ಅಮೇರಿಕಾದ ‘ಅದ್ಯಕ್ಶರ ಉದ್ಯಾನವನ’

– .

ಅಮೇರಿಕಾದಲ್ಲಿನ ವರ‍್ಜೀನಿಯಾದ ವಿಲಿಯಮ್ಸ್ ಬರ‍್ಗ್ ನಲ್ಲಿ 2004ರಲ್ಲಿ ಅದ್ಯಕ್ಶರ ಉದ್ಯಾನವನ್ನು ದೇಶಕ್ಕೆ ಸಮರ‍್ಪಿಸಲಾಯಿತು. ಇದು ತೆರೆದ ವಸ್ತು ಸಂಗ್ರಹಾಲಯ. ಈ ವಸ್ತು ಸಂಗ್ರಹಾಲಯವನ್ನು ನೋಡಲು ಬರುವವರು, ಸುಮಾರು ಹದಿನೆಂಟು ಅಡಿ ಎತ್ತರದ, ಅಮೇರಿಕಾದ 43 ಅದ್ಯಕ್ಶರ ಎದೆ ಮಟ್ಟದ ಸಿಮೆಂಟ್ ಕಾಂಕ್ರೀಟ್‍ನಿಂದ ನಿರ‍್ಮಿಸಲಾದ ಪ್ರತಿಮೆಗಳ ನಡುವೆ ನಡೆಯಬಹುದು. ಈ ತೆರೆದ ಸಂಗ್ರಹಾಲಯದಲ್ಲಿ ಅಮೇರಿಕಾದ ಮೊದಲ ಅದ್ಯಕ್ಶ ಜಾರ‍್ಜ್ ವಾಶಿಂಗ್ಟನ್‍ರಿಂದ ಮೊದಲ್ಗೊಂಡು ಜಾರ‍್ಜ್ ಬುಶ್‍ರವರೆಗೂ, ಪ್ರತಿಮೆಗಳು ಸಾರ‍್ವಜನಿಕರಿಗೆ ವೀಕ್ಶಿಸಲು ಲಬ್ಯ.

ಈ ತೆರೆದ ಉದ್ಯಾನ, ಆ ಸ್ತಳದ ಮಾಲೀಕ ಎವೆರೆಟ್ ಹೇಲಿ ನ್ಯೂಮನ್ ಮತ್ತು ಹೋಸ್ಟನ್ ಶಿಲ್ಪಿ ಡೇವಿಡ್ ಅಡಿಕ್ಸ್ ರವರ ಕಲ್ಪನೆಯ ಕೂಸು. ಡೇವಿಡ್ ಅಡಿಕ್ಸ್, ಮೌಂಟ್ ರಶ್ಮೋರ್ ಮೂಲಕ ಹಾದು ಹೋಗುವಾಗ ಕಂಡ ಪ್ರತಿಮೆಗಳು, ಈ ತೆರೆದ ಉದ್ಯಾನವನ್ನು ರಚಿಸಲು ಸ್ಪೂರ‍್ತಿ ಎಂದಿದ್ದಾರೆ. ಡೇವಿಡ್ ಅಡಿಕ್ಸ್ ತಾವು ನಿರ‍್ಮಿಸಲಿರುವ ಪ್ರತಿಮೆಗಳನ್ನು ವಾಶಿಂಗ್ಟನ್ ಡಿ.ಸಿ.ಯಲ್ಲಿ ನಿರ‍್ಮಿಸಲು ಬಯಸಿದ್ದರು. ಅದರೆ ಅವರ ಪ್ರಯತ್ನಕ್ಕೆ ಪಲ ಸಿಗಲಿಲ್ಲ. ಚಲಬಿಡದ ಅವರು ಸ್ತಳ ಬದಲಾವಣೆ ಮಾಡಿ ವರ‍್ಜೀನಿಯಾದ ವಿಲಿಯಮ್ಸ್ ಬರ‍್ಗ್  ಅನ್ನು ಆಯ್ದುಕೊಂಡರು. ಅಲ್ಲಿನ ಸ್ತಳೀಯ ವಾಟರ್ ಪಾರ‍್ಕ್ ಡೆವೆಲಪರ್ ಹ್ಯಾಲಿ ನ್ಯೂಮನ್ ಅವರೊಂದಿಗೆ ಪಟ್ಟಣದ ಹೊರವಲಯದಲ್ಲಿ ಅದ್ಯಕ್ಶರ ಉದ್ಯಾನವನ್ನು ನಿರ‍್ಮಿಸಲು ಒಪ್ಪಂದವನ್ನು ಮಾಡಿಕೊಂಡರು. ಒಪ್ಪಂದದಂತೆ 2004ರಲ್ಲಿ ಪ್ರೆಸಿಡೆಂಟ್ ಪಾರ‍್ಕ್ 10 ಎಕರೆ ಪ್ರದೇಶದಲ್ಲಿ ತಲೆಯೆತ್ತಿತು.

ನೋಡುಗರ ಕೊರತೆ

ಈ ಪ್ರೆಸಿಡೆಂಟ್ಸ್ ಪಾರ‍್ಕ್ (ಅದ್ಯಕ್ಶರ ಉದ್ಯಾನ) ರಚಿಸಲು ವೆಚ್ಚವಾದ ಮೊತ್ತ, ಹತ್ತು ಮಿಲಿಯನ್ ಡಾಲರ್. ಇಶ್ಟು ಹಣ ವ್ಯಯಿಸಿ, ಈ ಉದ್ಯಾನ ನಿರ‍್ಮಾಣ ಮಾಡಿದರೂ, ವೀಕ್ಶಕರ ಕೊರತೆ ನಿರ‍್ಮಾಪಕರನ್ನು ಕಾಡಿತು. ಅಮೇರಿಕಾವನ್ನು ಆಳಿದ ಅದ್ಯಕ್ಶರ ಪ್ರತಿಮೆಗಳ ನಿರ‍್ವಹಣೆಗೆ ಸಂಪನ್ಮೂಲದ ಕೊರತೆ ಉಂಟಾಗತೊಡಗಿ, ಪ್ರತಿಮೆಗಳು ಅದೋಗತಿಗಿಳಿಯಲು ಶುರುವಾದವು. ಇದೇ ಕಾರಣದಿಂದಾಗಿ ಸಾರ‍್ವಜನಿಕರಿಗೆ ತೆರೆದುಕೊಂಡ ಆರು ವರ‍್ಶಗಳಲ್ಲೇ, ಅಂದರೆ 2010ರಲ್ಲಿ, ಇದು ಅವಸಾನ ಕಂಡಿತು.

ವಿವಾದಗಳು ಮತ್ತು ಅವನತಿ

ಹಲವಾರು ವರ‍್ಶಗಳ ಕಾಲ ಇದರ ಸುತ್ತಾ ಸಾಕಶ್ಟು ವಿವಾದಗಳು ಸುತ್ತುವರೆದಿದ್ದವು. ಇದು ಕಾಸಗಿಯವರ ಸ್ವತ್ತಾದ ಕಾರಣ, ಸ್ತಳೀಯ ವಸಾಹತುಶಾಹಿಗಳು ಸುತ್ತ ಮುತ್ತಲ ಆಕರ‍್ಶಣೆಯಿಂದ ವೀಕ್ಶಕರನ್ನು ಅದು ಸೆಳೆಯುತ್ತದೆ ಎಂದು ಬಾವಿಸಿದ್ದರು. ಆದರೆ ಈ ಉದ್ಯಾನದ ನಿರ‍್ಮಾಪಕರು ಅದನ್ನು ಅಲ್ಲಗಳೆದಿದ್ದರು. ಅದ್ಯಕ್ಶರ ಉದ್ಯಾನ ನಿರ‍್ಮಾಪಕರು ಇದು ಮಕ್ಕಳಿಗೆ ಇತಿಹಾಸವನ್ನು ತಿಳಿಸಲು ಸಹಾಯಕವಾಗುವ ಉದ್ಯಾನ ಎಂದು ಪ್ರತಿಪಾದಿಸಿದರು. ಆ ಬೂಮಿಯ ಒಡೆಯರ ಜೊತೆಗಿನ ವಾದ ವಿವಾದ ಬಗೆಹರಿಯದೆ ಸೆಪ್ಟೆಂಬರ್ 30, 2010ರಂದು ಅದ್ಯಕ್ಶರ ಉದ್ಯಾನವನ್ನು ಶಾಶ್ವತವಾಗಿ ಮುಚ್ಚುವ ನಿರ‍್ದಾರ ತೆಗೆದುಕೊಂಡರು. ಉದ್ಯಾನಕ್ಕೆ ಬಾಗಿಲನ್ನು ಹಾಕಿದ ಎರಡು ವರ‍್ಶದ ನಂತರ, ಅದರ ನಿರ‍್ಮಾಣಕ್ಕೆ ಸಾಲ ನೀಡಿದ್ದವರು, ಅಲ್ಲಿದ್ದ ಪ್ರತಿಮೆಗಳನ್ನು ಹೊರತುಪಡಿಸಿ ಉಳಿದ ಪ್ರದೇಶವನ್ನು ಹರಾಜು ಹಾಕಿ ತಮಗೆ ಸೇರಬೇಕಿದ್ದ ಹಣವನ್ನು ಹಿಂದಕ್ಕೆ ಪಡೆದಿದ್ದರು.

ಮರುಜೀವ

ಉದ್ಯಾನದ ಸ್ವತ್ತು ಬೇರೆಯವರಿಗೆ ಪರಬಾರೆಯಾದ ನಂತರ, ಅದರಲ್ಲಿದ್ದ 43 ಅಮೇರಿಕಾ ಅದ್ಯಕ್ಶರ ಎದೆಮಟ್ಟದ ಪ್ರತಿಮೆಗಳನ್ನು ನಾಶಪಡಿಸುವ ಬದಲಾಗಿ, ವರ‍್ಜೀನಿಯಾದ ಗ್ರಾಮೀಣ ಪ್ರದೇಶದ 400 ಎಕರೆ ಜಮೀನಿಗೆ ಸ್ತಳಾಂತರಿಸಲು ನಿರ‍್ದರಿಸಲಾಯಿತು. ಪ್ರತಿ ಪ್ರತಿಮೆಯು 11,000 ದಿಂದ 20,000 ಪೌಂಡ್ ಗಳಶ್ಟಿದ್ದ ಕಾರಣ ಅದರ ಸ್ತಳಾಂತರಿಸುವ ಕಾರ‍್ಯ ಸುಲಬಸಾದ್ಯವಾಗಿರಲಿಲ್ಲ. ಉದ್ಯಾನವನದಿಂದ ವರ‍್ಜೀನಿಯಾದ ಗ್ರಾಮೀಣ ಪ್ರದೇಶದ 400 ಎಕರೆ ಜಮೀನಿಗೆ ಸ್ತಳಾಂತರಿಸುವ ಕಾರ‍್ಯಕ್ಕೆ ಸರಿ ಸುಮಾರು ಒಂದು ವಾರದ ಸಮಯದ ಜೊತೆಗೆ, ಅಂದಾಜು 50,000 ಡಾಲರ್ ಹಣ ವೆಚ್ಚವಾಗಿತ್ತು.

ಎಶ್ಟೇ ನಾಜೂಕಾಗಿ ಹಾಗೂ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಈ ಪ್ರತಿಮೆಗಳನ್ನು ಸಾಗಿಸಲು ಪ್ರಯತ್ನ ಪಟ್ಟರೂ, ಕೆಲವೊಂದು ಪ್ರತಿಮೆಗಳು ಹಾನಿಗೆ ಒಳಗಾದವು. ಅವುಗಳಲ್ಲಿ ಅಬ್ರಹಾಂ ಲಿಂಕನ್ ಪ್ರತಿಮೆಯ ಹಿಂಬಾಗಕ್ಕೆ ಸಾಕಶ್ಟು ಜಕಂ ಆಗಿತ್ತು. ಅತಿ ತೂಕದ ಈ ಎದೆಮಟ್ಟದ ಪ್ರತಿಮೆಗಳನ್ನು ನೆಲದಿಂದ ಮೇಲೆತ್ತೆಲು, ಕ್ರೇನುಗಳ ಸಹಾಯ ಅನಿವಾರ‍್ಯವಾಗಿತ್ತು. ಕ್ರೇನುಗಳಿಗೆ ಕಟ್ಟಿ ಮೇಲೆತ್ತಲು ಬಹಳಶ್ಟು ಪ್ರತಿಮೆಗಳ ಕುತ್ತಿಗೆಯ ಬಾಗಕ್ಕೆ ಕೊಕ್ಕೆಗಳನ್ನು ಸಿಗಿಸಬೇಕಿತ್ತು. ಆಗ ಸಾಕಶ್ಟು ಹಾನಿಯಾಯಿತು. ಮೊದಮೊದಲು ಸಾಗಾಣೆ ಮಾಡಿದ ಬಹಳಶ್ಟು ಪ್ರತಿಮೆಗಳ ಮೂಗು ಊನವಾಗಿತ್ತು. ಪ್ರತಿಮೆಯನ್ನು ನಿರ‍್ಮಿಸಲು ಬಳಸಿದ್ದ ಉಕ್ಕಿನ ಚೌಕಟ್ಟಿನ ರಚನೆ, ಸಾಗಾಣಿಕೆಗೆ ಪೂರಕವಾಗಿಲ್ಲದ ಕಾರಣ, ಸಮಸ್ಯೆಯನ್ನು ತಂದೊಡ್ಡಿತು.

ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಎಲ್ಲಾ 43 ಅದ್ಯಕ್ಶರ ಎದೆಮಟ್ಟದ ಪ್ರತಿಮೆಗಳನ್ನು ಸಾಗಿಸಲಾಯಿತು. ಅಲ್ಲಿಂದ ಸಾಗಿಸಿದ ನಂತರ ಅವುಗಳನ್ನು ಕ್ರಮವಾಗಿ ಜೋಡಿಸದೆ ಎಲ್ಲೆಂದರಲ್ಲಿ ಜೋಡಿಸಲಾಗಿತ್ತು. ಜಾರ‍್ಜ್ ವಾಶಿಂಗ್ಟನ್ನರ ಪ್ರತಿಮೆಯನ್ನು ಟೆಡ್ಡಿ ಮತ್ತು ಪ್ರಾಂಕ್ಲಿನ್ ರೂಸ್ವೆಲ್ಟ್ ನಡುವೆ, ರೊನಾಲ್ಡ್ ರೇಗನ್ ಪಕ್ಕದಲ್ಲಿ ಜಾನ್ ಎಪ್ ಕೆನಡಿ – ಹೀಗೆ ಹೇಗೆಂದರೆ ಹಾಗೆ, ಎಲ್ಲೆಂದರೆ ಅಲ್ಲಿ, ಇಡಲಾಗಿತ್ತು.

ಕರಗದ ಉತ್ಸಾಹ

ಸ್ತಳಾಂತರಿಸಿದ ನಂತರವೂ ಸಹ ಅದ್ಯಕ್ಶರ ಪಾರ‍್ಕಿನ ಪ್ರತಿಮೆಗಳಲ್ಲಿ ಕುಸಿತ ಹಾಗೂ ಬಿರುಕು ಕಾಣಿಸಿಕೊಳ್ಳುವುದು ಮುಂದುವರೆದಿದೆ. ಇಶ್ಟಾದರೂ ಅದರ ಮಾಲೀಕರು ಅವುಗಳನ್ನು ಪುನಹ ಸ್ತಾಪಿಸಲು ಹಾಗೂ ಸಾರ‍್ವಜನಿಕರ ಪ್ರದರ‍್ಶನಕ್ಕೆ ಹೊಸ ಸ್ತಳದಲ್ಲಿ ತೆರೆಯಲು ಉತ್ಸುಕರಾಗಿದ್ದಾರೆ. ಅದ್ಯಕ್ಶರ ಪಾರ‍್ಕಿನ ಈ ಎಲ್ಲಾ 43 ಅಮೇರಿಕಾ ಅದ್ಯಕ್ಶರ ಎದೆಮಟ್ಟದ ಪ್ರತಿಮೆಗಳಿಗೆ ಪುನರ‍್ಜನ್ಮ ದೊರಕಬಹುದೇ? ಕಾದು ನೋಡಬೇಕಶ್ಟೆ.

(ಮಾಹಿತಿ ಮತ್ತು ಚಿತ್ರಸೆಲೆ: totallythebomb.com, smithsonianmag.com, lonelyplanet.com, atlasobscura.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks