ಕವಿತೆ: ಸಾವಿಗೇಕೆ ಅಂಜುವೆ

– ರಾಮಚಂದ್ರ ಮಹಾರುದ್ರಪ್ಪ.

ದಶಕಗಳ ಬದುಕಿನ ಸಿಹಿ ಉಂಡು
ಇಂದು ಸಾವಿಗೆ ಅಂಜುವುದೇಕೆ?
ಬದುಕು ಕ್ಶಣಿಕ ಎಂದು ತಿಳಿದಿರುವೆ
ಆದರೂ ಈ ದಿಟವನ್ನೇಕೆ ಮರೆಯುವೆ?

ಹುಟ್ಟಿದ ಜೀವ ಸಾಯಲೇಬೇಕು
ಇದೇ ಪ್ರಕ್ರುತಿಯ ನಿಯಮ
ನೀ ಒಳಿತು ಮಾಡಿರು, ಕೆಡಕು ಮಾಡಿರು
ಒಂದು ದಿನ ಬಾಳ ಪಯಣ ಕೊನೆಗೊಳ್ಳಲೇಬೇಕು

ನೀ ಒಳಿತು ಮಾಡಿದ್ದರೆ
ಸತ್ತ ಮೇಲೂ ಬದುಕಿರುವೆ!
ನೀ ಕೆಡಕು ಮಾಡಿದ್ದರೆ
ಅಂದೇ ನಿನ್ನ ಕೊನೆ!

ಮತ್ಯಾಕೆ ಅಂಜುವೆಯೋ ಮರುಳಾ
ಸತ್ತ ಮೇಲೂ ಬದುಕು ಇಹುದೇನೋ?
ಬುವಿಯಂತೆ ಇನ್ನೊಂದು ಪ್ರಪಂಚ ಇಹುದೇನೋ?
ಅಲ್ಲೂ ಬದುಕು ಹೊಸದಾಗಿ ಮೊದಲಾಗುವುದೇನೋ?

ಸ್ವರ‍್ಗ ನರಕಗಳನ್ನು ಕಲ್ಪಿಸಿಕೊಂಡಿರುವ ಮನುಜ
ಸಾವಿನ ಬಳಿಕವೂ ಬದುಕನ್ನು ಕಲ್ಪಿಸಿಕೊಳ್ಳಲಾರನೇ?

ಸಾವಿಗೆ ಅಂಜದೆ ನಿತ್ಯ ಬದುಕಿದರೆ,
ಈ ಬುವಿಯ ಪಯಣ ಮುಗಿದ ಮೇಲೂ
ಇನ್ನೊಂದು ಬದುಕು ಇಹುದೇನೋ?
ಕಂಡವರ‍್ಯಾರು?

(ಚಿತ್ರ ಸೆಲೆ: fearlessmotivation.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: