ಬಕೆಟ್‍ಗಾಗಿ ನಡೆದ ಯುದ್ದ

– .

ಇದುವರೆಗೂ ಪ್ರಪಂಚದಲ್ಲಿ ನಡೆದಿರುವ ಅನೇಕಾನೇಕ ಯುದ್ದಗಳನ್ನು ವಿಶ್ಲೇಶಣೆ ಮಾಡಿದಲ್ಲಿ ಅವುಗಳಲ್ಲಿ ಅನೇಕ ಯುದ್ದಗಳನ್ನು ತಪ್ಪಿಸಬಹುದಾದ ಸಾದ್ಯತೆ ಬಹಳವಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಇವುಗಳಲ್ಲಿ ಕೆಲವೊಂದು ಮೂರ‍್ಕತನದ ಪರಮಾವದಿಯಿಂದ ಆದವುಗಳು. ಮತ್ತೆ ಕೆಲವನ್ನು ಪರಸ್ಪರ ಮಾತುಕತೆಯಿಂದ ಬಗೆಹರಿಸಿಕೊಳ್ಳವ ಸಾದ್ಯತೆ ಇತ್ತು. ಈ ಮೂರ‍್ಕತನದ ಯುದ್ದಗಳಲ್ಲಿ, ಅತಿ ಮೂರ‍್ಕತನದ ಯುದ್ದ ನಡೆದದ್ದು ಕೇವಲ ಒಂದು ಮರದ ಬಕೆಟ್ಟಿಗಾಗಿ. ಈ ಕದನವನ್ನು ಜಪ್ಪೋಲಿನೊ ಕದನವೆನ್ನುತ್ತಾರೆ. ಇತಿಹಾಸದಲ್ಲಿ ಅತಿ ಕ್ಶುಲ್ಲಕ ಕಾರಣಕ್ಕಾಗಿ, ಅದೂ ಕೇವಲ ಒಂದು ಮರದ ಬಕೆಟ್ಟಿಗಾಗಿ ನಡೆದ ಬಯಂಕರ ಯುದ್ದ ಎಂದು ಇದು ಕುಕ್ಯಾತಿಗಳಿಸಿದೆ.

ಹಿನ್ನೆಲೆ

ಈ ಯುದ್ದವು ಓಕೆನ್ ಬಕೆಟ್ ಯುದ್ದವೆಂದೇ ಜನಪ್ರಿಯವಾಗಿದೆ. 1325ರಲ್ಲಿ ಇಟಲಿಯ ಪ್ರತಿಸ್ಪರ‍್ದಿ ನಗರಗಳಾದ ಬೊಲೊಗ್ನಾ ಮತ್ತು ಮೊಡೆನಾ ನಡುವೆ ನಡೆದ ಯುದ್ದವಿದು. ಮೊಡೆನಾ ಸೈನಿಕರ ಗುಂಪೊಂದು ಬೊಲೊಗ್ನಾ ಒಳಗೆ ನುಸುಳಿ, ನಗರದ ಮದ್ಯಬಾಗದಲ್ಲಿರುವ ಬಾವಿಯಿಂದ ನೀರನ್ನು ಸೆಳೆಯಲು ಬಳಸುವ ಓಕ್ ಬಕೆಟ್ಟನ್ನು ಕದ್ದಿದ್ದೇ ಈ ಯುದ್ದದ ಪ್ರಾರಂಬಕ್ಕೆ ನಾಂದಿಯಾಯಿತು. ಆದರೆ ಇದೊಂದು ನೆಪ ಮಾತ್ರ. ಮೊಡೆನೀಸ್ ಸೈನಿಕರು ಬೊಲೊಗ್ನಾದೊಳಗೆ ನುಸುಳಿ, ಓಕ್ ಬಕೆಟ್ಟನ್ನು ಕದ್ದಿದ್ದು ಬೊಲೊಗ್ನಾ ಜನರಿಗೆ ನುಂಗಲಾರದ ತುತ್ತಾಗಿತ್ತು. ಕದ್ದ ಈ ಬಕೆಟ್‍ ಯಾವುದೇ ಐತಿಹಾಸಿಕ ಅತವಾ ಬಾವನಾತ್ಮಕ ಮೌಲ್ಯ ಹೊಂದಿರಲಿಲ್ಲ. ಆದರೂ ಇದು ಬೊಲೊಗ್ನಾ ಜನರ ಆತ್ಮ ಗೌರವಕ್ಕೆ ಗಾಸಿ ಮಾಡಿತ್ತು. ಅಹಂಗೆ ಅವಮಾನ ಮಾಡಿತ್ತು. ಈ ಅವಮಾನವನ್ನು ಸಹಿಸಲಾರದ ಬೊಲೊಗ್ನೀಸ್‍ಗಳು ಓಕ್ ಬಕೆಟ್ಟನ್ನು ಹಿಂತಿರುಗಿಸಬೇಕೆಂದು ಮೊಡೆನೀಸ್‍ರನ್ನು ಒತ್ತಾಯಿಸಿದರು. ಮೊಡೆನೀಸ್ ಸೈನಿಕರು, ಬೊಲೊಗ್ನೀಸ್ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಇದು ಬೊಲೊಗ್ನೀಸ್ ಸೈನಿಕರನ್ನು ಕೆರಳಿಸಿತು. ಇದನ್ನೇ ಕಾರಣವಾಗಿರಿಸಿಕೊಂಡು ಮೊಡೆನೀಸ್ ಮೇಲೆ ಸಮರ ಸಾರಿದರು.

ಓಕೆನ್ ಬಕೆಟ್ ಯುದ್ದ

ಬೊಲೊಗ್ನೀಸರು 30,000 ಕಾಲಾಳುಗಳು ಹಾಗೂ 2,000 ಅಶ್ವಾರೂಡ ಸೈನಿಕರನ್ನು ಒಗ್ಗೂಡಿಸಿ, ಜಪ್ಪೋಲೊನೊ ಬಳಿಯಿರುವ ಸಮರಾಂಗಣದತ್ತ ಮೆರವಣಿಗೆಯ ಮೂಲಕ ಚಲಿಸಿದರು. ಈ ಬಾರೀ ಗಾತ್ರದ ಸೈನಿಕರನ್ನು ಎದುರಿಸಲು ಸಜ್ಜಾಗಿದ್ದು ಮೊಡೊನೀಸ್‍ನ ಕೇವಲ 5,000 ಕಾಲಾಳುಗಳು ಹಾಗೂ 2,000 ಅಶ್ವಾರೂಡ ಸೈನಿಕರು. ತನ್ನ ಸೈನ್ಯದ ಬಲಕ್ಕಿಂತ ಸುಮಾರು ಆರು ಪಟ್ಟು ಹೆಚ್ಚು ಸೈನಿಕ ಬಲವನ್ನು ಹೊಂದಿದ್ದ ಬೊಲೊಗ್ನೀಸರ ಸೈನ್ಯವನ್ನು ಮೊಡೆನಾ ಸೈನ್ಯವು ಕೆಚ್ಚೆದೆಯಿಂದ ಎದುರಿಸಿದ ಪರಿಣಾಮ, ಹೋರಾಟ ಪ್ರಾರಂಬವಾದ ಕೆಲವೇ ಗಂಟೆಗಳಲ್ಲಿ ಯುದ್ದವು ಕೊನೆಗೊಂಡಿತು. ಮೊಡೆನಾ ಸೈನಿಕರ ಪ್ರಹಾರ ತಾಳಲಾರದೆ, ಬೊಲೊಗ್ನೀಸ್ ಸೈನ್ಯವು ರಣಾಂಗಣದಿಂದ ಕಾಲ್ಕಿತ್ತಿತು. ಅವಮಾನಕ್ಕೊಳಗಾದ ಬೊಲೊಗ್ನೀಸ್ ಸೈನಿಕರನ್ನು ಬೆನ್ನೆಟ್ಟಿದ ಮೊಡೆನಾ ಸೈನಿಕರು, ಬೊಲೊಗ್ನಾ ನಗರದ ಹೆಬ್ಬಾಗಿಲನ್ನು ಬೇದಿಸಿ, ನಗರವನ್ನು ಪ್ರವೇಶಿಸಲು ಯಶಸ್ವಿಯಾದರು. ಹೀಗೆ ಪ್ರವೇಶಿಸಿದ ಮೊಡೆನೀಸ್ ಸೈನಿಕರು ತಮಗೆ ಎದುರಾದ ಹಲವಾರು ಕೋಟೆ ಕೊತ್ತಲುಗಳನ್ನು ದ್ವಂಸಗೊಳಿಸಿದ್ದೇ ಅಲ್ಲದೆ, ರೆನೋ ನದಿಯಿಂದ ಬೊಲೊಗ್ನಾ ನಗರಕ್ಕೆ ನೀರು ಸರಬರಾಜು ಮಾಡುವ ತೂಬನ್ನು ನಾಶಪಡಿಸಿದ್ದರು. ಇದರಿಂದಾಗಿ ನಗರದ ನಾಗರೀಕರು ಅತ್ಯಾವಶ್ಯಕವಾದ ನೀರಿನಿಂದ ವಂಚಿತರಾದರು.
ಇದು ಒಂದು ರೀತಿಯಲ್ಲಿ ಮೊಡೆನೀಸ್ ಸೈನಿಕರ ಗೆಲುವಾಗಿತ್ತು. ಇದರ ಪೂರ‍್ಣ ಉಪಯೋಗ ಪಡೆದು, ಬೊಲೊಗ್ನಾ ನಗರವನ್ನು ಮುತ್ತಿಗೆ ಹಾಕಿ ವಶಪಡಿಸಿಕೊಳ್ಳಬಹುದಿತ್ತು. ಆದರೆ, ತಿಳಿಯದ ಕಾರಣದಿಂದ ಮೊಡೆನೀಸರು ಹಾಗೆ ಮಾಡದಿರಲು ನಿರ‍್ದರಿಸಿದರು. ಬದಲಿಗೆ, ಬೊಲೊಗ್ನೀಸರನ್ನು ಅವಮಾನಗೊಳಿಸಲು ತಿರ‍್ಮಾನಿಸಿ, ನಗರದ ಹೆಬ್ಬಾಗಿಲಿನ ಹೊರಗೆ ಅಣಕು ಪಾಲಿಯೋ (ಒಂದು ರೀತಿಯ ಮದ್ಯಕಾಲೀನ ಅತ್ಲೆಟಿಕ್ ಸಮಾರಂಬ) ಆಯೋಜಿಸುವ ಮೂಲಕ ಸೋತ ಬೊಲೊಗ್ನೀಸ್ ಸೈನಿಕರನ್ನು ಪರಿಹಾಸ್ಯ ಮಾಡಿದರು. ಇದರಿಂದ ಬೊಲೊಗ್ನೀಸರಿಗೆ ಆದ ಅವಮಾನ ಸಾಲದು ಎಂಬಂತೆ, ಮೊಡೆನಾಗೆ ಹಿಂದಿರುಗುವ ಮುನ್ನ, ಮತ್ತೊಂದು ಓಕ್ ಬಕೆಟ್ಟನ್ನು ಕದ್ದು ಹೊತ್ತೋಯ್ದರು. ಈ ಅತ್ಯಂತ ಕ್ಶುಲ್ಲಕ, ಇತಿಹಾಸದಲ್ಲೇ ಹಾಸ್ಯಾಸ್ಪದ ಕಾರಣಕ್ಕಾಗಿ ನಡೆದ ಯುದ್ದದಲ್ಲಿ, ಸರಿ ಸುಮಾರು 2000 ಪುರುಶರು ಹುತಾತ್ಮರಾಗಿದ್ದು ಅತಿ ದುಃಕದ ಸಂಗತಿ.

ಒಂದು ಬಕೆಟ್‍ಗಾಗಿ ಪ್ರಾಣತೆತ್ತ 2000 ಮಂದಿ

ಯುದ್ದದ ನಂತರ ಎರಡೂ ಪಕ್ಶಗಳು ಶಾಂತಿಗೆ ಒಪ್ಪಿಕೊಂಡವು. ಸೌಹಾರ‍್ದತೆಯ ಕುರುಹಾಗಿ, ಮೊಡೆನಾ ಸೈನಿಕರು ತಾವು ವಶಪಡಿಸಿಕೊಂಡಿದ್ದ ಹಲವು ಆಸ್ತಿಗಳನ್ನು ಬೊಲೊಗ್ನೀಸ್ ಸೈನಿಕರಿಗೆ ಹಿಂದಿರುಗಿಸಿದ್ದರು. ಆದರೆ ಈ ಯುದ್ದಕ್ಕೆ ಮೂಲ ಕಾರಣವಾದ ಓಕ್ ಬಕೆಟ್ ಅನ್ನು ಮೊಡೊನೀಸರು ತಮ್ಮ ಬಳಿಯೇ ಇರಿಸಿಕೊಂಡರು. ಅದನ್ನು ಮಾತ್ರ ಹಿಂದಿರುಗಿಸುವ ಮನಸ್ಸು ಮಾಡಲಿಲ್ಲ. ಎರಡು ಸಾವಿರ ಸೈನಿಕರ ಸಾವಿಗೆ ಕಾರಣವಾದ ಆ ಬಕೆಟ್ ಮೊಡೆನಾ ನಗರದ ಟೊರ‍್ರೆ ಡೆಲ್ಪಾ ಗಿರ‍್ಲಾಂಡಿನಾದ ನೆಲಮಾಳಿಗೆಯಲ್ಲಿ ಸುರಕ್ಶಿತವಾಗಿದೆ. ಮೂಲ ಬಕೆಟ್ಟಿನ ಪ್ರತಿರೂಪ ಮೊಡೆನಾದ ಟೌನ್ ಹಾಲಿನಲ್ಲಿ ಸಾರ‍್ವಜನಿಕರಿಗೆ ಕಾಣಸಿಗುತ್ತದೆ.

(ಮಾಹಿತಿ ಮತ್ತು ಚಿತ್ರಸೆಲೆ: amusingplanet.com, historynet.com )

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.