ನೀರ ಮ್ಯಾಲಿನ ಗುಳ್ಳೆ
– ವೆಂಕಟೇಶ ಚಾಗಿ.
ನೀರ ಮ್ಯಾಲಿನ ಗುಳ್ಳೆ
ಹೊರಟೈತಿ ನೋಡ
ಕುಡಿಯೊಡೆಸಿ ಹಸಿವಿರಿಸಿ
ಕಾಣದೂರಿನ ಕಡೆಗೆ
ನಡಿದೈತಿ ಮೋಡ
ಯಾವ ದೂರದ ತೀರ
ತಿಳಿಯದು ಬಲು ದೂರ
ನಗುನಗುತ ಸಾಗೈತಿ
ಹೊತ್ತು ತುಸು ಬಾರ
ಹೊಡೆದಾವು ಹುಟ್ಯಾವು
ಜೊತೆಗೊಂದಿಶ್ಟು ಗುಳ್ಳೆ
ಹುಡುಕುತಾವ ನಿಜ ಸೂರ
ಕಾಮನಬಿಲ್ಲಿನ ಬಣ್ಣ ಬಣ್ಣ
ಮೈಮ್ಯಾಲೆ ಬಿದ್ದೈತಿ ನೋಡ
ಚಿತ್ರ ವಿಚಿತ್ರದ ಮಾಡದ ಸಂತಿ
ಹೊಂಟೈತಿ ಅದರ ಜೋಡ
ಯಾರೋ ಬರೆದ ಕವನ
ಎದೆಯಾಗದಕೊಂದು ನಮನ
ನೊಡೋರ‍್ಯಾರು ಅದರ ಪಾಡ
ಕಗ್ಗತ್ತಲ ಅಂಜೀಕಿ ಇಲ್ಲ ಸಂಜೀಕಿ
ಹೊತ್ತು ಕರಗೈತಿ ಅದು ಕ್ಶಣ ಕ್ಶಣದ ಹಾಡ
ಮಾಯಾದ ಬದುಕು ಎಲ್ಲಿತನಕ
ಗುಳ್ಳೆ ಒಡೆದು ಹಾರೋ ತನಕ
ಗಾಳೀಯ ಸಂಗ ಕಾಡೇತಿ ಹಂಗ
ಉಳಿದೀತು ನೆನಪೊಂದ ನಂಗ
ತೇಲುತ್ತ ತೇಲುತ್ತ ದೂರ ಸಾಗುತ್ತ
ಹೊಂದಿಕೊಂಡೈತಿ ತಳಿ ನೀರಿನಾಂಗ
ಯಾತರದ ತಿರುವೋ ಯಾರಿಟ್ಟ ಒಲವೋ
ಬರೆದೈತಿ ಹೊಸದೊಂದು ಕತಿಯ
ಅಕ್ಕಪಕ್ಕದ ಗೆಳೆಯ ಗೆಳೆತ್ಯಾರು
ಬದಲಿಸಿ ಬಿಟ್ಟಾರು ದಾರಿಯ ಗತಿಯ
ಈ ಕ್ಶಣವೋ ಆ ಕ್ಶಣವೋ ಮರುಕ್ಶಣವೋ
ಹೊಸ ಕೊಡುಗೆ ಈ ಸಮಯ ಗೆಳೆಯ
ಗರಬಡಿತು ನಿಂತೋದರ ನೀರು ನಿಲ್ಲಲ್ಲ
ನಡಿಮುಂದ ಬೆಳಿಯೋಣ ಹೊಸ ಬೆಳೆಯ
(ಚಿತ್ರ ಸೆಲೆ: unsplash.com )
ಇತ್ತೀಚಿನ ಅನಿಸಿಕೆಗಳು