ದುಡ್ಡು-ಉಳಿತಾಯ-ಗಳಿಕೆ: ಒಂದು ಕಿರುನೋಟ

– ನಿತಿನ್ ಗೌಡ.

ಕೂತು ತಿಂದ್ರೆ ಕುಡಿಕೆ ಹೊನ್ನೂ ಸಾಲಲ್ಲ’ ಅನ್ನೋ ಗಾದೆ ಇದೆ. ಇದರ ಹುರುಳು, ನಮ ಬಳಿ ಎಶ್ಟೇ ಹಣವಿರಲಿ; ನಾವು ದುಡಿಯದೇ ಹೋದರೆ, ಅದು ಎಶ್ಟಿದ್ದರೂ ಒಂದೊಮ್ಮೆ ಮುಗಿದು ಹೋಗುತ್ತದೆ. ಹೀಗೆ, ದುಡಿಮೆ ಎಶ್ಟು ಮುಕ್ಯವೋ ಹಾಗೆಯೇ ದುಡಿದ ದುಡಿಮೆಯನ್ನು ಕೂಡಿಡುವುದು, ಹೂಡಿಕೆ‌ ಮಾಡಿ ಹೆಚ್ಚಿಸಿಕೊಳ್ಳುವುದೂ ಕೂಡ ಅಶ್ಟೇ ಬುದ್ದಿವಂತಿಕೆಯ‌‌ ನಡೆ. ದುಡ್ಡನ್ನು‌ ಕೂಡಿಡುವ ಕಸಬು ಅಡಿಗೆ ಮನೆಯಿಂದಲೇ ಮಡದಿ, ತಾಯಂದಿರ ಮೂಲಕ ಮೊದಲುಗೊಳ್ಳುವುದನ್ನು ಕಾಣಬಹುದು.ಇನ್ನೂ‌ ಒಂದು ಹಂತ ಮುಂದೆ ಹೋಗಿ ನಮ್ಮ ಬಳಿ‌ ಇರುವ ಗಳಿಕೆಯನ್ನು ನಾವು ಹೇಗೆಲ್ಲಾ ಹೆಚ್ಚಿಸಿಕೊಳ್ಳಬಹುದು ಎಂದು ನೋಡೋಣ.

ಹೂಡಿಕೆ ಎಂದು ಬಂದಾಗ ಈ ಕೆಳಕಂಡ‌ ಕೆಲವು ಕೇಳ್ವಿಗಳನ್ನು ನಮಗೆ ನಾವು ಕೇಳಿಕೊಂಡು ,ನಮ್ಮ ಗುರಿಗಳನ್ನು ಹಾಕಿಕೊಳ್ಳಬಹುದು.

1. ನಾವು ನಮ್ಮ ಸದ್ಯದ ಹಣಕಾಸಿನ ಪರಿಸ್ತಿಯನ್ನು ಮನಗಂಡು, ಅದಕ್ಕೆ ಅನುಗುಣವಾಗಿ ಗುರಿಯನ್ನು ಇಟ್ಟುಕೊಂಡು ಮುಂದಿನ ರೂಪುರೇಶೆ ಹಾಕಿಕೊಳ್ಳಬೇಕು. ಇದಕ್ಕೆ ನಾವು ಈ ಹರವಿನಲ್ಲಿ ನುರಿತವರಿಂದ ಸಲಹೆ ಪಡೆದುಕೊಳ್ಳಬಹುದು.
2. ನಮ್ಮ ಹೂಡಿಕೆ ಹೆಚ್ಚಿನ ಕಾಲಕ್ಕೋ(Long-term investment) ಅತವಾ ಸ್ವಲ್ಪ ಕಾಲಕ್ಕೋ(Short Term) ಎಂದು ಕೇಳಿಕೊಳ್ಳಬೇಕು.
3. ನಾವು ಹಣಕಾಸಿನ ವಿಚಾರದಲ್ಲಿ ಎಶ್ಟರ ಮಟ್ಟಿನ ರಿಸ್ಕ್ ತಡೆದುಕೊಳ್ಳುತ್ತೇವೆ(Risk appetite) ಎನ್ನುವುದರ ಮೇಲೆ/ಅನುಗುಣವಾಗಿ ನಮಗೆ ಸಿಗುವ ಗಳಿಕೆ ನಿಂತಿರುತ್ತದೆ. ಸಾಮಾನ್ಯವಾಗಿ ರಿಸ್ಕ್ ಹೆಚ್ಚಾದಂತೆ, ಸಿಗುವ ಗಳಿಕೆಯೂ ಹೆಚ್ಚಾಗುತ್ತದೆ. ಇದರ ಆದಾರದ ಮೇಲೆ ನಾವು ರಿಯಲ್ ಎಸ್ಟೇಟ್, ಚಿನ್ನ, ಬಾಂಡ್ಸ್, ಹಣಮನೆಯಲ್ಲಿ(ಬ್ಯಾಂಕ್) ಟೇವಣಿ, ಶೇರು,ಮ್ಯೂಚುವಲ್ ಪಂಡ್ಸ್, ಕ್ರಿಪ್ಟೋ ಹೀಗೆ ಬೇರೆ ಬೇರೆ ದಾರಿಗಳನ್ನು ಆಯ್ಕೆಮಾಡಿಕೊಳ್ಳಬಹುದು‌.
4. ನಾವು ಯಾವಾಗಲೂ ಹೂಡಿಕೆ ಮಾಡುವ ಮುನ್ನ ಅದರ ಮಾರುಕಟ್ಟೆಯ ಕಟ್ಟಳೆ, ಅಪಾಯಗಳನ್ನು ಸರಿಯಾಗಿ ಅರಿತು, ಅದು ನಮಗೆ ಹೊಂದಿಕೆ ಆಗುವುದಿದ್ದರೆ ಮಾತ್ರ ಮುಂದುವರಿಯಬೇಕು. ಆಳ್ವಿಕೆ/ಸರಕಾರವೂ ಪ್ರತಿಯೊಂದಕ್ಕೂ ತನ್ನ ಕಟ್ಟಳೆಗಳನ್ನು ರೂಪಿಸಿರುತ್ತದೆ ಮತ್ತು ನಾವು ಆ ಚೌಕಟ್ಟಿನಲ್ಲಿ ವ್ಯವಹರಿಸಬೇಕಾಗುತ್ತದೆ.
5. ನಮ್ಮ ಅವಶ್ಯಕತೆಗಳೇನು ಎನ್ನುವುದರ ಸರಿಯಾದ ಅರಿವು ನಮಗೆ ಬೇಕು. ಎತ್ತುಗೆಗೆ ನಾವು ಹೂಡಿಕೆಯನ್ನು ಏತಕ್ಕೆ ಮಾಡುತ್ತಿದ್ದೇವೆ;

  • ನಮ್ಮ ಆದಾಯ ತೆರಿಗೆ ಕಡಿಮೆಗೊಳಸಲೋ?
  • ನಾವು ನಿವ್ರುತ್ತಿ ಹೊಂದಿದ ಮೇಲೆ ಜೀವನಕ್ಕಾಗಿ ಹಣ ಬೇಕಂತಲೋ?
  • ನಮ್ಮ ಆದಾಯದ ಮೂಲದ ಹರವು ಹೆಚ್ಚಿಸಿಕೊಳ್ಳಲೋ(Diversification of Income means/portfolios) ?

ಇದರ ಆದಾರದ ಮೇಲೆ ಯಾವುದು ಹೆಚ್ಚುಕಾಲ/ಮುಂದಿನ ಕಾಲಕ್ಕೂ ಅನುಕೂಲಕರವಾದ(sustainable path) ದಾರಿ ಎಂಬುದನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು.

ಈ ಕೆಳಗಿನ‌ ಚಿತ್ರ ನಮಗೆ ಹೂಡಿಕೆಯ/ಉಳಿತಾಯದ ಬೇರೆ ಬೇರೆ ಎಡೆಗಳು, ಅವುಗಳೊಟ್ಟಿಗೆ ಬೆಸೆದುಕೊಂಡಿರುವ ಹೂಡಿಕೆಯ ರಿಸ್ಕ್ ಮತ್ತು ಆ ರಿಸ್ಕ್ ಗೆ ತಕ್ಕುದಾದ ಬಳುವಳಿಯ/ಗಳಿಕೆಯ ಚಿತ್ರಣ ನೀಡುತ್ತದೆ.

ಈ‌ ಮೇಲಿನ‌ ತರಹದ ಕೇಳ್ವಿಗಳಿಗೆ ಉತ್ತರ ಕಂಡುಕೊಂಡ ನಂತರ ; ಈ ಕೆಳಗಿನ ಆಯ್ಕೆಗಳನ್ನು ಒಳಗೊಂಡ ಒಂದು ಸರಿಯಾದ ಹೂಡಿಕೆಯ ಕೂಡಣ /ಪೋರ್ಟ್ ಪೋಲಿಯೋ ಮಾಡಿಕೊಳ್ಳಬಹುದು. ಆ ಪೋರ‌್ಟ್ ಪೋಲಿಯೋದಲ್ಲಿ ಎಲ್ಲಾ ತರಹದ ಹೂಡಿಕೆಯ ಆಯ್ಕೆಗಳಿಗೆ ನಮ್ಮ ಅವಶ್ಯಕತೆಗೆ ಅನುಗುಣವಾಗಿ ಒತ್ತು ನೀಡುವುದರ ಮೂಲಕ ಒಂದು ಹದವಾದ ಪೋರ‌್ಟ್ ಪೋಲಿಯೋ( balanced portfolio ) ಮಾಡಿಕೊಳ್ಳಬಹುದು. ಮತ್ತು ಈ ಪೋರ್ಟ್ ಪೋಲಿಯೋ ವನ್ನು ಅವಶ್ಯಕತೆಯಿದ್ದಲ್ಲಿ ಕಾಲಕಾಲಕ್ಕೆ ಮರುಹೊಂದಿಸಿಕೊಳ್ಳುತ್ತಾ ಸಾಗಬಹುದು.

ಆಯ್ಕೆಯ ಬಗೆ

  • ಅತಿ ಕಡಿಮೆ ಅಪಾಯ,ಹೆಚ್ಚು ಬದ್ರತೆ(ಸರಕಾರದ) ಮತ್ತು ಕಡಿಮೆ ಗಳಿಕೆಯ ಆಯ್ಕೆ.
  • ಅತಿ ಕಡಿಮೆ ಅಪಾಯ,ಹೆಚ್ಚು ಬದ್ರತೆ ಮತ್ತು ಮೇಲಿನ ಆಯ್ಕೆಯ ಬಗೆಗಿಂತ ಹೆಚ್ಚು ಗಳಿಕೆಯ ಆಯ್ಕೆ.
  • ಹೆಚ್ಚು ಅಪಾಯ, ಕಡಿಮೆ ಬದ್ರತೆ ಮತ್ತು ಹೆಚ್ಚುಗಳಿಕೆ.
  • ಅತಿ ಹೆಚ್ಚು ಗಳಿಕೆ, ಹೆಚ್ಚು ಅಪಾಯ ಮತ್ತು ಬದ್ರತೆಯೇ ಇಲ್ಲದಿರುವುದು.

ಮುಂದಿನ ಬರಹದಲ್ಲಿ ಈ ಮೇಲಿನ ಆಯ್ಕೆಗಳಿಗೆ ಅನುಗುಣವಾಗಿ , ಹೊಂದಿಕೊಳ್ಳುವ ಉಳಿತಾಯ ಮತ್ತು ಹೂಡಿಕೆಗಳ ದಾರಿಗಳ ಬಗೆಗೆ ನೋಡೋಣ.

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. qweqwe855 says:

    ಒಳ್ಳೆಯ ಲೇಖನ ಸರ್

ಅನಿಸಿಕೆ ಬರೆಯಿರಿ: