ಕೈದಾಳದ ಚೆನ್ನಕೇಶವ ದೇವಾಲಯ
ನಮ್ಮ ಕರ‍್ನಾಟಕದ ಇತಿಹಾಸವನ್ನು ಅವಲೋಕಿಸಿದರೆ ಹೊಯ್ಸಳರ ಪ್ರಸಿದ್ದ ದೊರೆ ಬಿಟ್ಟಿದೇವ ಅತವಾ ವಿಶ್ಣುವರ‍್ದನನ ಕಾಲದಲ್ಲಿ ನಿರ‍್ಮಿತವಾದ ಹೊಯ್ಸಳ ಶೈಲಿಯ ಬೇಲೂರಿನ ಚೆನ್ನಕೇಶವ ದೇವಾಲಯ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಮಹತ್ವವಾದ ಐತಿಹ್ಯವನ್ನು ಪಡೆದಿವೆ. ಈ ಶಿಲ್ಪಕಲೆಗಳಿಗೆ ಜೀವ ಕೊಟ್ಟಂತಹ ಮಹಾಶಿಲ್ಪಿಯ ಹೆಸರು ‘ಜಕಣಾಚಾರಿ’. ಈ ಮಹಾಪುರುಶನ ಬಗ್ಗೆ ‘ಅಮರಶಿಲ್ಪಿ ಜಕಣಾಚಾರಿ’ ಎಂಬ ಹೆಸರಿನ ಅದ್ಬುತ ಕನ್ನಡ ಚಲನಚಿತ್ರವನ್ನು ಬಹಳ ಹಿಂದೆಯೇ ಚಿತ್ರಿಸಲಾಗಿದೆ. ಅಮರಶಿಲ್ಪಿ ಎಂಬುದು ಆತನಿಗಿರುವ ಬಿರುದು. ಜಕಣಾಚಾರಿಯಿಂದ ನಿರ‍್ಮಿಸಲ್ಪಟ್ಟ ಶಿಲ್ಪಕಲಾಕ್ರುತಿಗಳ ಬಗ್ಗೆ ವಿದೇಶದಲ್ಲೂ ಅದ್ಯಯನ ನಡೆಯುತ್ತಲೇ ಇವೆಯಂತೆ.
ಬೇಲೂರು ಹಳೇಬೀಡುಗಳಲ್ಲದೆ ಕರ‍್ನಾಟಕದ ಇನ್ನೂ ಅನೇಕ ಸ್ತಳಗಳಲ್ಲಿ ಜಕಣಾಚಾರಿಯಿಂದ ನಿರ‍್ಮಿಸಲ್ಪಟ್ಟ ದೇವಾಲಯಗಳನ್ನು ಕಾಣಬಹುದು. ತುಮಕೂರು ಜಿಲ್ಲೆಯಲ್ಲಿರುವ ಕೈದಾಳದಲ್ಲಿ ಜಕಣಾಚಾರಿಯ ಕೈಗಳಿಂದ ನಿರ‍್ಮಾಣಗೊಂಡ ಕೊನೆಯ ದೇವಾಲಯವಿದೆ. ಇದೂ ಸಹ ಚೆನ್ನಕೇಶವನ ವಿಗ್ರಹವಿರುವ ಹೊಯ್ಸಳ ವಾಸ್ತುಶೈಲಿಯಲ್ಲಿರುವ ಒಂದು ಪುಟ್ಟ ದೇವಾಲಯ. ಇದು ಕ್ರಿ.ಶ 1150ರಲ್ಲಿ ಸ್ತಾಪಿತವಾದುದು ಎಂದು ಹೇಳಲಾಗುತ್ತದೆ. ಈ ದೇವಾಲಯವು ನಿರ‍್ಮಾಣಗೊಳ್ಳಲು ಒಂದು ಅದ್ಬುತವಾದ ಹಿನ್ನೆಲೆಯಿದೆ.
ಕೈದಾಳ ಹೆಸರಿನ ಹಿನ್ನೆಲೆ
ಕೈದಾಳವು ಜಕಣಾಚಾರಿಯ ಹುಟ್ಟೂರಾಗಿದ್ದು, ದಾಕಲೆಯಂತೆ ಕ್ರೀಡಾಪುರ ಅತವಾ ಕ್ರೀಡಿಕಾಪುರ ಇದರ ಮೊದಲ ಹೆಸರಾಗಿತ್ತು. ಕ್ರೀಡಾಪುರದಲ್ಲಿ ಜನಿಸಿದ ಜಕಣಾಚಾರಿಯು ತನ್ನ ಕಲೆಯಲ್ಲಿ ಪರಿಣಿತನಾಗಿ, ಚಾಯಾದೇವಿ ಎಂಬ ಕನ್ಯೆಯನ್ನು ವಿವಾಹವಾದನು. ವಿವಾಹದ ನಂತರ ಕೆಲಸ ಹುಡುಕಲು ಆರಂಬಿಸಿ ಮನೆ ಮತ್ತು ಹೆಂಡತಿಯನ್ನು ತೊರೆದನು. ಹೀಗೆ ಸಾಗುವ ವೇಳೆಯಲ್ಲಿ ಅನೇಕ ಸುಂದರವಾದ ದೇವಾಲಯಗಳನ್ನು ನಿರ‍್ಮಿಸಿ ಬೆಳಕಿಗೆ ಬಂದನು. ಆಗಿನ ಹೊಯ್ಸಳರ ಪ್ರಸಿದ್ದ ದೊರೆ ವಿಶ್ಣುವರ‍್ದನನಿಗೆ ಈತನ ವಿಶಯ ತಿಳಿದು ಹಳೇಬೀಡು ಮತ್ತು ಬೇಲೂರಿನ ಚೆನ್ನಕೇಶವ ದೇವಾಲಯ ನಿರ‍್ಮಾಣದ ಕೆಲಸಕ್ಕೆ ಜಕಣಾಚಾರಿಯು ನೇಮಿಸಲ್ಪಟ್ಟನು. ಇತ್ತ ಕೆಲಸದ ನಿಮಿತ್ತ ತನ್ನ ಗರ‍್ಬಿಣಿ ಹೆಂಡತಿಯನ್ನು ಜಕಣಾಚಾರಿಯು ಮರೆತಿದ್ದ, ಆತನ ಹೆಂಡತಿಗೆ ಡಂಕಣಾಚಾರಿ ಎಂಬ ಮಗನು ಜನಿಸಿದ್ದನು.
ಡಂಕಣಾಚಾರಿಯೂ ಸಹ ತಂದೆಯಂತೆಯೇ ಶಿಲ್ಪಕಲಾಕ್ರುತಿಯಲ್ಲಿ ಪರಿಣಿತಿ ಹೊಂದಿದನು. ತಂದೆಯ ಮುಕ ನೋಡದೆ ಬೆಳೆದ ಡಂಕಣಾಚಾರಿಯು ತನ್ನ ತಂದೆಯನ್ನು ಅರಸುತ್ತಾ ಹೋದಾಗ ಬೇಲೂರು ಸಮೀಪಿಸಿದನು. ನಿರ‍್ಮಾಣ ಹಂತದಲ್ಲಿದ್ದ ಬೇಲೂರಿನ ಚೆನ್ನಕೇಶವನ ದೇವಾಲಯದಲ್ಲಿ ಶಿಲ್ಪಿಯಾಗಿ ನೇಮಕಗೊಂಡನು. ಹೀಗಿರುವಾಗ ಜಕಣಾಚಾರಿಯು ತನ್ನ ಹಸ್ತದಿಂದ ಕೆತ್ತುತ್ತಿದ್ದ, ಕೊನೆಯ ಹಂತದಲ್ಲಿದ್ದ ಚೆನ್ನಕೇಶವನ ವಿಗ್ರಹದಲ್ಲಿ ಲೋಪವಿದೆಯೆಂದು ಡಂಕಣಾಚಾರಿಯು ಹೇಳಿದನು. ಈ ಹೇಳಿಕೆಯಿಂದ ಕುಪಿತನಾದ ಜಕಣಾಚಾರಿಯು ಲೋಪವಿದ್ದರೆ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಆವೇಶದಿಂದ ವಚನವನ್ನು ನೀಡಿದನು. ಇಬ್ಬರಿಗೂ ತಮ್ಮ ನಡುವೆ ತಂದೆ ಮಗನ ಸಂಬಂದವಿರುವುದರ ಬಗ್ಗೆ ಅರಿವಿರಲಿಲ್ಲ. ಡಂಕಣಾಚಾರಿಯು ವಿಗ್ರಹವನ್ನು ಪರೀಕ್ಶಿಸಿದಾಗ ವಿಗ್ರಹದ ನಾಬಿಯ ಬಳಿ ಜೀವಂತ ಕಪ್ಪೆಯೊಂದು ಸೇರಿಕೊಂಡಿದ್ದನ್ನು ಗುರುತಿಸಿದನು. ವಚನವಿತ್ತ ಜಕಣಾಚಾರಿಯು ತನ್ನ ಬಲಗೈಯನ್ನು ತಕ್ಶಣವೇ ಕತ್ತರಿಸಿಕೊಂಡನು.
ದೈವಕ್ರುಪೆಯಿಂದಲೋ ಏನೋ ಕೊನೆಗೆ ಇಬ್ಬರಿಗೂ ತಮ್ಮ ತಂದೆ ಮಗನ ಸಂಬಂದ ಅರಿವಿಗೆ ಬಂದು, ಜಕಣಾಚಾರಿಯು ಹೆಂಡತಿ ಮತ್ತು ಮಗನ ಜೊತೆ ಸೇರಲ್ಪಟ್ಟನು. ಅಂದಿನಿಂದ ಆ ವಿಗ್ರಹ ಕಪ್ಪೆ ಚೆನ್ನಿಗರಾಯ ಎಂಬ ನಾಮಾಂಕಿತದಿಂದ ಹೆಸರುವಾಸಿಯಾಯಿತು. ಕನಸಿನಲ್ಲಿ ಬಂದು ಹೇಳಿದ ಚೆನ್ನಿಗರಾಯನ ಆದೇಶದಂತೆ ತನ್ನ ಹುಟ್ಟೂರಾದ ಕ್ರೀಡಾಪುರಕ್ಕೆ ಬಂದು ಬೇಲೂರಿನ ಮಾದರಿಯಂತೆ ಹೊಯ್ಸಳ ಶೈಲಿಯಲ್ಲಿ, ಕ್ರಿಶ್ಣ ಶಿಲೆಯ(ಕಪ್ಪು ಶಿಲೆಯ) ಚೆನ್ನಕೇಶವನ ವಿಗ್ರಹವನ್ನು ತನ್ನ ಮೊಂಡುಗೈಯಲ್ಲಿ (ಮುರಿದ ಕೈಯಿಂದ) ಸುಂದರವಾದ ಆಳೆತ್ತರವಾದ ಚೆನ್ನಕೇಶವನ ವಿಗ್ರಹವನ್ನು ನಿರ‍್ಮಿಸಿದನು. ಮೂರ‍್ತಿಯ ಪ್ರತಿಶ್ಟಾಪನೆಯ ನಂತರ ಚೆನ್ನಕೇಶವನ ವರದಿಂದ ತನ್ನ ಕತ್ತರಿಸಿದ ಕೈಯನ್ನು ಪುನಹ ಪಡೆದನೆಂಬ ಪ್ರತೀತಿಯಿದೆ. ಕೈಯನ್ನು ಮರು ಪಡೆದುದರಿಂದ ಈ ಊರಿಗೆ ‘ಕೈದಳ’ ಎಂಬ ಹೆಸರು ಬಂದಿದೆಯೆಂಬ ಪ್ರತೀತಿಯಿದೆ. ಕಾಲಕ್ರಮೇಣ ಕೈದಳವೆಂಬ ಹೆಸರು ಕೈದಾಳ ಎಂದು ಬದಲಾಗಿರಬಹುದು.
ಕೈದಾಳ ತಲುಪುವುದು ಹೇಗೆ?
ತುಮಕೂರಿನಿಂದ ಕುಣಿಗಲ್ ಮಾರ‍್ಗದಲ್ಲಿ ಸಾಗುವಾಗ 8 ಕಿಮೀ ಅಂತರದಲ್ಲಿ ಗೂಳೂರು ಎಂಬ ಊರು ಸಿಗುತ್ತದೆ. ಗೂಳೂರಿನಲ್ಲಿ ಗಣೇಶನ ದೊಡ್ಡ ವಿಗ್ರಹವಿರುವ ದೇವಸ್ತಾನವಿದ್ದು ಗೂಳೂರು ಗಣೇಶ ಎಂಬುದಾಗಿ ಎಲ್ಲೆಡೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರತಿವರ‍್ಶವೂ ಗೂಳೂರು ಗಣಪತಿಯ ಉತ್ಸವವು ಅದ್ದೂರಿಯಾಗಿ ಜರುಗುತ್ತದೆ. ಈ ಗೂಳೂರಿನಿಂದ ಬಲಕ್ಕೆ ತಿರುಗಿದರೆ 1 ಕಿಮೀ ಅಂತರದಲ್ಲಿಯೇ ಚೆನ್ನಕೇಶವನ ಪುಟ್ಟ ದೇವಾಲಯವಿರುವ ಕೈದಾಳವು ಸಿಗುತ್ತದೆ. ಇದೇ ಜಕಣಾಚಾರಿಯು ನಿರ‍್ಮಿಸಿದ ಕೊನೆಯ ದೇವಾಲಯವೆಂಬ ಉಲ್ಲೇಕವಿದೆ. ಕೈದಾಳದ ವಿಗ್ರಹವು ಬೇಲೂರಿನ ಚೆನ್ನಕೇಶವನ ವಿಗ್ರಹವನ್ನು ಹೋಲುತ್ತದೆ. ಸುಮಾರು 5.4 ಅಡಿ ಎತ್ತರದ ಹೊಯ್ಸಳ ಶೈಲಿಯ ಚೆನ್ನಕೇಶವನ ಮೂರ‍್ತಿಯನ್ನು ಸುಮಾರು 2 ಅಡಿ ಎತ್ತರದ ಕಲ್ಲಿನ ಪೀಟದ ಮೇಲೆ ಪ್ರತಿಶ್ಟಾಪಿಸಲಾಗಿದೆ. ಇದು ಅನೇಕ ಕುಸುರಿ ಕೆಲಸಗಳಿಂದ ಕೂಡಿದ್ದು ಶ್ರೀದೇವಿ ಮತ್ತು ಬೂದೇವಿಯರ ವಿಗ್ರಹಗಳೂ ಸಹ ಇಲ್ಲಿವೆ. ನವರಂಗದಲ್ಲಿ ಕೆತ್ತನೆಯಿರುವ ನಾಲ್ಕು ಕಂಬಗಳಿವೆ. ಗರ‍್ಬಗುಡಿಯ ಎದುರಿಗೆ ಚೆನ್ನಕೇಶವನಿಗೆ ನೇರವಾಗಿ ಗರುಡ ದೇವನಿರುವ ಪುಟ್ಟ ದೇವಾಲಯವಿದೆ. ಅಂದಿನ ಕಾಲದಲ್ಲಿಯೇ ಗರ‍್ಬಗುಡಿಯ ಪ್ರಾಂಗಣದ ಗೋಡೆಯಲ್ಲಿ ಜಾಲಾಂದ್ರವನ್ನು ನಿರ‍್ಮಿಸಿದ್ದು, ಸೂರ‍್ಯನ ಕಿರಣಗಳು ನೇರವಾಗಿ ಸ್ವಾಮಿಯ ಮೇಲೆ ಬೀಳುವಂತೆ ಮಾಡಿರುವುದು ಅಚ್ಚರಿಯ ಸಂಗತಿ. ದೇವಾಲಯದ ಮುಂಬಾಗದಲ್ಲಿ ಪ್ರವೇಶ ದ್ವಾರದ ಮುಂದೆ ನಿಂತು ನೋಡಿದರೆ ಸುತ್ತ ಕೋಟೆಯ ಮಾದರಿಯಂತೆ ತೋರುತ್ತದೆ. ದೇವಾಲಯದ ಪಕ್ಕದಲ್ಲಿಯೇ ದ್ರಾವಿಡ ಶೈಲಿಯ ಗಂಗಾದರೇಶ್ವರನ ದೇವಾಲಯವಿರುವುದು ಮತ್ತೊಂದು ವಿಶೇಶ.
( ಚಿತ್ರಸೆಲೆ: wikimedia.org )
ಇತ್ತೀಚಿನ ಅನಿಸಿಕೆಗಳು