುದಲ್ಲದೆ ಈ ತಾಣಕ್ಕೆ ಬೇಟಿ ನೀಡುವ ಜನರ ಸಂಕ್ಯೆಯಲ್ಲಿ 25 ರಿಂದ 100 ಮಿಲಿಯನ್ ವರೆಗೆ ಹೆಚ್ಚಳವಾಗುತ್ತದೆ ಎಂದು ಅಂದಾಜಿಸಲಾಯಿತು. ಸಿದ್ದತೆಗಳು ಕೂಡ ಆರಂಬವಾಯಿತು. ಹೀಗೆ, ಅಲ್ಲಿನ ಪ್ರದಾನಿ ಬರವಸೆ ಕೊಟ್ಟಂತೆ ಆ ವಿಸ್ಮಯ ಲೋಕ ಸ್ರುಶ್ಟಿಯಾಗಿದೆ.

ಎಲ್ಲವೂ ಯೋಜನೆಯಂತೆ ನಡೆದಿದ್ದರೆ ಕಳೆದ ವರುಶ ಅಕ್ಟೋಬರ್ ತಿಂಗಳಿನಲ್ಲಿ ದುಬೈನಲ್ಲಿ ಎಕ್ಸ್‌ಪೋ ಶುರುವಾಗಬೇಕಿತ್ತು ಮತ್ತು ಸುಮಾರು 25 ಮಿಲಿಯನ್ ಪ್ರವಾಸಿಗರು ಆಗಮಿಸುವ ನಿರೀಕ್ಶೆ ಇತ್ತು. ಆದರೆ COVID-19 ಸಾಂಕ್ರಾಮಿಕವು ಈ ಮೇಳಕ್ಕೆ ತಾತ್ಕಾಲಿಕ ತಡೆಯೊಡ್ಡಿತು. ಆದರೂ ಇಲ್ಲಿನ ಆಡಳಿತಗಾರರ ಇಚ್ಚಾಶಕ್ತಿಯ ಬಗ್ಗೆ ಎರಡು ಮಾತಿಲ್ಲ. ಜಗತ್ತೇ ನಿಬ್ಬೆರಗಾಗುವಂತೆ COVID-19 ಮಹಾಮಾರಿಯನ್ನು ಸೋಲಿಸುವ ಪಣ ತೊಟ್ಟ ಸರಕಾರ ಬಹುತೇಕ ಯಶಸ್ವಿ ಕೂಡ ಆಗಿದೆ ಎನ್ನಬಹುದಾಗಿದೆ. ಕೋವಿಡ್-19 ಲಸಿಕೆ ನೀಡಿದ ರಾಶ್ಟ್ರಗಳ ಪೈಕಿ ಯು.ಎ.ಇ ಮೊದಲ ಸ್ತಾನದಲ್ಲಿದ್ದು, ಈಗಾಗಲೇ ಶೇ. 96 ರಶ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಆನ್ಲೈನ್ ಶಿಕ್ಶಣವನ್ನು ಕೈಬಿಟ್ಟು, ಸಂಪೂರ‍್ಣವಾಗಿ ಶಾಲೆಗಳನ್ನು ಕೂಡ ಪುನರಾರಂಬಿಸಲಾಗಿದೆ. ಎಕ್ಸ್‌ಪೋ 2020 ಕೂಡ ಮಾರುಕಟ್ಟೆಯ ಕಾರಣಗಳಿಂದ ಹೆಸರಿನ ಬದಲಾವಣೆ ಮಾಡಿಕೊಳ್ಳದೆ ಸೆಪ್ಟೆಂಬರ್ 30 ರಂದು ಜಗತ್ತೇ ನಿಬ್ಬೆರಗಾಗುವಂತೆ ಉದ್ಗಾಟನೆಗೊಂಡು ಪ್ರವಾಸಿಗರನ್ನು ತನ್ನ ವಿಸ್ಮಯಗಳಿಂದ ಸೆಳೆಯುತ್ತಿದೆ. ಅಕ್ಟೋಬರ್ 1ರಿಂದ ಶುರುವಾದ ಈ ಮಹಾಮೇಳ 31 ಮಾರ‍್ಚ್ 2022 ರ ವರೆಗೆ ನಡೆಯಲಿದೆ.

ಎಕ್ಸ್‌ಪೋ 2020 ದುಬೈನ ವಿಶೇಶತೆಗಳು

ನಮ್ಮೂರಲ್ಲಿ ಜಾತ್ರೆ ಅಂದ್ರೇನೇ ಅದೆಶ್ಟು ಸಂಬ್ರಮ. ಹಾಗಿರುವಾಗ ಪ್ರಪಂಚದ ಬಹುತೇಕ ರಾಶ್ಟ್ರಗಳು ಒಂದು ಜಾಗದಲ್ಲಿ ಜೊತೆ ಸೇರಿ ನಡೆಸುವ ಜಾತ್ರೆಯ ಸಂಬ್ರಮ ಹೇಗಿರಬಹುದು ಅಲ್ವೇ!. ಜೀವಮಾನದಲ್ಲಿ ಒಮ್ಮೆಯಾದರೂ ಈ ಸಂಬ್ರಮದಲ್ಲಿ ಬಾಗಿಯಾಗಬೇಕೆಂದು ಅನಿಸದೇ ಇರಲು ಸಾದ್ಯವೇ? ಹೌದು, ಇಲ್ಲೊಂದು ವಿಸ್ಮಯ ಲೋಕವೇ ಸ್ರಶ್ಟಿಯಾಗಿಬಿಟ್ಟಿದೆ. ಎಕ್ಸ್‌ಪೋ 2020 ದುಬೈನ ಮುಕ್ಯ ತಾಣ ಸುಮಾರು 438 ಹೆಕ್ಟೇರ್ ಪ್ರದೇಶ (1083 ಎಕರೆ) ವ್ಯಾಪಿಸಿದೆ. ದುಬೈನಿಂದ ಅಬುದಾಬಿ ನಗರಕ್ಕೆ ಪ್ರಯಾಣಿಸುವಾಗ, ನಡು ದಾರಿಯಲ್ಲಿ ಈ ಮಹಾಮೇಳದ ಜಾಗ ನಮಗೆ ಕಾಣಸಿಗುತ್ತದೆ. ಈ ಮಹಾಮೇಳದಿಂದ ದೇಶದ ಜಿಡಿಪಿ ಏರಿಕೆಯಾಗುವ ನಿರೀಕ್ಶೆ ಇದೆ. ಇನ್ನು ಎಕ್ಸ್‌ಪೋ 2020 ದುಬೈನ ಕೆಲವು ಪ್ರಮುಕ ಆಕರ‍್ಶಣೆಗಳು ಹೀಗಿವೆ; ವಿಶ್ವದ ನಾನಾ ಮೂಲೆಯ ಕಾದ್ಯವನ್ನು ಇಲ್ಲಿ ನಿರ‍್ಮಾಣವಾಗಿರುವ 200ಕ್ಕಿಂತಲೂ ಹೆಚ್ಚಿನ ಹೋಟೆಲ್‍‍‍‍‍‍ಗಳಲ್ಲಿ ಸವಿಯಬಹುದು. ಒಂದರ‍್ತದಲ್ಲಿ ಇಡೀ ವಿಶ್ವವೇ ಚಿಕ್ಕಾದಾಗಿ ದುಬೈಗೆ ಬಂದು ಸೇರಿಕೊಂಡಂತೆ ಅಂದರೂ ತಪ್ಪಿಲ್ಲ. ಇಲ್ಲಿ 192 ದೇಶಗಳ ಪೆವಿಲಿಯನ್ ಇದೆ. ಜನ ಎಕ್ಸ್‌ಪೋ ಸ್ವಾಗತ ಕಚೇರಿಗೆ ಹೋದರೆ ಅಲ್ಲಿ ಜನರಿಗೊಂದು ವಿಶೇಶ ಪಾಸ್ಪೋರ‍್ಟ್ ಕೊಡಲಾಗುತ್ತದೆ. ಜನರು ಪ್ರತಿ ದೇಶದ ಪೆವಿಲಿಯನ್‍‍ಗೆ ಬೇಟಿಕೊಟ್ಟಾಗ ಆ ದೇಶದ ಸ್ಟ್ಯಾಂಪ್ ಅನ್ನು ಅವರ ವಿಶೇಶವಾದ ಪಾಸ್ಪೋರ‍್ಟ್ ನಲ್ಲಿ ಹಾಕುತ್ತಾರೆ. ಅಂದ್ರೆ ಕೇವಲ ದುಬೈಗೆ ಬೇಟಿಕೊಟ್ಟರೆ ಸಾಕು. ಇಡೀ ವಿಶ್ವಕ್ಕೆ ಹೋಗಿ ಬಂದ ಅನುಬವ ಆಗುತ್ತದೆ. ಇಲ್ಲಿರುವ 150ಕ್ಕಿಂತಲೂ ಹೆಚ್ಚಿನ ರೋಬೊಟ್ಸ್ ಗಳು ಜನರನ್ನು ಸ್ವಾಗತಿಸುತ್ತವೆ ಮತ್ತು ಮಾಹಿತಿ ಕೊಡುತ್ತವೆ. ಇದಲ್ಲದೇ ಜನರಿಗೆ ಆಹಾರ ದೊರಕಿಸಿಕೊಡುವುದರಲ್ಲೂ ಸಹಾಯ ಮಾಡುತ್ತವೆ. ಲಂಡನ್ ಮೂಲದ ಒಂದು ಬೇಕರಿಯಲ್ಲಿ ಜನ ತಿಂಡಿ ಮಾಡುವುದನ್ನು ಕಲಿತುಕೊಳ್ಳಬಹುದಾಗಿದೆ. ಅಲ್ಲದೆ 192 ದೇಶದ ಪ್ರಜೆಗಳೊಂದಿಗೆ ಇಲ್ಲಿ ಓಟದ ಅಬ್ಯಾಸ ಮಾಡಬಹುದು. ದೊಡ್ಡದಾದ ಆಟದ ಮೈದಾನದಲ್ಲಿ ಮಕ್ಕಳಿಗೆ ಮತ್ತು ದೊಡ್ಡವರಿಗೆ ಮೈನವಿರೇಳಿಸುವ ಆಟಗಳ, ಮನೋರಂಜನೆಯ ವ್ಯವಸ್ತೆ ಇದೆ. ಸಂಪೂರ‍್ಣ ಸೌರ ಶಕ್ತಿಯನ್ನು ಅವಲಂಬಿಸಿರುವ ಬವಿಶ್ಯದ ಮನೆಗಳನ್ನು ನಾವಿಲ್ಲಿ ನೋಡಬಹುದು. ಸೌರಶಕ್ತಿ ಚಾಲಿತ, ಕಾರ‍್ಬನ್-ಪೈಬರ್ ಮೇಲಾವರಣ, ಬವಿಶ್ಯದ ಪೆಟ್ರೋಲ್ ಬಂಕ್‍‍‍ಗಳನ್ನು ನಾವಿಲ್ಲಿ ನೋಡಬಹುದು.

