ಪುಟ್ಟ ಕುದುರೆಗಳ ನೆಲೆವೀಡು – ಪೌಲಾ ದ್ವೀಪ

– .

ಪೌಲಾ ದ್ವೀಪವನ್ನು ಪುಟ್ಟ ಕುದುರೆಗಳ ಸ್ವರ‍್ಗವೆಂದು ಕರೆಯಲಾಗುತ್ತದೆ. ಏಕೆಂದರೆ ಈ ದ್ವೀಪದಲ್ಲಿನ ಪುಟ್ಟ ಕುದುರೆಗಳ ಸಂಕ್ಯೆ ಅಲ್ಲಿನ ಜನಸಂಕ್ಯೆಯನ್ನು ಮೀರಿಸುತ್ತದೆ. ಪೌಲಾ ದ್ವೀಪವು ಬ್ರಿಟೀಶ್ ಆಡಳಿತಕ್ಕೆ ಒಳಪಟ್ಟಿದೆ. ಶೆಟ್ ಲ್ಯಾಂಡಿನ ಸ್ಕಾಟಿಶ್ ದ್ವೀಪ ಸಮೂಹದಲ್ಲಿರುವ ಈ ದ್ವೀಪ ಸುಮಾರು ಐದು ಚದರ ಮೈಲುಗಳಶ್ಟು ಪ್ರದೇಶವನ್ನು ಹೊಂದಿದೆ. ಈ ದ್ವೀಪದಲ್ಲಿ ಹ್ಯಾಮ್ ಮತ್ತು ಹೋಮ್ ಟೌನ್ ಎಂಬ ಎರಡು ಸಣ್ಣ ನಗರಗಳಿದ್ದು, ಇಲ್ಲಿನ ಜನಸಂಕ್ಯೆ ಈ ಎರಡು ನಗರಗಳಲ್ಲಿ ಹಂಚಿ ಹೋಗಿದೆ. ಅಂದಹಾಗೆ, ಈ ದ್ವೀಪದ ಜನಸಂಕ್ಯೆ ಕೇವಲ 40 ಮಾತ್ರ. ಆದರೆ ಇಲ್ಲಿನ ಪುಟ್ಟ ಕುದುರೆಗಳ ಸಂಕ್ಯೆ 1500. ಹಾಗಾಗಿಯೇ ಇದು ಪುಟ್ಟ ಕುದುರೆಗಳ ಸ್ವರ‍್ಗ.

ಇಲ್ಲಿನ ಹಸಿರು ಕಣಿವೆಗಳ ಉದ್ದಗಲಕ್ಕೂ ನೂರಾರು ಪುಟ್ಟ ಕುದುರೆಗಳು, ಯಾವುದೇ ಬಯವಿಲ್ಲದೆ, ಮುಕ್ತವಾಗಿ ತಮಗೆ ಇಶ್ಟ ಬಂದಲ್ಲಿ ಓಡಾಡಿಕೊಂಡಿರುತ್ತವೆ. ಕಂಚಿನ ಯುಗದಿಂದಲೂ ಈ ದ್ವೀಪ ಪುಟ್ಟ ಸ್ಕಾಟಿಶ್ ಕುದುರೆಗಳ ನೆಲೆಯಾಗಿದೆ. ಅವುಗಳನ್ನು ಮೊದಲು ಬೆಳೆಸಿದ್ದೇ ಇಲ್ಲಿ. ಇಲ್ಲಿಂದಲೇ ಅವು ವಿಶ್ವದಾದ್ಯಂತ ಹರಡಿವೆ. ಪೌಲಾ ಎಂದರೆ ನಾರ‍್ವೇಜಿಯನ್ ನುಡಿಯಲ್ಲಿ ಪಕ್ಶಿ ದ್ವೀಪ ಎಂದರ‍್ತ. ಇಲ್ಲಿ ಪಪಿನ್, ಪುಲ್ಮಾರ್ ಮತ್ತು ರೇಜರ್ ಬಿಲ್ ಪಕ್ಶಿ ಸೇರಿದಂತೆ ಹಲವು ಜಾತಿಯ ಪಕ್ಶಿಗಳು ನೆಲೆ ಕಂಡುಕೊಂಡಿವೆ. ಈ ದ್ವೀಪದಲ್ಲಿ ಪುಟ್ಟ ಕುದುರೆಗಳ ಸಂಗಡ ಕುರಿಗಳೂ ಸಹ ಇವೆ. ದ್ವೀಪವಾದ ಕಾರಣ ಸೀಲ್ ಗಳ ನೆಲೆಯಾಗಿದೆ.

ಈ ದ್ವೀಪವು ನಗರ ಜೀವನದ ಜಂಜಾಟದಿಂದ ಸಾಕಶ್ಟು ದೂರದಲ್ಲಿದ್ದು, ಇಲ್ಲಿನ ಜನ ಸಹ ನಗರದ ಜನರಶ್ಟು ಬಿಜಿಯಾಗಿರುವುದಿಲ್ಲ. ಇಲ್ಲಿನವರದು ಸಾವಕಾಶದ ನೆಮ್ಮದಿಯ ಜೀವನ. ಈ ದ್ವೀಪವನ್ನು ತಲುಪುವುದು ಅಶ್ಟು ಸುಲಬವಲ್ಲ. ಇಲ್ಲಿಗೆ ವಾರಕ್ಕೆರಡು ಬಾರಿ ಮಾತ್ರ ವಿಮಾನ ಹಾರಾಟವಿರುತ್ತದೆ. ದೋಣಿಗಳು ಬರುತ್ತವೆಯಾದರೂ, ಹವಾಮಾನದ ಪರಿಸ್ತಿತಿಯ ಮೇಲೆ ಅದು ಅವಲಂಬಿತವಾಗಿರುತ್ತದೆ. ಸಮುದ್ರದಲ್ಲಿ ಹೆಚ್ಚು ಏರುಪೇರಿಲ್ಲದೆ ಇದ್ದಲ್ಲಿ ದೋಣಿಗಳ ಸಂಚಾರ ಸುಗಮವಾಗಿರುತ್ತದೆ.

ಪೌಲಾ ದ್ವೀಪದ ವಿಶೇಶತೆ ಎಂದರೆ ಇಲ್ಲಿ ಅಂಗಡಿಗಳಾಗಲಿ, ರೆಸ್ಟೋರೆಂಟುಗಳಾಗಲಿ, ಬಾರ್ ಗಳಾಗಲಿ ಇಲ್ಲ. ಪಾನ ಪ್ರಿಯರಿಗೆ ಇದೊಂದು ಮರಳುಬೂಮಿ. ಒಂದು ಸಣ್ಣ ಅಂಚೆ ಕಚೇರಿಯನ್ನು ಈ ದ್ವೀಪ ಹೊಂದಿದೆ. ಇಲ್ಲಿ ಕೆಲವು ಮನೆಗಳನ್ನು ಪ್ರವಾಸಿಗರಿಗೆ ಬಾಡಿಗೆಯ ಆದಾರದ ಮೇಲೆ ನೀಡಲಾಗುತ್ತದೆ. ಇಲ್ಲಿನವರ ಉದ್ಯೋಗ ಕುರಿ ಸಾಕಾಣಿಕೆ ಮತ್ತು ಕ್ರುಶಿ. ಇಲ್ಲಿ ಯಾವುದೇ ರೀತಿಯ ವಾಹನಗಳ ಓಡಾಟ ಇಲ್ಲವಾಗಿರುವ ಕಾರಣ ದ್ವೀಪದ ವಾತಾವರಣ ಶುದ್ದವಾಗಿದೆ. ಇಲ್ಲಿನ ಜನ ಹೊಸ ಗ್ರೆಗೋರಿಯನ್ ಕ್ಯಾಲೆಂಡರ್ ಅನುಸರಿಸುತ್ತಾರಾದರೂ, ಜನವರಿ 6 ರಂದು ಕ್ರಿಸ್ಮಸ್ ಹಾಗೂ ಜನವರಿ 13 ರಂದು ಹೊಸ ವರ‍್ಶದ ಆಚರಣೆಯನ್ನು ಮಾಡುತ್ತಾರೆ.

ನಗರದ ಒತ್ತಡದ ಜೀವದಿಂದ ಬೇಸತ್ತ ಜನರು, ವಿಶ್ರಾಂತಿ ಬಯಸಿದಲ್ಲಿ ಪೌಲಾ ದ್ವೀಪಕ್ಕೆ ಹೋಗಬಹುದು. ಇಲ್ಲಿಯ ವಾತಾವರಣ ಒತ್ತಡವನ್ನು ಕಡಿಮೆ ಮಾಡುವುದರೊಂದಿಗೆ, ಹೊಸ ಉತ್ಸಾಹ ಮೂಡಿಸುವುದರಲ್ಲಿ ಸಂದೇಹವೇ ಇಲ್ಲ.

( ಮಾಹಿತಿ ಮತ್ತು ಚಿತ್ರಸೆಲೆ: sworld.co.uk, boredpanda.com, weather.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: