ಆಸ್ಟ್ರೇಲಿಯಾದಲ್ಲೊಂದು ಜ್ಯೋತಿರ‍್ಲಿಂಗ

– .

ಬಾರತ ದೇಶದಲ್ಲಿ ಹನ್ನೆರೆಡು ಜ್ಯೋತಿರ‍್ಲಿಂಗಗಳಿವೆ. ಅವುಗಳು ಉತ್ತರದಿಂದ ದಕ್ಶಿಣದವರೆವಿಗೂ ಹಾಗೂ ಪೂರ‍್ವದಿಂದ ಪಶ್ಶಿಮದವರೆವಿಗೂ ಹಂಚಿಹೋಗಿವೆ. ಗುಜರಾತಿನ ಸೋಮನಾತ, ಆಂದ್ರಪ್ರದೇಶದ ಶ್ರೀಶೈಲದಲ್ಲಿನ ಮಲ್ಲಿಕಾರ‍್ಜುನ, ಮದ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ, ಮದ್ಯಪ್ರದೇಶದ ಓಂಕಾರೇಶ್ವರ, ಜಾರ‍್ಕಂಡ್ ನ ದಿಯೋಗರ್ ಜಿಲ್ಲೆಯ ವೈದ್ಯನಾತೇಶ್ವರ, ಮಹಾರಾಶ್ಟ್ರದ ಪುಣೆಯ ಬೀಮಾಶಂಕರ, ತಮಿಳುನಾಡಿನ ರಾಮೇಶ್ವರಂನಲ್ಲಿನ ರಾಮೇಶ್ವರ, ಗುಜರಾತ್ ನ ದ್ವಾರಕ ಜಿಲ್ಲಿಯಲ್ಲಿರುವ ನಾಗೇಶ್ವರ, ಉತ್ತರ ಪ್ರದೇಶದ ವಾರಣಾಸಿಯಲ್ಲಿನ ಕಾಶಿ ವಿಶ್ವನಾತ, ಮಹಾರಾಶ್ಟ್ರದ ನಾಸಿಕ್ನಲ್ಲಿರುವ ತ್ರಯಂಬಕೇಶ್ವರ, ಉತ್ತರಾಕಂಡದ ಕೇದಾರನಾತ ಮತ್ತು ಮಹಾರಾಶ್ಟ್ರದ ಔರಂಗಾಬಾದ್ ಬಳಿಯ ಎಲ್ಲೋರಾದ ಗ್ರುಶ್ನೇಶ್ವರ. ಇವೇ 12 ಜ್ಯೋತಿರ‍್ಲಿಂಗಗಳು.

ಜ್ಯೋತಿರ‍್ಲಿಂಗಗಳು 12 ಎಂಬ ನಂಬಿಕೆ ಇದ್ದರೂ, ಆಸ್ಟ್ರೇಲಿಯಾದ ಮಿಂಟೋದಲ್ಲಿರುವ ಮುಕ್ತಿ-ಗುಪ್ತೇಶ್ವರ ಜ್ಯೋರ‍್ತಿಲಿಂಗವನ್ನು ಹದಿಮೂರನೆ ಜ್ಯೋರ‍್ತಿಲಿಂಗವೆಂದು ಕರೆಯುವುದುಂಟು. ಸ್ರುಶ್ಟಿ ಮತ್ತು ವಿನಾಶ ಚಕ್ರದ ಕೊನೆಯ ಮೂರ‍್ತಿಯಾದ ಕಾರಣ ಇದನ್ನು ಮುಕ್ತಿ-ಗುಪ್ತೇಶ್ವರ ಎನ್ನುತ್ತಾರೆ. ಸೋಮನಾತ ದೇವಾಲಯದ ಹೊರಗಿರುವ ಬನಸ್ತಂಬ (ಬಾಣ) ದಕ್ಶಿಣ ದ್ರುವದ ಕಡೆಗೆ ಅಡೆತಡೆಯಿಲ್ಲದ ದ್ರುಶ್ಟಿ ಬೀರುತ್ತದೆ. ಹಾಗಾಗಿ ಇದು ಸಾಂಕೇತಿಕವಾಗಿ ಹದಿಮೂರನೇ ಜ್ಯೋತಿರ‍್ಲಿಂಗವನ್ನು ಎಲ್ಲಿ ಪ್ರತಿಶ್ಟಾಪಿಸಬೇಕೆಂಬ ಸುಳಿವನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ಆದಾರದ ಮೇಲೆ ಹದಿಮೂರನೇ ಜ್ಯೋತಿರ‍್ಲಿಂಗವನ್ನು ಆಸ್ಟ್ರೇಲಿಯಾದಲ್ಲಿ ಸ್ತಾಪಿಸಲಾಗಿದೆ. ಆಸ್ಟ್ರೇಲಿಯಾವು ಹಾವಿನ ಹೆಡೆಯ ಬಾಗದಲ್ಲಿದೆ. ಹಾವಿನ ಹಡೆಯು ರಕ್ಶಣೆಯ ಸಂಕೇತ ಮತ್ತು ಶಿವನ ಕುತ್ತಿಗೆಯ ಆಬರಣ ಸಹ ಆಗಿದೆ. ಹಾಗಾಗಿ ಹದಿಮೂರು ಹಾಗೂ ಕೊನೆಯ ಜ್ಯೋತಿರ‍್ಲಿಂಗವನ್ನು ಅಲ್ಲಿ ಸ್ತಾಪಿಸಲಾಗಿದೆ.
ಬಾರತದಲ್ಲಿನ ಬಹಳಶ್ಟು ಜ್ಯೋತಿರ‍್ಲಿಂಗಗಳ ಆರಾದನೆ ಪ್ರಾರಂಬವಾಗಿದ್ದು, ಸ್ವಾಬಾವಿಕವಾಗಿ ರೂಪುಗೊಂಡ ಗುಹೆಗಳಲ್ಲಿ. ಆದರೆ ಹದಿಮೂರನೇ ಜ್ಯೋತಿರ‍್ಲಿಂಗ ಮುಕ್ತಿ-ಗುಪ್ತೇಶ್ವರ ಮಂದಿರವು ಸ್ತಾಪಿತವಾಗಿರುವುದು ಮಾನವ ನಿರ‍್ಮಿತ ಗುಹೆಯಲ್ಲಿ. ಇಲ್ಲಿಯ ಮಹಾದೇವನ ಜೊತೆಯಲ್ಲಿ ಉಳಿದ ಹನ್ನೆರೆಡು ಜ್ಯೋತಿರ‍್ಲಿಂಗಗಳ ಮಾದರಿ ಪ್ರತಿಕ್ರುತಿ, ರುದ್ರ ದೇವರ 108 ನಾಮಗಳನ್ನು ಪ್ರತಿನಿದಿಸುವ 108 ಲಿಂಗಗಳು ಹಾಗೂ ಶಿವಸಹಸ್ರನಾಮವನ್ನು ಪ್ರತಿನಿದಿಸುವ 1008 ಶಿವಲಿಂಗಗಳಿವೆ. ಒಂದೊಂದಕ್ಕೂ ಒಂದೊಂದು ಸಣ್ಣ ಮಂದಿರವನ್ನು ನಿರ‍್ಮಿಸಿರುವುದರಿಂದ ಮುಕ್ತಿ-ಗುಪ್ತೇಶ್ವರ ಮಂದಿರದೊಳಗೆ 1128 ಸಣ್ಣ ಮಂದಿರಗಳಿದ್ದು, ಇವು ದೇವಾಲಯದ ಪ್ರಾಕಾರಕ್ಕೆ ವಿಶೇಶ ಮೆರುಗನ್ನು ನೀಡಿವೆ.

ಮುಕ್ತಿ-ಗುಪ್ತೇಶ್ವರ ಮೂರ‍್ತಿ ಪ್ರತಿಶ್ಟಾಪನೆಯ ಕೈಂಕರ‍್ಯ ಸಂಪನ್ನವಾಗಿದ್ದು 14ನೇ ಪೆಬ್ರವರಿ 1999ರ ಮಹಾಶಿವರಾತ್ರಿಯ ದಿನದಂದು. ಮುಕ್ತಿ-ಗುಪ್ತೇಶ್ವರದ ಗರ‍್ಬಗುಡಿಯಲ್ಲಿ ಹತ್ತು ಮೀಟರ್ ಆಳದಲ್ಲಿ ಸಣ್ಣ ನೆಲಮಾಳಿಗೆಯಿದ್ದು ಅದರಲ್ಲಿ ಪ್ರಪಂಚದಾದ್ಯಂತ ಎರಡು ಮಿಲಿಯನ್ ಬಕ್ತರಿಂದ ಬರೆಯಲ್ಪಟ್ಟ “ಓಂ ನಮಃ ಶಿವಾಯ” ಎಂಬ ಕೈ ಬರಹ ಇಲ್ಲಿ ಅಡಕವಾಗಿದೆ. ಇದರೊಂದಿಗೆ ಪ್ರಪಂಚದಾದ್ಯಂತ ಸುಪ್ರಸಿದ್ದ ಆದ್ಯಾತ್ಮಿಕ ಗುರುಗಳು ಮತ್ತು ಗಣ್ಯಾತಿಗಣ್ಯರ ಶುಬ ಹಾರೈಕೆಗಳನ್ನು ಸಂರಕ್ಶಿಸಿಡಲಾಗಿದೆ. ಆಸ್ಟ್ರೇಲಿಯಾದ ಪ್ರಮುಕ ನದಿಗಳು ಮತ್ತು ಐದು ಸಾಗರಗಳು ಸೇರಿದಂತೆ ಎಂಬತ್ತೊಂದು ನದಿಗಳಿಂದ ಸಂಗ್ರಹಿಸಿದ ನೀರನ್ನು ಈ ನೆಲಮಾಳಿಗೆಯಲ್ಲಿ ಸುರಕ್ಶಿತವಾಗಿರಿಸಿದೆ. ಮಹಾದೇವನ ಮಂದಿರವಲ್ಲದೆ ಇಲ್ಲಿ ಇನ್ನೂ ಮೂರು ಮಂದಿರಗಳಿವೆ. ಮಾತಾ ಮಂದಿರ, ರಾಮ ಪರಿವಾರ ಮಂದಿರ ಹಾಗೂ ಗಣೇಶ ಮಂದಿರ.

ಮುಕ್ತಿ-ಗುಪ್ತೇಶ್ವರ ಮಂದಿರದ ನಿರ‍್ಮಾಣ ಕಾರ‍್ಯ ಪ್ರಾರಂಬವಾಗಿದ್ದು ಸೆಪ್ಟೆಂಬರ್ 1997ರಲ್ಲಿ. ಸರಿ ಸುಮಾರು 1450 ಚದರ ಮೀಟರ್ ಪ್ರದೇಶದಲ್ಲಿ, ನೆಲದಡಿಯಲ್ಲಿ ಈ ಮಂದಿರವನ್ನು ನಿರ‍್ಮಿಸಲಾಗಿದೆ. ನೆಲದ ಮೇಲಿನ ಕಟ್ಟಡಗಳೆಂದರೆ, ಮೂಲ ಸೌಕರ‍್ಯಗಳ ಕಟ್ಟಡ ಮತ್ತು ದೇವಾಲಯದ ಕಲ್ಯಾಣಿಯ ಮದ್ಯೆ ನಿರ‍್ಮಿಸಲಾಗಿರುವ ಗಣೇಶನ ಮಂದಿರ. ಉಳಿದೆಲ್ಲವೂ ನೆಲದಡಿಯಲ್ಲೇ ಇವೆ. ಈ ಮಂದಿರವನ್ನು ನೆಲದಡಿಯಲ್ಲಿ ನಿರ‍್ಮಿಸಲು ಸುಮಾರು 65000 ಗನ ಮೀಟರ್ (Cubic meter) ನಶ್ಟು ಮಣ್ಣನ್ನು ಹೊರತೆಗೆಯಲಾಯಿತು. ಮಂದಿರದ ನಿರ‍್ಮಾಣದಲ್ಲಿ ಒಟ್ಟಾರೆ 1240 ಗನ ಮೀಟರ್ ನಶ್ಟು ಕಾಂಕ್ರೀಟ್ ಬಳಕೆಯಾಗಿದೆ. ಸಬಾಂಗಣ ನಿರ‍್ಮಾಣದಲ್ಲಿ 18 ಟನ್ ತೂಕದ ಹತ್ತು ಪ್ರಿಕಾಸ್ಟ್ ಕಮಾನುಗಳು ಹಾಗೂ 230 ಟನ್ ಉಕ್ಕನ್ನು ಬಳಸಲಾಗಿದೆ. ಇಲ್ಲಿರುವ ಕಲ್ಯಾಣಿಯು ಪೂರ‍್ಣ ಪ್ರಮಾಣದಲ್ಲಿ ತುಂಬಿದಾಗ 4.5 ಮಿಲಿಯನ್ ಲೀಟರ್ ನೀರು ಸಂಗ್ರಹವಾಗುತ್ತದೆ. ಈ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಸುಂದರಗೊಳಿಸಲು 4500 ಮರಗಳನ್ನು, ಅನೇಕ ಹೂವಿನ ಗಿಡಗಳನ್ನು ನೆಡಲಾಗಿದೆ. ಒಟ್ಟಾರೆ ಈ ಯೋಜನೆಗೆ ತಗುಲಿದ ವೆಚ್ಚ 5.0 ಮಿಲಿಯನ್ ಯುಎಸ್ ಡಾಲರ‍್ಗಳು. ಮುಕ್ತಿ-ಗುಪ್ತೇಶ್ವರ ಮಂದಿರದ ನಿಕರವಾದ ವಿಳಾಸ: 203, ಈಗಲ್‍ವ್ಯೂ ರೋಡ್ ನ್ಯೂ ಸೌತ್ ವೇಲ್ಸ್, 2566, ಆಸ್ಟ್ರೇಲಿಯಾ.

(ಮಾಹಿತಿ ಮತ್ತು ಚಿತ್ರ ಸೆಲೆ: booksfact.com, templepurohit.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: