ಹೊನಲುವಿಗೆ 10 ವರುಶ ತುಂಬಿದ ನಲಿವು

ಹೊನಲು ತಂಡ.

ಪ್ರತಿದಿನವೂ ಹೊಸ ಹೊಸ ವಿಶಯಗಳ ಕುರಿತ ಬರಹಗಳನ್ನು ಹೊತ್ತು ಓದುಗರಿಗೆ ಮಾಹಿತಿಯೊಂದಿಗೆ ಮನರಂಜನೆಯ ರಸದೌತಣವನ್ನು ನೀಡುತ್ತಿರುವ ಹೊನಲು ಆನ್‌ಲೈನ್ ಮ್ಯಾಗಜೀನ್‌ಗೆ ಇಂದು ಹುಟ್ಟು ಹಬ್ಬದ ಸಡಗರ. ನುರಿತ ಬರಹಗಾರರಿಂದ ಓದುಗರಿಗಾಗಿ ಮಾಹಿತಿಪೂರ್‍ಣ ಬರಹಗಳನ್ನು ತರುವುದರೊಟ್ಟಿಗೆ ಹೊಸ ಬರಹಗಾರರಿಗೆ ವೇದಿಕೆಯಾಗಿ ನಡೆಯುತ್ತಿರುವ ಹೊನಲು ಮಿಂದಾಣ ಇಂದಿಗೆ ಹತ್ತು ವರುಶಗಳನ್ನು ಪೂರೈಸಿದೆ.

ಹತ್ತು ವರುಶಗಳು –  ಹೊನಲು ನಡೆದು ಬಂದ ಹಾದಿ

2013ರ ಇದೇ ದಿನ ಶುರುವಾದ ಹೊನಲು ನೂರಾರು ವಿಶಯಗಳ ಕುರಿತ ಇಲ್ಲಿಯವರೆಗೆ 4,000ಕ್ಕೂ ಹೆಚ್ಚು ಬರಹಗಳನ್ನು ಹೊತ್ತು ತಂದಿದೆ. ಇಲ್ಲಿಯವರೆಗೆ ಬರಹಗಾರರು ಎಡೆಬಿಡದೆ ತಮ್ಮ ಬರಹಗಳನ್ನು ಮೂಡಿಸುತ್ತ ಬಂದಿದ್ದಾರೆ. ಕಳೆದ 10 ವರುಶಗಳ ನಮ್ಮ ನಡಿಗೆಯಲ್ಲಿ ಜೊತೆಯಾದ ಬರಹಗಾರರು ಸುಮಾರು 350 ಮಂದಿ. ಇವರಲ್ಲಿ 7 ಬರಹಗಾರರು 100 ಕ್ಕಿಂತ ಹೆಚ್ಚು ಬರಹಗಳನ್ನು ಮಾಡಿದ್ದರೆ, 15ಕ್ಕೂ ಹೆಚ್ಚಿನ ಮಂದಿ 50ಕ್ಕಿಂತ ಹೆಚ್ಚು ಬರಹಗಳನ್ನು ಮಾಡಿದ್ದಾರೆ. 25ಕ್ಕಿಂತ ಹೆಚ್ಚು ಬರಹಗಳನ್ನು ಮಾಡಿದ ಬರಹಗಾರರ ಎಣಿಕೆ 20ಕ್ಕೂ ಹೆಚ್ಚಿದೆ. ದಿನಗಳೆದಂತೆ ಹೊನಲಿನ ಬಳಗ ಸೇರುತ್ತಿರುವವರ ಎಣಿಕೆ ಬೆಳೆಯುತ್ತಲೇ ಇದೆ. ಇದು ನಮಗೆ ತುಂಬಾ ನಲಿವು ನೀಡುತ್ತಿರುವ ಸಂಗತಿ.

ಮಾಹಿತಿ ಕಣಜ ಹೊನಲು

ಕತೆ, ಕವಿತೆ, ಅಡುಗೆ, ವಚನಗಳಾದಿಯಾಗಿ ಆಟೋಟ, ವಿಜ್ನಾನ, ಹೊಸ ಸಂಶೋದನೆಗಳ ಕುರಿತ ಬಹಳಶ್ಟು ಬರಹಗಳಿಲ್ಲಿವೆ. ಹೊನಲಿನಲ್ಲಿರುವ ಬರಹಗಳು ಹಾಗೂ ಬರಹಗಾರರ ಎಣಿಕೆಯಲ್ಲಿ ನಲ್ಬರಹಗಳದ್ದೇ ಸಿಂಹಪಾಲು. ನಲ್ಬರಹದ ಕವಲಿನಲ್ಲಿ ಕತೆ, ಕವಿತೆ, ಮರೆತುಹೋದ ಎಳವೆಯ ದಿನಗಳನ್ನು ನೆನೆಯುವ ಬರಹಗಳಿವೆ. ಇಲ್ಲಿ ಎಳೆಯರಿಗೂ ಕತೆ, ಕವಿತೆಗಳಿವೆ! ಪತ್ತೇದಾರಿ ಕತೆಗಳು, ಎಲ್ಲರಿಗೂ ಸುಳುವಾಗಿ ತಿಳಿಯುವಂತೆ, ಹುರುಳು ಸಮೇತ ವಿವರಿಸುವಂತ ಹಳಗನ್ನಡ ಕಾವ್ಯದ ಓದು, ವಚನಗಳ ಓದು, ಕುವೆಂಪುರವರ ಕವನಗಳ ಓದು ಬಹಳಶ್ಟು ಮಂದಿಯ ಮೆಚ್ಚುಗೆ ಪಡೆದಿವೆ.

ಕರ್‍ನಾಟಕ ಮಾತ್ರವಲ್ಲದೆ, ಹೊರನಾಡುಗಳ ಕುರಿತ ಸುತ್ತಾಟದ ಬರಹಗಳು, ಬೇರೆ ಬೇರೆ ನಾಡುಗಳ ಅಚ್ಚರಿಯ ಸಂಗತಿಗಳು, ಹಳಮೆಯ ಕುರಿತ ಬರಹಗಳು ನಾಡು ಕವಲಿನಲ್ಲಿವೆ. ಅರಿಮೆ ಕವಲಿನಲ್ಲಿ ಕಾರುಗಳು, ತಂತ್ರಜ್ನಾನದಲ್ಲಿ ವಿಶೇಶ ಆಸಕ್ತಿ ಇರುವವರಿಗಾಗಿ ಮಾಹಿತಿಪೂರ್‍ಣ ಬರಹಗಳಿವೆ. ತಂತ್ರಜ್ನಾನದಲ್ಲಿನ ಮೂಡಿಬರುತ್ತಿರುವ ಹೊಸ ಮಾಡುಗೆಗಳು, ಗ್ಯಾಜೆಟ್‌ಗಳು, ಬಿಟ್‌ಕಾಯಿನ್, ಇಸ್ರೇಲಿನ ಕಾವಲಿನ ಏರ್‍ಪಾಡಾದ ಐರನ್ ಡೋಮ್, ಟೊರೆಂಟ್‌ನಂತಹ ಆಳವಾದ ಅರಿಮೆ ವಿಶಯಗಳು ಎಲ್ಲರಿಗೂ ತಲಪುವಂತೆ ಮೂಡಿಬಂದಿವೆ. ಮೋಡ ಸಿಡಿತ, ಸ್ಪೇಸ್‌ ಎಕ್ಸ್, ಮೆಟಾವರ್‍ಸ್, ತಳಮಳ ಸಿದ್ದಾಂತ, ತಿರುಗುಬಾಣ (ಬೂಮರ್‍ಯಾಂಗ್) ಹೀಗೆ ಸಾಕಶ್ಟು ಅರಿಮೆಯ ಬರಹಗಳು ಹೊನಲಿನಲ್ಲಿವೆ. ಹೊನಲಿನಲ್ಲಿರುವ ಹಲವಾರು ಮಾಹಿತಿಪೂರ್‍ಣ ಬರಹಗಳು ಶಾಲೆ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ ಹಾಗೂ ಕಲಿಸುಗರಿಗೆ ನೆರವಾಗುತ್ತಿವೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ.

ಅಡುಗೆ, ಆಟೋಟ, ಬೇರೆ ಬೇರೆ ನಾಡುಗಳ ಅಚ್ಚರಿಯೆನಿಸುವ ಆಚರಣೆ, ಸಂಪ್ರದಾಯಗಳ ಕುರಿತ ಬರಹಗಳು ನಡೆನುಡಿ ಕವಲಿನಲ್ಲಿವೆ. ಆಟೋಟದ ಕವಲಿನಲ್ಲಿ ನಾಡಿನ ಹಿರಿ-ಕಿರಿಯ ಆಟಗಾರರ ಕುರಿತ ಸಾಕಶ್ಟು ಬರಹಗಳು ಇಲ್ಲಿವೆ. 275ಕ್ಕೂ ಹೆಚ್ಚು ಸೋಜಿಗದ ಸಂಗತಿಗಳ ಕುರಿತ ಬರಹಗಳು ಹೊನಲು ಮಿಂದಾಣದಲ್ಲಿವೆ. ಕಳೆದ ಹಲವಾರು ವರುಶಗಳಿಂದ ಒಂದು ದಿನವೂ ತಪ್ಪದಂತೆ ಬರಹಗಳು ಹೊನಲಿನಲ್ಲಿ ಮೂಡಿಬಂದಿವೆ. ಹೊನಲಿನ ಹರವು ಬೆಳೆಯುತ್ತಲೇ ಇದೆ. ದೇಶ ವಿದೇಶಗಳಿಂದ ಕನ್ನಡಿಗರು ಹೊನಲಿನ ಬರಹಗಳನ್ನು ಓದುತ್ತಿದ್ದಾರೆ. ಕರ್‍ನಾಟಕದ ಮೂಲೆಮೂಲೆಯಿಂದ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿರುವ ಬರಹಗಾರರು ತಮಗೆ ತಿಳಿದಿರುವ ವಿಶಯಗಳ ಹೂರಣವನ್ನು ಕನ್ನಡಿಗರೆಲ್ಲರಿಗೂ ಉಣಬಡಿಸುತ್ತಿದ್ದಾರೆ.

ಹತ್ತು ವರುಶಗಳ ಇಂತಹ ದೊಡ್ಡ ಮೈಲುಗಲ್ಲು ತಲುಪಿರಲು ಸಾದ್ಯವಾಗಿರುವುದು ಬರಹಗಾರರ ಹುಮ್ಮಸ್ಸು, ಓದುಗರ ಬೆಂಬಲದಿಂದ. ಹೊನಲಿಗಾಗಿ ಹೊತ್ತು ಕೊಟ್ಟು ದಿನವೂ ಬರಹಗಳನ್ನು ಮಾಡುತ್ತಿರುವ ಎಲ್ಲ ಬರಹಗಾರರಿಗೂ, ಹಾಗೆಯೇ ಬರಹಗಾರರಿಗೆ ಮೆಚ್ಚುಗೆ ಮತ್ತು ಬೆಂಬಲ ನೀಡುತ್ತಿರುವ ಎಲ್ಲ ಓದುಗರಿಗೂ, ಬೆಂಬಲಿಗರಿಗೂ ನಮ್ಮ ಮನದಾಳದ ನನ್ನಿ. ಹೊನಲಿನ ಬರಹಗಳನ್ನು ಹಂಚಿಕೊಳ್ಳುವ ಮೂಲಕ ಹೊನಲನ್ನು ಹೆಚ್ಚು ಮಂದಿಗೆ ತಲುಪಿಸುವಲ್ಲಿ ಓದುಗ ಮತ್ತು ಬೆಂಬಲಿಗ ಬಳಗದ ಅಪಾರ ಕೊಡುಗೆಯಿದೆ. ನಮ್ಮೆಲ್ಲ ಬರಹಗಾರರಿಗೂ, ಓದುಗರಿಗೂ, ಹಿತೈಶಿಗಳಿಗೂ ಮತ್ತೊಮ್ಮೆ ವಂದಿಸುವೆವು. ಹೊನಲಿಗೆ ನಿಮ್ಮ ಬೆಂಬಲ ಹೀಗೆಯೇ ಮುಂದುವರೆಯುತ್ತಿರಲಿ.

