ಚೆನ್ನಬಸವಣ್ಣನ ವಚನಗಳ ಓದು – 3ನೆಯ ಕಂತು
– ಸಿ.ಪಿ.ನಾಗರಾಜ.
ಅರ್ಥ ಮದ
ಅಹಂಕಾರ ಮದ
ಕುಲ ಮದ ಬಿಡದೆ
ಸಮಯಾಚಾರ ಸಮಯ ಭಕ್ತಿ
ಇನ್ನಾರಿಗೆಯೂ ಅಳವಡದು ನೋಡಾ
ಮಾತಿನ ಮಾತಿನ ಮಿಂಚಿನ ಡಾಳಕರಿಗೆ
ಸಮಯ ಭಕ್ತಿ ಇನ್ನೆಲ್ಲಿಯದೊ
ಕೂಡಲ ಚೆನ್ನಸಂಗಯ್ಯಾ
ಸಿರಿವಂತಿಕೆಯ ಸೊಕ್ಕು, ಜಾತಿ ಮೇಲರಿಮೆಯ ಹಮ್ಮು ಮತ್ತು ನಾವೇ ದೊಡ್ಡವರೆಂಬ ಅಹಂಕಾರವುಳ್ಳ ವ್ಯಕ್ತಿಗಳು ಒಳ್ಳೆಯ ನಡೆನುಡಿಯನ್ನು ಹೊಂದಿರುವುದಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ. ‘ಜಾತಿ ಮೇಲರಿಮೆ’ ಎಂದರೆ ನನ್ನ ಜಾತಿಯೇ ಇನ್ನುಳಿದ ಜಾತಿಗಳಿಗಿಂತ ಮೇಲು ಎಂಬ ಒಳಮಿಡಿತ;
ಅರ್ಥ=ಹಣ/ಸಂಪತ್ತು/ಆಸ್ತಿ/ಒಡವೆ ವಸ್ತು; ಮದ=ಸೊಕ್ಕು/ಗರ್‍ವ;
ಅರ್ಥ ಮದ=ಅಪಾರವಾದ ಸಂಪತ್ತಿಗೆ ತಾನು ಒಡೆಯನಾಗಿದ್ದೇನೆ ಎಂಬ ಸೊಕ್ಕಿನ ನಡೆನುಡಿ;
ಅಹಂಕಾರ=ಹಮ್ಮು; ಅಹಂಕಾರ ಮದ=ಎಲ್ಲರಿಗಿಂತ ನಾನೇ ದೊಡ್ಡವನು/ನಾನೇ ತಿಳಿದವನು/ನಾನೇ ಸಂಪತ್ತುಳ್ಳವನು/ನಾನೇ ಉನ್ನತ ಗದ್ದುಗೆಯಲ್ಲಿರುವವನು/ನನ್ನಿಂದಲೇ ಎಲ್ಲವೂ ನಡೆಯುತ್ತಿದೆ ಎಂಬ ಸೊಕ್ಕಿನ ನಡೆನುಡಿ;
ಕುಲ=ಜಾತಿ; ಕುಲ ಮದ=ನೂರೆಂಟು ಬಗೆಯ ಜಾತಿಗಳ ಮೆಟ್ಟಿಲುಗಳಿಂದ ಕೂಡಿರುವ ಸಮಾಜದಲ್ಲಿ ತಾನು ಹುಟ್ಟಿ ಬೆಳೆದು ಬಾಳುತ್ತಿರುವ ಜಾತಿಯೇ ಇನ್ನುಳಿದ ಜಾತಿಗಳಿಗಿಂತ ಮೇಲು ಎಂಬ ಸೊಕ್ಕಿನ ನಡೆನುಡಿ;
ಅರ್ಥ ಮದ ಅಹಂಕಾರ ಮದ ಕುಲ ಮದ ಬಿಡದೆ=ವ್ಯಕ್ತಿಯು ಸಿರಿವಂತಿಕೆಯ, ನಾನತ್ವದ ಮತ್ತು ಜಾತಿ ಮೇಲರಿಮೆಯ ಸೊಕ್ಕಿನ ನಡೆನುಡಿಗಳನ್ನು ಬಿಟ್ಟು, ಸಮಾಜದಲ್ಲಿ ಎಲ್ಲರನ್ನು ಸಮಾನವಾಗಿ ಕಾಣುತ್ತ, ಎಲ್ಲರೊಡನೆ ಪ್ರೀತಿ, ಕರುಣೆ ಮತ್ತು ಗೆಳೆತನದಿಂದ ಜತೆಗೂಡಿ ಬಾಳದಿದ್ದರೆ;
ಸಮಯ+ಆಚಾರ; ಸಮಯ=ದರ್‍ಮ; ಆಚಾರ=ನಡೆನುಡಿ;
ಸಮಯಾಚಾರ=ದರ್‍ಮದ ನಡೆನುಡಿ. ಅಂದರೆ ವ್ಯಕ್ತಿಯು ತನ್ನ ಮತ್ತು ತನ್ನ ಕುಟುಂಬದ ಒಳಿತಿಗಾಗಿ ಬಾಳುವಂತೆಯೇ ಸಹಮಾನವರ ಮತ್ತು ಸಮಾಜದ ಒಳಿತಿಗಾಗಿಯೂ ಒಳ್ಳೆಯ ನಡೆನುಡಿಯಿಂದ ಬಾಳುವುದು; ಭಕ್ತಿ=ಒಳ್ಳೆಯ ನಡೆನುಡಿಗಳನ್ನೇ ದೇವರೆಂದು ತಿಳಿದು ಬಾಳುವುದು;
ಇನ್ನು+ಆರಿಗೆಯೂ; ಆರು=ಯಾರು; ಆರಿಗೆಯೂ=ಯಾರೊಬ್ಬರಿಗೂ; ಅಳವಡು=ಒಪ್ಪು/ಹೊಂದಿಕೆಯಾಗು; ನೋಡಾ=ಯಾವುದು ಸರಿ-ಯಾವುದು ತಪ್ಪು ಎಂಬುದನ್ನು ಒರೆಹಚ್ಚಿ ನೋಡು;
ಸಮಯಾಚಾರ ಸಮಯ ಭಕ್ತಿ ಇನ್ನಾರಿಗೆಯೂ ಅಳವಡದು ನೋಡಾ=ನಿಜ ಜೀವನದಲ್ಲಿ ಯಾರು ಸೊಕ್ಕಿನ ನಡೆನುಡಿಯಿಂದ ಕೂಡಿರುತ್ತಾರೆಯೋ ಅಂತಹ ವ್ಯಕ್ತಿಗಳ ನಡೆನುಡಿಯಲ್ಲಿ ಪ್ರೀತಿ ಕರುಣೆ ಗೆಳೆತನದ ಮಾನವೀಯ ಗುಣಗಳು ಕಂಡುಬರುವುದಿಲ್ಲ;
ಮಿಂಚು=ಹೊಳೆ/ಪ್ರಕಾಶಿಸು; ಡಾಳಕ=ತೋರಿಕೆಯ ನಡೆನುಡಿಯುಳ್ಳವನು/ಹೊರಗೊಂದು ಒಳಗೊಂದು ಬಗೆಯ ಗುಣವುಳ್ಳ ವಂಚಕ/ಮೋಸಗಾರ;
ಮಾತಿನ ಮಾತಿನ ಮಿಂಚಿನ ಡಾಳಕರು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ. ಜನರು ಮೆಚ್ಚುವಂತೆ ಸೊಗಸಾದ ಮಾತುಗಳನ್ನು ಆಡುತ್ತ, ಜನರನ್ನು ಮರುಳುಮಾಡಿ, ಅವರನ್ನು ವಂಚಿಸುವ ಕಲೆಯಲ್ಲಿ ಪರಿಣತರಾದವರು;
ಇನ್ನು+ಎಲ್ಲಿಯದೊ; ಎಲ್ಲಿಯದೊ=ಎಲ್ಲಿಂದ ದೊರಕುತ್ತದೆ/ಯಾವ ರೀತಿ ದೊರೆಯುತ್ತದೆ;
ಮಾತಿನ ಮಾತಿನ ಮಿಂಚಿನ ಡಾಳಕರಿಗೆ ಸಮಯ ಭಕ್ತಿ ಇನ್ನೆಲ್ಲಿಯದೊ=ಮಾತಿನ ಮೋಡಿಯಿಂದಲೇ ಸುಳ್ಳನ್ನೇ ನಿಜವೆಂದು ಜನರನ್ನು ನಂಬಿಸಿ, ವಂಚಿಸುವ ನೀಚ ವ್ಯಕ್ತಿಗಳು ಯಾವ ರೀತಿಯಿಂದಲೂ ಒಳ್ಳೆಯ ನಡೆನುಡಿಯನ್ನು ಹೊಂದಿರುವುದಿಲ್ಲ;
ಕೂಡಲಚೆನ್ನಸಂಗಯ್ಯ=ಶಿವ/ಚೆನ್ನಬಸವಣ್ಣನವರ ವಚನಗಳ ಅಂಕಿತನಾಮ;
( ಚಿತ್ರ ಸೆಲೆ: lingayatreligion.com )
ಇತ್ತೀಚಿನ ಅನಿಸಿಕೆಗಳು