ಡ್ರ‍್ಯಾಗನ್ ಟೆಂಪಲ್
– ಕೆ.ವಿ.ಶಶಿದರ.
ತೈಲೆಂಡಿನ ನರ‍್ಕೋನ್ ಪಾತೋಮ್ ಪ್ರಾಂತ್ಯದ ಸಂಪ್ರಾನ್ ಜೆಲ್ಲೆಯಲ್ಲಿರುವ ಡ್ರ‍್ಯಾಗನ್ ದೇವಾಲಯ ಹಲವು ವಿಚಾರಗಳಲ್ಲಿ ಅನನ್ಯ. ವಾಟ್ ಸಂಪ್ರಾನ್ ಡ್ರ‍್ಯಾಗನ್ ದೇವಾಲಯ ಅತವಾ ವಾಟ್ ಸಂಪ್ರಾನ್ ಪುತೋ-ಪಾವೋ-ವಾನಾ ಎಂದು ಕರೆಯಲಾಗುವ ಈ ದೇವಾಲಯದ ವೈಶಿಶ್ಟ್ಯವೆಂದರೆ, ಹಸಿರು ಬಣ್ಣದ ದೈತ್ಯಾಕಾರದ ಡ್ರ‍್ಯಾಗನ್ ಈ ಕೆಂಪು ಕಟ್ಟಡವನ್ನು ಸುತ್ತುವರೆದಿರುವುದು. ಗುಡ್ಡದ ಮೇಲೆ, ಅತಿ ಎತ್ತರದಲ್ಲಿ ಈ ದೇವಾಲಯವನ್ನು ನಿರ‍್ಮಿಸಿರುವುದರಿಂದ ಬಹಳ ದೂರದಿಂದಲೂ ಇದನ್ನು ಗುರುತಿಸಬಹುದು.
ಅಯಸ್ಸನ್ನು ಪ್ರತಿಪಾದಿಸುವ ಕಟ್ಟಡ
ಕೊಳೆವೆಯಾಕ್ರುತಿಯ ಈ ಕಟ್ಟಡ ಎಂಬತ್ತು ಮೀಟರ್ ಎತ್ತರವಿದೆ. ಈ ಎಂಬತ್ತು ಮೀಟರ್, ಸಾಂಕೇತಿಕವಾಗಿ ಬಗವಾನ್ ಬುದ್ದನ ಆಯಸ್ಸನ್ನು ಪ್ರತಿಪಾದಿಸುತ್ತದೆ. ಎಂಬತ್ತು ಮೀಟರ್ ಎತ್ತರದ ಈ ಕಟ್ಟಡವನ್ನು ಹದಿನಾರು ಅಂತಸ್ತನ್ನಾಗಿ ವಿಂಗಡಿಸಿದ್ದು, ಇದು ಹದಿನಾರು ಸ್ವರ‍್ಗಗಳನ್ನು ಸಂಕೇತಿಸುತ್ತದೆ. ಈ ಡ್ರ‍್ಯಾಗನ್ ದೇವಾಲಯದಲ್ಲಿ ಬೌದ್ದ ಸಂನ್ಯಾಸಿಗಳು ಉಳಿಯಲಿಕ್ಕಾಗಿಯೇ ಕಟ್ಟಡದ ಒಂದು ಅಂತಸ್ತನ್ನು ಗುರುತಿಸಿ ಮೀಸಲಿಡಲಾಗಿದೆ.
ಈ ಕಟ್ಟಡವನ್ನು ಪೂರ‍್ಣ ಪ್ರಮಾಣದಲ್ಲಿ, ಪ್ರತಿ ಅಂತಸ್ತನ್ನೂ ನೋಡುವ ಸೌಬಾಗ್ಯ ಸಂದರ‍್ಶಕರಿಗಿಲ್ಲ. ಒಂದೆರೆಡು ಮಹಡಿಗಳು ಮಾತ್ರ ಸಾರ‍್ವಜನಿಕರಿಗೆ ಮುಕ್ತವಾಗಿವೆ. ವಿಶೇಶ ಸಂದರ‍್ಬಗಳಲ್ಲಿ ಮಾತ್ರ ಬೌದ್ದ ಸನ್ಯಾಸಿಗಳು ನೆಲೆಗೊಂಡಿರುವ ಅಂತಸ್ತಿಗೆ ಸಾರ‍್ವಜನಿಕರಿಗೆ ಪ್ರವೇಶ ನೀಡಲಾಗುತ್ತದೆ.
ಕೆಂಪು ಬಣ್ಣದ ಬಗೆಗಿನ ನಂಬಿಕೆಗಳು
ಈ ಕಟ್ಟಡವು ಕೆಂಪು ಬಣ್ಣದ್ದಾಗಿದೆ. ಕೆಂಪು ಬಣ್ಣ ಅದ್ರುಶ್ಟ ತರುತ್ತದೆ ಎಂದು ಚೀನೀಯರು ನಂಬಿದರೆ, ತಾಯ್ ಜನರು ಕೆಂಪು ಬಣ್ಣವನ್ನು ತ್ಯಾಗ ಮತ್ತು ಏಕತೆಯ ಪ್ರತೀಕ ಎಂದು ಪರಿಗಣಿಸುತ್ತಾರೆ. ಕೆಂಪು ಪ್ರೀತಿಯ ಸಾಂಕೇತಿಕ ಬಣ್ಣವೆಂದು ಯುರೋಪಿಯನ್ನರು ಮೆಚ್ಚುತ್ತಾರೆ. ಡ್ರ‍್ಯಾಗನ್ ಬಹಳ ಬಲಿಶ್ಟ ಪ್ರಬಾವಶಾಲಿ ಪ್ರಾಣಿ. ದ್ರುಡ ನಿಶ್ಚಯ ಮತ್ತು ದೈರ‍್ಯದ ಪ್ರತೀಕ. ಇದರ ಈ ಗುಣಗಳೇ ಚೀನೀ ಚಕ್ರವರ‍್ತಿಗಳಿಗೆ ಅಚ್ಚುಮೆಚ್ಚು. ಹಾಗಾಗಿ ಡ್ರ‍್ಯಾಗನ್ನನ್ನು ಚೀನೀ ಚಕ್ರವರ‍್ತಿಗಳು ತಮ್ಮ ಶೌರ‍್ಯ ಸಾಹಸಗಳ ಸಂಕೇತವಾಗಿ ಬಳಸುತ್ತಿದ್ದರು.
ಈ ಕಟ್ಟಡವನ್ನು ಸುತ್ತುವರೆದಿರುವ ಡ್ರ‍್ಯಾಗನ್ನನ್ನು ಕಬ್ಬಿಣ ಮತ್ತು ಪೈಬರ್ ಉಪಯೋಗಿಸಿ ನಿರ‍್ಮಿಸಲ್ಪಟ್ಟಿದೆ. ಡ್ರ‍್ಯಾಗನ್ನಿನ ಒಳಬಾಗ ಸಂಪೂರ‍್ಣ ಟೊಳ್ಳು ಹಾಗೂ ಕತ್ತಲಾವರಿಸಿಕೊಂಡಿದೆ. ಆದರೂ ಸಹ ಕಾಲು ನಡಿಗೆಯಲ್ಲಿ ಇದರಲ್ಲಿ ಹೋಗಿ ಮೇಲಿನ ಮಹಡಿಯನ್ನು ತಲುಪಬಹುದು. ಮೇಲಿನ ಮಹಡಿಯನ್ನು ತಲುಪಲು ಮೆಟ್ಟಿಲು ಮತ್ತು ಎಲಿವೇಟರ‍್ಗಳೂ ಸಹ ಇವೆ. ಮೆಟ್ಟಿಲುಗಳು ಇದ್ದರೂ ಕೂಡ ಬಹಳಶ್ಟು ಪ್ರವಾಸಿಗರು ಎಲಿವೇಟರ್ ಬಳಸುವುದು ಇಲ್ಲಿ ಅತಿ ಸಾಮಾನ್ಯ ದ್ರುಶ್ಯ.
ಈ ದೇವಾಲಯದ ಸಂಕೀರ‍್ಣವು ಸಣ್ನ ಸಣ್ಣ ದೇವಾಲಯಗಳು ಮತ್ತು ದೈತ್ಯ ಬುದ್ದನ ಕಂಚಿನ ಪ್ರತಿಮೆಯನ್ನು ಒಳಗೊಂಡಂತೆ ಸುಂದರವಾದ ಸ್ಮಾರಕಗಳನ್ನು ಹೊಂದಿದೆ. ಅತ್ಯಂತ ವಿಶಿಶ್ಟವಾದ ಮತ್ತು ಅಸಾದಾರಣವಾದ ದೇವಾಲಯ ಇದಾಗಿದ್ದು, ಇದರ ಮೇಲ್ಬಾಗ ಸುತ್ತಲ ವಿಶಾಲವಾದ ಪ್ರದೇಶದ ವೀಕ್ಶಣೆಗೆ ಅತ್ಯದ್ಬುತ ತಾಣವಾಗಿದ್ದು, ಕಣ್ಮನ ಸೆಳೆಯುತ್ತದೆ. ಈ ದೇವಾಲಯದ ಸುತ್ತಲಿನ ಪಕ್ಶಿ ನೋಟವು ನೋಡಲೇಬೇಕಾದ ದ್ರುಶ್ಯಾವಳಿ. ಕಣ್ಮನ ತಣಿಸುವ ಉದ್ಯಾನವನ, ಅದರ ಜೊತೆ ಜೊತೆಯಲ್ಲೇ ಕಂಡುಬರುವ ಡಾಲ್ಪಿನ್ಗಳು, ಹುಲಿಗಳು, ಆನೆಗಳು, ಮೊಲ ಮತ್ತು ಆಮೆ ಮುಂತಾದ ಪ್ರಾಣಿಗಳ ಪ್ರತಿಮೆಗಳು ಸಂದರ‍್ಶಕರನ್ನು ಆಕರ‍್ಶಿಸುತ್ತದೆ.
ನಾಣ್ಯ ಹಾಕುವ ಪರಿಪಾಟ
ದೇವಾಲಯದ ತಳದಲ್ಲಿ ತಾಯ್ ಸಾಂಪ್ರದಾಯಿಕ ಪ್ರಾರ‍್ತನಾ ಮಡಿಕೆಗಳನ್ನು ಕಾಣಬಹುದು. ಈ ಮಡಿಕೆಯ ಒಳಗೆ ಬೀಳುವಂತೆ ನಾಣ್ಯಗಳನ್ನು ಎಸೆದರೆ, ಎಸೆದವರು ಮನದಲ್ಲಿ ಅಂದುಕೊಂಡಿದ್ದು ಹಾಗೂ ಸಮ್ರುದ್ದ ಸಂಪತ್ತು, ಪ್ರೀತಿ ಮತ್ತು ಶಾಶ್ವತ ಸಂತೋಶ ಲಬಿಸುತ್ತದೆ ಎಂದು ಹೇಳಲಾಗುತ್ತದೆ. ಕಾವೇರಿಯ ಉಗಮ ಸ್ತಾನವಾದ ತಲಕಾವೇರಿಯಲ್ಲೂ ನಾಣ್ಯ ಹಾಕುವ ಪರಿಪಾಟವಿದೆ.
ಈ ದೇವಾಲಯ ಕೇವಲ ಐದು ವರ‍್ಶಗಳಲ್ಲಿ ನಿರ‍್ಮಾಣಗೊಂಡಿತು ಎನ್ನಲಾದರೂ ಮತ್ತೊಂದೆಡೆ ಇದರ ಉಗಮದ ಬಗ್ಗೆ ನಿಕರವಾದ ದಾಕಲೆಗಳು ಲಬ್ಯವಿಲ್ಲ ಎಂದೂ ದಾಕಲಿಸಲಾಗಿದೆ. ಈ ದೇವಾಲಯವನ್ನು ಬೌದ್ದ ಸನ್ಯಾಸಿಗಳು ಅದ್ಯಯನ ಮತ್ತು ದ್ಯಾನಕ್ಕಾಗಿ ಬಳಸುತ್ತಿದ್ದರು. ತಾಯ್ ವಾಸ್ತು ಶಿಲ್ಪ ಮತ್ತು ಚೀನೀಯರ ಸಂಪ್ರದಾಯವನ್ನು ಹೊಂದಿರುವ ವಾಟ್ ಸಂಪ್ರಾನ್ ಡ್ರ‍್ಯಾಗನ್ ದೇವಾಲಯವು ಬ್ಯಾಂಕಾಂಕ್ ನಿಂದ ಕೇವಲ 25 ಮೈಲಿಗಳಶ್ಟು ದೂರದಲ್ಲಿದೆ. ಇಶ್ಟೆಲ್ಲಾ ವಿಶಿಶ್ಟತೆಯನ್ನು ಹೊಂದಿರುವ ಈ ಅನನ್ಯ ದೇವಾಲಯ 1990ರಿಂದ ಈಚೆಗೆ, ಒಳಜಗಳದಿಂದಾಗಿ ಕಡೆಗಣನೆಗೆ ಒಳಗಾಗಿದೆ.
(ಮಾಹಿತಿ ಮತ್ತು ಚಿತ್ರಸೆಲೆ: mybestplace.com, gulfnews.com, atlasobscura.com, amusingplanet.com, alluringworld.com, thevalemagazine.com)
ಇತ್ತೀಚಿನ ಅನಿಸಿಕೆಗಳು