ಪೇಸ್‌ಬುಕ್‌ ಪುಟ : https://www.facebook.com/honalu.mimbagilu
ಟ್ವಿಟರ್ ಗೂಡು : https://twitter.com/honalunet
ಇನ್‌ಸ್ಟಾಗ್ರಾಂ: https://www.instagram.com/honalunet
ಹೊನಲು ಬಳಕ : https://play.google.com/store/apps/details?id=com.honalu

ನಿಮಗೆ ಹಿಡಿಸಬಹುದಾದ ಬರಹಗಳು

8 Responses

 1. Dr. VINODHA [ KANNADA ] says:

  ಹೊನಲು ಹತ್ತು ವರ್ಷ ಯಶಸ್ವಿಯಾಗಿ ಪೂರೈಸಿದ ಈ ಸುಸಂದರ್ಭದಲ್ಲಿ ಹಾರ್ದಿಕ ಅಭಿನಂದನೆ ಗಳು..

 2. M âñd M says:

  ಅಭಿನಂದನೆಗಳು

 3. ಅಬಿನಂದನೆಗಳು ಹೊನಲು. ಹತ್ತು ವರುಶಗಳಿಂದ ಮಾಹಿತಿಗಳ ಹೊನಲನ್ನೇ ಹರಿಸುತ್ತಿದೆ. ಹೀಗೇ ಮುಂದುವರೆಯಲಿ…

 4. C.P.Nagaraja says:

  10 ವರುಶಗಳಿಂದಲೂ ನನ್ನ ಓದು ಬರಹಕ್ಕೆ ಆಸರೆಯಾಗಿ ಉತ್ತೇಜನವನ್ನು ನೀಡುತ್ತಿರುವ ಹೊನಲು ಪತ್ರಿಕೆಯ ಸಂಪಾದಕ ವರ್ಗದವರಿಗೆ ಮತ್ತು ಓದುಗರಿಗೆ ವಂದನೆಗಳು. ಸಿ. ಪಿ.ನಾಗರಾಜ

 5. Raghuramu N.V. says:

  ಹಾರ್ದಿಕ ಅಭಿನಂದನೆಗಳು

 6. Ashoka.P.Honkeri says:

  ‘ಹೊನಲು’ ನನ್ನ ಸಾಕಷ್ಟು ಬರಹಗಳನ್ನು ಪ್ರಕಟಿಸಿ ಪ್ರೊತ್ಸಾಹಿಸಿದೆ. ಇಂತಹ ಸೃಜನ ಸಾಹಿತ್ಯ ಜಾಲ ತಾಣಕ್ಕೆ ಹತ್ತು ವರ್ಷ ತುಂಬಿ ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ ನಮ್ಮ ಹೃದಯಪೂರ್ವಕ ಅಭಿನಂಧನೆಗಳು ತಿಳಿಸುತ್ತೇನೆ.

  ಧನ್ಯವಾದಗಳು.

 7. Sindhu Bhargava says:

  ಅಭಿನಂದನೆಗಳು🌹 ನಮಗೂ ಬರೆಯಲು ಅವಕಾಶ ನೀಡಿ ಪ್ರೋತ್ಸಾಹಿಸಿದ್ದೀರಿ. ಶುಭಹಾರೈಕೆಗಳು💐 ಸಿಂಧು.

 8. Tulasi says:

  ಶುಭಾಶಯ. ನಮಗೂ ಅವಕಾಶ ನೀಡಿ ಪ್ರೋತ್ಸಾಹಿಸಿದಕ್ಕೆ‌.

ಅನಿಸಿಕೆ ಬರೆಯಿರಿ:

%d bloggers like this: