ದಿ ರಾಕ್ ರೆಸ್ಟೋರೆಂಟ್: ಕಡಲ ಮೇಲೊಂದು ಮನೆ

– .


ದಿ ರಾಕ್ ರೆಸ್ಟೋರೆಂಟ್ ಎಂಬ ಸರಳ ಹೆಸರನ್ನು ಹೊಂದಿರುವ ಜಾಂಜಿಬಾರ‍್ನ ಈ ರೆಸ್ಟೋರೆಂಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಅತಿ ದೊಡ್ಡ ಆಕರ‍್ಶಣೀಯ ಕೇಂದ್ರವಾಗಿದೆ. ಏಳು ಮೀಟರ್ ಎತ್ತರದ ಬಂಡೆಯ ಮೇಲೆ ಇದನ್ನು ಕಟ್ಟಲಾಗಿದೆ. ರಾಕ್ ರೆಸ್ಟೋರೆಂಟ್ ಇರುವುದು ಹಿಂದೂ ಮಹಾ ಸಾಗರದ ಮದ್ಯದಲ್ಲಿ. ದೊಡ್ಡ ಬಂಡೆಯ ಮೇಲೆ ಇದು ನೆಲೆಗೊಂಡಿರುವುದರಿಂದ ಇದಕ್ಕೆ ಈ ಹೆಸರು. ಇದನ್ನು ‘ಜಾಂಜಿಬಾರ್ ನ ಸಂಪತ್ತು’ ಎಂದು ಗೋಶಿಸಲಾಗಿದೆ. ಈ ರೆಸ್ಟೋರೆಂಟಿನ ಮತ್ತೊಂದು ವಿಶೇಶವೇನೆಂದರೆ, ಕಡಲಿನ ಅಲೆಗಳು ತೀರಾ ಇಳಿಮುಕವಾಗಿದ್ದಾಗ, ಬಂಡೆಯ ಮೇಲೆ ಇದ್ದಂತೆ ಕಂಡು ಬರುತ್ತದೆ. ಅಲೆಗಳು ಹೆಚ್ಚಾದಾಗ, ಕಲ್ಲಿನ ಬಾಗ ನೀರಿನಲ್ಲಿ ಮುಳುಗಿ, ಇಡೀ ರೆಸ್ಟೋರೆಂಟ್ ದ್ವೀಪವಾಗಿ ಕಂಡು ಬರುತ್ತದೆ. ವರ‍್ಶದಲ್ಲಿ ಅನೇಕ ಬಾರಿ ಈ ಆಗುಹೋಗುಗಳು ಜರುಗುವುದುಂಟು.

ಈ ವಿಶ್ವ ವಿಕ್ಯಾತ ರಾಕ್ ರೆಸ್ಟೋರೆಂಟ್ ಮಿಚಾನ್ವಿ ಪಿಂಗ್ವೆ ಕಡಲ ತೀರದಲ್ಲಿದೆ. ನೀರಿನ ಮೇಲ್ಮೈ ಮೇಲಿರುವಂತೆ ಕಾಣುವ ಈ ಪುಟ್ಟ, ಸುಂದರ ರೆಸ್ಟೋರೆಂಟ್, ದೂರದಿಂದ ನೋಡುವವರಿಗೆ ತೇಲುತ್ತಿರುವ ದೋಣಿಯಂತೆ ಕಂಡುಬರುತ್ತದೆ. ದಿ ರಾಕ್ ರೆಸ್ಟೋರೆಂಟಿನ ವಿಶೇಶತೆ ಏನೆಂದರೆ, ಕಡಲ ವಿಹಂಗಮ ನೋಟ, ಹಿತವಾದ ವಾತಾವರಣ ಇಲ್ಲಿ ಅನಾವರಣಗೊಂಡಿರುವುದು. ಪ್ರಕ್ರುತಿಯ ಸೊಬಗಿನ ದ್ರುಶ್ಯ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಇಲ್ಲಿ ಅತ್ಯುತ್ತಮ ಆಹಾರ ಸಿಗುವ ಕಾರಣ, ಬಾಯಿ ಮತ್ತು ಕಣ್ಣು ಎರಡನ್ನೂ ಈ ಸ್ತಳ ತ್ರುಪ್ತಿ ಪಡಿಸುತ್ತದೆ. ಈ ಕಲ್ಪನಾತೀತ ಬಂಡೆಯ ರೆಸ್ಟೋರೆಂಟ್ ತಾಂಜಾನಿಯಾದ ಆಗ್ನೇಯ ಬಾಗದಲ್ಲಿದ್ದು. ಇಲ್ಲಿಗೆ ಬಂದು ಹೋಗಲು ಎಲ್ಲಾ ರೀತಿಯ ಸಾರಿಗೆ ವ್ಯವಸ್ತೆಗಳೂ ಇವೆ. ಪಜೆ ಎಂಬ ಸ್ತಳದಿಂದ ಇದು ಕೇವಲ 10 ನಿಮಿಶದ ಪ್ರಯಾಣ. ಹತ್ತಿರದ ಮತ್ತೊಂದು ನಗರ ಸ್ಟೋನ್‍ದಿಂದ 45 ನಿಮಿಶಗಳ ಪ್ರಯಾಣ. ಅಶ್ಟೇ ಏಕೆ ಉತ್ತರದ ತುದಿಯಿಂದ ಒಂದೂವರೆ ಗಂಟೆಗಳ ಪ್ರಯಾಣ.

ಸಮುದ್ರದ ಏರಿಳಿತವಿಲ್ಲದ ಸಮಯದಲ್ಲಿ ನಡೆದಾಗಲಿ, ಇಲ್ಲವೇ ದೋಣಿಯಲ್ಲಾಗಲಿ, ಈಜು ಬರುವವರು ಈಜುತ್ತಾ ಈ ರೆಸ್ಟೋರೆಂಟನ್ನು ತಲುಪಬಹುದು. ರಾಕ್ ರೆಸ್ಟೋರೆಂಟಿನ ಬುಡ ತಲುಪಿದ ಮೇಲೆ, ಪ್ರವೇಶದ್ವಾರ ತಲುಪಲು ಮರದ ಮೆಟ್ಟಲುಗಳನ್ನು ಹತ್ತಿ ಹೋಗಬೇಕು. ಊಟ ಮಾಡಲು ಇರುವ 12 ಟೇಬಲ್ಗಳಲ್ಲಿ ಕುಳಿತಲ್ಲಿ, ಯಾವುದೇ ಅಡೆತಡೆಯಿಲ್ಲದ ಸಮುದ್ರದ ವಿಹಂಗಮ ನೋಟ ನಿಮ್ಮದಾಗುತ್ತದೆ. ಮುಂಗಡ ಕಾಯ್ದಿರಿಸಿದರೆ ಮದ್ಯಾಹ್ನದ ಮತ್ತು ರಾತ್ರಿಯ ಊಟ ಸಿಗುತ್ತದೆ. ಕಡಲ ಆಹಾರ ಪ್ರಿಯರಿಗೆ ಇದು ಅತ್ಯಂತ ಉತ್ತಮ ರೆಸ್ಟೋರೆಂಟ್. ವಿವಿದ ರೀತಿಯ ಕಡಲ ಆಹಾರ ಇಲ್ಲಿ ಸಿಗುತ್ತದೆ. ಇಲ್ಲಿ ಒದಗಿಸುವ ಆಹಾರ ಯಾವಾಗಲೂ ತಾಜಾತನದಿಂದ ಕೂಡಿರುವ ಕಾರಣ. ನಿತ್ಯ ಹರಿದ್ವರ‍್ಣದ ಪರಿಸರದಂತೆ ಇದೂ ಸಹ ಹಿತವಾಗಿರುತ್ತದೆ. ಕಡಲ ಆಹಾರದಲ್ಲಿ ಪಿಶ್ ಕಾರ‍್ಪಾಸಿಯೊ, ಸೀಗಡಿ ಮತ್ತು ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ ಅತವಾ ಲಾಬ್ಸ್ಟರ್ ಸ್ಪಾಗೆಟ್ಟಿಯಂತಹ ತಿನಿಸುಗಳು ಇಲ್ಲಿನ ಮೆನು ವಿನಲ್ಲಿ ಸೇರಿವೆ. ಇಲ್ಲಿ ತಯಾರಿಸುವ ಆಹಾರಗಳೆಲ್ಲವನ್ನೂ ಜಾಂಜಿಬರಿ ಪಾಕ ಪದ್ದತಿಯ ಅನುಸಾರ ತಯಾರಿಸಲಾಗುತ್ತದೆ. ಇದರೊಂದಿಗೆ ಪಾನಪ್ರಿಯರಿಗೆ ವೈನ್, ಬಿಯರ್ ಹಾಗೂ ಕೆಲವು ತಂಪು ಪಾನೀಯಗಳನ್ನು ನೀಡಲಾಗುತ್ತದೆ.

ರಾಕ್ ರೆಸ್ಟೋರೆಂಟ್ ಎಂದಾಕ್ಶಣ ದೊಡ್ಡ ಕಟ್ಟಡವಾಗಿರಬಹುದು ಎಂಬುದು ನಿಮ್ಮ ಕಲ್ಪನೆಯಾಗಿದ್ದರೆ, ಅದನ್ನು ಕಂಡಾಗ ನಿಮಗೆ ಬ್ರಮನಿರಸನವಾಗುವುದು ಕಂಡಿತ. ಇದು ಸ್ನೇಹಶೀಲ ಗುಡಿಸಲು ಮಾತ್ರ. ಇದರ ಮೇಲ್ಚಾವಣಿಯನ್ನು ತಡಿಕೆಗಳಿಂದ ಮುಚ್ಚಲಾಗಿದೆ. ವೈನ್ ಇಲ್ಲಿನ ಪ್ರಮುಕ ಪಾನೀಯವಾಗಿದ್ದು, ಅನೇಕ ರೀತಿಯ ವೈನ್ ಗಳು ಇಲ್ಲಿ ಸಿಗುತ್ತವೆ. ವಿಶೇಶ ಸಂದರ‍್ಬಗಳಲ್ಲಿ ಆತ್ಮೀಯ ವ್ಯಕ್ತಿಗಳೊಂದಿಗೆ ಇಲ್ಲಿ ವೈನ್ ಮತ್ತು ಊಟವನ್ನು ಸವಿಯುವುದು, ಅತ್ಯಂತ ರೋಚಕ ಅನುಬವ ಎಂದು ಅನುಬವಿಸಿದವರ ಅಂಬೋಣ. ದಿ ರಾಕ್‍ನಲ್ಲಿ ಊಟ ಮಾಡುವುದು ಜಾಂಜಿಬಾರ್ ನ ಬೇರೆಡೆ ಊಟಮಾಡುವುದಕ್ಕಿಂತ ಹೆಚ್ಚು ದುಬಾರಿ.

2010ರಲ್ಲಿ ಪ್ರಾರಂಬವಾದ ಈ ರೆಸ್ಟೋರೆಂಟ್ ಅನ್ನು ಕಿಚಂಗಾ ಪೌಂಡೇಶನ್ ಪ್ರಾಯೋಜಿಸಿಕೊಂಡು ಬಂದಿದೆ. ಕಿಚಂಗಾ ಪೌಂಡೇಶನ್ 2005ರಲ್ಲಿ ಸ್ತಾಪನೆಯಾಗಿ ಅಂದಿನಿಂದಲೂ ಕೆಲಸ ಮಾಡುತ್ತಿದ್ದು, ಸಮುದಾಯದ ಸದಸ್ಯರಿಗೆ ಈಜುವುದನ್ನು, ತ್ಯಾಜ್ಯ ವಿಂಗಡನೆ ಮತ್ತು ಅದರ ಮರುಬಳಕೆ ಸೇರಿದಂತೆ ಹಲವಾರು ಸಮರ‍್ತನೀಯ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡು ಇಲ್ಲಿಯವರೆಗೂ ನಡೆಯಿಸಿಕೊಂಡು ಬಂದಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: facebook.com, atlasobscura.com, unbelievable-facts.com, fourwornsoles.com, mybestplace.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: