ಪಿಸುಮಾತಿನ ಗೋಡೆ

– .

ಬರೋಸಾ ಜಲಾಶಯವು ದಕ್ಶಿಣ ಆಸ್ಟ್ರೇಲಿಯಾದಲ್ಲಿರುವ ಒಂದು ಜಲಾಶಯ. 1899 ಮತ್ತು 1902ರ ನಡುವೆ ಕಟ್ಟಲಾದ ಈ ಜಲಾಶಯವನ್ನು, ಗಾವ್ಲರ್ ಮತ್ತು ಇತರ ಪ್ರದೇಶಗಳಿಗೆ ನೀರನ್ನು ಪೂರೈಸುವ ಸಲುವಾಗಿ ಕಟ್ಟಲಾಯಿತು. 1902ರಲ್ಲಿ ಈ ಜಲಾಶಯವು ಪೂರ‍್ಣಗೊಂಡಾಗ ಇದೊಂದು ಎಂಜಿನಿಯರಿಂಗ್ ಅದ್ಬುತವೆಂದೇ ವರ‍್ಣಿಸಲಾಗಿತ್ತು. 36 ಮೀಟರ್ ಎತ್ತರದ ಈ ಅಣೆಕಟ್ಟು ಅಂದಿನ ದಿನದಲ್ಲಿ ಆಸ್ಟ್ರೇಲಿಯಾದಲ್ಲಿ ಅತಿ ಎತ್ತರದ ಅಣೆಕಟ್ಟು ಎಂಬ ಕ್ಯಾತಿಯನ್ನು ಮುಡಿಗೇರಿಸಿಕೊಂಡಿತ್ತು. ನೀರಿನ ಸಂಗ್ರಹಕ್ಕಾಗಿ ಈ ಅಣೆಕಟ್ಟಿಗೆ ಕಟ್ಟಿರುವ ಗೋಡೆ ಕಮಾನಿನಾಕ್ರುತಿಯಲ್ಲಿರುವುದು ಅಂದಿನ ದಿನಕ್ಕೆ ಅತ್ಯಂತ ನಾವೀನ್ಯತೆಯಿಂದ ಕೂಡಿದ ವಿಸ್ಮಯವಾಗಿತ್ತು. ಇದೇ ಕಾರಣಕ್ಕೆ ಅಂದು, ಕಮಾನಿನಾಕ್ರುತಿಯ ಈ ಅಣೆಕಟ್ಟು ವಿಶ್ವದ ಗಮನವನ್ನು ಸೆಳೆಯುವಲ್ಲಿ ಸಪಲವಾಗಿದ್ದು.

ಈ ಅಣೆಕಟ್ಟಿಗಾಗಿ ಕಟ್ಟಿರುವ ಗೋಡೆಯು ಪ್ಯಾರಾಬೋಲಾ ಆಕ್ರುತಿಯಲ್ಲಿದೆ. ಈ ಅಣೆಕಟ್ಟಿನ ಒಂದು ಬದಿಯಲ್ಲಿ ನಿಂತು ಪಿಸುಮಾತಿನಶ್ಟು ಡೆಸಿಬಲ್ ನಲ್ಲಿ ದ್ವನಿಯನ್ನು ಹೊರಡಿಸಿದರೆ, ಅಲ್ಲಿಂದ ಸುಮಾರು 140 ಮೀಟರ‍್ಗಿಂತಲೂ ಹೆಚ್ಚು ದೂರದಲ್ಲಿರುವ ಮತ್ತೊಂದು ತುದಿಯಲ್ಲಿ ಆ ದ್ವನಿಯನ್ನು ಸ್ಪಶ್ಟವಾಗಿ ಕೇಳಬಹುದು. ಈ ಅಸಾಮಾನ್ಯ ದ್ವನಿ ತರಂಗಗಳ ವಿದ್ಯಮಾನವು ಅತ್ಯಂತ ಜನಪ್ರಿಯವಾಗಿದ್ದು, ಪ್ರವಾಸಿ ಆಕರ‍್ಶಣೆಯಾಗಿದೆ. ಇದೇ ಕಾರಣದಿಂದ ಈ ಅಣೆಕಟ್ಟನ್ನು ಪಿಸುಮಾತಿನ ಗೋಡೆ ಎಂಬ ಇನ್ನೊಂದು ಹೆಸರಿನಿಂದಲೂ ಗುರುತಿಸಲಾಗುತ್ತದೆ. ಬರೋಸಾ ಕಣಿವೆ ಪ್ರದೇಶ ಆಸ್ಟ್ರೇಲಿಯಾದ ಪ್ರಮುಕ ಆಕರ‍್ಶಣೀಯ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿನ ದ್ರಾಕ್ಶಿ ತೋಟಗಳು ಶತಮಾನಗಳಶ್ಟು ಹಳೆಯವು. ಬರೋಸಾ ಅಣೆಕಟ್ಟಿನ ಈ ವಿಸ್ಪರಿಂಗ್ ವಾಲ್ ವಿಲಿಯಮ್ಸ್ ಟೌನ್‍ನ ಹತ್ತಿರದಲ್ಲಿದೆ. 120 ವರ‍್ಶಗಳಶ್ಟು ಹಳೆಯದಾದ ಈ ಅಣೆಕಟ್ಟು ಇಂದಿಗೂ ತನ್ನ ಪಿಸುಮಾತಿನ ವಿಸ್ಮಯಕ್ಕೆ ಹೆಸರುವಾಸಿಯಾಗಿದೆ.

ಹತ್ತಿರದ ಪಟ್ಟಣಗಳಿಗೆ ನೀರನ್ನು ಸರಬರಾಜು ಮಾಡುವ ಮೂಲ ಉದ್ದೇಶದಿಂದ ಕಟ್ಟಲಾದ ಬರೋಸಾ ಕಣಿವೆಯಲ್ಲಿನ ಈ ಅಣೆಕಟ್ಟು, ಸಂಪೂರ‍್ಣವಾಗಿ ಬೇರೆಯದೇ ರೀತಿಯಲ್ಲಿ ಹೆಸರುವಾಸಿಯಾಯಿತು. ಒಂಬತ್ತು ಅಂತಸ್ತಿನ ಕಟ್ಟಡದಶ್ಟು ಎತ್ತರಕ್ಕಿದೆ ಈ ಅಣೆಕಟ್ಟು. ಇಲ್ಲಿಗೆ ಬೇಟಿ ನೀಡುವ ಪ್ರವಾಸಿಗರಿಗೆ ಇದೊಂದು ಅಚ್ಚರಿಯ ತಾಣ. ದೂರವಿದ್ದರೂ ಹತ್ತಿರದಲ್ಲೇ ಇದ್ದಂತಹ ಬಾವನೆ ಅವರನ್ನು ಮೂಕರನ್ನಾಗಿಸಿದೆ. ಒಂದು ತುದಿಯಲ್ಲಿ, ಎಶ್ಟೇ ಸಣ್ಣ ದನಿಯಲ್ಲಿ ಮಾತನಾಡಿದರೂ, ಅಣೆಕಟ್ಟಿನ ಮತ್ತೊಂದು ತುದಿಯಲ್ಲಿರುವವರು ಅದಕ್ಕೆ ಪ್ರತಿಕ್ರಿಯೆ ನೀಡುವುದನ್ನು ಊಹಿಸಲೂ ಸಾದ್ಯವಿಲ್ಲ. ಮನುಶ್ಯ ಅಸ್ಪಶ್ಟವಾಗಿ ಕಂಡರೂ, ದ್ವನಿ ಮಾತ್ರ ತೀರಾ ಸ್ಪಶ್ಟ. ಹಾಗಾಗಿ ಇಲ್ಲಿ ದೈಹಿಕ ಅಂತರ ಪ್ರದಾನವಾಗುವುದೇ ಇಲ್ಲ. ಪಿಸುಮಾತಿನ ಈ ವೈಶಿಶ್ಟ್ಯವು ಪ್ಯಾರಾಬೋಲಾ ಪರಿಣಾಮದಿಂದ ಸಾದ್ಯವಾಗಿದೆ. ಈ ಅಣೆಕಟ್ಟಿಗೆ ಕಟ್ಟಿರುವ ಗೋಡೆ ಪರಿಪೂರ‍್ಣ ವ್ರುತ್ತದ ಒಂದು ಬಾಗವಾಗಿದೆ. ಹಾಗಾಗಿ ಒಂದು ತುದಿಯಿಂದ ಬಂದ ದ್ವನಿ ತರಂಗಗಳು ಅದರ ಎದುರಿನ ಗೋಡೆಗೆ ಬಡಿದು ಮತ್ತೊಂದು ತುದಿಯತ್ತ ಹಿಂದಿರುಗುವಾಗ ಕಿವಿಗೆ ಬೀಳುತ್ತದೆ. ಇದೇ ಈ ಪಿಸುಮಾತಿನ ಗೋಡೆಯ ಹಿಂದಿರುವ ವೈಜ್ನಾನಿಕ ಸತ್ಯ.

ಪಿಂಕ್ ಗಮ್ಸ್ (ನೀಲಗಿರಿ ಮರದಂತದ್ದು) ಮತ್ತು ಪೈನ್ ಮರಗಳು ಈ ಕಣೆವೆಯಲ್ಲಿ ಯತೇಚ್ಚವಾಗಿವೆ. ಇವುಗಳನ್ನು ಕಾಪಾಡಲು ಈ ಪ್ರದೇಶವನ್ನು ಸಂರಕ್ಶಿತ ಪ್ರದೇಶ ಎಂದು ಗೋಶಿಸಲಾಗಿದೆ. ಈ ಕಣಿವೆಯನ್ನೇ ತನ್ನ ಶಾಶ್ವತ ವಾಸಸ್ತಾನ ಮಾಡಿಕೊಂಡಿರುವ ಅನೇಕ ಪ್ರಬೇದದ ವರ‍್ಣರಂಜಿತ ಪಕ್ಶಿ ಸಮೂಹಗಳೂ ಇಲ್ಲಿವೆ. ಬರೋಸಾ ಕಣಿವೆಯು ಆಶ್ಚರ‍್ಯಗೊಳಿಸುವಂತಹ ಪ್ರದೇಶ. ಇಲ್ಲಿನ ಪಿಸುಮಾತಿನ ಗೋಡೆಯಲ್ಲಿ ಅನನ್ಯ ಅದ್ಬುತ ಶಬ್ದಗಳನ್ನು ಕೇಳಿ ಆನಂದಿಸಬಹುದು. ಆಸ್ಟ್ರೇಲಿಯಾದಲ್ಲೇ ಏಕೆ, ವಿಶ್ವದಲ್ಲೇ ಅತ್ಯಂತ ಪ್ರಸಿದ್ದವಾದ ವೈನ್ ತಯಾರಿಸುವ ಸ್ತಳ ಇದಾಗಿದೆ. ಅದನ್ನೂ ನೋಡಬಹುದು ಹಾಗೂ ಅದರ ರುಚಿಯನ್ನೂ ಸವಿಯಬಹುದು. ಸ್ತಳೀಯ ಪ್ರಾಣಿ ಪಕ್ಶಿಗಳನ್ನು, ಅತಿ ವಿರಳವಾದ ಗಿಡಗಳನ್ನು ಇಲ್ಲಿ ಕಾಣಬಹುದು.

ಮುಗಿಸುವ ಮುನ್ನ: ಪಿಸುಮಾತಿನ ಗೋಡೆ ಎಂದಾಕ್ಶಣ ಮನಸ್ಸಿನಲ್ಲಿ ಮೂಡುವ ಚಿತ್ರಣ ನಮ್ಮದೇ ಕರ‍್ನಾಟಕದಲ್ಲಿರುವ ಗೋಲ ಗುಮ್ಮಟ. ಬರೋಸಾ ಅಣೆಕಟ್ಟನ್ನು ಕಟ್ಟುವ ಸುಮಾರು 245 ವರ‍್ಶಗಳ ಮುನ್ನವೇ (1657) ಗೋಲ ಗುಮ್ಮಟ ಅಸ್ತಿತ್ವದಲ್ಲಿತ್ತು. ಇದರ ಗುಮ್ಮಟವು ಗೋಲಾಕಾರವಾಗಿದ್ದು, ಗಡಿಯಾರದ ಟಿಕ್ ಟಿಕ್ ಶಬ್ದ, 37 ಮೀಟರ್ ವ್ಯಾಸದಶ್ಟು ದೂರವಿದ್ದವರಿಗೂ ಸ್ಪಶ್ಟವಾಗಿ ಕೇಳುತ್ತದೆ. ಹಾಗಾಗಿ ಗೋಲ ಗುಮ್ಮಟವೂ ಸಹ ಪಿಸುಮಾತಿನ ಗ್ಯಾಲರಿ ಎಂದೇ ಇಂದಿಗೂ ವಿಶ್ವ ಪ್ರಸಿದ್ದಿಯಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: barossawinetour.com.au, southaustralia.com, amusingplanet.com, expeditionaustralia.com.au, redzaustralia.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: