ಹಲ್ಲು ಮೊನಚುಗೊಳಿಸುವಿಕೆ – ಒಂದು ಬಯಾನಕ ಆಚರಣೆ

– .

ಕ್ರಿಶ್ಚಿಯನ್ ದರ‍್ಮವನ್ನು ಅನುಸರಿಸುವ ಮೆಂಟವಾಯಿ ಜನಾಂಗದವರ ಮೂಲ ಇಂಡೋನೇಶ್ಯಾದ ಪಶ್ಚಿಮ ಸುಮಾತ್ರದ ಮೆಂಟವಾಯಿ ದ್ವೀಪಗಳು. ಇವರದು ಅಲೆಮಾರಿ ಜೀವನ ಶೈಲಿ. ಇವರುಗಳು ಗುರುತಿಸಿಕೊಂಡಿರುವುದು ತಮ್ಮ ಆದ್ಯಾತ್ಮಿಕತೆ, ಹಚ್ಚೆಗಳನ್ನು ಹಾಕಿಸಿಕೊಳ್ಳುವುದು ಹಾಗೂ ಹಲ್ಲನ್ನು ಮೊನಚುಗೊಳಿಸಿಕೊಳ್ಳುವುದರಿಂದ. ಪ್ರತಿ ಬುಡಕಟ್ಟು ಜನಾಂಗದವರಂತೆ ಇವರುಗಳೂ ಸಹ ತಮ್ಮದೇ ಆದ ರೀತಿ ರಿವಾಜುಗಳನ್ನು, ಆಚರಣೆಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಅತ್ಯಂತ ಬಯಾನಕವಾದ ಆಚರಣೆ ಹಲ್ಲನ್ನು ಮೊನಚುಗೊಳಿಸುವಿಕೆ. ಹಲ್ಲನ್ನು ಮೊನಚುಗೊಳಿಸುವುದು ಆಂತರಿಕ ಚೈತನ್ಯವನ್ನು ಸಂತೋಶಪಡಿಸುವ ಒಂದು ರೂಪ ಎಂದು ಅವರುಗಳು ನಂಬಿದ್ದಾರೆ.

ಹೆಣ್ಣು ಮಕ್ಕಳು ಪ್ರೌಡಾವಸ್ತೆಯನ್ನು ತಲುಪಿದಾಗ, ಆಕೆಯ ಒಪ್ಪಿಗೆಯ ಮೇಲೆ ಈ ಆಚರಣೆಗೆ ಚಾಲನೆ ನೀಡಲಾಗುತ್ತದೆ. ನೋವನ್ನು ಸಹಿಸಿಕೊಳ್ಳುವ ಶಕ್ತಿಯ ಪರೀಕ್ಶೆ ಈ ಆಚರಣೆಯಲ್ಲಿದೆ. ಹಲ್ಲನ್ನು ಮೊನಚುಗೊಳಿಸುವ ಸಮಯದಲ್ಲಿ ನೋವನ್ನು ಇಂಗಿಸುವ ಔಶದಿಯನ್ನಾಗಲಿ, ಅರವಳಿಕೆಯನ್ನಾಗಲಿ ಉಪಯೋಗಿಸುವುದಿಲ್ಲ. ಹಲ್ಲನ್ನು ಮೊನಚುಗೊಳಿಸಲು ಬಳಸುವ ಸಾದನ ಉಳಿ ಮತ್ತು ಮರದ ಸುತ್ತಿಗೆ. ಹಲ್ಲು ಮೊನಚುಗೊಳಿಸುವ ತಜ್ನರು, ಮೊದಲು ಉಳಿಯನ್ನು ಕಲ್ಲಿನ ಮೇಲೆ ಉಜ್ಜಿ, ಅತ್ಯಂತ ಚೂಪಾಗಿಸಿಕೊಳ್ಳುತ್ತಾರೆ. ನಂತರ, ತೆರೆದ ಬಾಯಿಯಲ್ಲಿನ ಹಲ್ಲುಗಳನ್ನು ಉಳಿ ಮತ್ತು ಸುತ್ತಿಗೆಯ ಸಹಾಯದಿಂದ “ಗಿ” ಆಕಾರದಲ್ಲಿ ಮೊನಚುಗೊಳಿಸುತ್ತಾರೆ. ಅತ್ಯಂತ ಕೌಶಲ್ಯವುಳ್ಳವರಿಗೆ ಮಾತ್ರ ಈ ಕಾರ‍್ಯ ನಿರ‍್ವಹಿಸಲು ಅವಕಾಶ. ಉಳಿಯನ್ನು ಹಲ್ಲಿನ ಮೇಲಿಟ್ಟು ಮರದ ಸುತ್ತಿಗೆಯಿಂದ ಬಡಿಯುವುದು ಬಹಳ ನಾಜೂಕಿನ ಕೆಲಸ. ಕೊಂಚ ಆಯ ತಪ್ಪಿದರೂ, ಉಳಿ ಹಲ್ಲಿನ ಮದ್ಯೆ ನುಸುಳಿ, ವಿಪರೀತ ನೋವನ್ನು ಕೊಡುತ್ತದೆ. ವಸಡು ಕತ್ತರಿಸಿ ಹೋಗುವ ಎಲ್ಲಾ ಸಾದ್ಯತೆ ಇರುತ್ತದೆ. ಆದ್ದರಿಂದ ಇದು ಅತ್ಯಂತ ಸವಾಲಿನ ಕೆಲಸವೂ ಹೌದು.

ಒಮ್ಮೆ ಹೆಣ್ಣು ತನ್ನ ಹಲ್ಲುಗಳನ್ನು ಮೊನಚುಗೊಳಿಸಲು ನಿರ‍್ದರಿಸಿದರೆ, ಇಡೀ ಹಳ್ಳಿಯಲ್ಲಿ ಹಬ್ಬದ ವಾತಾವರಣ ನಿರ‍್ಮಾಣವಾಗುತ್ತದೆ. ಈ ಕಾರ‍್ಯಕ್ಕೆ ಅವಶ್ಯವಿರುವ ಉಳಿ ಮತ್ತು ಸುತ್ತಿಗೆಯನ್ನು ತಯಾರಿಸಿಟ್ಟುಕೊಳ್ಳಲು ಹಲ್ಲು ಮೊನಚುಗೊಳಿಸುವಿಕೆಯಲ್ಲಿ ಕೌಶಲ್ಯವಿರುವ ಹಿರಿಯರಿಗೆ ಆಹ್ವಾನ ಹೋಗುತ್ತದೆ. ಎಲ್ಲಾ ಪ್ರಾತಮಿಕ ತಯಾರಿಗಳು ಆದ ನಂತರ ಹೆಣ್ಣನ್ನು ಅದಕ್ಕಾಗಿಯೇ ಸಿದ್ದಗೊಳಿಸಿದ ವೈದ್ಯಕೀಯ ಗುಡಿಸಿಲಿಗೆ ಕರೆದೊಯ್ದು, ಅಲ್ಲಿ ನುರಿತ ಕೌಶಲ್ಯದ ವ್ಯಕ್ತಿಗಳಿಂದ ಹಲ್ಲನ್ನು ಮೊನಚುಗೊಳಿಸುವಿಕೆ ಪ್ರಾರಂಬವಾಗುತ್ತದೆ. ಹಲ್ಲು ಮೊನಚುಗೊಳಿಸುವಿಕೆ ಮುಗಿದ ಮೇಲೆ ನೋವು ಶಮನಕ್ಕಾಗಿ ಹಸಿರು ಬಾಳೆಹಣ್ಣನ್ನು ಕಚ್ಚಿಸುತ್ತಾರೆ. ಇದಾದ ನಂತರ ಆ ಮಹಿಳೆ ತನ್ನ ಮೊನಚುಗೊಂಡ ಹಲ್ಲನ್ನು ನೆರೆದಿದ್ದವರಿಗೆ ಪ್ರದರ‍್ಶಿಸಬೇಕು. ಹಲ್ಲನ್ನು ಮೊನಚುಗೊಳಿಸುವುದರ ಹಿಂದಿರುವ ಉದ್ದೇಶಕ್ಕೆ ಸಂಬಂದಿಸಿದಂತೆ ಹಲವು ಸಿದ್ದಾಂತಗಳಿವೆ. ಪ್ರದೇಶದಿಂದ ಪ್ರದೇಶಕ್ಕೆ ಜನಾಂಗದಿಂದ ಜನಾಂಗಕ್ಕೆ ಸಿದ್ದಾಂತಗಳು ಬದಲಾಗುತ್ತವೆ. ಆಂತರಿಕ ಸೌಂದರ‍್ಯವನ್ನು ಹೆಚ್ಚಿಸಲು ಎಂದು ಮೆಂಟವಾಯಿ ಬುಡಕಟ್ಟಿನವರು ಪರಿಗಣಿಸಿದರೆ, ಬಾಹ್ಯ ಸೌಂದರ‍್ಯೀಕರಣ ಎಂದು ಸರೆರೀಕೆಟ್ ಮತ್ತು ಸೈಬೆರುಟ್ ಜನಾಂಗದವರು ಪರಿಗಣಿಸುತ್ತಾರೆ.

ಮಾಂಟವಾಯಿ ಜನಾಂಗದಲ್ಲಿ ಹಲ್ಲನ್ನು ಮೊನಚುಗೊಳಿಸುವುದು ಜನಾಂಗದವರ ಜೀವನದಲ್ಲಿ ಪ್ರಮುಕ ಹಂತವನ್ನು ಗುರುತಿಸುವ ಸಮಾರಂಬ ಅತವಾ ಗಟನೆ. ಈ ಆಚರಣೆ ಮೆಂಟವಾಯಿ ಜನರಿಗೆ ಸೌಂದರ‍್ಯದ ಮಾನದಂಡವಾಗಿದೆ. ಅವರುಗಳ ನಂಬಿಕೆಯಂತೆ ಇದು ದೇಹ ಮತ್ತು ಆತ್ಮದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯಕ. ಹಲ್ಲನ್ನು ಮೊನಚುಗೊಳಿಸುವಿಕೆಯ ಆಚರಣೆ ಮಹಿಳೆಯರ ಜೀವನದಲ್ಲಿ ಸಕಾರಾತ್ಮಕತೆ ತರಲು ಹಾಗೂ ದೀರ‍್ಗಕಾಲ ಜೀವಿಸಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ಅವರದು. ಈ ಆಚರಣೆಯಲ್ಲಿ ಹೆಂಗಸರ ಹಲ್ಲುಗಳು ಕಿರಿದಾಗಿ ಚೂಪಾದ ಆಕಾರ ಹೊಂದುವವರೆಗೂ ಮೊನಚುಗೊಳಿಸಲಾಗುತ್ತದೆ. ಹಲ್ಲುಗಳನ್ನು ಮೊನಚುಗೊಳಿಸುವ ಆಚರಣೆ ಪೂರ‍್ಣಗೊಂಡಾಗ, ಹೆಣ್ಣು ದೈಹಿಕವಾಗಿ ಮತ್ತು ಆದ್ಯಾತ್ಮಿಕವಾಗಿ ಸುಂದರವಾಗಿಯೂ ಕಾಣುತ್ತಾಳಲ್ಲದೆ, ಮಹಿಳೆಯಾಗಿ ಕಂಡು ಬರುತ್ತಾಳೆ ಎಂಬುದು ಅವರುಗಳ ಅನಿಸಕೆ. ಮಹಿಳೆಯು ಪ್ರೌಡಾವಸ್ತೆ ತಲುಪಿದ್ದಾಳೆ ಎಂಬುದರ ಜೊತೆ ಜೊತೆಗೆ, ಮೆಂಟವಾಯಿ ಸಮುದಾಯದ ಬವಿಶ್ಯದ ಪೀಳಿಗೆಗೆ ಬಾಹ್ಯ ಸೌಂದರ‍್ಯಕ್ಕಿಂತ, ಆಂತರಿಕ ಸೌಂದರ‍್ಯ ಮುಕ್ಯ ಎಂದು ಸಾರಿ ಹೇಳಲು ಈ ಆಚರಣೆ ಚಾಲ್ತಿಯಲ್ಲಿದೆ.

ಹಲ್ಲನ್ನು ಮೊನಚುಗೊಳಿಸುವ ಆಚರಣೆ ಆಗ್ನೇಯ ತಾಂಜಾನಿಯಾ ಮತ್ತು ಉತ್ತರ ಮೊಜಾಂಬಿಕ್ನಲ್ಲಿರುವ ಮಾಕೊಂಡೆ ಜನಾಂಗದಲ್ಲೂ ಹೆಚ್ಚು ಜನಪ್ರಿಯವಾಗಿದೆ. ಮದ್ಯ ಆಪ್ರಿಕಾದ ಕೆಲವು ಬುಡಕಟ್ಟು ಜನಾಂಗದಲ್ಲಿ, ಜಾಂಬಿಯಾದ ಬೆಂಬಾ ಜನಾಂಗ ಹಾಗೂ ಮಲಾವಿಯ ಯಾವೋ ಬುಡಕಟ್ಟು ಜನಾಂಗದಲ್ಲಿ ಇದರ ಆಚರಣೆಯಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: summerleadental.com, studocu.com, fieldworkrayna2015.weebly.com, hadithi.africa )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks