ಐಪಿಓ – ಶೇರು ಮಾರುಕಟ್ಟೆಯ ಹೊಸ ಟ್ರೆಂಡ್
ಇತ್ತೀಚೆಗೆ ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವವರು ಹೆಚ್ಚಾಗುತ್ತಿದ್ದಾರೆ. ಅದರಲ್ಲೂ ಹೊಸತಲೆಮಾರಿನ ಹಾಗೂ ಮದ್ಯಮ ವರ್ಗದ ಹೂಡಿಕೆದಾರರು ಹೆಚ್ಚಾಗಿರುವುದು ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ. ಇದಕ್ಕೆ ಇಂಬು ನೀಡುವಂತೆ 2019 ಹಾಗೂ 2020 ರ ಹಣಕಾಸು ವರುಶದಲ್ಲಿ ಕ್ರಮವಾಗಿ 3.59 ಕೋಟಿ ಹಾಗೂ 4.08 ಕೋಟಿಯಿದ್ದ ಡಿಮ್ಯಾಟ್ ಕಾತೆಗಳ ಸಂಕ್ಯೆ, ಜೂನ್ 2021 ವರೆಗೆ 6.9 ಕೋಟಿ ಮುಟ್ಟಿದೆ. ಇದರಲ್ಲಿ 1.49 ಕೋಟಿ ಕಾತೆಗಳಿಂದ ಮಹಾರಾಶ್ಟ್ರ ಮೊದಲ ಸ್ತಾನದಲ್ಲಿದ್ದರೆ, 85.9 ಲಕ್ಷ ಕಾತೆಗಳಿಂದ ಗುಜರಾತ್ ಎರಡನೇ ಸ್ತಾನದಲ್ಲಿದೆ. 52.3 ಕೋಟಿ ಕಾತೆಗಳಿಂದ ಯು.ಪಿ ರಾಜ್ಯವು ಮೂರನೇ ಸ್ತಾನದಲ್ಲಿದ್ದು, 42.2 ಲಕ್ಶ ಕಾತೆಗಳಿಂದ ಕರ್ನಾಟಕವು ನಾಲ್ಕನೇ ಸ್ತಾನದಲ್ಲಿದೆ. ಹೆಚ್ಚಿನ ಮಂದಿಯನ್ನು ತನ್ನೆಡೆಗೆ ಸೆಳೆಯುತ್ತಿರುವ ಈ ಶೇರು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಒಂದು ಅಲೆ ಎದ್ದಿದೆ, ಅದೇ ‘ಐಪಿಓ’.
ಏನಿದು ಐಪಿಓ?
ಇನಿಶಿಯಲ್ ಪಬ್ಲಿಕ್ ಆಪರಿಂಗ್ (Initial Public Offering) ಅನೋದನ್ನೇ ಚಿಕ್ಕದಾಗಿ ಐಪಿಓ ಎನ್ನುತ್ತಾರೆ. ಒಂದು ಕಂಪನಿಯು ಮೊದಲ ಬಾರಿಗೆ ಸಾರ್ವಜನಿಕರು ತಮ್ಮ ಕಂಪನಿಯ ಶೇರುಗಳನ್ನು ಕೊಳ್ಳಲು ಅವಕಾಶ ನೀಡುವುದೇ ಐಪಿಓ. ಇದನ್ನು ಮೊದಲ ಮಾರುಕಟ್ಟೆ (Primary Market) ಎನ್ನುತ್ತಾರೆ. ಐಪಿಓ ಮುಗಿದ ಮೇಲೆ, ಶೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗುವ ಕಂಪನಿಯ ಶೇರುಗಳ ಮೇಲೆ ಸಾರ್ವಜನಿಕರು ಹೂಡಿಕೆ ಮಾಡಬಹುದು. ಇದನ್ನು ಎರಡನೇ ಮಾರುಕಟ್ಟೆ (Secondary Market) ಎನ್ನುತ್ತಾರೆ.
ಐಪಿಓ ಹೇಗೆ ನಡೆಯುತ್ತೆ?
ಈಗ ‘ಅಆಇ’ ಕಂಪನಿಯ ಒಟ್ಟು ಮೌಲ್ಯ 1000 ರೂಪಾಯಿ ಎಂದಿಟ್ಟುಕೊಳೋಣ. ತನ್ನ ಒಟ್ಟು ಮೌಲ್ಯದಲ್ಲಿ 50% (ಇದು ಕಂಪನಿಯ ಆಯ್ಕೆಗೆ ಬಿಟ್ಟದ್ದು) ಐಪಿಓ ಗೆ ತೆರೆದುಕೊಳ್ಳುವ ಕಂಪನಿಯು, 500 ರುಪಾಯಿಯನ್ನು ತಲಾ 5 ರುಪಾಯಿಯ 100 ಶೇರುಗಳಾಗಿ ವಿಂಗಡಿಸುತ್ತದೆ. ಇಲ್ಲಿ 5 ರುಪಾಯಿ ಆ ಶೇರಿನ ದಿಟಬೆಲೆ (Face Value) ಯಾಗಿರುತ್ತದೆ. ಆದರೆ ಮಾರುಕಟ್ಟೆಗೆ ತನ್ನ ಶೇರುಗಳನ್ನ ಬಿಡುವಾಗ ಕಂಪನಿಯು ತನ್ನ ಶೇರುಗಳ ಬೆಲೆಯನ್ನು ದಿಟಬೆಲೆಗಿಂತ ತುಸು ಹೆಚ್ಚೇ ನಿಗದಿಪಡಿಸುತ್ತದೆ. 5 ರುಪಾಯಿ ದಿಟಬೆಲೆಯ (Face Value) ಶೇರಿನ ಕೊಡುಗೆ ದರವನ್ನು (Offer Price) 10 ರುಪಾಯಿ (ಎತ್ತುಗೆಗೆ) ಎಂದು ನಿಗದಿಪಡಿಸಿ ಸಾರ್ವಜನಿಕರಿಗೆ ಇದನ್ನು ಕೊಳ್ಳಲು ಶೇರು ಮಾರುಕಟ್ಟೆಯಲ್ಲಿ ಅವಕಾಶ ನೀಡುತ್ತದೆ. ಕೊಳ್ಳಲು ಬಯಸುವವರು ಇಲ್ಲಿ ಕಡಿಮೆ ಅಂದರೂ ಇಂತಿಶ್ಟು ಶೇರುಗಳನ್ನು ಕೊಳ್ಳಲೇಬೇಕು ಅನ್ನುವ ಕಟ್ಟಳೆಗಳನ್ನು ಹಾಕುತ್ತದೆ. ಜೊತೆಗೆ ಒಂದು ಶೇರಿಗೆ ಹೂಡಿಕೆದಾರರು ಎಶ್ಟು ಬೆಲೆ ಕೊಡಲು ತಯಾರಿದ್ದಾರೋ ಅದನ್ನೂ ನಿರ್ದರಿಸುವ ಅಯ್ಕೆಯನ್ನು ನೀಡಲಾಗುತ್ತದೆ. ಈಗ 10 ರುಪಾಯಿಯ 10 ಶೇರುಗಳನ್ನು ಕೊಳ್ಳಲು ಬಯಸುವವರು ಒಂದು ಶೇರಿಗೆ ಎಶ್ಟು ಬೆಲೆ ಕಟ್ಟ ಬಹುದು ಅನ್ನುವ ಆಯ್ಕೆಯನ್ನು ನೀಡಲಾಗುತ್ತದೆ. ಎತ್ತುಗೆ: 10 ರುಪಾಯಿಯ ಒಂದು ಶೇರಿಗೆ 8 ರುಪಾಯಿಯಿಂದ 10 ರುಪಾಯಿಗಳವರೆಗೆ ಬೆಲೆ ಕಟ್ಟಬಹುದು. ಹೆಚ್ಚಿನ ಬೆಲೆ ಕಟ್ಟಿದವರಿಗೆ ಆ ಶೇರುಗಳು ನಿಗದಿಯಾಗುತ್ತವೆ. ಇಲ್ಲಿ ಹೆಚ್ಚು ಬೆಲೆ ಕಟ್ಟಿದವರಿಗೆಲ್ಲಾ ಶೇರುಗಳು ಸಿಗುತ್ತವೆ ಎನ್ನಲಾಗದು. 100 ಜನರಿಗಶ್ಟೆ ನೀಡಬಹುದಾದ ಶೇರುಗಳಿದ್ದು, 150 ಜನರು ಒಂದೇ ಬೆಲೆಕಟ್ಟಿದ್ದಾರೆ ಅಂತಾದರೆ, 100 ಜನ ಅದ್ರುಶ್ಟವಂತರಿಗೆ ಮಾತ್ರ ಶೇರುಗಳನ್ನು ನೀಡಲಾಗುತ್ತದೆ. ಐಪಿಓ ನಲ್ಲಿ ಹಂಚಿಕೆಯಾದ ಶೇರುಗಳು ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಪಟ್ಟಿಯಾದಾಗ ಇರುವ ಮೌಲ್ಯವನ್ನು ಪಟ್ಟಿ ದರ (Listing Price) ಎನ್ನುತ್ತಾರೆ. ಈ ದರ, ಹೆಚ್ಚು ಚಂದಾದಾರಿಕೆ (Oversubscribed) ಇಲ್ಲವೇ ಕಡಿಮೆ ಚಂದಾದರಿಕೆಯ (Undersubscribed) ಮೇಲೂ ನಿರ್ದಾರವಾಗುತ್ತದೆ. ಮಾರುಕಟ್ಟೆಯ ಬೇಡಿಕೆಯ ನೆಲೆಗಟ್ಟಿನ ಮೇಲೆ, ಪಟ್ಟಿ ದರ ಕೊಡುಗೆ ದರಕ್ಕಿಂತ ಹೆಚ್ಚು ಇಲ್ಲವೇ ಕಡಿಮೆ ಆಗಬಹುದು. ಒಂದು ಬಾರಿ ಮಾರುಕಟ್ಟೆಯಲ್ಲಿ ಶೇರು ವಹಿವಾಟು ನಡೆಸಲು ಮೊದಲು ಮಾಡಿದ ಮೇಲೆ, ಆ ಬೆಲೆಯನ್ನು ಮಾರುಕಟ್ಟೆ (Market Price) ಬೆಲೆ ಎನ್ನುವರು.
ಇದರಿಂದ ಕಂಪನಿಗಳಿಗೇನು ಲಾಬ?
ಕಂಪನಿಗಳು ಐಪಿಓ ಗೆ ತೆರೆದು ಕೊಳ್ಳುವ ಮೂಲ ಕಾರಣವೇ ತಮ್ಮ ಕಂಪನಿಯ ಬಂಡವಾಳವನ್ನು ಹೆಚ್ಚಿಸಿಕೊಳ್ಳುವುದು. ಜೊತೆಗೆ ಕಂಪನಿಗೆ ಪ್ರಚಾರ ಹಾಗೂ ಮೂಲ ಹೂಡಿಕೆದಾರರಿಗೆ ಲಾಬ ಕೂಡ ಸಿಗಬಹುದು.
ಹೂಡಿಕೆದಾರರಿಗೆ ಸಿಹಿ ಇಲ್ಲವೇ ಕಹಿ
ಹೂಡಿಕೆ ಮಾಡುವವರಿಗೆ ಇಲ್ಲಿ ಸಿಹಿಯೂ ಸಿಗಬಹುದು ಇಲ್ಲವೇ ಕಹಿಯೂ ಸಿಗಬಹುದು. ಒಂದು ಕಂಪನಿಯ 10 ಶೇರುಗಳನ್ನು ತಲಾ 10 ರುಪಾಯಿ ಕೊಟ್ಟು ಕೊಂಡುಕೊಳ್ಳುವವರಿಗೆ, ಐಪಿಓ ಶೇರು ಪಟ್ಟಿಯಾಗುವ ದಿನದಂದು (Stock Listing Day) ಶೇರಿನ ಮೌಲ್ಯ 15 ಕ್ಕೆ ಪಟ್ಟಿಯಾದರೆ ಒಟ್ಟು 50% ಲಾಬವಾದರೆ (50 ರುಪಾಯಿ). ಪಟ್ಟಿಯಾಗುವ ದಿನದಂದು ಒಂದು ಶೇರಿನ ಮೌಲ್ಯ 9 ರುಪಾಯಿಗೆ ಪಟ್ಟಿಯಾದರೆ ಹೂಡಿಕೆದಾರನಿಗೆ 10% (10 ರುಪಾಯಿ) ನಶ್ಟ. ಈ ಮೌಲ್ಯ ಶಾಶ್ವತವೇನಲ್ಲ. ದಿನದಿಂದ ದಿನಕ್ಕೆ ಶೇರಿನ ಮೌಲ್ಯ ಹೆಚ್ಚಲೂಬಹುದು, ಕುಸಿಯಲೂಬಹುದು. ಇದಕ್ಕೆ ಕೆಲವು ಕಾರಣಗಳೂ ಇವೆ, ಕಂಪನಿಯ ಗುಣಮಟ್ಟ, ಸಾಂಸ್ತಿಕ (Institutional) ಹೂಡಿಕೆದಾರರ ಹೂಡಿಕೆ ಮುಂತಾದವು.
ಇತ್ತೀಚೆಗೆ ಗಮನ ಸೆಳೆದ ಐಪಿಓ ಗಳು
ಇತ್ತೀಚೆಗೆ ಗಮನ ಸೆಳೆದ ಕೆಲವು ಕಂಪನಿಗಳ ಐಪಿಓ ಗಳು ಇಂತಿವೆ: ಹ್ಯಾಪಿಯೆಸ್ಟ್ ಮೈಂಡ್ಸ್, ಬರ್ಗರ್ ಕಿಂಗ್, ಎಸ್.ಬಿ.ಐ ಕಾರ್ಡ್ಸ್, ಯುಟಿಐ ಎಎಂಸಿ, ಜೊಮ್ಯಾಟೋ, ನೈಕಾ, ಪೇಟಿಎಂ ಮತ್ತು ಸ್ಟಾರ್ ಹೆಲ್ತ್. ಇವುಗಳಲ್ಲಿ ಹೆಚ್ಚು ಗಮನ ಸೆಳೆದಿದ್ದ ಜೊಮ್ಯಾಟೋ ಹೆಚ್ಚಿನ ಬೆಲೆಗೆ ಪಟ್ಟಿಯಾದರೆ, ಪೇಟಿಎಂ ಕಡಿಮೆ ಬೆಲೆಗೆ ಪಟ್ಟಿಯಾಗಿ ಹೂಡಿಕೆದಾರರಿಗೆ ಪೆಟ್ಟು ನೀಡಿತು.
ಹೂಡಿಕೆದಾರರಿಗೆ ಕಿವಿಮಾತು
ಈಗಾಗಲೇ ಮಾರುಕಟ್ಟೆಯಲ್ಲಿನ ಹೆಸರುವಾಸಿಯಾದ ಕಂಪನಿಗಳು ಐಪಿಓ ಗೆ ತೆರೆದುಕೊಂಡಲ್ಲಿ, ಆ ಕಂಪನಿಯ ಹಿಂದಿನ ವಾರ್ಶಿಕ ಆದಾಯ, ಸಂಯುಕ್ತ ವಾರ್ಶಿಕ ಬೆಳವಣಿಗೆ ದರ (CAGR), ಸಾಲದ ವಿವರ ಹಾಗೂ ಹೊಸದಾಗಿ ಯಾವ ವಲಯದಲ್ಲಿ (Sector) ಹೂಡಿಕೆ ಮಾಡಲು ಹೊರಟಿದ್ದಾರೆ [ಎತ್ತುಗೆ: ಆಟೊಮೊಬೈಲ್, ಹಣಮನೆ/ಲೇವಾದೇವಿ (Banking), ಕಟ್ಟುಜಾಣ್ಮೆ(Artificial Intelligence-A.I.), ವಿಶೇಶ ರಾಸಾಯನಿಕಗಳು (Speciality Chemicals)] ಎಂಬುದು ಅರಿದಾದ ಪಾತ್ರವಹಿಸುತ್ತದೆ. ಇದಲ್ಲದೇ ಈ ವಿಬಾಗಗಳು ಸದ್ಯಕ್ಕೆ ಎಶ್ಟು ಸಮಂಜಸ ಮತ್ತು ಈ ವಿಬಾಗದಲ್ಲಿ ಈಗಾಗಲೇ ಇರುವ ಕಂಪನಿಗಳ ಗೆಯ್ಮೆ(Performance) ಚೆನ್ನಾಗಿದೆಯೇ ? ಹೀಗೆ ಹಲವು ವಿಶಯಗಳನ್ನು ನೋಡಬೇಕು. ಈ ಒಟ್ಟಾರೆ ಕೆಲಸವನ್ನು ಶೇರುಮಾರುಕಟ್ಟೆಯಲ್ಲಿ ಮೂಲಬೂತ ಬಿಡಿನೋಟ (Fundamental Analysis) ಎನ್ನುತ್ತಾರೆ. ಈ ಮೂಲಬೂತ ಬಿಡಿನೋಟದ ಜೊತೆಗೆ, ವರುಶದ ನೆಲಗಟ್ಟಿನಲ್ಲಿ ಮಾಡುವ ಚಳಕದ ಬಿಡಿನೋಟ (Yearly /Larger time frame based Technical Analysis) ಕೂಡ ಹೂಡಿಕೆಯ ವಿಚಾರದಲ್ಲಿ ಒಳಿತು. ಜೊತೆಗೆ ಇತ್ತೀಚಿನ ವಿದ್ಯಮಾನಗಳಿಗೆ ಅನುಗುಣವಾಗಿ, ಎತ್ತುಗೆ: ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿರುವುದು ಇಲೆಕ್ರ್ಟಿಕ್ ಗಾಡಿಗಳು, ಇದಕ್ಕೆ ಬೇಕಾಗುವ ಬ್ಯಾಟರಿ ಮುಂತಾದ ಅಗತ್ಯ ವಸ್ತುಗಳನ್ನು ತಯಾರಿಸುವ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗಬಹುದು ಎಂಬ ಅಂದಾಜಿನ ಮೇಲೆ ಹೂಡಿಕೆ ಮಾಡಬಹುದು. ಒಟ್ಟಿನಲ್ಲಿ ಮಾರುಕಟ್ಟೆಯನ್ನು ಚೆನ್ನಾಗಿ ಅರಿತು ಹೂಡಿಕೆ ಮಾಡುವುದು ಒಳ್ಳೆಯದು.
(ಮಾಹಿತಿ ಹಾಗೂ ಚಿತ್ರಸೆಲೆ: thehindubusinessline.com, livemint.com, pexels.com )
ಇತ್ತೀಚಿನ ಅನಿಸಿಕೆಗಳು