ಅಪ್ಪು : ಅಳಿಸಲಾಗದ ನೆನಪು

– ನಿತಿನ್ ಗೌಡ.

ಡಾ|| ರಾಜ್ ಕುಮಾರ್ ಅವರ ನಂತರ, ಯಾವುದೇ ಎಡ, ಬಲ, ರಾಜಕೀಯ ಇತರೆ ಸಿದ್ದಾಂತಗಳ ಕಟ್ಟುಪಾಡಿಗೆ ಬೀಳದೆ, ಇಂದಿನ‌ ಪೋಲರೈಸ್ಡ್ ಜಗದಲ್ಲಿ, ಕನ್ನಡಿಗರಿಗೆ ಐಕಾನ್ ಆಗಿ, ಸಾಂಸ್ಕ್ರುತಿಕ ರಾಯಬಾರಿಯಾಗಿ ಬೆಳೆಯುತ್ತಿದ್ದ ಕೆಲವೇ ಕೆಲವು ಚೇತನಗಳಲ್ಲಿ ಇಂದು ಒಂದು ಚೇತನ ಬೌತಿಕವಾಗಿ ನಮ್ಮೊಡನೆ‌ ಇಲ್ಲ. ಇಂತಹ ಹುರಿದುಂಬಿಸುವ ವ್ಯಕ್ತಿ ಇಂದು ಕನ್ನಡಿಗರೊಟ್ಟಿಗೆ ಇರಬೇಕಿತ್ತು.‌ ಅವರ 40ರ ವಯಸ್ಸಿನ ಗಟ್ಟದಲ್ಲಿನ ಹಟಾತ್ ಅಗಲಿಕೆಯನ್ನು ಜನರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇದು ಕನಸಾಗಬಾರದಿತ್ತ?‌ ದಿನ ಕಳೆದಂತೆ ಅಪ್ಪುವಿನ‌ ಅಗಲಿಕೆಯ ನೋವು ಜನರನ್ನು‌ ಇನ್ನು ಗಟ್ಟಿಯಾಗೇ ಅಪ್ಪಿಕೊಳ್ಳುತ್ತಾ ನೂರ‍್ಮಡಿಗೊಳ್ಳುತ್ತಿದೆ.

ಶರಣರ ಗುಣ ಮರಣದಲ್ಲಿ‌ ನೋಡು ಅನ್ನುವ ಹಾಗೆ, ಹಳ್ಳಿಯಿಂದ ಹಿಡಿದು ಪೇಟೆಗಳ ಗಲ್ಲಿ ಗಲ್ಲಿಯಲ್ಲೂ  ಅಪ್ಪು ಅವರ ಪಟಗಳ ಕಟೌಟ್ ಗಳು, ಕಂಟೀರವ ಸ್ಟೇಡಿಯಂನಲ್ಲಿ ಅವರ ಕೊನೆಯ ನೋಟಕ್ಕಾಗಿ ಬಿಸಿಲು, ಮಳೆ ಲೆಕ್ಕಿಸದೇ ಹರಿದು‌ಬಂದ ಜನಸಾಗರ (25 ಲಕ್ಶಕ್ಕೂ ಹೆಚ್ಚೆನ್ನುವ ಅಂದಾಜು) ಹಾಗು‌ ಇಂದಿಗೂ ಹರಿದುಬರುತ್ತಿರುವ ಜನಸಾಗರ, ಅಕ್ಕ‌ಪಕ್ಕದ ಚಿತ್ರರಂಗದ ಕಲಾವಿದರಲ್ಲದೇ, ಆಟೋಟ, ರಾಜಕೀಯ ಹೀಗೆ ಸಮಾಜದ ಹಲವು ರಂಗಗಳ ಜನರೂ ಅಪ್ಪುವಿನ ಅಗಲಿಕೆಗೆ ಕಂಬನಿ‌ ಮಿಡಿದಿರುವುದು ನೋಡಿದರೆ ಬಾಶೆ, ದರ‍್ಮ, ದೇಶ ಎನ್ನುವ ಗಡಿಗಳ ಎಲ್ಲೆ ಮೀರಿ ಅಪ್ಪು ಜನರನ್ನು ಬೆಸೆದಿರುವುದು ಕಾಣುತ್ತದೆ. ಎಲ್ಲರಲ್ಲೂ ಅವರ ಅಗಲಿಕೆಯ ಬಗ್ಗೆ ಇರುವ ದುಗುಡ, ಹತಾಶೆ, ಬೇಸರವನ್ನು ಗಮನಿಸಿದರೆ ಒಬ್ಬ ನಟನ ಅಗಲಿಕೆ ಇಶ್ಟೆಲ್ಲ ಗಾಸಿ‌ ಮಾಡಲು ಕಾರಣವೇನು ಅನ್ನೋ ಪ್ರಶ್ನೆ ಮೂಡುವುದು ಸಹಜವೇ!

ಅವರಂತೆ ಯಾರೂ ನಟನೆ ಮಾಡಲ್ಲ ಅಂತನಾ ?
ಅವರಂತೆ ಯಾರು ಕುಣಿಯುವವರು ಸಿಗುವುದಿಲ್ಲ ಅಂತನಾ?
ಅವರಂತೆ ಯಾರೂ ಸ್ಟಂಟ್, ಪೈಟ್ ಮಾಡುತ್ತಿರಲಿಲ್ಲ ಅಂತನಾ?
ಅವರು ಅಣ್ಣಾವ್ರ ಮಗ ಅಂತನಾ ?
ಅವರು ಒಳ್ಳೆಯ ಹಾಡುಗಾರ ಅಂತನಾ ?

ಇವಶ್ಟೇ ಆದಲ್ಲಿ, ಈ‌ ಬಗೆಯ ಪ್ರತಿಬೆ ಸಿಗಬಹುದು, ಆದರೆ ಅವರ ನಟನೆಗೆ‌ ಮನಸೋಲದವರೂ ಇಂದು ಅವರು ಅಗಲಿದ್ದಕ್ಕೆ ಮಿಡಿಯೋದು‌ ನೋಡಿದರೆ, ಅವರು ಸರಳ ಮನುಶ್ಯನಾಗಿ ತಂದೆಯ ಹಾದಿಯಲ್ಲಿ ನಡೆಯುತ್ತಾ ಜನಗಳ ಮನಸಲ್ಲಿ, ಅವರ ಅರಿವಿಗೇ ಬಾರದೆ ಜಾಗ ಸಂಪಾದಿಸಿದ್ದು ಕಾಣುತ್ತದೆ. ಚಿಕ್ಕಂದಿನಿಂದ ಅವರು ಬೆಳೆಯುತ್ತಾ ಬಂದಿದ್ದನ್ನು ನೋಡಿಕೊಂಡು ಬಂದ ಮಂದಿ ತಮ್ಮ ಮಗನನ್ನೇ ಕಳೆದುಕೊಂಡಶ್ಟು‌ ಸಂಕಟ ಪಡುತ್ತಿದ್ದಾರೆ. ನಟನೆ ಇತ್ಯಾದಿ ಪಕ್ಕಕ್ಕಿಟ್ಟರೂ, ಆ ಮುಗ್ದ ನಗು, ಸರಳತೆ , ಸಮಾಜಮುಕಿ ಕೆಲಸಗಳು, ಜನರೊಡಗಿನ ಒಡನಾಟ ಮತ್ತು ಅವರನ್ನು ನಡೆಸಿಕೊಳ್ಳುವ ರೀತಿಯಿಂದಲೇ ಜನರು ತಮ್ಮ ಮನೆಮಗನನ್ನು ಕಳೆದುಕೊಂಡ ಹಾಗಾಗಿದೆ. ಯಾಕೆಂದರೆ ಅಪ್ಪು ಅವರು ನಡೆದುಕೊಂಡ ರೀತಿಯೇ ಹಾಗೆ. 

  • ಅಣ್ಣಾವ್ರ ಮಾತಿನಂತೆ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ತಿಳಿಯಬಾರದು ಅನ್ನೋದನ್ನ ಅಪ್ಪು ಜೀವನದಲ್ಲಿ ಅಳವಡಿಸಿಕೊಂಡು ಹಲವಾರು ಸಮಾಜಮುಕಿ ಕೆಲಸ ಮಾಡುತ್ತಿದ್ದರು. ಹಲವಾರು ಶಾಲೆ, ಅನಾತಾಶ್ರಮ, ಗೋಶಾಲೆಗಳನ್ನು ನಡೆಸುತ್ತಾ, ಮಕ್ಕಳ ಕಲಿಕೆಯ ಹೊಣೆ, ವಯಸ್ಸಾದವರಿಗೆ ನೆಲೆ ಇತ್ಯಾದಿ ಸಮಾಜಮುಕಿ ಕೆಲಸವನ್ನು ಪ್ರಚಾರ ಬಯಸದೆ ನಡೆಸುತ್ತಿದ್ದರು.
  • ಸಿನಿಮಾರಂಗದಲ್ಲಿನ ಪ್ರತಿಬಾವಂತರನ್ನು ಹುಡುಕಿ ಅವರಿಗೆ ವೇದಿಕೆ ಕೊಟ್ಟು ಪಿ.ಆರ್.ಕೆ ಪ್ರೊಡಕ್ಶನ್ ಮೂಲಕ ಹೊಸಬರ ಚಿತ್ರ ನಿರ‍್ಮಿಸಿ ಕಂಟೆಂಟ್ ಚಿತ್ರಗಳನ್ನು ಕೊಡುವ ಹಮ್ಮುಗೆ ಸುತ್ತ ಕೆಲಸ ಮಾಡುತ್ತಿದ್ದರು (ಕನ್ನಡ ಚಿತ್ರರಂಗಕ್ಕೆ ಇಂತಹ ವ್ಯವಸ್ತಿತ ಕೆಲಸಗಳನ್ನು ಮಾಡುವ ಮುಂದಾಳತ್ವ ಬೇಕಿತ್ತು)
  • ಎಲ್ಲರನ್ನು ಒಗ್ಗೂಡಿಸಿ ನಡೆಯುವ ಗುಣವಿರುವ, ಕನ್ನಡಿಗರ ಐಕಾನ್ ಆಗಿ ಬೆಳೆಯುತ್ತಿದ್ದರು.
  • ನಂದಿನಿ ಹಾಲಿನ ಸಂಸ್ತೆಗೆ ಉಚಿತವಾಗಿ ಜಾಹಿರಾತು ಮಾಡಿಕೊಡುತ್ತಾ ಬರುತ್ತಿದ್ದರು.
  • ಸರಕಾರದ ಹಲವಾರು ಯೋಜನೆಗಳಿಗೆ ಬಿಡಿಗಾಸು ಪಡೆಯದೇ ರಾಯಬಾರಿಯಾಗಿ ನಿಂತು ಜನರಲ್ಲಿ ಅರಿವು‌ ಮೂಡಿಸುತ್ತಿದ್ದರು (ಹಳ್ಳಿಯ ಹೆಣ್ಣುಮಕ್ಕಳು ಬದುಕು ಕಟ್ಟಿಕೊಳ್ಳುವ “ಸಂಜೀವಿನಿ” ಯೋಜನೆ, ಕರೋನಾ ಚುಚ್ಚುಮದ್ದು ಅಬಿಯಾನ, ಮತದಾನ ಅಬಿಯಾನ, ಪ್ರವಾಸೋದ್ಯಮ,”ದೀಪ ಸಂಜೀವಿನಿ”, ಎಲ್.ಇ.ಡಿ. ಬಲ್ಬ್ ಬಳಕೆಗೆ ಒತ್ತು ನೀಡುವ “ಹೊಸಬೆಳಕು” ಹಮ್ಮುಗೆ , ತನ್ನೂರು ಚೆಲುವ ಚಾಮರಾಜನಗರದ ರಾಯಬಾರಿ – ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ)
  • ರಾಜ್‌ಕುಮಾರ್ ಲರ‍್ನಿಂಗ್ ಆಪ್ ಮೂಲಕ ಐ.ಎ.ಸ್, ಕೆ.ಎ.ಸ್, ಕನ್ನಡ ಕಲಿಕೆ, ಪಿ.ಯು.ಸಿ‌ ಇತ್ಯಾದಿಗೆ ಕಲಿಕಾ ಸಾಮಗ್ರಿ ನೀಡುತ್ತಾ ಹಲವರ ಕನಸಿಗೆ ಒತ್ತಾಸೆಯಾಗಿದ್ದರು.
  • ರಾಜ್‌ಕುಮಾರ್ ಐ.ಎ.ಸ್‌ ಕೋಚಿಂಗ್ ಸೆಂಟರ್ ಮೂಲಕ‌ ಮಕ್ಕಳಿಗೆ ಕೈಗೆಟುಕುವ ಬೆಲೆಗೆ ತರಬೇತಿ ಕೊಡುತ್ತಿದ್ದರು. ಈ ಎಲ್ಲ ಕೆಲಸಗಳು ಅವರು ಅಗಲಿದ ಬಳಿಕ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

ಅಣ್ಣಾವ್ರಂತೆ ತಮ್ಮ ಕಣ್ಣುಗಳನ್ನು ದಾನ ಮಾಡಿ, ನಾಲ್ಕು‌ ಜನರ ಜೀವನಕ್ಕೆ ಬೆಳಕು ನೀಡುವುದರ ಮೂಲಕ‌ ಸಾವಿನಲ್ಲೂ ಸಾರ‍್ತಕತೆ ಮೆರೆದಿದ್ದಾರೆ.

“ಯೋಗವು ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೆ ಉಳಿವುದು‌ ಕೊನೆಗೆ”

‘ರಾಜಕುಮಾರ’ ಸಿನಿಮಾದ ಈ ಸಾಲುಗಳು ದೊಡ್ಮನೆ ಹುಡುಗನಿಗೆ ಹೇಳಿ‌ಮಾಡಿಸಿದಂತಿದೆ. ಹೆಸರಾಂತ ಕನ್ನಡ ಸಾಹಿತಿ ಮದುರಚೆನ್ನರು ತೀರಿಕೊಂಡಾಗ ಬೇಂದ್ರೆ ಅವರು ಹೇಳಿದ ಮಾತುಗಳು ನೆನಪಿಗೆ ಬರುತ್ತವೆ. ದ ರಾ ಬೇಂದ್ರೆಯವರ ಜೀವದ ಗೆಳೆಯ ಹಲಸಂಗಿಯ ಮದುರಚೆನ್ನರವರು ತಮ್ಮ 50ರ‌ ವಯಸ್ಸಿನಲ್ಲೇ ಕಾಣದ ಲೋಕಕ್ಕೆ ಪಯಣಿಸಿದ್ದರು. ಇದು‌ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡಲಿ‌ ಪೆಟ್ಟು ನೀಡಿತ್ತು. ಹಲಸಂಗಿಯಲ್ಲಿ ಅವರ ಕೊನೆಯ ಕ್ರಿಯೆ ನಡೆಯುವ ವೇಳೆ, ತಮ್ಮ ಜೀವದ ಗೆಳೆಯನನ್ನು ಕಳೆದುಕೊಂಡ ಬೇಂದ್ರೆಯವರು ಏನು‌ ಹೇಳಬಹುದೆಂದು‌ ಎಲ್ಲರೂ ಕಾತುರದಿಂದ ಕಾಯುತ್ತಿದ್ದರು. ಅಂದು ಬೇಂದ್ರೆಯವರಾಡಿದ ನಾಲ್ಕು ನುಡಿಮುತ್ತುಗಳು ಎಲ್ಲರನ್ನೂ ರೋಮಾಂಚನಗೊಳಿಸಿತ್ತು. ಆ ಮಾತು ಹೀಗಿತ್ತು;

“ಯಾಕ ಯಾಕಾಂತ ಎಲ್ಲರೂ ಮಾರಿ (ಮೋರೆ) ಸಪ್ಪಗ ಮಾಡ್ಕಂಡ್ ಕುಂತಿರಿ? ನಾವು ಇವತ್ತು ಚನ್ನಪ್ಪನ್ನ ಹೂತಿಲ್ಲ ಬಿತ್ತೀವಿ, ಬೂಮ್ಯಾಗಿರೊ ಚನ್ನಪ್ಪ ಬೆಳಿ ಆಗ್ತಾನ. ಬೆಳಿಯೊಳಗಿನ ಕಾಳು ಒಂದು ಎರಡಾಗಿ, ಎರಡು ನಾಕಾಗಿ ನಾಡೆಲ್ಲ ತುಂಬ್ತದ. ನಾ ಹಂಗ ಬಾವಿಸ್ಕಂಡಿದೀನಿ, ನೀವು ಹಂಗನ ತಿಳ್ಕೋರಿ ಮನಸು ಹಗರಾಗ್ತದ.”⁣

ಈ ಸಾಲುಗಳು ಇಂದು ಅಪ್ಪುವಿಗೂ ಒಪ್ಪುವಂತದ್ದು. ಅವರೆಡೆಗೆ ಹರಿದು ಬರುತ್ತಿರುವ ಪ್ರೀತಿ, ಅಬಿಮಾನ ನೋಡಿದರೆ ಈ‌‌ ಮಾತು ಇಂದು‌ ನಿಜವೂ ಆಗ್ತಿದೆ ಅನ್ನಬಹುದು. ಬಹುಶಹ ಹೂದೋಟದಲ್ಲಿನ ಚೆಂದದ  ಹೂಗಳೆಲ್ಲವೂ ದೇವರ ಮುಡಿ ಮೊದಲು ಸೇರುವಂತೆ, ಅಪ್ಪು ಇಂದು ದೇವರ ಮುಡಿ ಸೇರಿದ್ದಾರೆ. ಸತ್ತಮೇಲೂ ಬದುಕುವ ಕೆಲವೇ ಕೆಲವರ ಸಾಲಿಗೆ ಅಪ್ಪು ಸೇರಿದ್ದಾರೆ. ಅಪ್ಪುವನ್ನು ಜನರು ಒಬ್ಬ ವ್ಯಕ್ತಿಯಾಗಿ ಅನ್ನುವುದಕ್ಕಿಂತ ಒಂದು ಮಾದರಿ ವ್ಯಕ್ತಿತ್ವವಾಗಿ ನೋಡುತ್ತಿದ್ದಾರೆ ಅನ್ನಬಹುದು. ಶಂಕರ್ ನಾಗ್ ಹೇಗೆ ಮಿಂಚಿನಂತೆ ಬಂದು ಹೋದರೋ, ಅಪ್ಪು ಕೂಡ ಹಾಗೆ ಬೇಗನೆ  ನಮ್ಮನ್ನು ಬಿಟ್ಟು ಹೋದರೂ ಜೀವಮಾನಕ್ಕಾಗುವಶ್ಟು ಸಾದನೆಗಯ್ದು ಹೋಗಿದ್ದಾರೆ. ಇಂಡಸ್ಟ್ರಿಯವರು ಅವರ ಕನಸುಗಳನ್ನು ಸಾಕಾರಗೊಳಿಸುವತ್ತಾ ಹೆಜ್ಜೆಯಿಟ್ಟಲ್ಲಿ, ಅವರನ್ನು ಇಶ್ಟಪಡುವವರು ಅವರ ಆಶಯಗಳನ್ನು ಕೊಂಚವಾದರೂ ಅಳವಡಿಸಿಕೊಂಡಲ್ಲಿ, ಅವರ ಪಿ.ಆರ್‌‌.ಕೆ ನಿರ‍್ಮಾಣ ಸಂಸ್ತೆ ಮತ್ತು ಅವರು‌ ನಡೆಸುತ್ತಿದ್ದ ಸಮಾಜಮುಕಿ ಕೆಲಸಗಳು ಮುಂದುವರೆದಲ್ಲಿ, ಅವರ ಆತ್ಮ ನಿರಾಳವಾಗಬಹುದು.

( ಚಿತ್ರಸೆಲೆ: kannada.news18.com )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: