ಪಾಲಕ್ ಸೊಪ್ಪಿನ ಸಾರು

– ಸವಿತಾ.

ಬೇಕಾಗುವ ಸಾಮಾನುಗಳು

  • ಪಾಲಕ್ ಸೊಪ್ಪು – 6 ಎಲೆ
  • ಈರುಳ್ಳಿ – 1
  • ಹಸಿ ಮೆಣಸಿನಕಾಯಿ – 2
  • ಚಕ್ಕೆ – 1/4 ಇಂಚು
  • ಲವಂಗ – 2
  • ಬೆಳ್ಳುಳ್ಳಿ ಎಸಳು – 4
  • ಹಸಿ ಶುಂಟಿ – 1/4 ಇಂಚು
  • ಜೀರಿಗೆ – 1/2 ಚಮಚ
  • ಕೊತ್ತಂಬರಿ ಕಾಳು – 1/2 ಚಮಚ
  • ಎಣ್ಣೆ – 4 ಚಮಚ
  • ಹುಣಸೆ ರಸ – 1/2 ಲೋಟ
  • ಸಾಸಿವೆ – 1/2 ಚಮಚ
  • ಜೀರಿಗೆ – 1/2 ಚಮಚ
  • ಕರಿಬೇವು – 7 -8 ಎಲೆ
  • ಇಂಗು – 1/4 ಚಮಚ
  • ಒಣ ಮೆಣಸಿನಕಾಯಿ – 2
  • ಕಡಲೇ ಬೇಳೆ – 1 ಚಮಚ
  • ಉದ್ದಿನ ಬೇಳೆ – 1 ಚಮಚ
  • ಬೆಲ್ಲದ ಪುಡಿ – 2 ಚಮಚ
  • ಅರಿಶಿಣ ಪುಡಿ – 1/4 ಚಮಚ
  • ಸಾಂಬಾರ್ ಪುಡಿ – 1 ಚಮಚ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಹುಣಸೆಹಣ್ಣು ನೆನೆಸಿ ಇಡಿ. ಪಾಲಕ್ ಸೊಪ್ಪು ತೊಳೆದು ಕತ್ತರಿಸಿ ಇಟ್ಟುಕೊಳ್ಳಿ. ಈರುಳ್ಳಿ, ಹಸಿಮೆಣಸಿನಕಾಯಿ ಹಸಿ ಶುಂಟಿ ಕತ್ತರಿಸಿ ಇಟ್ಟುಕೊಳ್ಳಿ

ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಚಕ್ಕೆ, ಲವಂಗ, ಜೀರಿಗೆ ಕೊತ್ತಂಬರಿ ಕಾಳು ಹಾಕಿ ಹುರಿದು ತೆಗೆದಿಡಿ. ನಂತರ ಈರುಳ್ಳಿ, ಪಾಲಕ್ ಸೊಪ್ಪು, ಹಸಿಮೆಣಸಿನಕಾಯಿ, ಹಸಿ ಶುಂಟಿ, ಬೆಳ್ಳುಳ್ಳಿ ಎಸಳು ಹಾಕಿ ಹುರಿಯಿರಿ. ಹುರಿದ ಮಸಾಲೆ ಸಾಮಾನುಗಳೊಂದಿಗೆ ಈರುಳ್ಳಿ -ಪಾಲಕ್ ಮಿಶ್ರಣವನ್ನು ಮಿಕ್ಸರ್ ನಲ್ಲಿ ರುಬ್ಬಿಕೊಂಡು ಮೂರು ಲೋಟ ನೀರು ಸೇರಿಸಿ ಒಂದು ಪಾತ್ರೆಯಲ್ಲಿ ಕುದಿಯಲು ಇಡಬೇಕು.

ಮೂರು ಚಮಚ ಎಣ್ಣೆ ಬಾಣಲೆಗೆ ಹಾಕಿ ಬಿಸಿ ಮಾಡಿ ಅದರಲ್ಲಿ ಸಾಸಿವೆ, ಜೀರಿಗೆ, ಕರಿಬೇವು, ಇಂಗು, ಕಡಲೇಬೇಳೆ, ಉದ್ದಿನಬೇಳೆ, ಒಣಮೆಣಸಿನಕಾಯಿ ಮುರಿದು ಹಾಕಿ, ಉಪ್ಪು ಅರಿಶಿಣ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಇದನ್ನು ಕುದಿಯುವ ಸಾರಿಗೆ ಸೇರಿಸಿ. ಹುಣಸೆ ರಸ ಹಾಕಿ , ಬೆಲ್ಲ ಮತ್ತು `ಸಾಂಬಾರ್ ಪುಡಿ ಹಾಕಿ ಒಂದು ಕುದಿ ಕುದಿಸಿ ಇಳಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಉದುರಿಸಿ ಒಮ್ಮೆ ಕೈಯಾಡಿಸಿ. ಈಗ ಪಾಲಕ್ ಸೊಪ್ಪಿನ ತಿಳಿಸಾರು ಸವಿಯಲು ಸಿದ್ದ. ಸರಳ ಹಾಗೂ ಆರೋಗ್ಯಕರ ಪಾಲಕ್ ಸಾರು ಅನ್ನದೊಂದಿಗೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: