ನಾ ನೋಡಿದ ಸಿನೆಮಾ: ರಾಗವೇಂದ್ರ ಸ್ಟೋರ‍್ಸ್
ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಬದುಕಿಗೆ ಹತ್ತಿರವಾದ ಕತೆಗಳನ್ನು ಆಯ್ಕೆಮಾಡಿಕೊಳ್ಳುವವರ ಎಣಿಕೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ಮತ್ತೊಂದು ಎತ್ತುಗೆ ಇತ್ತೀಚಿಗೆ ತೆರೆಕಂಡಿರುವ ರಾಗವೇಂದ್ರ ಸ್ಟೋರ‍್ಸ್. ಬದುಕಿನಲ್ಲಿ ಗೆಲುವು, ಸೋಲು, ನೋವು, ನಲಿವು ಹೀಗೆ ಹಲವಾವು ತಿರುವುಗಳಿರುತ್ತವೆ. ಇದು ಬದುಕಿನ ಯಾವ ಕಾಲಗಟ್ಟದಲ್ಲಾದರೂ ಆಗಿರಬಹುದು. ಆದರೆ ಅದೇ ಬದುಕಿನಲ್ಲಿ ಕೆಲವು ಗಟ್ಟಗಳನ್ನು ಇಂತಿಶ್ಟೇ ಸಮಯದಲ್ಲಿ ಇಲ್ಲವೆ ಈ ವಯಸ್ಸಿನೊಳಗೆ ಮುಟ್ಟಬೇಕೆಂಬ ಎಲ್ಲೂ ಬರೆಯದ (unwritten) ಕಟ್ಟುಪಾಡುಗಳಿವೆ. ಅವುಗಳಲ್ಲಿ ಮದುವೆಯೂ ಒಂದು. ಮದುವೆ ಎಂಬುದು “ಹೆಚ್ಚಿನ” ಮಂದಿಯ ಬದುಕಿನಲ್ಲಿ ಒಂದು ದೊಡ್ಡ ಹೆಜ್ಜೆಯೇ ಸರಿ. ಈ ಹೆಜ್ಜೆ ಇಡಬೇಕೋ ಬೇಡವೋ ಎಂಬುದು ಹೆಣ್ಣು ಹಾಗೂ ಗಂಡಿಗೆ ಬಿಟ್ಟದ್ದಾದರೂ, ಇಂತಿಶ್ಟೇ ವಯೋಮಾನದಲ್ಲಿರುವಾಗಲೇ ಮದುವೆಯಾಗಿಬಿಡಬೇಕು ಎಂಬ ಸಮಾಜದ ಒತ್ತಡ ಇರುವುದಂತೂ ಸುಳ್ಳಲ್ಲ. ಎರಡು ಮನಗಳು ಬೆರೆತು ಬಾಳು ನಡೆಸುವುದು ಮುಕ್ಯವೇ, ಇದರೊಟ್ಟಿಗೆ ವಯಸ್ಸು ಯಾರಿಗೂ ಕಾಯದು ಎಂಬುದು ಎಲ್ಲರಿಗೂ ತಿಳಿದದ್ದೇ. ವಯಸ್ಸಿನೊಡನೆ ಮನುಶ್ಯನ ದೇಹವೂ ಸಹ ಹಲವಾರು ಬದಲಾವಣೆಗಳಿಗೆ ಒಳಪಡುತ್ತದೆ, ಮಕ್ಕಳ ಆಸೆ ಇರುವವರಿಗೆ ಇದು ಮುಕ್ಯವಾಗುತ್ತದೆ. ಇವೆಲ್ಲದರ ಮೇಲೆ ಕಟ್ಟಿರುವ ಕತೆಯೇ ರಾಗವೇಂದ್ರ ಸ್ಟೋರ‍್ಸ್.
40 ದಾಟಿದರೂ ಮದುವೆಯಾಗದ ನಾಯಕ, ಹೆಣ್ಣು ನೋಡಲು ಹೋದಲ್ಲೆಲ್ಲ ವಯಸ್ಸಿನದೇ ತೊಂದರೆ, ಹೆತ್ತವರೊಡನೆ ಹೇಳಲಾಗದೆ, ನೋವಿನ ಕಟ್ಟೆ ಒಡೆದು ತಂದೆಯೊಡನೆ ತೆರೆದುಕೊಳ್ಳುವ ಮಗ. ಮಗನ ದುಗುಡ ತಿಳಿದ ಅಪ್ಪನ ಪ್ರಯತ್ನಗಳಾವುವು ಕೈಗೂಡದೆ, ಮುಂದೆ ನಾಯಕನಿಗೆ ಆಕಸ್ಮಿಕವಾಗಿ ಬೇಟಿಯಾದ ಹಾಡುಗಾರ‍್ತಿಯೊಡನೆ ಮದುವೆ. ಒಂದು ದೊಡ್ಡ ಕಾಳಗವನ್ನೇ ಗೆದ್ದಂತೆ ಮದುವೆಯೇನೊ ಆದರೂ ಮತ್ತೆ ತಲೆದೋರುವ ತೊಂದರೆಗಳು ಇವೆಲ್ಲವನ್ನು ಹಾಸ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ‍್ದೇಶಕರು. ಇನ್ನೇನು ನಾಯಕನ ತೊಂದರೆಗಳೆಲ್ಲ ಮುಗಿದವು ಎನ್ನುವಶ್ಟರಲ್ಲಿ ಬಂದೊದಗುವ ಮತ್ತೊಂದು ತೊಂದರೆ. ಇಲ್ಲಿ ಮಾನವೀಯತೆಯೆಡೆಗೆ ಕೊಂಡೊಯ್ದು ಸಮಾಜಕ್ಕೆ ಒಂದು ಸಂದೇಶವನ್ನು ನೀಡುತ್ತಾರೆ ನಿರ‍್ದೇಶಕ. ಹೀಗೆ ನಗುವಿನ ಕಡಲಿನಲ್ಲಿ ತೇಲಿಸಿ ಕೊನೆಯಲ್ಲಿ ಒಂದು ಸಂದೇಶ ಕೊಡುವುದರಲ್ಲಿ ಕತೆಗೆ ತೆರೆಬೀಳುತ್ತದೆ.
ನಾಯಕನ ಪಾತ್ರದಲ್ಲಿ ಜಗ್ಗೇಶ್ ರವರು ಎಂದಿನಂತೆ ತಮ್ಮ ಹಾವ ಬಾವ ಹಾಗೂ ನಟನೆಯ ಮೂಲಕ ನಗಿಸುತ್ತಾರೆ. ನಾಯಕಿಯಾಗಿ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಕ್ಯಾತಿಯ ಶ್ವೇತಾ ಶ್ರೀವತ್ಸವ ನಟಿಸಿದ್ದಾರೆ. ಇನ್ನುಳಿದಂತೆ ನಾಯಕನ ತಂದೆಯಾಗಿ ದತ್ತಣ್ಣ ಅವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಜಕಾರಣಿಯ ಪಾತ್ರದಲ್ಲಿ ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಸಹ ಕಲಾವಿದರಾದ ರವಿಶಂಕರ್ ಹಾಗೂ ಮಿತ್ರ ಅವರ ಅಬಿನಯವೂ ಚೆನ್ನಾಗಿ ಮೂಡಿ ಬಂದಿದೆ. ಸಂತೋಶ್ ಆನಂದ್ ರಾಮ್ ಅವರ ಕತೆ ಹಾಗೂ ನಿರ‍್ದೇಶನದ ಬಗ್ಗೆ ಹೇಳ ಬೇಕಿಲ್ಲ. ಕತೆಯನ್ನು ಅಚ್ಚುಕಟ್ಟಾಗಿ ಕೊಂಡೊಯ್ದಿದ್ದಾರೆ. ಸುರೇಶ ಕುಡುವಳ್ಳಿ ಅವರ ಸಿನೆಮಾಟೋಗ್ರಪಿ ಚೆನ್ನಾಗಿ ಮೂಡಿಬಂದಿದೆ. ಇನ್ನುಳಿದಂತೆ ಬಿ. ಅಜನೀಶ್ ಲೋಕನಾತ್ ರವರ ಸಂಗೀತ ನೀಡಿದ್ದು, ಹೊಂಬಾಳೆ ಪಿಲಂಸ್ ನಿರ‍್ಮಾಣದಲ್ಲಿ ಚಿತ್ರ ಮೂಡಿಬಂದಿದೆ.
(ಚಿತ್ರಸೆಲೆ: twitter.com)
ಇತ್ತೀಚಿನ ಅನಿಸಿಕೆಗಳು