ಕುಂಬಳಕಾಯಿ – ಎಲ್ಲಾ ಕಾಲದಲ್ಲಿಯೂ ಸಿಗುವಂತ ತರಕಾರಿ

– ಶ್ಯಾಮಲಶ್ರೀ.ಕೆ.ಎಸ್.

‘ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡನಂತೆ ‘.. ಎನ್ನುವ ಗಾದೆ ಮಾತನ್ನು ಬಹಳ ಸಲ ಕೇಳಿರುತ್ತೇವೆ. ತಪ್ಪು ಮಾಡಿದವ ತನ್ನ ಬಗ್ಗೆ ತಾನು ಅಪರಾದಿ ಎಂಬ ಅಳುಕಿನಿಂದ ಪರಿತಪಿಸುವ ಬಗೆ ಎಂಬುದು ಇದರ ಅರ‍್ತ ಇರಬಹುದು. ಬೆಳೆದು ನಿಂತ ಕುಂಬಳಕಾಯಿಯ ಮೇಲ್ಮೈ ಮೇಲೆ ಒಂದು ಬಗೆಯ ಬೂದಿ ಅಂಟಿಕೊಂಡಿರುತ್ತದೆ. ಹಿಂದೆ ಕಳ್ಳನೊಬ್ಬ ಕುಂಬಳಕಾಯಿಯನ್ನು ಕದ್ದು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಬಚ್ಚಿಟ್ಟನಂತೆ. ಯಾರೋ ಒಬ್ಬರು ಆತನಲ್ಲಿ ಕುಂಬಳಕಾಯಿ ಬಗ್ಗೆ ವಿಚಾರಿಸಿದಾಗ ಆತ ತನ್ನ ಹೆಗಲ ಮೇಲೆ ಕುಂಬಳಕಾಯಿಯ ಬೂದಿ ಅಂಟಿಕೊಂಡಿರಬಹುದೆಂದು ತಪ್ಪಿತಸ್ತ ಬಾವದಿಂದ ಮುಟ್ಟಿಕೊಂಡು ನೋಡಿಕೊಂಡನು ಎಂಬ ಕತೆ ಈ ಗಾದೆಯಲ್ಲಿ ಅಡಗಿದೆ.

‘ಹಗ್ಗ ಹಾಸಿದೆ ಗೂಳಿ ಮಲಗಿದೆ’ ಎಂಬುವ ಒಗಟು ಕೇಳಿದ ಕೂಡಲೇ ಕುಂಬಳಕಾಯಿ ಎನ್ನುವ ಉತ್ತರ ತಟ್ಟನೆ ನೆನಪಿಗೆ ಬರುವುದು. ಅಂದ ಹಾಗೆ ಕುಂಬಳಕಾಯಿ ಬಿಡುವುದು ಬಳ್ಳಿಯಲ್ಲಿ ಎಂಬುದು ಇಲ್ಲಿ ಸ್ಪಶ್ಟವಾಗುತ್ತದೆ. ‘ನೆಲ್ಲಿಕಾಯಿ ಮರದಲ್ಲಿಟ್ಟನು ನಮ್ಮ ಶಿವ ಕುಂಬಳಕಾಯಿ ಬಳ್ಳಿಲಿಟ್ಟನು ‘ ಎಂಬ ಸಾಲುಗಳಿರುವ ದಿವಂಗತ ಪುನೀತ್ ರಾಜಕುಮಾರ್ ರವರ ಬಾಲ್ಯದ ಚಿತ್ರದ ಹಾಡೊಂದನ್ನು( ಕಾಣದಂತೆ ಮಾಯವಾದನು ನಮ್ಮ ಶಿವ) ಇಲ್ಲಿ ಮೆಲುಕು ಹಾಕಬಹುದು. ಕುಂಬಳಕಾಯಿ ವಿಚಾರದಲ್ಲಿ ಕೆಲವೊಂದು ಮೂಡನಂಬಿಕೆಗಳು ಹೀಗಿವೆ; ಹೆಣ್ಣು ಮಕ್ಕಳು ಕುಂಬಳಕಾಯಿ ಹೊಡೆಯಬಾರದು(ಒಡೆಯಬಾರದು), ಕತ್ತರಿಸಬಾರದು. ಹಾಗೇನಾದರೂ ಕತ್ತರಿಸಿದರೆ ಅಂತಹ ಹೆಣ್ಣು ಮಕ್ಕಳಿಗೆ ಕೆಡುಕಾಗುವುದೆಂಬ ಅಬಿಪ್ರಾಯವಿದೆ. ಇವು ಕೇವಲ ನಂಬಿಕೆಯಶ್ಟೇ. ವಾಸ್ತವವಾಗಿ ಸಾಬೀತಾಗಿರುವ ಉದಾಹರಣೆಗಳಿಲ್ಲ ಎನಿಸುತ್ತದೆ. ಹಿಂದೆ ಪೂರ‍್ವಿಕರು ಮನೆಗೆ ಬರುವ ಅತಿತಿಗಳಿಗೆ ಕುಂಬಳಕಾಯಿಯಿಂದ ಸಿಹಿ ಕಾದ್ಯಗಳನ್ನು ತಯಾರಿಸಿ ತಿನ್ನಲು ನೀಡುತ್ತಿದ್ದರಂತೆ. ಬೀಗರು ನೆಂಟರಿಶ್ಟರ ಮನೆಗೆ ಹೋಗುವಾಗ ಶುಬಪಲವಾಗಿ ಕುಂಬಳಕಾಯಿಯನ್ನು ಹೊತ್ತೊಯ್ದು ನೀಡುವ ಸಂಪ್ರದಾಯ ವಿಶೇಶವಾಗಿತ್ತು. ಈಗ ಇಂತಹ ಸಂಪ್ರದಾಯಗಳು ಕಣ್ಮರೆಯಾಗಿವೆ.

ಕುಂಬಳಕಾಯಿಯ ಮೂಲ ಅಶ್ಟು ನಿರ‍್ದಿಶ್ಟವಾಗಿ ತಿಳಿದಿಲ್ಲ. ಉತ್ತರ ಅಮೇರಿಕಾ ಇರಬಹುದೆಂದು ಬಾವಿಸಲಾಗುತ್ತದೆ. ಹಳ್ಳಿಗಳ ಕಡೆ ಮನೆಯ ಹಿತ್ತಲಲ್ಲಿ, ಹೊಲದ ಬದುಗಳಲ್ಲಿ, ಬೇಲಿಯ ಅಕ್ಕಪಕ್ಕದಲ್ಲಿ ಇದರ ಬಳ್ಳಿಯು ಹರಡಿಕೊಂಡಿರುವುದನ್ನು ಕಂಡಿರಬಹುದು. ಇದಕ್ಕೆ ಅಶ್ಟಾಗಿ ಆರೈಕೆಯ ಅಗತ್ಯವಿರುವುದಿಲ್ಲ. ನೈಸರ‍್ಗಿಕವಾದ ಗೊಬ್ಬರ, ನೀರು, ಸೂರ‍್ಯನ ಬೆಳಕಿದ್ದರೆ ಸಾಕು. ಕೆಲವೊಮ್ಮೆ ನಮ್ಮ ಮನೆಯ ಕಾಂಪೌಂಡ್ ಅಕ್ಕ ಪಕ್ಕದಲ್ಲಿ ನಾವು ತಿಂದೆಸದ ಕುಂಬಳಕಾಯಿಯ ಬೀಜಗಳಿಂದಲೂ ಇದರ ಬಳ್ಳಿ ಬೆಳೆದು ಹಬ್ಬಿರುವುದನ್ನು ಗಮನಿಸಿರಬಹುದು. ಅಂದಹಾಗೆ ಕುಂಬಳಕಾಯಿಯಲ್ಲಿ ಸಾಮನ್ಯವಾಗಿ ಎರಡು ಬಗೆಗಳಿವೆ. ಒಂದು ಬೂದುಗುಂಬಳ ಮತ್ತೊಂದು ಸಿಹಿಕುಂಬಳಕಾಯಿ. ಬೂದುಗುಂಬಳ ಗೋಲಾಕರದಲ್ಲಿದ್ದು ತೊಗಟೆ ತಿಳಿ ಹಸಿರು ಬಣ್ಣದಲ್ಲಿರುತ್ತದೆ ಹಾಗೂ ಅದರ ಮೇಲೆ ಬೂದಿಯಂತೆ ಪುಡಿ ಅಂಟಿಕೊಂಡಿರುತ್ತದೆ. ತಿರುಳು ಬಿಳಿ ಬಣ್ಣದಲ್ಲಿರಲಿದ್ದು, ಬೀಜಗಳಿಂದ ಕೂಡಿರುತ್ತದೆ. ಬೂದುಗುಂಬಳವನ್ನು ದ್ರುಶ್ಟಿ ತೆಗೆಯಲು, ಹೊಸ ಮನೆ, ಕಟ್ಟಡಗಳ ಮುಂದೆ ದುಶ್ಟ ಶಕ್ತಿಗಳು ಒಳಬರದಂತೆ ತಡೆಹಿಡಿಯಲು ತೂಗು ಹಾಕುವುದನ್ನು ತುಂಬಾ ಕಡೆ ನೋಡಿರುತ್ತೇವೆ. ಇನ್ನು ಈ ಬೂದುಗುಂಬಳವನ್ನು ಕೆಲವೆಡೆ ವಾಮಾಚಾರಗಳಂತಹ ದುಶ್ಟ ಚಟುವಟಿಕೆಗಳಿಗೆ ಬಳಸಿಕೊಂಡು ರಸ್ತೆ ಮದ್ಯ ಅಲ್ಲಲ್ಲಿ ಎಸೆಯುದನ್ನು ಸಹ ಕಾಣಬಹುದು. ಆಯುದಪೂಜಾ ಹಬ್ಬದ ವೇಳೆಯಲ್ಲಿ ವಾಹನಗಳಿಗೆ ದ್ರುಶ್ಟಿ ತೆಗೆಯಲು ಪೂಜೆಯ ನಂತರ ಒಡೆಯಲು ಬಳಕೆಯಾಗುತ್ತದೆ. ಅನೇಕ ಸುಪ್ರಸಿದ್ದ ದೇವಾಲಯಗಳಲ್ಲಿ ಪ್ರಸಾದವಾಗಿ ಬಕ್ತರಿಗೆ ಅನ್ನದ ಜೊತೆ ಬೂದುಗುಂಬಳಕಾಯಿ ಹುಳಿಯನ್ನು ಬಡಿಸಲಾಗುವುದು. ಮನೆಗಳಲ್ಲಿ ತಯಾರಿಸುವ ಬೂದುಗುಂಬಳ ಕಾಯಿ ಹುಳಿ, ಪಲ್ಯ, ಮಜ್ಜಿಗೆ ಹುಳಿ, ಹಲ್ವಾ, ದೋಸೆ ಹೀಗೆ ಬಗೆಬಗೆಯ ತಿನಿಸುಗಳು ಬಹಳ ರುಚಿಕಟ್ಟಾಗಿರುತ್ತವೆ. ದಕ್ಶಿಣ ಬಾರತದಲ್ಲಿನ ವೈವಿದ್ಯಮಯ ರುಚಿಕರ ಅಡುಗೆಗೆ ಬೂದುಗುಂಬಳ ಕಾಯಿಯ ಪಾತ್ರ ಹಿರಿದು. ಕ್ಶಯ ರೋಗಿಗಳಿಗೆ, ಹ್ರುದಯ ಸಂಬಂದೀ ರೋಗಿಗಳಿಗೆ ಬೂದುಗುಂಬಳ ಕಾಯಿ ತುಂಬಾ ಒಳ್ಳೆಯದು ಎನ್ನುತ್ತಾರೆ ಹಿರಿಯರು. ನಿಶ್ಯಕ್ತಿಗೂ ತುಂಬಾ ಅನುಕೂಲಕಾರಿ.

ಸಿಹಿಕುಂಬಳಕಾಯಿ ನೋಡಲು ವ್ರುತ್ತಾಕಾರದಲ್ಲಿದ್ದು ಅದರ ತೊಗಟೆ ಕಡು ಹಸಿರಿನ ಬಣ್ಣದ್ದಾಗಿರುತ್ತದೆ. ಕಾಯಿ ಮಾಗುತ್ತ ಪೂರ‍್ತಿ ಹಣ್ಣಾದ ಮೇಲೆ ಕೇಸರಿ ಬಣ್ಣಕ್ಕೆ ತಿರಗುವುದು, ತಿರುಳು ಹಳದಿ ಅತವಾ ಕಿತ್ತಳೆ ಬಣ್ಣದಲ್ಲಿದ್ದು ಬೀಜಗಳಿಂದ ತುಂಬಿರುತ್ತದೆ. ಈ ಕಿತ್ತಳೆ ಬಣ್ಣಕ್ಕೆ ಕ್ಯಾರೋಟಿನಾಯ್ಡ್ ಎಂಬ ಅಂಶವೇ ಕಾರಣ. ಹಳ್ಳಿ ಶೈಲಿಯಲ್ಲಿ ಮಾಡುವ ಅಕ್ಕಿ ರೊಟ್ಟಿ ಜೊತೆ ಇದರ ಪಲ್ಯ ಸೊಗಸಾದ ರುಚಿ ಕೊಡುತ್ತದೆ. ಇದರ ಪಾಯಸ ಕೂಡ ಅಶ್ಟೇ ಸ್ವಾದಬರಿತವಾಗಿರುತ್ತದೆ . ಇದರಿಂದ ರುಚಿಯಾದ ಬಸ್ಸಾರನ್ನು ಮಾಡಿ ಸವಿಯಬಹುದು. ಸಿಹಿ ಕುಂಬಳಕಾಯಿ ಬಳ್ಳಿಯ ಎಲೆ ಅತವಾ ಕುಂಬಳ ಸೊಪ್ಪನ್ನು ಬಳಸಿ ನಾಲಿಗೆಗೆ ಹಿತವಾದ ಬಸ್ಸಾರು ಮತ್ತು ಮಸೆದ ಸೊಪ್ಪಿನ ಸಾಂಬಾರ್ ನ್ನು ತಯಾರಿಸಬಹುದಾಗಿದೆ. ವಿಟಮಿನ್ ‘ಎ’ ಸಮ್ರುದ್ದವಾಗಿರುವ ಸಿಹಿ ಕುಂಬಳ ಕಣ್ಣಿಗೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ರೋಗನಿರೋದಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾಗಿದೆ. ನಾನಾ ರೋಗಗಳಿಗೆ ರಾಮಬಾಣವಾಗಿರುವ ಕುಂಬಳಕಾಯಿಯ ವೈದ್ಯಕೀಯ ಗುಣ ಮೆಚ್ಚತಕ್ಕದ್ದು. ಹೊನ್ನಿನ ಬಣ್ಣದ ಈ ಕುಂಬಳಕಾಯಿಯ ಬಳಕೆ ನಗರಗಳಲ್ಲಿ ಅಶ್ಟಕ್ಕಶ್ಟೇ ಎಂದೆನಿಸುತ್ತದೆ. ಬಾರತಕ್ಕಿಂತ ಹೊರಗಿನ ಅಮೇರಿಕಾದಲ್ಲಿ ಇದರ ಬೇಡಿಕೆ ವ್ಯಾಪಕವಾಗಿದೆ. ನಮ್ಮ ನಾಡಿನಲ್ಲಿ ಸುಲಬ ದರದಲ್ಲಿ, ಎಲ್ಲಾ ಕಾಲದಲ್ಲಿಯೂ ಸಿಗುವಂತ ತರಕಾರಿಗಳ ಪಟ್ಟಿಗೆ ಸೇರಿದೆ ಕುಂಬಳಕಾಯಿ.

( ಚಿತ್ರಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Jeevan says:

    ಕನ್ನಡದಲ್ಲಿ ಹೀಗೆ ಒಳ್ಳೆ ಅರಿವುಗಳನ್ನು ತರುತ್ತಲಿರಿ.

Jeevan ಗೆ ಅನಿಸಿಕೆ ನೀಡಿ Cancel reply

%d bloggers like this: