ಮಲೆನಾಡಿನ‌ ಶಿಕಾರಿ ಸಂಸ್ಕ್ರುತಿ : ಕಂತು-3

– ಅಮ್ರುತ್ ಬಾಳ್ಬಯ್ಲ್.

ಕಂತು-1, ಕಂತು-2

ಹಿಂದಿನ ಬರಹಗಳಲ್ಲಿ ಮಲೆನಾಡಿನ ಬೇಟೆಯ ಹಿನ್ನೆಲೆ, ಶಿಕಾರಿಯ ಹಲವು ಬಗೆ, ಕೋವಿಗಳ ಬಗೆಗೆ ಮತ್ತು ಬೇಟೆಯನ್ನು ಹೇಗೆ ಮಾಡಲಾಗುತಿತ್ತು, ಹೀಗೆ ಈ ಬಗೆಯ ಹಲವು ವಿಶಯಗಳನ್ನು ತಿಳಿದುಕೊಂಡಿದ್ದೆವು. ಈಗ ಈ ಕಂತಿನಲ್ಲಿ ಶಿಕಾರಿಯಲ್ಲಿನ ಹಲವು ಕಟ್ಟುಪಾಡುಗಳು ಮತ್ತು ಬೇಟೆ ಮಾಡಿದ ನಂತರ, ಆ ಬೇಟೆಯ ಮಾಂಸವನ್ನು ಪಾಲು ಮಾಡಿಕೊಳ್ಳುವಾಗ ಕೊಡಬೇಕಾದ ಬಗೆ ಬಗೆಯ ಪಾಲುಗಳ ಬಗೆಗಿನ ಕುತೂಹಲಕಾರಿ ವಿಶಯದ ಬಗೆಗೆ ತಿಳಿದುಕೊಳ್ಳೋಣ.

ಶಿಕಾರಿಯ ಕಟ್ಟುಪಾಡುಗಳು

ಶಿಕಾರಿಯಲ್ಲಿ ಹಲವು ಕಟ್ಟುಪಾಡುಗಳಿದ್ದವು. ಅದನ್ನು ಎಲ್ಲರೂ ಪಾಲಿಸುತ್ತಿದ್ದರು. ಕಟ್ಟುಪಾಡುಗಳು ಊರಿಂದ ಊರಿಗೆ ಸಣ್ಣ ಪ್ರಮಾಣದಲ್ಲಿ ಆಯಾ ಊರಿಗನುಸಾರ ಬದಲಾಗುತ್ತಿದ್ದವು. ಈ ಕೆಳಗ ಅಂತಹ ಹಲವು ಕಟ್ಟುಪಾಡುಗಳನ್ನು ಪಟ್ಟಿಮಾಡಲಾಗಿದೆ.

1. ಶಿಕಾರಿಗೆ ಬರುವವರು ಸರಿಯಾದ ಸಮಯಕ್ಕೆ ನಿಗದಿತ ಜಾಗಕ್ಕೆ ಬರಬೇಕಿತ್ತು.

2. ಒಮ್ಮೆ ಗುಂಡು ಹೊಡೆದ ಮೇಲೆ ಪ್ರಾಣಿ ಸತ್ತರೆ ಮರಿ ಈಡಿನ ಪಾಲಿಗೆ ಮತ್ತೆ ಗುಂಡು ಹೊಡೆಯಬಾರದು.

3. ಶಿಕಾರಿಯಲ್ಲಿ ಬಿಲ್ಲಿನವರಿಗೂ ಹಳುವಿನವರಿಗೂ ಮನಸ್ತಾಪಗಳು ಆಗುತ್ತಿದ್ದವು. ಬಿಲ್ಲಿನವರು ಆರಾಮಾಗಿ ಕೋವಿ ಹಿಡಿದು ನಿಲ್ಲುತ್ತಾರೆ ನಾವು ಮಯ್-ಕಯ್ ನೋವು ಮಾಡಿಕೊಂಡು ಕಾಡಿನಲ್ಲಿ ಒಡಾಡಿ ಪ್ರಾಣಿಗಳನ್ನು ಅಟ್ಟಿಸಿಕೊಂಡು ಬರಬೇಕು ಹಾಗಾಗಿ ಹಳುವಿನವರಿಗೆ ಮಾಂಸದಲ್ಲಿ ಹೆಚ್ಚು ಪಾಲು ಬೇಕೆಂದು ಹೇಳುತ್ತಿದ್ದರು. ಇದಕ್ಕೆ ತಕ್ಕಂತೆ ಮಾಂಸದ ಪಾಲಿನಲ್ಲಿ ನಿಯಮಗಳು ಬದಲಾಗುತ್ತಿದ್ದವು.

4. ಹಂಪಿನಲ್ಲಿ ಹಸಿಗೆ ಆಗಿ ಹುರಿದ ತುಂಡುಗಳನ್ನು ಬೇಟೆ ದೇವರಿಗೆ ಎಡೆ ಇಟ್ಟ ಮೇಲೆಯೇ ಎಲ್ಲರೂ ಬಾಡನ್ನು ತಿನ್ನಬೇಕಿತ್ತು.

5. ಊರಿನ ಪಟೇಲರಿಗೆ ಒಂದು ಮಾಂಸದ ಪಾಲು, ಪಾಳೇಗಾರರ ಮನೆತನದವರಿಗೆ ಒಂದು ಪಾಲು, ಮೊದಲು ದೊಡ್ಡ ಗುಂಡು ಹೊಡೆದವನಿಗೆ ಒಂದು ದೊಡ್ಡ ಪಾಲು ಹೀಗೆ ಮಾಂಸ ಹಂಚಿಕೆ ಆಗುತ್ತಿತ್ತು.

6. ಶಿಕಾರಿಗೆ ಹೊರಟಾಗ ಊರಿನವರಿಗೆಲ್ಲರಿಗೂ ಒಂದು ಮಾತು ಹೇಳಿಯೇ ಹೋಗುತ್ತಿದ್ದರು, ಇಲ್ಲವೇ ಶಿಕಾರಿ ಆದಮೇಲೆ ಎಲ್ಲರಿಗೂ ಒಂದು ಪಾಲು ಮಾಂಸ ಕಳುಹಿಸುತ್ತಿದ್ದರು. ಅಮೇಲೆ ಹೇಳಲಿಲ್ಲ, ನಮಗೆ ಮಾಂಸದ ಪಾಲು ಸಿಗಲಿಲ್ಲ ಎಂದು ಸಣ್ಣ ಮುನಿಸುಗಳನ್ನು ತಪ್ಪಿಸಲು ಹೀಗೆ ಮಾಡುತಿದ್ದರು.

7. ಕಾಡಿನಲ್ಲಿ ನಡೆಯುವಾಗ ಕೋವಿಯನ್ನು ಹೆಗಲಿಗೆ ಹಾಕಿ ಕೋವಿ ಬಾಯನ್ನು ಹಿಂದೆ ಮೇಲೆ ನೋಡುವಂತೆ ಹಾಕಿಕೊಳ್ಳುತ್ತಿದ್ದರು. ತಪ್ಪಾಗಿ ಮಂದಿಯ ಮೇಲೆ ಗುಂಡು ಹಾರುವುದನ್ನು ತಪ್ಪಿಸಲು ಹೀಗೆ ಮಾಡುತಿದ್ದರು.

8. ದೊಡ್ಡ ಪ್ರಾಣಿಗಳ ಬೇಟೆ ಅಂದರೆ ಹಂದಿ ಬೇಟೆ ಆದರೆ ಹಂದಿಯ ಕಿವಿಯಿಂದ ನಾಲ್ಕು ಬೆರಳು ಅಳೆದು ತಲೆ ಕಡಿದು ನಾಯಿಪಾಲು ಅಂದರೆ ನಾಯಿಗಳಿಗೆ ಮಾಂಸ ಹಾಕುತ್ತಿದ್ದರು.

ಈ ರೀತಿಯಾಗಿ ಹೀಗೆ ಅನೇಕ ಕಟ್ಟುಪಾಡುಗಳಿರುತ್ತಿದ್ದವು.

ಮಾಂಸದ ಪಾಲಿನ ಬಗೆಗಳು

1. ನೆಲದ ಪಾಲು:  ಪ್ರಾಣಿಗಳನ್ನು ಬೇರೆಯವರ ಜಮೀನಿನಲ್ಲೋ, ಜಾಗದಲ್ಲೋ ಹೊಡೆದು ಅದನ್ನು ಜಮೀನಿನ ಒಡೆಯ ನೋಡಿದರೆ ಅವರಿಗೆ ಒಂದು ಪಾಲು ಹಾಕುತ್ತಿದ್ದರು.

2. ಕೋವಿ ಪಾಲು: ಆಗ ಎಲ್ಲರ ಕಯ್ಯಲ್ಲೂ ಕೋವಿ ಇರುತ್ತಿರಲಿಲ್ಲ. ಬೇಟೆಗಾರರು ಕೋವಿ ಮಾಲೀಕರಿಂದ ಕೋವಿ ಪಡೆದು ಶಿಕಾರಿಗೆ ಹೋಗುತ್ತಿದ್ದರು. ‌ಆಗ ಶಿಕಾರಿ ಅದರೆ ಕೋವಿ ಮಾಲೀಕರಿಗೆ ಒಂದು‌ ಪಾಲು ಮಾಂಸ ಕೊಡುತ್ತಿದ್ದರು. ಇದಕ್ಕೆ ಕೋವಿ ಪಾಲು‌ ಎಂದು‌ ಹೆಸರು.

3. ನಾಯಿಪಾಲು: ನಾಯಿಗಳು ಸಹ ಬೇಟೆಯಲ್ಲಿ ಸಹಾಯ ಮಾಡುತ್ತಿದ್ದವಾದ್ದರಿಂದ, ಅವುಗಳಿಗೂ ಸಹ ಮಾಂಸದ ಪಾಲು ನೀಡುತ್ತಿದ್ದರು.

4. ಏಸಿನ‌ ಪಾಲು: ಮೊದಲು ಪ್ರಾಣಿಗೆ ಯಾರು ದೊಡ್ಡ ಗುಂಡು ಹೊಡೆಯುತ್ತಾರೋ ಅವರಿಗೆ ಈ ಪಾಲು ದಕ್ಕುತ್ತಿತ್ತು.

5. ಮರಿ ಈಡಿನ ಪಾಲು: ಕೆಲವೊಮ್ಮೆ ಪ್ರಾಣಿಗಳು‌ ಮೊದಲ ಗುಂಡಿಗೆ ಸಾಯುತ್ತಿರಲಿಲ್ಲ ಆಗ ಇನ್ನೊಬ್ಬರು ಗುಂಡು ಹೊಡೆಯುತ್ತಿದ್ದರು. ಅವರಿಗೆ ಮರಿ ಈಡಿನ ಪಾಲು ಕೊಡುತ್ತಿದ್ದರು.

6. ಬಂಟ ಹಸಿಗೆ: ಕೆಲವೊಮ್ಮೆ ಪ್ರಾಣಿಗೆ ಇಬ್ಬರು ಒಟ್ಟಿಗೆ ಈಡು ಹಾರಿಸುತ್ತಾರೆ. ಆಗ ಮೊದಲ ಗುಂಡು(ಏಸಿನ‌ ಈಡು) ಮತ್ತು ಎರಡನೇ ಗುಂಡು(ಮರಿ ಈಡು) ಗುರುತಿಸಲು ಕಶ್ಟವಾಗುತ್ತದೆ. ಆಗ ಇಬ್ಬರಿಗೂ ಸಮಪಾಲನ್ನು ಕೊಡುತ್ತಾರೆ. ಅದಕ್ಕೆ ಬಂಟ ಹಸಿಗೆ ಎನ್ನುತ್ತಾರೆ.

7. ಸೊಂಟ ಮುರ್‍ಕನ ಪಾಲು: ಪ್ರಾಣಿಗಳನ್ನು ಹೊಡೆದ ಮೇಲೆ ಹಸಿಗೆ ಮಾಡಿ, ಮಾಂಸವನ್ನು ಹಂಚಿ ಪಾಲು ಮಾಡುವವನಿಗೆ ಈ ಪಾಲು ಕೊಡುತ್ತಿದ್ದರು.

8. ಹೊರಪಾಲು: ಶಿಕಾರಿ ಮಾಡಿದ ಜಾಗದಿಂದ ಹಂಪಿನ‌ ಜಾಗಕ್ಕೆ ಪ್ರಾಣಿಯನ್ನು‌ ಹೊತ್ತು ತರುವವರಿಗೆ ಒಂದು ಪಾಲು ಕೊಡುತ್ತಿದ್ದರು.

9. ಮಂಡೆ ಪಾಲು: ಹಂದಿ ಬೇಟೆಯಾದಾಗ ಹಂದಿಯ ತಲೆಯನ್ನು ಕಡಿದು ಪಾಲು ಮಾಡಿ ಬೇಟೆನಾಯಿಗಳಿಗೆ ಕೊಡುತ್ತಿದ್ದರು. ಸಣ್ಣ ಪ್ರಾಣಿಗಳನ್ನು ಬೇಟೆಯಾಡಿದಾಗ ನಾಯಿಗಳಿಗೆ ಯಾವುದೇ ಪಾಲು ಇರುತ್ತಿರಲಿಲ್ಲ.

10. ಪಟೇಲಿ ಮರ್‍ಯಾದೆ: ಹಿಂದೆ ಪ್ರತಿ ಊರಿಗೂ ಪಟೇಲರು ಇರುತ್ತಿದ್ದರು. ಅವರ ಊರಿನ ಗಡಿಯ ಒಳಗೆ ಯಾರಾದರೂ ಶಿಕಾರಿ ಮಾಡಿದರೆ ಊರಿನ ಪಟೇಲರಿಗೆ ಒಂದು ಪಾಲು ಕೊಡಬೇಕಿತ್ತು. ಹೆಚ್ಚಾಗಿ‌ ಒಂದು ಪ್ರಾಣಿಯ ಹಿಂದಿನ ಕಾಲನ್ನು(ತೊಡೆ) ಪಾಲಾಗಿ‌ ನೀಡುತ್ತಿದ್ದರು.

11. ಚಾವಲಮನೆ ಮರ್‍ಯಾದೆ: ಊರಿನಲ್ಲಿ ಯಾರಾದರೂ ಪಾಳೇಗಾರರ ಮನೆತನದವರು ಇದ್ದರೆ ಅವರಿಗೂ ಒಂದು ಪಾಲು(ಪ್ರಾಣಿಯ ಹಿಂದಿನ‌ ಕಾಲು) ಕೊಡಬೇಕಿತ್ತು.

12. ತೊರ್‍ಡಡಿ ಪಾಲು: ಕೆಲವರು ಶಿಕಾರಿಯ ಗುಂಡಿನ ಸದ್ದು ಕೇಳಿ ಮಾಂಸದ ಆಸೆಗೆ ಈಡಿನ‌ ಜಾಗಕ್ಕೆ ಹೋಗುತ್ತಿದ್ದರು. ಆಗ ಅವರಿಗೂ ಬೇರೆಯ ಮಾರ‍್ಗ ಇಲ್ಲದೇ ಒಂದು ಪಾಲು‌ಕೊಡಬೇಕಿತ್ತು. ಶಿಕಾರಿಗೆ ಯಾವುದೇ ಸಹಾಯ ಮಾಡದೇ ಪಡೆಯುತ್ತಿದ್ದ ಒಂದು ಮುಜುಗರದ ಪಾಲು ಇದಾಗಿತ್ತು ಹಾಗಾಗಿ‌‌ ಇದಕ್ಕೆ ತೊರ್‍ಡಡಿ ಪಾಲು ಎಂದು ಹೆಸರು.

ಈ ರೀತಿಯಾಗಿ ಪಾಲನ್ನು ಪಡೆದು ಹುರಿದ ತುಂಡುಗಳನ್ನು ಬೇಟೆ ದೇವರಿಗೆ ಎಡೆ ಇಟ್ಟು, ಕೊಳ್ಳಿಯಿಂದ (ಬೆಂಕಿ ಹಚ್ಚಿದ ಮರದ ಕಟ್ಟಿಗೆ/ಉರಿಯುವ ಕಟ್ಟಿಗೆ) ದೂಪ(ಹೊಗೆ) ಹಾಕಿ ಮುಂದೆ ಇನ್ನೂ ಒಳ್ಳೆಯ ಬೇಟೆ ಆಗಲಿ ಎಂದು ಬೇಡಿಕೊಂಡು. ಹುರಿದ ತುಂಡನ್ನು ಎಲ್ಲರೂ ಸವಿದು, ಪಾಲಿಗೆ ಬಂದ ಮಾಂಸವನ್ನು ಬಾಳೆ ಎಲೆ/ಅಡಿಕೆ ಹಾಳೆಯಿಂದ ಮಾಡಿದ ಕೊಟ್ಟೆಯಲ್ಲಿ (small container) ಹಾಕಿಕೊಂಡು ಮನೆಗೆ ಮರಳುತ್ತಿದ್ದರು. ಮಲೆನಾಡಿನ ಬೇಟೆಯ ಬಗ್ಗೆ‌ ಇನ್ನೂ ಹೆಚ್ಚು ತಿಳಿದುಕೊಳ್ಳಲು ಕಡಿದಾಳು ಕೆ.ಎಸ್. ರಾಮಪ್ಪಗವುಡ ಅವರ ‘ಮಲೆನಾಡಿನ ಶಿಕಾರಿಯ ನೆನಪುಗಳು’ ಹೊತ್ತಗೆಯನ್ನು‌ ಆಸಕ್ತರು ಓದಬಹುದು.

(ಚಿತ್ರ ಸೆಲೆ: creazilla.com)

ಕಂತು-1, ಕಂತು-2

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: