ನಾವೇಕೆ ಬಯ್ಯುತ್ತೇವೆ? – 7ನೆಯ ಕಂತು

ಸಿ.ಪಿ.ನಾಗರಾಜ.

(ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು)

ವೇಗವಾಗಿ ಚಲಿಸುತ್ತಿರುವ ಬಸ್ಸು, ಕಾರು, ಆಟೋ ಮತ್ತು ಇನ್ನಿತರ ವಾಹನಗಳಿಗೆ ಇದ್ದಕ್ಕಿದ್ದಂತೆಯೇ ಅಡ್ಡಲಾಗಿ ಯಾವುದೇ ವ್ಯಕ್ತಿ, ಪ್ರಾಣಿ ಇಲ್ಲವೇ ವಾಹನ ಬಂದಾಗ, ವಾಹನವನ್ನು ಚಲಾಯಿಸುತ್ತಿರುವ ಚಾಲಕರ ಬಾಯಿಂದ ಪ್ರತಿಕ್ರಿಯೆಯ ರೂಪದಲ್ಲಿ ಹೊರಹೊಮ್ಮುವ ಹತ್ತಾರು ಬಗೆಯ ಉದ್ಗಾರದ ದನಿಗಳನ್ನು ಮತ್ತು ಬಗೆಬಗೆಯ ಬಯ್ಗುಳ ಪದಗಳನ್ನು ನಾವೆಲ್ಲರೂ ಕೇಳಿದ್ದೇವೆ. ಪ್ರತಿಯೊಂದು ಸನ್ನಿವೇಶದಲ್ಲಿಯೂ ಒಬ್ಬ ಚಾಲಕನು ಆಡುವ ಬಯ್ಗುಳದ ನುಡಿಯು ಮತ್ತೊಬ್ಬನಿಗಿಂತ ಬೇರೆಯೇ ಆಗಿರುತ್ತದೆ.

ಇದೇ ಬಗೆಯಲ್ಲಿ ನಾವು ಕುಟುಂಬದ ನೆಲೆಯಲ್ಲಿ, ದುಡಿಮೆಯ ನೆಲೆಯಲ್ಲಿ ಮತ್ತು ಸಾರ‍್ವಜನಿಕ ನೆಲೆಯಲ್ಲಿ ಬೇರೆ ಬೇರೆ ಪ್ರಮಾಣಗಳಲ್ಲಿ ಬಯ್ಯುವಿಕೆಯಲ್ಲಿ ತೊಡಗಿರುವವರನ್ನು ನೋಡುತ್ತೇವೆ. ಕೆಲವರು ಮಾತಿಗೆ ಮುಂಚೆ ಬಯ್ಯುತ್ತಿರುತ್ತಾರೆ; ಕೆಲವರು ಸಮಯ ಮತ್ತು ಸನ್ನಿವೇಶವನ್ನು ಗಮನಿಸಿ ಮಿತವಾಗಿ ಬಯ್ಗುಳದ ನುಡಿಯನ್ನು ಬಳಸುತ್ತಾರೆ; ಮತ್ತೆ ಕೆಲವರು ಕೋಪ, ಸಂಕಟ ಇಲ್ಲವೇ ಹತಾಶೆಗೆ ಒಳಗಾದರೂ ಎಂತಹ ಸನ್ನಿವೇಶದಲ್ಲಿಯೂ ಒಂದು ಬಯ್ಗುಳವನ್ನೂ ಆಡದೆ, ತಮ್ಮಲ್ಲಿಯೇ ಗೊಣಗಿಕೊಂಡು ಇಲ್ಲವೇ ಇತರರಿಗೆ ಕೇಳಿಸದಂತೆ ಬಯ್ದು ಸುಮ್ಮನಿರುತ್ತಾರೆ.

ವ್ಯಕ್ತಿಗಳು ಗಂಡಾಗಿರಲಿ ಇಲ್ಲವೇ ಹೆಣ್ಣಾಗಿರಲಿ, ಅವರಲ್ಲಿ ಬಯ್ಯುವಿಕೆಯ ಕಸುವು ಅಂದರೆ ಅವರು ಬಯ್ಯುವಿಕೆಯಲ್ಲಿ ತೊಡಗುವುದು ಮತ್ತು ಅವರು ಬಯ್ಯುವಾಗ ಬಳಸುವ ಬಯ್ಗುಳದ ನುಡಿಯು ಬೇರೆ ಬೇರೆ ಬಗೆಗಳಲ್ಲಿ ಇರುವುದಕ್ಕೆ ಆಯಾಯ ವ್ಯಕ್ತಿಯ ಮಾನಸಿಕ ಬೆಳವಣಿಗೆಯು (Psychological Development) ಕಾರಣವೆಂದು ಮನೋವಿಜ್ನಾನಿಗಳು ಪ್ರತಿಪಾದಿಸಿದ್ದಾರೆ. ಮಾನಸಿಕ ಬೆಳವಣಿಗೆಯು ವ್ಯಕ್ತಿಗಳ ನುಡಿಯ ಕಲಿಕೆ, ಲೋಕದ ನಡೆನುಡಿಗಳ ಬಗ್ಗೆ ಅರಿವನ್ನು ಹೊಂದುವುದು, ವ್ಯಕ್ತಿಯ ಜೀವನದಲ್ಲಿ ನಡೆದ ಪ್ರಸಂಗಗಳ ನೆನಪು, ಜಾತಿ ಮತ್ತು ಮತದ ಕಟ್ಟುಪಾಡುಗಳು, ಕಾಮದ ಬಗೆಗಿನ ಸಾಮಾಜಿಕ ನಿಯಂತ್ರಣದ ಸಂಗತಿಗಳನ್ನು ಒಳಗೊಂಡಿರುತ್ತದೆ. ವ್ಯಕ್ತಿಗಳು ಬಯ್ಯುವಿಕೆಯಲ್ಲಿ ಹೇಗೆ ತೊಡಗುತ್ತಾರೆ ಮತ್ತು ಯಾವ ಬಗೆಯ ಬಯ್ಗುಳಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ಬೆಳವಣಿಗೆಯ ಸ್ವರೂಪದಲ್ಲಿನ ಚಹರೆಗಳನ್ನು ಗಮನಿಸುವುದರ ಮೂಲಕ ಮನೋವಿಜ್ನಾನಿಗಳು ವಿವರಿಸಿದ್ದಾರೆ

ಮಾನವ ಜೀವಿಯ ಮೆದುಳಿನ ನರಕೋಶಗಳ ಮತ್ತು ನರಬಳ್ಳಿಯ ಹೆಣಿಗೆಯು ಒಂದೇ ಬಗೆಯಲ್ಲಿದ್ದರೂ, ವ್ಯಕ್ತಿಗಳ ಮನದಲ್ಲಿ ಮಿಡಿಯುವ ಒಳಮಿಡಿತಗಳು ಮತ್ತು ವ್ಯಕ್ತಿಗಳ ಸಾಮಾಜಿಕ ನಡೆನುಡಿಗಳು ಬೇರೆ ಬೇರೆ ಬಗೆಯಲ್ಲಿರುತ್ತವೆ. ಇದಕ್ಕೆ ಕಾರಣವೇನೆಂದರೆ ಪ್ರತಿಯೊಬ್ಬ ವ್ಯಕ್ತಿಯು ಹುಟ್ಟುವ ಕುಟುಂಬದ ಜಾತಿ ಮತ್ತು ಮತದ ಸಂಪ್ರದಾಯಗಳು ಹಾಗೂ ಕಟ್ಟುಪಾಡುಗಳು, ಕುಟುಂಬವು ಹೊಂದಿರುವ ಸಂಪತ್ತಿನ ಪ್ರಮಾಣ, ವ್ಯಕ್ತಿಯು ಬೆಳೆದು ಬಾಳುವ ಪ್ರದೇಶದಲ್ಲಿನ ನಿಸರ‍್ಗದ ಆಗುಹೋಗುಗಳು ಮತ್ತು ಸುತ್ತಮುತ್ತಣ ಸಾಮಾಜಿಕ ಪರಿಸರದ ಜೀವನದ ರೀತಿನೀತಿಗಳು ವ್ಯಕ್ತಿಯ ಮಾನಸಿಕ ಬೆಳವಣಿಗೆಗೆ ಕಾರಣವಾಗುತ್ತವೆ.

ಯಾವುದೇ ಒಂದು ನುಡಿ ಸಮುದಾಯದಲ್ಲಿ ಹುಟ್ಟಿ ಬೆಳೆಯುವ ಮಗು ತನ್ನ ತಾಯ್ನುಡಿಯನ್ನು ಕಲಿಯುತ್ತಿರುವ ಹಂತದಲ್ಲಿಯೇ ಬಯ್ಗುಳದ ನುಡಿಗಳನ್ನು ಕಲಿಯುತ್ತಿರುತ್ತದೆ. ತನ್ನ ಸುತ್ತಮುತ್ತಣ ಪರಿಸರದಲ್ಲಿ ಅಂದರೆ ಕುಟುಂಬದ ನೆಲೆಯಲ್ಲಿ, ಸಮಾನ ವಯಸ್ಸಿನ ಜತೆಗಾರರಲ್ಲಿ, ನೆರೆಹೊರೆಯಲ್ಲಿ, ಮತ್ತು ಬೀದಿಯಲ್ಲಿ ಕೇಳಿಬರುತ್ತಿರುವ ಬಯ್ಗುಳದ ನುಡಿಗಳು ಮಗುವಿನ ಮನದಲ್ಲಿ ನೆಲೆಯೂರುತ್ತಿರುತ್ತವೆ. ಆದರೆ ನಾಲ್ಕಾರು ವರುಶದ ಮಕ್ಕಳು ಒಂದೆರಡು ಬಯ್ಗುಳದ ಪದಗಳನ್ನು ಆಡುತ್ತಿದ್ದರೂ, ಆ ಪದಗಳ ತಿರುಳು ಏನೆಂಬುದು ಮಕ್ಕಳಿಗೆ ಗೊತ್ತಿರುವುದಿಲ್ಲ. ಏಕೆಂದರೆ ಆ ಹಂತದಲ್ಲಿ ಮಕ್ಕಳು ದಿನನಿತ್ಯದ ಮಾತಿನ ಸನ್ನಿವೇಶಗಳಲ್ಲಿ ಯಾವ ಬಗೆಯ ಮಾತುಗಳನ್ನು ಆಡಬೇಕು ಇಲ್ಲವೇ ಆಡಬಾರದು ಎಂಬ ಸಾಮಾಜಿಕ ಅರಿವನ್ನು ಮತ್ತು ಎಚ್ಚರವನ್ನು ಹೊಂದಿರುವುದಿಲ್ಲ. ಉದಾಹರಣೆಯಾಗಿ ಈ ಕೆಳಕಂಡ ಒಂದು ಪ್ರಸಂಗವನ್ನು ಗಮನಿಸೋಣ.

ಮನೆಯಲ್ಲಿ ನಾಲ್ಕು ವರುಶದ ಪುಟ್ಟ ಬಾಲಕ ರಾಜೇಶನು ಎಲ್ಲರ ಕಣ್ಮಣಿಯಾಗಿದ್ದ. ಅರಳು ಹುರಿದಂತೆ ಮಾತನಾಡುವ ರಾಜೇಶನ ಮಾತುಗಳನ್ನು ಕೇಳುತ್ತಾ ನಕ್ಕು ನಲಿಯುವುದರ ಜತೆಗೆ, ಇಶ್ಟು ಚಿಕ್ಕ ವಯಸ್ಸಿನಲ್ಲಿಯೇ ಬಹಳ ಸೊಗಸಾಗಿ ಮಾತನಾಡುವುದರ ಬಗ್ಗೆ ಮನೆಮಂದಿಯೆಲ್ಲ ತುಂಬಾ ಹೆಮ್ಮೆಪಡುತ್ತಿದ್ದರು. ಒಂದು ದಿನ ರಾಜೇಶನ ತಾಯಿಯನ್ನು ನೋಡಲೆಂದು ಇಬ್ಬರು ಹೆಂಗಸರು ರಾಜೇಶನ ಮನೆಗೆ ಬಂದರು. ಸುಮಾರು ಇಪ್ಪತ್ತಯ್ದು ಮೂವತ್ತು ವಯಸ್ಸಿನ ಈ ಅಕ್ಕತಂಗಿಯರು ರೂಪದಲ್ಲಿ ಒಬ್ಬರನ್ನೊಬ್ಬರು ಬಹಳವಾಗಿ ಹೋಲುತ್ತಿದ್ದರು. ರಾಜೇಶನ ತಾಯಿಗೆ ಮೊನ್ನೆ ದೇಗುಲವೊಂದರಲ್ಲಿ ಹೊಸದಾಗಿ ಪರಿಚಯವಾಗಿದ್ದ ಇವರು, ಇದೇ ಮೊದಲ ಬಾರಿಗೆ ರಾಜೇಶನ ಮನೆಗೆ ಬಂದಿದ್ದರು. ತಿಂಡಿ ಕಾಪಿಯನ್ನು ನೀಡಿ, ಅವರೊಡನೆ ಮಾತನಾಡುತ್ತ ಕುಳಿತಿದ್ದಾಗ, ಹೊರಗಡೆ ಆಟವಾಡಿಕೊಂಡು ಮನೆಗೆ ಬಂದ ರಾಜೇಶ, ತನ್ನ ತಾಯಿಯ ಜತೆಯಲ್ಲಿದ್ದ ಹೆಂಗಸರನ್ನು ಕಂಡು ಕುತೂಹಲದಿಂದ —

“ಅಮ್ಮ ಅಮ್ಮ… ಇವರು ಯಾರಮ್ಮ?” ಎಂದು ಕೇಳಿದ.

“ನಿಮ್ಮ ಅತ್ತೆದೀರು ಕಣಪ್ಪ.”

“ಇಬ್ಬರು ಒಂದೇ ತರ ಅವ್ರೆ.”

“ಅಕ್ಕತಂಗೇರು ಕಣಪ್ಪ.”

“ಹಂಗಾದ್ರೆ ಅಕ್ಕತಂಗೇರು ಕತ್ತೆಮುಂಡೇರು.” ಎಂದನು.

ರಾಜೇಶನು ಆಡಿದ ಮಾತುಗಳನ್ನು ಕೇಳಿ ಆ ಹೆಂಗಸರು ಮಾನಸಿಕವಾಗಿ ತುಂಬಾ ಗಾಸಿಗೊಂಡರು.

ತಾಯಿಯು ಮಗನ ಕೆನ್ನೆಗೆ ಚಟೀರ್ ಎಂದು ಬಾರಿಸಿ, “ಎಲ್ಲೊ ಕಲಿತೆ ಇಂತಹ ಕೆಟ್ಟ ಮಾತುಗಳನ್ನ?” ಎಂದು ಅಬ್ಬರಿಸಿದರು.

ಪೆಟ್ಟನ್ನು ತಿಂದ ರಾಜೇಶನು, “ಅಜ್ಜಿ ಅವತ್ತು ನಿಮ್ ಜೊತೇನೆ ಹೇಳ್ತಿರಿಲಿಲ್ವ… ಅಕ್ಕತಂಗೇರು ಕತ್ತೆಮುಂಡೇರು ಅಂತ.” ಎಂದು ಹೇಳುತ್ತ ಅಳಲು ತೊಡಗಿದ. ನಡೆದಿದ್ದ ಪ್ರಸಂಗ ಏನೆಂದರೆ ಮೊನ್ನೆ ಹಳ್ಳಿಯಿಂದ ಬಂದಿದ್ದ ರಾಜೇಶನ ಅಜ್ಜಿಯು ಮಗಳೊಡನೆ ತಮ್ಮ ಊರಿನ ಮನೆಯೊಂದರ ಆಗುಹೋಗುಗಳನ್ನು ಕುರಿತು ಮಾತನಾಡುತ್ತ, ಆ ಮನೆಗೆ ಸೊಸೆಯಂದಿರಾಗಿ ಬಂದ ಅಕ್ಕತಂಗಿಯರು ಈಗ ಪರಸ್ಪರ ಗುದ್ದಾಡಿಕೊಂಡು, ಮನೆತನದ ನಾಶಕ್ಕೆ ಕಾರಣವಾಗುತ್ತಿರುವುದನ್ನು ವಿವರಿಸುತ್ತ “ ಅಕ್ಕತಂಗೇರು ಕತ್ತೆಮುಂಡೇರು ” ಎಂದು, ಅವರ ಊರಿನ ಇಬ್ಬರು ಹೆಂಗಸರನ್ನು ಬಯ್ದಿದ್ದರು. ಇವರ ಮಾತುಗಳನ್ನು ಕೇಳಿಸಿಕೊಂಡಿದ್ದ ರಾಜೇಶನು ಇಂದು ಆ ಪದಗಳನ್ನು ಮತ್ತೆ ಈ ಸನ್ನಿವೇಶದಲ್ಲಿ ಆಡಿದ್ದನು. ತಟ್ಟನೆ ಈ ಪ್ರಸಂಗವನ್ನು ನೆನಪಿಸಿಕೊಂಡ ರಾಜೇಶನ ತಾಯಿಯು ತನ್ನ ಮಗನ ಬಾಯಲ್ಲಿ ಬಂದಿದ್ದ ಬಯ್ಗುಳದ ಪದಗಳಿಗೆ ಕಾರಣವಾಗಿದ್ದ ಸನ್ನಿವೇಶವನ್ನು ಆ ಹೆಂಗಸರಿಗೆ ಮತ್ತೊಮ್ಮೆ ವಿವರಿಸಿದರು. ಹಿರಿಯರಾಡಿದ್ದ ಬಯ್ಗುಳದ ಪದಗಳ ತಿರುಳನ್ನು ತಿಳಿಯದೆ ಹುಡುಗನು ಮಾತನಾಡಿದ್ದನ್ನು ಅರಿತ ಆ ಹೆಂಗಸರು ಈಗ ರಾಜೇಶನತ್ತ ನೋಡುತ್ತ ಮುಗುಳ್ ನಕ್ಕರು.

ರಾಜೇಶನಂತೆ ಏಟು ತಿಂದ ಮಕ್ಕಳು ತಮ್ಮ ಸುತ್ತಮುತ್ತಣ ಪರಿಸರದಲ್ಲಿ ಬಳಕೆಯಾಗುತ್ತಿರುವ ಮಾತುಗಳಲ್ಲಿ ಯಾವ ಬಗೆಯ ನುಡಿಗಳು ಬಯ್ಗುಳವೆಂಬುದನ್ನು ಅರಿತುಕೊಳ್ಳುವ ಹಂತವನ್ನು ತಲುಪಿದಾಗ, ಬಯ್ಗುಳದ ನುಡಿಗಳನ್ನಾಡುವುದರಲ್ಲಿ ಎಚ್ಚರವನ್ನು ವಹಿಸುತ್ತಾರೆ. ಅನಂತರದ ವರುಶಗಳಲ್ಲಿ ಮಕ್ಕಳು ಬೆಳೆಬೆಳೆದು ವಯಸ್ಕರಾಗುತ್ತಿದ್ದಂತೆಲ್ಲಾ ಜನರಾಡುತ್ತಿರುವ ಬಯ್ಗುಳದ ನುಡಿಗಳಲ್ಲಿ ಬಯ್ಯುತ್ತಿರುವ ವ್ಯಕ್ತಿಗಳ ಒಳಮಿಡಿತದ ಸಂಗತಿಗಳು ಅಂದರೆ ಕೋಪ, ಹತಾಶೆ. ಸಂಕಟ , ಅಚ್ಚರಿ ಮುಂತಾದ ಬಾವನೆಗಳಿರುವುದನ್ನು ತಿಳಿದುಕೊಳ್ಳುತ್ತಾರೆ. ದಿನನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಬಯ್ಗುಳಗಳು ಬಳಕೆಗೊಳ್ಳುವ ಕುಟುಂಬಗಳಲ್ಲಿ ಮತ್ತು ಸಾಮಾಜಿಕ ಪರಿಸರದಲ್ಲಿ ಹುಟ್ಟಿ ಬೆಳೆಯುವ ಮಕ್ಕಳು ಬಯ್ಗುಳದ ಬಗ್ಗೆ ಹೆಚ್ಚಿನ ಕಸುವನ್ನು ಹೊಂದಿರುತ್ತಾರೆ.

ಬಯ್ಗುಳ ಬಳಕೆ ಮತ್ತು ಕಲಿಕೆಯಲ್ಲಿ ಜಾತಿ ಮತ್ತು ವರ‍್ಗದ ಪಾತ್ರ ಬಹು ದೊಡ್ಡದು. ವರ‍್ಗ ಎಂದರೆ ವ್ಯಕ್ತಿಗಳು ಹೊಂದಿರುವ ಆಸ್ತಿಪಾಸ್ತಿ, ಒಡವೆವಸ್ತು ಮತ್ತು ಇನ್ನಿತರ ಸಂಪತ್ತು. ಮೇಲು ಕೀಳಿನ ಜಾತಿ ಮೆಟ್ಟಿಲುಗಳಿಂದ ಮತ್ತು ಬಡವ ಬಲ್ಲಿದರೆಂಬ ವರ‍್ಗ ತಾರತಮ್ಯದಿಂದ ಹೆಣೆದುಕೊಂಡಿರುವ ಸಮಾಜದಲ್ಲಿ ಕೀಳು ಜಾತಿಗೆ ಮತ್ತು ಕೆಳವರ‍್ಗಕ್ಕೆ ಸೇರಿದ ಕುಟುಂಬಗಳು ಜಾತಿಯ ಕಾರಣದಿಂದಾಗಿಯೇ ನೂರಾರು ವರುಶಗಳಿಂದ ವಿದ್ಯೆ, ಸಂಪತ್ತು ಮತ್ತು ಗದ್ದುಗೆಯಿಂದ ವಂಚಿತರಾಗಿದ್ದಾರೆ. ಇದರಿಂದಾಗಿ ದಿನನಿತ್ಯದ ಅಗತ್ಯಗಳಾದ ಅನ್ನ ಬಟ್ಟೆ ವಸತಿಯಿಂದ ವಂಚಿತರಾಗಿ ಬಡತನದ ಬೇಗೆಯಲ್ಲಿ ಬೇಯುತ್ತಿರುತ್ತಾರೆ. ಪ್ರತಿನಿತ್ಯ ಹತ್ತಾರು ಬಗೆಯ ತೊಂದರೆಗಳಿಂದ ನರಳುತ್ತಿರುವ ಈ ಕೆಳಜಾತಿಯ ಮತ್ತು ಕೆಳವರ‍್ಗದ ಜನರ ಕುಟುಂಬಗಳಲ್ಲಿ ಹೆಚ್ಚು ಹೆಚ್ಚು ಬಯ್ಗುಳಗಳು ಬಳಕೆಗೊಳ್ಳುತ್ತಿರುತ್ತವೆ. ಏಕೆಂದರೆ ಈ ಸಮುದಾಯದ ಜನರು ದಿನನಿತ್ಯದ ಅಗತ್ಯ ವಸ್ತುಗಳನ್ನು ಪಡೆಯುವುದಕ್ಕಾಗಿಯೇ ಬಹುಬಗೆಗಳಲ್ಲಿ ಪರಿತಪಿಸುತ್ತ, ತಮ್ಮ ಮನದ ಆತಂಕದ, ಹತಾಶೆಯ, ಸಂಕಟದ ಮತ್ತು ಆಕ್ರೋಶದ ಒಳಮಿಡಿತಗಳನ್ನು ಬಯ್ಗುಳದ ನುಡಿಗಳ ಮೂಲಕ ನಿರಂತರವಾಗಿ ಹೊರಹಾಕುತ್ತಿರುತ್ತಾರೆ.

ಮೇಲು ಜಾತಿಗಳಿಗೆ ಸೇರಿದ ಕುಟುಂಬಗಳಲ್ಲಿ ಬಹುತೇಕ ಕುಟುಂಬಗಳು ನೂರಾರು ವರುಶಗಳಿಂದಲೂ ಸಂಪತ್ತಿಗೆ ಒಡೆಯರಾಗಿದ್ದಾರೆ. ಮೇಲು ಜಾತಿಗಳಿಗೆ ಮತ್ತು ಮೇಲು ವರ‍್ಗ ಹಾಗೂ ಮೇಲು ಮದ್ಯಮ ವರ‍್ಗಗಳಿಗೆ ಸೇರಿದ ಕುಟುಂಬಗಳಲ್ಲಿ ಬಳಕೆಯಾಗುವ ಬಯ್ಗುಳದ ಪ್ರಮಾಣವು ಕೆಳಜಾತಿ ಮತ್ತು ಕೆಳ ವರ‍್ಗಗಳಿಗೆ ಸೇರಿದ ಕುಟುಂಬಗಳಲ್ಲಿ ಬಳಕೆಯಾಗುವುದಕ್ಕಿಂತ ಕಡಿಮೆಯಾಗಿರುತ್ತದೆ. ಏಕೆಂದರೆ ಈ ಕುಟುಂಬಗಳ ಸದಸ್ಯರು ದಿನನಿತ್ಯದ ಅಗತ್ಯಗಳಿಗೆ ಹೆಚ್ಚು ಹೆಣಗಾಡುವ ಸನ್ನಿವೇಶಗಳಿಗೆ ಒಳಗಾಗಿರುವುದಿಲ್ಲ.

ನಾವೆಲ್ಲರೂ ವಾಸವಾಗಿರುವ ಊರುಗಳಲ್ಲಿ ಕೆಳವರ‍್ಗದವರು ವಾಸ ಮಾಡುತ್ತಿರುವ ಅತಿ ಇಕ್ಕಟ್ಟಾದ ವಸತಿ ಪ್ರದೇಶಗಳಲ್ಲಿ ಮತ್ತು ನೀರು, ವಿದ್ಯುತ್ ಮತ್ತು ರಸ್ತೆಯ ಅನುಕೂಲಗಳು ಇಲ್ಲದ ಬಡಜನರ ಬಡಾವಣೆಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಬಗೆಯ ಬಯ್ಗುಳದ ಪ್ರಸಂಗಗಳನ್ನು ಬಹಿರಂಗದ ಸಾಮಾಜಿಕ ವ್ಯವಹಾರಗಳಲ್ಲಿ ಕಾಣುತ್ತಿರುತ್ತೇವೆ. ಆದರೆ ನೀರು, ವಿದ್ಯುತ್ ಮತ್ತು ರಸ್ತೆಯ ಅನುಕೂಲಗಳ ಜತೆಗೆ ತಮ್ಮದೇ ಆದ ನಿವೇಶನದ ಸುತ್ತ ಚಿಕ್ಕ ಗೋಡೆಗಳನ್ನು ಕಟ್ಟಿಸಿಕೊಂಡು ಪ್ರತ್ಯೇಕವಾಗಿ ವಾಸಮಾಡುತ್ತಿರುವ ಬಡಾವಣೆಗಳಲ್ಲಿ ಬಯ್ಗುಳದ ಪ್ರಸಂಗಗಳು ಬಹಿರಂಗದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತವೆ.

ಮೇಲು ಜಾತಿಗಳಿಗೆ ಸೇರಿದ ಜನರು ಮತ್ತು ವರ‍್ಗದಲ್ಲಿ ಮೇಲಿನ ಹಂತಗಳಿಗೆ ಏರುತ್ತಿರುವ ವ್ಯಕ್ತಿಗಳು ಹೆಚ್ಚಿನ ಬೆಲೆಯ ಉಡುಗೆ ತೊಡುಗೆಗಳ ಮೂಲಕ ತಮ್ಮ ಸಾಮಾಜಿಕ ಅಂತಸ್ತನ್ನು ತೋರಿಸಿಕೊಳ್ಳುವಂತೆಯೇ, ಸಾರ‍್ವಜನಿಕ ರಂಗದಲ್ಲಿ ಅವರು ಬಳಸುವ ಮಾತುಗಳಲ್ಲಿಯೂ ಬದಲಾವಣೆ ಕಂಡು ಬರುತ್ತದೆ. ಸಾರ‍್ವಜನಿಕವಾಗಿ ತಾವು ಆಡುವ ಮಾತುಗಳು ತಮ್ಮ ಸಾಮಾಜಿಕ ಅಂತಸ್ತನ್ನು ಕಾಪಾಡುವಂತಿರಬೇಕೆಂಬ ಎಚ್ಚರವನ್ನು ಹೊಂದಿರುತ್ತಾರೆ. ಆದ್ದರಿಂದ ಮೇಲು ಜಾತಿಯ ಮತ್ತು ಮೇಲು ಹಾಗೂ ಮದ್ಯಮ ವರ‍್ಗಕ್ಕೆ ಸೇರಿದ ವ್ಯಕ್ತಿಗಳು ತಮ್ಮ ಕುಟುಂಬದ ನೆಲೆಯಲ್ಲಿ ಬಯ್ಗುಳದ ನುಡಿಗಳನ್ನು ಅಂತರಂಗದಲ್ಲಿ ಬಳಸುತ್ತಿದ್ದರೂ, ದುಡಿಮೆಯ ನೆಲೆ ಮತ್ತು ಸಾರ‍್ವಜನಿಕ ನೆಲೆಗಳಲ್ಲಿ ಬಹಿರಂಗವಾಗಿ ಬಯ್ಗುಳದ ನುಡಿಗಳನ್ನಾಡುವುದಕ್ಕೆ ಹಿಂಜರಿಯುತ್ತಾರೆ.

ಮನೋವಿಜ್ನಾನಿಗಳು ವ್ಯಕ್ತಿಯ ಮಾನಸಿಕ ಬೆಳವಣಿಗೆ, ನುಡಿ ಸಮುದಾಯದ ಸಾಮಾಜಿಕ ರಚನೆ ಮತ್ತು ಸಂಸ್ಕ್ರುತಿಯ ಆಚರಣೆಗಳ ಹಿನ್ನೆಲೆಯಲ್ಲಿ ಯಾವ ಬಗೆಯ ವ್ಯಕ್ತಿಗಳು ತಮ್ಮ ನಿತ್ಯ ಜೀವನದ ವ್ಯವಹಾರಗಳಲ್ಲಿ ಬಯ್ಗುಳವನ್ನು ಸಲೀಸಾಗಿ ಬಳಸುತ್ತಾರೆ ಮತ್ತು ಬಯ್ಗುಳವನ್ನು ಬಳಸಲು ಹಿಂಜರಿಯುತ್ತಾರೆ ಎಂಬುದನ್ನು ಈ ಕೆಳಕಂಡಂತೆ ಗುರುತಿಸಿದ್ದಾರೆ.

1. ಸಲೀಸಾಗಿ ಬಯ್ಗುಳವನ್ನು ಬಳಸುವವರು:

ಪ್ರಾಯದ ಹಂತದಲ್ಲಿರುವ ವ್ಯಕ್ತಿಗಳು, ಜಾತಿ ಮತದ ಕಟ್ಟುಪಾಡುಗಳ ಬಗ್ಗೆ ಹೆಚ್ಚು ಗಮನವನ್ನು ನೀಡದವರು, ಕಾಮದ ನಂಟಿನ ಪದಗಳ ಬಳಕೆಯ ಬಗ್ಗೆ ಹೆಚ್ಚು ಆತಂಕವಿಲ್ಲದವರು, ಬಯ್ಯುವಿಕೆಗಾಗಿ ಇತರರಿಂದ ಮೆಚ್ಚುಗೆಯನ್ನು ಪಡೆದವರು, ಜೀವನದ ಪ್ರಸಂಗಗಳಲ್ಲಿ ಬಹುಬೇಗ ಉದ್ರೇಕಕ್ಕೆ ಒಳಗಾಗುವವರು, ಕೆಟ್ಟ ನಡೆನುಡಿಗಳಲ್ಲಿ ತೊಡಗಿದವರು, ಮಾದಕ ಪಾನೀಯಗಳನ್ನು ಅತಿಯಾಗಿ ಸೇವಿಸುವವರು.

2. ಬಯ್ಗುಳದ ಬಳಕೆಗೆ ಹಿಂಜರಿಯುವವರು:

ತಮ್ಮ ಜಾತಿಮತದ ಬಗ್ಗೆ ಮೇಲರಿಮೆಯುಳ್ಳವರು, ಕಾಮದ ನುಡಿಗಳನ್ನು ಬಯ್ಗುಳವನ್ನಾಗಿ ಆಡಿದರೆ ತಮ್ಮ ವ್ಯಕ್ತಿತ್ವಕ್ಕೆ ಮತ್ತು ತಮ್ಮ ಕುಟುಂಬದ ಸಾಮಾಜಿಕ ಅಂತಸ್ತಿಗೆ ಹಾನಿಯುಂಟಾಗುವುದೆಂಬ ಆತಂಕವುಳ್ಳವರು, ಈ ಮೊದಲು ತಮ್ಮ ಜೀವನದಲ್ಲಿ ಇತರರನ್ನು ಬಯ್ದುದಕ್ಕಾಗಿ ದಂಡನೆಯನ್ನು ಪಡೆದವರು ಇಲ್ಲವೇ ಹೆಚ್ಚಿನ ಹಾನಿಗೆ ಒಳಗಾದವರು, ಎಂತಹ ಉದ್ರಿಕ್ತ ಪ್ರಸಂಗಗಳಲ್ಲಿಯೂ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬಲ್ಲ ಕಸುವು ಉಳ್ಳವರು.

(ಚಿತ್ರ ಸೆಲೆ: learnitaliango.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: