ಕವಿತೆ: ಗೋರಿ ನನ್ನದಲ್ಲ

– ವೆಂಕಟೇಶ ಚಾಗಿ.

ಒಲವು, ವಿದಾಯ, Love,

ಕನಸುಗಳನ್ನು ಕಟ್ಟಿದ್ದೇನೆ
ಆದರೆ ಗೋರಿಯನ್ನಲ್ಲ
ಈಗ ಅವಳ ಹ್ರುದಯದಲ್ಲಿ
ನಾನು ಸತ್ತಿದ್ದೇನೆ
ನೆನಪಿನಲ್ಲಿ ಇರಲಿ ಎಂದು
ಗೋರಿ ಕಟ್ಟಲಾಗಿಲ್ಲ
ನನಗೆ ನಾನೇ ಕಟ್ಟಿಕೊಂಡಿದ್ದೇನೆ
ಆದರೆ ಆ ಗೋರಿ ನನ್ನದಲ್ಲ

ಬಡಬಡಿಸುವ ಜಾಯಮಾನ ನನ್ನದು
ಅದು ಈಗಲೂ ಆಗಲು
ಯಾವಾಗಲೂ ಸರಿ
ಅವಳ ಹೆಸರನ್ನೇ ಕೂಗಿ ಕರೆವೆ
ಕನಸುಗಳು ಇನ್ನೂ
ಕನಸಾಗಿಯೇ ಉಳಿದಿವೆ
ಕನಸುಗಳಲ್ಲಿ ನಾನು ಇರುವೆ
ಆದರೆ ಆ ಗೋರಿ ನನ್ನದಲ್ಲ

ಅವಳ ಮನದ ಅಂತಪುರದಲ್ಲಿ
ಸೇವಕನಾದರೂ ಸರಿ
ಕಶ್ಟಗಳ ಸಹಿಸುವ
ಸಹನಾ ಮೂರ‍್ತಿಯಾಗಿಬಿಡುವೆ
ಗೋರಿ ಒಳಗೆ ನನಗೆ ಅದಿಕಾರವಿಲ್ಲ
ಸರ‍್ವಸ್ವಕ್ಕೂ ಅದಿಕಾರಿ ಅವಳೇ
ಕೊನೆವರೆಗೂ ಅವಳೇ
ಆದರೆ ಆ ಗೋರಿ ನನ್ನದಲ್ಲ

ಅವಳು ಮುದಿದುಕೊಂಡ ಹೂವು
ಈಗ ಗೋರಿ ಮೇಲಿದೆ
ಹೂ ಇನ್ನೂ ಬಾಡಿಲ್ಲ
ಕಾರಣ ಅದರ ಸುತ್ತ ಕನಸಿನ ಬಲೆ
ಸುಗಂದದೊಂದಿಗೆ ಅವಳನ್ನೆ ಸುತ್ತುತ್ತಿರುವೆ
ಈಗಲೂ ಅವಳ ಉಸಿರಿನೊಂದಿಗೆ
ಅವಳ ಹ್ರುದಯದೊಳಗೆ ಇಳಿದು
ಆದರೆ ಆ ಗೋರಿ ನನ್ನದಲ್ಲ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: