ಮಲೆನಾಡಿನ ಜೀವನಾಡಿ ಸಹಕಾರ ಸಾರಿಗೆ

– ರಾಹುಲ್ ಆರ್. ಸುವರ‍್ಣ.

ಈ ಕತೆ ಹೇಳುವಾಗ ಎಶ್ಟು ಹೆಮ್ಮೆಯಾಗುತ್ತದೆಯೋ ಅಶ್ಟೇ ದುಕ್ಕವೂ ಆಗುತ್ತದೆ. ಇಂದು ವಿಜಯಾನಂದ ರೋಡ್ ಲೈನ್ಸ್ ನಂತಹ ದೊಡ್ಡ ದೊಡ್ಡ ಸಾರಿಗೆ ಸಂಸ್ತೆಯ ಕತೆಯನ್ನು ಹಲವಾರು ಜನ ಕೇಳಿದ್ದೀರಿ, ನೋಡಿದ್ದೀರಿ ಆದರೆ, ಸಹಕಾರ ಸಾರಿಗೆಯಂತಹ ಸಂಸ್ತೆಯೊಂದು ಆರು ಬಸ್ಸುಗಳಿಂದ ಆರಂಬವಾಗಿ ಎಪ್ಪತೈದಕ್ಕೂ ಹೆಚ್ಚು ಬಸ್ಸುಗಳನ್ನು ಹೊಂದಿ, ಮಲೆನಾಡು ಮಾತ್ರವಲ್ಲದೆ ಹೊರ ಜಿಲ್ಲೆಗಳಿಗೂ ಸಂಚರಿಸಿ ಹಲವರಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಸೇವೆಯೊದಗಿಸಿದ ಸುದೀರ‍್ಗ ಕತೆ ಮಾತ್ರ ಮಲೆನಾಡಿಗರಲ್ಲೇ ಉಳಿದು ಹೋಗಿದೆ. ಎಲ್ಲ ಬಸ್ಸುಗಳಂತೆ ಲಾಬಕ್ಕಾಗಿ ರಸ್ತೆಗಿಳಿದ ಬಸ್ಸುಗಳು ಇವಲ್ಲ, ಡ್ರೈವರ್ ಹಾಗೂ ಕಂಡಕ್ಟರ್ ಗಳಿಂದ ಹುಟ್ಟಿಕೊಂಡು, ಮಲೆನಾಡಿನ ಜನರ ಬದುಕಿಗೆ ದಾರಿಯಾಗಿ ಬೆಳೆದ ಬಸ್ಸುಗಳಿವು.

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಮಲೆನಾಡಿನಲ್ಲಿ ಈ ಬಸ್ಸು ತಿರುಗದ ರಸ್ತೆಗಳಿಲ್ಲ. ಮಲೆನಾಡಿನ ಪ್ರತಿ ಹಳ್ಳಿ ಹಳ್ಳಿಗೂ ಸಾಗಿ ಜನರನ್ನು ಪಟ್ಟಣಕ್ಕೆ ಸೇರಿಸುತ್ತಿದ್ದ ಬಸ್ಸು ಯಾವುದೆಂದು ಕೇಳಿದರೆ ಪ್ರತಿಯೊಬ್ಬ ಮಲೆನಾಡಿಗನೂ ಹೇಳುವುದು ಒಂದೇ ಹೆಸರು ಅದು ಸಹಕಾರ ಸಾರಿಗೆ ಕೊಪ್ಪ. ಮೂರು ದಶಕಗಳ ಕಾಲ ಮಲೆನಾಡನ್ನಾಳಿದ ಈ ಬಸ್ಸುಗಳು ಇಂದು ನಿರಪರಾದಿ ಕೈದಿಗಳಂತೆ ಸಂಸ್ತೆಯೊಳಗೇ ಬಿಡಿಸಲು ಯಾರಾದರೂ ಬರುವರು ಎಂದು ತಾವು ಒಳ ಬಂದ ದಾರಿಯತ್ತ ನೋಡುತ್ತಿವೆ. ಈ ಸಂಸ್ತೆಗೆ ಬೀಗ ಬಿದ್ದು ಈಗ ಬಸ್ಸುಗಳು ಒಂದೊದಾಗಿಯೇ ತುಕ್ಕು ಹಿಡಿಯುತ್ತಿವೆ. ಈ ಬಸ್ಸಿನ ಚರಿತ್ರೆಯನ್ನು ಹುಡುಕುತ್ತಾ ಹೋದರೆ ಅದರಲ್ಲಿ ಎರಡು ಅದ್ಯಾಯವಿದೆ. ಮೊದಲನೆಯ ಅದ್ಯಾಯ ಶಂಕರ್ ಮೋಟರ‍್ಸ್ ಮತ್ತು ಎರಡನೆ ಅದ್ಯಾಯ ಸಹಕಾರ ಸಾರಿಗೆ ಕೊಪ್ಪ. ಈ ಎರಡೂ ಅದ್ಯಾಯಕ್ಕೂ ಇರುವ ವಿಪರ‍್ಯಾಸವೆಂದರೆ, ಒಂದು ಹಣಕ್ಕಾಗಿ ಹುಟ್ಟಿಕೊಂಡಿದ್ದು ಮತ್ತೊಂದು ಜನರಿಗಾಗಿ ಬೆಳೆದುಕೊಂಡಿದ್ದು.

1980 ರಲ್ಲಿ ಶಂಕರ್ ಮೋಟರ‍್ಸ್ ಎಂಬ ಬಸ್ ಸಂಸ್ತೆಯೊಂದು ಹುಟ್ಟಿಕೊಂಡಿತು. ನಿರಂತರವಾಗಿ ಹನ್ನೊಂದು ವರ‍್ಶ ಸೇವೆಯೊದಗಿಸಿದ ಈ ಸಂಸ್ತೆ ಇದ್ದಕ್ಕಿದ್ದಂತೆ 1991 ರಲ್ಲಿ ಕಾರ‍್ಮಿಕರಿಗೆ ಸಂಬಳ ಹೆಚ್ಚಳ ಮಾಡುವ ವಿಶಯದಲ್ಲಿ ಸಿಹಿ ಸುದ್ದಿ ನೀಡುವ ಬದಲಾಗಿ ಸಂಸ್ತೆಯನ್ನೇ ಮುಚ್ಚುವ ಕಹಿ ಸತ್ಯವೊಂದನ್ನು ಅವರ ಮುಂದಿಟ್ಟಿತು. ಆದರೆ ಎದೆಗುಂದದ ಕಾರ‍್ಮಿಕರು ಸಂಸ್ತೆಯಿಂದ ಬರುವ ಪರಿಹಾರದಿಂದ ಅದೇ ಸಂಸ್ತೆಯಿಂದ ಮಾರಲ್ಪಡುವ ಬಸ್ಸುಗಳನ್ನು ಕೊಂಡುಕೊಳ್ಳುವ ನಿರ‍್ದಾರ ಮಾಡುತ್ತಾರೆ. ಮುಂದೆ ನಡೆದಿದ್ದು ಇತಿಹಾಸ. ಯಾವ ವರ‍್ಶದಲ್ಲಿ ಶಂಕರ್ ಮೋಟರ‍್ಸ್ ತನ್ನ ಸೇವೆಯನ್ನು ನಿಲ್ಲಿಸಿತೋ ಅದೇ ವರ‍್ಶ ಆರು ಬಸ್ಸುಗಳೊಂದಿಗೆ ಹೊಸ ಸಂಸ್ತೆಯೊಂದು ಚಿಗುರೊಡೆಯುತ್ತದೆ, ಅದೇ ಸಹಕಾರ ಸಾರಿಗೆ ಕೊಪ್ಪ. ಮೊದಮೊದಲು ಸುತ್ತಮುತ್ತಲಿನ ಊರುಗಳಿಗೆ ಸಂಚರಿಸುತ್ತಿದ್ದ ಈ ಬಸ್ಸುಗಳು ಬರು ಬರುತ್ತಾ ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸುತ್ತಿದ್ದವಲ್ಲದೆ, ಸಣ್ಣ ಸಣ್ಣ ಹಳ್ಳಿಗಳಿಗೂ ಹೋಗಿ ಜನರನ್ನು ಪಟ್ಟಣಕ್ಕೆ ಸೇರಿಸುತ್ತಿದ್ದವು. ಮೈ ತುಂಬಾ ಹಸಿರು ಬಣ್ಣ ತುಂಬಿಕೊಂಡಿದ್ದ ಈ ಬಸ್ಸುಗಳಿಂದ ಮಲೆನಾಡನ್ನು ನೋಡುವುದೆಂದರೆ ಸ್ವರ‍್ಗ.

ಆರು ಬಸ್ಸುಗಳೊಂದಿಗೆ ಆರಂಬವಾದ ಈ ಸಂಸ್ತೆ, ಕೆಲವೇ ವರ‍್ಶಗಳಲ್ಲಿ ಅರವತ್ತಕ್ಕೂ ಹೆಚ್ಚು ಬಸ್ಸುಗಳನ್ನು ಹೊಂದಿ, ಹಿರಿಯರಿಗೆ, ವಿದ್ಯಾರ‍್ತಿಗಳಿಗೆ, ಪ್ರತಿದಿನ ಸಂಚರಿಸುವ ಬ್ಯಾಂಕ್ ಉದ್ಯೋಗಿಗಳಿಗೆ, ಸರ‍್ಕಾರಿ ನೌಕರರಿಗೆ ರಿಯಾಯಿತಿ ಪಾಸ್ ನೀಡಲಾಗುತ್ತಿತ್ತು. ಅಶ್ಟು ಮಾತ್ರವಲ್ಲದೆ ಅಂಗವಿಕಲ ವಿದ್ಯಾರ‍್ತಿಗಳಿಗೆ, ಹಾಗೂ ಸಂಸ್ತೆಯ ಕಾರ‍್ಮಿಕರ ಮಕ್ಕಳಿಗೆ ಉಚಿತವಾಗಿ ಸೇವೆ ನೀಡಲಾಗುತ್ತಿತ್ತು. ನೋಡ ನೋಡುತ್ತಿದ್ದಂತೆಯೇ ಚಿಗುರಾಗಿದ್ದು ಹೆಮ್ಮರವಾಗಿಬಿಟ್ಟಿತ್ತು. ಎಶ್ಟರ ಮಟ್ಟಿಗೆಂದರೆ ಮಲೆನಾಡಿನಲ್ಲಿ ಸಹಕಾರ ಸಾರಿಗೆ ಎಂದರೆ ಒಂದು ಬ್ರ‍್ಯಾಂಡ್ ಆಗಿ ಪರಿವರ‍್ತನೆಗೊಂಡಿತ್ತು. ಸಾರಿಗೆ ಸಂಸ್ತೆಯ ಕೆಲವೊಂದು ವಿಶಯಗಳು ಸಾಕಶ್ಟು ಜನರಿಗೆ ಇಂದೂ ಗೊತ್ತಿಲ್ಲ. ಅದೇನೆಂದರೆ ಜಪಾನಿನ ಕ್ಯೂಟೊ ನಗರದ ಯೂನಿವರ‍್ಸಿಟಿಯ ತಂಡವೊಂದು ನಮ್ಮ ಸಹಕಾರ ಸಾರಿಗೆ ಸಂಸ್ತೆಗೆ ಬೇಟಿ ನೀಡಿ ಮಾಹಿತಿ ಸಂಗ್ರಹಿಸಿ, ನಮ್ಮ ಆಡಳಿತ ವ್ಯವಸ್ತೆಯ ಮಾದರಿಯನ್ನು ಅಳವಡಿಸಿಕೊಂಡಿದೆ. ಇದು ಮಾತ್ರವಲ್ಲದೆ ಸಹಕಾರ ಸಾರಿಗೆಯ ಯಶೋಗಾತೆ ಮಣಿಪಾಲದ ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್ಗೆ ಪಟ್ಯವಾಗಿದೆ. ಆದರೆ ಇದ್ದಕ್ಕಿದ್ದಂತೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಏನೋ, 2019 ರಲ್ಲಿ ಈ ಸಂಸ್ತೆ ಸದ್ದಿಲ್ಲದೇ ತನ್ನ ಸಂಸ್ತೆಯಲ್ಲಿದ್ದ 75 ಕ್ಕೂ ಹೆಚ್ಚು ಬಸ್ಸುಗಳನ್ನು ಹಾಗೂ 300 ಕ್ಕೂ ಅದಿಕ ಕಾರ‍್ಮಿಕರನ್ನು ಕರೆದು ಆರ‍್ತಿಕ ಹಿಂಜರಿಕೆಯ ಕಾರಣದಿಂದಾಗಿ ಸಂಸ್ತೆಗೆ ಬೀಗ ಬೀಳುತ್ತಿರುವುದನ್ನು ಹೇಳುತ್ತದೆ. ಅಂದೆ ಕೊನೆ, ಅಂದಿನಿಂದ ಇಂದಿನವರೆಗೂ ನಿಂತ ಜಾಗದಿಂದ ಬಸ್ಸುಗಳು ಇಂದಿಗೂ ಒಂದಿಂಚು ಮುಂದೆಯೂ ಹೋಗಿಲ್ಲ, ಹಿಂದೆಯೂ ಬರಲಿಲ್ಲ.

ಸಾಕಶ್ಟು ಜನರು ಈ ಸಂಸ್ತೆಯ ಮೇಲಿನ ಪ್ರೀತಿಯಿಂದ ಬಸ್ಸುಗಳನ್ನು ಕೊಂಡುಕೊಳ್ಳಲು ಬಂದಿದ್ದರು, ಆದರೆ ಅದ್ಯಾವುದು ಕೂಡ ಪ್ರಯೋಜನಕ್ಕೆ ಬರಲಿಲ್ಲ. ಇಂದಿಗೂ ಕೂಡ ಮಲೆನಾಡಿನ ಜನರು ಇಂದಲ್ಲ ನಾಳೆ ನಮ್ಮ ಬಸ್ಸುಗಳು ರಸ್ತೆಗಿಳಿಯಬಹುದು ಎಂದು ನಂಬಿದ್ದಾರೆ. ಏಕೆಂದರೆ ಈ ಬಸ್ಸುಗಳು ಬಸ್ಸು ಮಾತ್ರವಾಗಿರಲಿಲ್ಲ ಬದುಕಿಗೆ ಬಣ್ಣ ತುಂಬಿದ ಬಾವನೆಯಾಗಿತ್ತು.

(ಚಿತ್ರ ಸೆಲೆ: udayavani.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks