ಕವಿತೆ: ದೇವರ ಮಕ್ಕಳು
ಅಪ್ಪ-ಅಮ್ಮ ಬಿಸಿಲಲ್ಲಿ ದುಡಿಯಲು
ಆ ಪುಟ್ಟ ಕಂದಮ್ಮಗಳು ಬರಿಗಾಲಲ್ಲಿ ಆಡಿದರು
ಹೆತ್ತವರ ಕೆಲಸದೆಡೆಯ ಇವರ ಆಟದ ಅಂಗಳ
ಕಲ್ಲು, ಮಣ್ಣು, ಕಸ-ಕಡ್ಡಿಗಳೇ ಹೇರಳವಾಗಿರುವಾಗ
ಬೇಡ ಇವರಿಗೆ ಬೇರೆ ಆಟಿಕೆಗಳು!
ಹೆತ್ತವರು ಅಲ್ಲಿ ಬಿಡುವಿಲ್ಲದೆ ದುಡಿಯಲು
ಕೆಲಹೊತ್ತು ಪುಟ್ಟ ಅಕ್ಕ ಆದಳು ತಾಯಿ
ಕಲ್ಲು, ಮಣ್ಣು, ದೂಳಿನ ಪರಿವಿಲ್ಲದೇ
ಒಟ್ಟಿಗೆ ಆಡಿ, ಕುಣಿದು-ಕುಪ್ಪಳಿಸಿ ದಣಿಯಲು
ನಡುಹೊತ್ತಿಗೆ ಅಮ್ಮನ ಕೈತುತ್ತೂಟ
ಅಲ್ಲೇ ಮರದ ನೆರಳಿಗೆ ಅಮ್ಮನ ಸೀರೆಯ ಜೋಲಿ
ಜಗದ ಪರಿವಿಲ್ಲದೆ ಮಲಗಲು ಹಾಯಿ!
ಹಾದಿ ಬದಿಯ ಸಪ್ಪಳ ಕೇಳದು ಈ ಕಂದಮ್ಮಗಳಿಗೆ
ಮೈಮರೆತು ನಿದ್ರಿಸಿ, ಕಣ್ತೆರದು ನೋಡಲು ಬೈಗಿನ ತಂಪು!
ನೇಸರ ಕಣ್ಮರೆಯಾಗಲು
ದಿನದ ದುಡಿಮೆ ಮುಗಿಯಲು
ಅಪ್ಪ-ಅಮ್ಮರೊಟ್ಟಿಗೆ ಗುಡಿಸಿಲೆಡೆಗೆ ಪಯಣ
ನಾಳೆ ಬಿಸಿಲೋ? ಮಳೆಯೋ?
ನಾಳೆ ಇನ್ನೆಲ್ಲೋ? ಯಾವ ಬೀದಿಯೋ?
ದುಡಿಯಲೇಬೇಕು ಬಾಳ ಗಾಲಿ ಸಾಗಲು
ದಿನಾ ಹೊಸ ಅಂಗಳ, ಹೊಸ ಆಟಿಕೆಗಳು!
ಮತ್ತದೇ ಅಮ್ಮನ ಬುತ್ತಿಯ ಕೈತುತ್ತು
ಹೊಸ ಮರ, ಅಮ್ಮನ ಸೀರೆಯ ಅದೇ ಜೋಲಿ!
ಸಪ್ಪಳದ ನಡುವೆ ಹಾಯಾದ ನಿದ್ದೆ!
ಹೀಗೇ ಸಾಗಲು ನೆಮ್ಮದಿಯ ಬದುಕು
ಈ ಕಂದಮ್ಮಗಳಿಗಿರುವ ಸುಕ ಯಾರಿಗುಂಟು?
ಇವರೇ ಅಲ್ಲವೇ ದೇವರ ಮಕ್ಕಳು?
( ಚಿತ್ರ ಸೆಲೆ: indiatogether.org )
ಇತ್ತೀಚಿನ ಅನಿಸಿಕೆಗಳು