ಯು.ಎಸ್ಎ. (ಅಮೇರಿಕ) ಪೆವಿಲಿಯನ್ ಸ್ಪೇಸ್ ಎಕ್ಸ್ ಅನ್ನು ಪ್ರದರ‍್ಶಿಸುತ್ತದೆ. ಪಾಲ್ಕನ್ ರಾಕೆಟ್ ಜೊತೆಗೆ ಪ್ರದರ‍್ಶನಗಳು ಮತ್ತು ಚಂದ್ರನ ಅಂಗಳದಿಂದ ತಂದ ಕಲ್ಲಿನ ತುಣುಕುಗಳಂತಹ ಕಲಾಕ್ರುತಿಗಳ ಪ್ರದರ‍್ಶನ ಕೂಡ ನಡೆಯುತ್ತದೆ. ಕವಿಗೋಶ್ಟಿಗಳು, ಪ್ರಪಂಚದ ಪ್ರಪ್ರತಮ ಗಾಳಿ ರೈಲಿನ ಅನುಬವವನ್ನು ನಾವಿಲ್ಲಿ ಪಡೆಯಬಹುದು. 14 ಮೀಟರ್ ಎತ್ತರದ ಗೋಡೆಗಳ ಒಳಗೆ ಹೆಜ್ಜೆ ಹಾಕಿ ಅದ್ಬುತವಾದ ನೀರು, ಬೆಳಕು ಮತ್ತು ಬೆಂಕಿಯ ಪ್ರದರ‍್ಶನವನ್ನು ನೋಡಬಹುದು. ಇಲ್ಲಿನ ಅದ್ಬುತಗಳ ಬಗ್ಗೆ ಬರೆಯಲು ಪುಟಗಳು ಸಾಲದು. ಒಟ್ಟಿನಲ್ಲಿ ಇದೊಂದು ವಿಬಿನ್ನ, ಅದ್ಬುತ ಮತ್ತು ಅನನ್ಯವಾದ ವಿಸ್ಮಯ ಲೋಕ. ನಮ್ಮ ಹೆಮ್ಮೆಯ ಬಾರತ ಕೂಡ ಇದರಲ್ಲಿ ಬಾಗಿಯಾಗಿದೆ. ಬಾರತದ ಪೆವಿಲಿಯನ್ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ. ಇಲ್ಲಿಗೆ ಬೇಟಿ ಕೊಡಲು ಸಾದ್ಯವಾಗದಿರುವವರು ಯುಟ್ಯೂಬ್ ಮೂಲಕ ಇಲ್ಲಿನ ಅದ್ಬುತಗಳ ಬಗ್ಗೆ ಪರಿಚಯ ಮಾಡಿಕೊಳ್ಳಬಹುದು.

( ಚಿತ್ರ ಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: