ಬೀಳದಿರಿ ಸಾಲದ ಬಲೆಗೆ

– ಮಹೇಶ ಸಿ. ಸಿ.

ಹಣದ ಬಗ್ಗೆ ಜಾಗರೂಕತೆ ಮತ್ತು ಅರಿವಿಲ್ಲದ ಜನರು, ನಂತರದ ಜೀವನದಲ್ಲಿ ಗಂಬೀರ ಸಮಸ್ಯೆಗಳನ್ನು ಎದುರಿಸುತ್ತಾರೆ ಎನ್ನುವ ಸತ್ಯ ಹಿರಿಯರ ಅನುಬವದ ಮಾತು. ಅದನ್ನು ನಾವು ಅಲ್ಲಗಳೆಯುವಂತಿಲ್ಲ. ಚಾಣಕ್ಯನೂ ಸಹ ಅವನ ಅರ‍್ತಶಾಸ್ತ್ರದಲ್ಲಿ ಆರ‍್ತಿಕತೆ ಬಗ್ಗೆ ಬಹಳಶ್ಟು ವಿವರಿಸಿದ್ದಾನೆ.

ಇಲ್ಲಿ ಯಾಕೆ ಈ ವಿಚಾರ ಪ್ರಸ್ತಾಪಿಸುತ್ತಿದ್ದೇನೆ ಎಂದರೆ, 19 ನೇ ಶತಮಾನದ ಹಿಂದಿನ ಕಾಲ ಗಟ್ಟದಲ್ಲಿ ಮನುಶ್ಯ ಮತ್ತೊಬ್ಬರ ಬಳಿ ಸಾಲ ಮಾಡಲು ಬಹಳ ಯೋಚನೆ ಮಾಡುತ್ತಿದ್ದ. ಒಂದು ವೇಳೆ ಸಾಲ ಮಾಡುವ ಪರಿಸ್ತಿತಿ ಬಂದರೆ ಅದಕ್ಕೆ ಪರ‍್ಯಾಯವಾಗಿ ಮತ್ತೇನಾದರೂ ಕೊಟ್ಟು ತಾನು ತನಗೆ ಬೇಕಾದ್ದನ್ನು ಪಡೆಯುತ್ತಿದ್ದ. ಹೀಗೆ ಕೊಟ್ಟು ತೆಗೆದುಕೊಳ್ಳುವ ಪದ್ದತಿಯನ್ನು ಅನುಸರಿಸುತ್ತಿದ್ದ. ಕಾಲ ಬದಲಾದಂತೆ ಆತನ ಆಸೆ, ಆಮಿಶಗಳು, ಆಡಂಬರ, ಹೆಚ್ಚಾಗುತ್ತಾ ಸಾಗಿ, ಸಿರಿವಂತರಿಂದ ಬಡ್ಡಿಗೆ ಹಣ ಪಡೆಯಲು ಅತವಾ ತನ್ನಲ್ಲಿರುವ ವಸ್ತುವನ್ನು ಹಣಕ್ಕಾಗಿ ಅಡಮಾನವಾಗಿ ಇಡಲು ಶುರುಮಾಡಿದ.

ಅನೇಕರು ಸಾಲ ಪಡೆಯುವ ಮುನ್ನ ನೂರಾರು ಬಾರಿ ಯೋಚಿಸುತ್ತಿದ್ದರು. ಅದಕ್ಕೆ ಕಾರಣವೂ ಇದೆ. ಒಂದು ವೇಳೆ ತಾನು ಸಾಲ ಪಡೆದು ಬಡ್ಡಿಯನ್ನು ಸರಿಯಾದ ಸಮಯಕ್ಕೆ ನೀಡದೆ ಇದ್ದರೆ ತನ್ನ ಮನೆಯ ಮುಂದೆ ಬಂದು ಹಣ ನೀಡಿದಾತ ಎಲ್ಲಿ ತನ್ನ ವೈಯಕ್ತಿಕ ಬದುಕಿನ ತೇಜೋವದೆ ಮಾಡುತ್ತಾನೋ ಎಂಬುದು. ಹಾಗಾಗಿ ಹಲವರು ಸಾಲ ಪಡೆಯಲು ಹಿಂದೇಟು ಹಾಕುತ್ತಿದ್ದರು. ಈಗಲೂ ಸಹ ಕೆಲವರು ಹೀಗೆಯೇ ಇದ್ದಾರೆ. ಮತ್ತೆ ಕೆಲವರು ಹಿಂದೆ ಮುಂದೆ ನೋಡದೆ ಸಾಲ ಪಡೆದು ತಮ್ಮ ಬಳಿ ಇರುವುದನ್ನೆಲ್ಲಾ ಕಳೆದುಕೊಂಡಿದ್ದಾರೆ ಕೂಡ.

ಈ 21ನೆ ಶತಮಾನ ಆ ರೀತಿ ಇಲ್ಲ ನೋಡಿ. ಈಗ ಎಲ್ಲವೂ ಬದಲಾಗಿದೆ. ನಾವು ಎಲ್ಲೋ ಹೋದಾಗ, ಅತವಾ ನಮಗೆ ಇಶ್ಟದ್ದನ್ನು ಕಂಡಾಗ ದುಡ್ಡು ಇರಲಿ ಬಿಡಲಿ, ಸಾಲ ಮಾಡಿಯಾದರೂ ಅದನ್ನು ಮನೆಗೆ ತರುತ್ತೇವೆ. ಆ ಸಾಲವನ್ನು ಪಡೆಯಲು ನಾವು ಅಲೆಯುವುದಿರಲಿ, ನಮ್ಮ ವ್ಯವಹಾರ ಸರಿ ಇದ್ದರೆ, ನಮಗೆ ಸಾಲದ ಅವಶ್ಯಕತೆ ಇರಲಿ-ಬಿಡಲಿ. ನಮ್ಮನ್ನು ಹುಡುಕಿ ನೂರಾರು ಬ್ಯಾಂಕ್ ಗಳು ನಮ್ಮ ಹಿಂದೆಯೇ ಅಲೆಯುತ್ತವೆ. ಹತ್ತಾರು ಆಪರ್ ಗಳನ್ನ ನೀಡುವುದಾಗಿ ನಮಗೆ ಆಮಿಶ ಒಡ್ಡುವ ಅನೇಕ ಬ್ಯಾಂಕುಗಳು ಇವೆ. ಇದರ ಜೊತೆಗೆ ನಮಗೆ ಮಾರಕವಾಗುತ್ತಿರುವುದು ಮೊಬೈಲ್ ಆಪ್ ಸಾಲ. ಈ ಇಂಟರ್ ನೆಟ್ ಯುಗದಲ್ಲಿ ಮೊಬೈಲ್ ನಲ್ಲೇ ಸಾಲ ನೀಡುವ ನೂರಾರು ಆಪ್ ಗಳು ಬಂದಿವೆ. ಅಲ್ಲದೆ ಸಾಲ ನೀಡಿ ನಂತರ ಕಟ್ಟಿ ಎನ್ನಲು ನೂರಾರು ಕ್ರೆಡಿಟ್ ಕಾರ‍್ಡ್ ಸೌಲಬ್ಯ ಕೂಡ ನಮಗೆ ಸುಲಬವಾಗಿ ಸಿಗುತ್ತದೆ.

ಕ್ರೆಡಿಟ್ ಕಾರ‍್ಡ್ ಇರಲಿ, ಸಾಲ ನೀಡಲು ಇರುವ ಆನೇಕ ಆಪ್ ಗಳಿರಲಿ, ನಾವು ಅದರ ಬಳಕೆಯ ಬಗ್ಗೆ ಪರಿಪೂರ‍್ಣವಾಗಿ ತಿಳಿದು ಹಾಗೂ ಅದರ ಪೂರ‍್ವಾಪರ ಯೋಚಿಸದೆ ಸಾಲ ಪಡೆಯಬಾರದು. ಯಾಕೆಂದರೆ ನಮ್ಮ ಈಗಿನ ಯುವಪೀಳಿಗೆ ಹೆಚ್ಚಾಗಿ ಎಡವಟ್ಟು ಮಾಡಿಕೊಳ್ಳುತ್ತಿರುವುದು ಇಲ್ಲೇ. ನಾವು ಮುಂಚೆ ಸಾಲ ಪಡೆಯಲು ಬ್ಯಾಂಕಿಗೆ ಹತ್ತಾರು ಬಾರಿ ಅಲೆಯುತ್ತಿದ್ದೆವು, ಸಾಲ ಕೂಡ ಅಶ್ಟು ಸುಲಬದಲ್ಲಿ ದೊರೆಯುತ್ತಿರಲಿಲ್ಲ. ಅನೇಕ ತೊಂದರೆಯನ್ನು ನಾವು ಎದುರಿಸಬೇಕಿತ್ತು ಅಲ್ಲವೇ? ಒಂದಂತೂ ನಿಜ, “ಮನುಶ್ಯನಿಗೆ ಕಶ್ಟದ ಬೆಲೆ ತಿಳಿಯಲು ಯಾವುದೂ ಕೂಡ ಸುಲಬವಾಗಿ ಸಿಗಬಾರದು”. ಹಾಗಿದ್ದಾಗ ಮಾತ್ರ ಆತ ಅದಕ್ಕೆ ಮನ್ನಣೆ ನೀಡುತ್ತಾನೆ. ಇಲ್ಲದೇ ಇದ್ದರೆ ತಾತ್ಸಾರ ಮನೋಬಾವನೆ ಬೆಳೆಯುತ್ತದೆ ಎನ್ನುವುದಂತೂ ಸತ್ಯ.

ನಮ್ಮ ಯುವಕರು ಅನೇಕ ಆಮಿಶಗಳಿಗೆ, ಅವರ ದುರಾಸೆಯ ಮನೋವ್ರುತ್ತಿಗೆ, ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಅದಕ್ಕೆ ಮೂಲ ಕಾರಣ ಅವರ ಜೀವನ ಶೈಲಿ ಹಾಗೂ ಬಹುಬೇಗ ಹಣಗಳಿಸಬೇಕು ಎನ್ನುವ ಹುಚ್ಚು ಕಲ್ಪನೆ. ಅದಕ್ಕಾಗಿಯೇ ಅನೇಕರು ದಾರಿ ತಪ್ಪುತ್ತಿದ್ದಾರೆ, ಅವರಿಗೆ ಆಲೋಚನೆಯ ಮಟ್ಟ ಆ ಹಂತದಲ್ಲಿ ಕುಸಿದಿರುತ್ತದೆ. ಅವರು ದುಶ್ಚಟಗಳಿಗೆ ದಾಸರಾಗಿ ಬಿಟ್ಟಿರುತ್ತಾರೆ. ಅವರನ್ನು ಅಲ್ಲಿಂದ ಆಚೆಗೆ ಕರೆತರಲು ಸಾದ್ಯವೇ ಇರುವುದಿಲ್ಲ. ಅಶ್ಟರ ಮಟ್ಟಿಗೆ ಅವರು ಅದಕ್ಕೆ ಹೊಂದಿಕೊಂಡು ಬಿಟ್ಟಿರುತ್ತಾರೆ. ಅವರು ತಂದೆ ತಾಯಿ, ಹೆಂಡತಿ ಮಕ್ಕಳು ಎನ್ನದೆ ತಮ್ಮದೇ ಗುಂಗಿನಲ್ಲಿ ಸಿಲುಕಿ ಒದ್ದಾಡುತ್ತಾ ಜೀವನ ಸಾಗಿಸುತ್ತಾರೆ. ಅತಿಯಾದ ಕಮಿಟ್ ಮೆಂಟ್ ಗೆ ಒಳಗಾಗಿ ಕಿನ್ನತೆಗೆ ಒಳಗಾಗುತ್ತಿದ್ದಾರೆ.

ಅವರ ಕಿನ್ನತೆಗೆ ಮೂಲ ಎಲ್ಲಿ ಎಂದು ಹುಡುಕಲು ಹೋದರೆ, ಜೂಜು, ಬೆಟ್ಟಿಂಗ್, ಕುಡಿತ. ಇದಕ್ಕೆಲ್ಲಾ ತಮ್ಮನ್ನು ತಾವು ತೊಡಗಿಸಿಕೊಂಡು ಮನೆ ಮಟ ಎನ್ನದೆ ಎಲ್ಲವನ್ನೂ ಬೇಕಾದರೂ ಅರ‍್ಪಿಸಲು ಸಿದ್ದರಾಗುವಶ್ಟು ತೀರ ಕೆಳಮಟ್ಟಕ್ಕೆ ಇಳಿದುಬಿಟ್ಟಿರುತ್ತಾರೆ. ಅವರಿಗೆ ಯಾರ ವಿವೇಚನೆ ಮಾತುಗಳು ಕೂಡ ಆ ಸಮಯಕ್ಕೆ ಬೇಕಿರುವುದಿಲ್ಲ ಅತವಾ ಕೇಳುವುದಿಲ್ಲ. ದುಶ್ಚಟಗಳಿಗೆ ಹಣದ ಅವಶ್ಯಕತೆಯನ್ನು ಮೊಬೈಲ್ ಸಾಲದ ಆಪ್ ಗಳಿಂದ ಹೆಚ್ಚಿನ ಬಡ್ಡಿಗೆ ಹೊಂದಿಸಿ ಅಲ್ಲಿ ಕಳೆಯುತ್ತಾರೆ. ನಂತರ ಸಾಲಕ್ಕೆ ಸಾಲ, ಹೆಚ್ಚುತ್ತಾ ಹೋಗುತ್ತದೆ. ಅದಕ್ಕಾಗಿ ಮತ್ತೊಂದು ಆಪ್ ನಿಂದ ಸಾಲ ಪಡೆಯುತ್ತಾರೆ, ಅವರ ಸಾಲದ ಸರಪಣಿ ಹೀಗೆ ಬೆಳೆದು ಕೊನೆಗೆ ಕೈಮೀರಿದಾಗ ಸಾಲ ಕಟ್ಟಲು ಪರದಾಡುತ್ತಾರೆ. ಇವರ ಸಾಲದ ಸರಣಿ ಇಶ್ಟಕ್ಕೆ ನಿಂತರೆ ತೊಂದರೆ ಇಲ್ಲ, ಆದರೆ ಅದು ನಿಲ್ಲುವುದಿಲ್ಲ. ಅವರ ಆಪ್ತರ ಬಳಿ ಹಾಗೂ ವೈಯಕ್ತಿಕವಾಗಿ ಅನೇಕರ ಬಳಿ ಸಾಲಕ್ಕಾಗಿ ಮೊರೆ ಹೋಗುತ್ತಾರೆ. ಅದು ಅವರಿಗೆ ಇಶ್ಟವಿಲ್ಲದೇ ಇದ್ದರೂ ಸಹ ಅವರ ಪರಿಸ್ತಿತಿ ಅವರನ್ನು ಆ ಮಟ್ಟಕ್ಕೆ ಇಳಿಸಿರುತ್ತದೆ.

ಇನ್ನು ಅನೇಕರ ದುರಾದ್ರುಶ್ಟವೋ ಏನೋ! ಮನೆ ಕಟ್ಟಲೋ ಅತವಾ ವೈದ್ಯಕೀಯ ಕರ‍್ಚಿಗೋ ಸಾಲದ ಸುಳಿಯಲ್ಲಿ ಸಿಲುಕಿರುತ್ತಾರೆ, ಅದರಿಂದ ಆಚೆ ಬರಲು ಒದ್ದಾಡುತ್ತಾರೆ ಹಾಗೂ ಸಾಲ ಕಟ್ಟಲಾಗಿದೆ ಕೊನೆಗೆ ಸಾಲ ನೀಡುವ ಆಪ್ ಗಳಿಂದ ಹಣ ಪಡೆಯುತ್ತಾರೆ.

ಸಾಲ ನೀಡಿದ ಆಪ್ ಗಳೋ ಸುಮ್ಮನೇ ಇರುವುದಿಲ್ಲ, ಸಾಲ ಪಡೆದವರ ವೈಯಕ್ತಿಕ ಮಾಹಿತಿಯನ್ನು ಹೇಗೋ ಸಂಗ್ರಹಿಸಿ, ಸಾಲ ಕಟ್ಟದೆ ಇದ್ದಾಗ ಇವರ ಲಿಂಕ್ ನಲ್ಲಿ ದೊರೆಯುವ ಎಲ್ಲಾ ನಂಬರ್ ಗಳಿಗೂ ಕರೆ ಮಾಡಿ ವೈಯುಕ್ತಿಕವಾಗಿ ತೇಜೋವದೆ ಮಾಡಲು ಶುರು ಮಾಡುತ್ತಾರೆ ಹಾಗೂ ಪಡೆದ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಹೀಗೇ ಸಾಲವನ್ನು ಏರಿಸುತ್ತಾ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಾರೆ. ಇದರಿಂದ ಅನೇಕರು ತಮ್ಮ ಜೀವನವನ್ನೇ ಬಲಿ ಕೊಡಬೇಕಾದ ಸನ್ನಿವೇಶವನ್ನು ನಾವು ಸುದ್ದಿಹಾಳೆಗಳಲ್ಲಿ ನೋಡುತ್ತಲೇ ಇದ್ದೇವೆ.

ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ನಾವು ಪರಿಹಾರದ ಬಗ್ಗೆ ಆಲೋಚಿಸಬೇಕೆ ವಿನಹ, ಆತ್ಮಹತ್ಯೆಯಂತಹ ಕೆಲಸಕ್ಕೆ ಕೈ ಹಾಕಬಾರದು. ಸಾಲ ತೀರಿಸುವ ಆನೇಕ ದಾರಿಗಳು ನಮ್ಮ ಕಣ್ಣ ಮುಂದೆಯೇ ಇರುತ್ತವೆ. ಅದನ್ನು ನಾವು ಹುಡುಕಿ ನಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಹಾಗೂ ಅದರ ಬಗ್ಗೆ ನಮ್ಮ ಗಮನ ಇರಬೇಕು. ಕೆಂಡದ ಮೇಲೆ ನಡೆದು ತಡೆದುಕೊಳ್ಳಬಹುದು, ಆದರೆ ಸಾಲ ಮನುಶ್ಯನನ್ನು ಆ ಕೆಂಡಕ್ಕಿಂತ ಬೀಕರವಾಗಿ ಸುಡುತ್ತದೆ ಎನ್ನುವುದನ್ನು ನಾವು ತಿಳಿಯಬೇಕು.

ಇತ್ತೀಚೆಗೆ ಸಾಲ ಮಾಡದೆ ಇರುವವರ ಸಂಕ್ಯೆ ತೀರ ಕಡಿಮೆ ಎಂದರೆ ತಪ್ಪಲ್ಲ. ಪ್ರತಿಯೊಬ್ಬರೂ ಕೂಡ ಅನಿವಾರ‍್ಯವಾಗಿ ಈ ಸಾಲದ ಕೂಪಕ್ಕೆ ತಮಗೆ ಅರಿವಿಲ್ಲದೆ ಬಿದ್ದಿರುತ್ತಾರೆ. ನೀವು ಸಾಲ ಮಾಡಲೇಬೇಕು ಎನ್ನುವ ಸಂದರ‍್ಬ ಬಂದರೆ ಹತ್ತಾರು ಬಾರಿ ಯೋಚಿಸಿ ತೆಗೆದುಕೊಳ್ಳಿ. ಆಕರ‍್ಶಕ ಬಡ್ಡಿದರ, ಇನ್ನಿತರೆ ಆಮಿಶಗಳನ್ನು ನಮಗೆ ತೋರಿಸಿ ಸಾಲದ ಗುಂಡಿಗೆ ಕೆಡವಲು ಸದಾ ಕಾಯುತ್ತಿರುತ್ತಾರೆ. ಅಲ್ಲದೆ ನಮಗೆ ತಿಳಿಯದ ಅನೇಕ ಗುಪ್ತ ಶುಲ್ಕಗಳನ್ನು ಹಾಕಿ ನಮ್ಮನ್ನು ಹೈರಾಣಾಗಿಸಿಬಿಡುತ್ತಾರೆ. ಹಾಗಾಗಿ ಅನಿವಾರ‍್ಯ ಅಂದಾಗ ನೋಂದಾಯಿತ ರಾಶ್ಟ್ರೀಕ್ರುತ ಬ್ಯಾಂಕುಗಳಿಂದ ನಿಮ್ಮ ಅವಶ್ಯಕತೆ ನೋಡಿಕೊಂಡು ಸಾಲ ಮರುಪಾವತಿಯ ಲೆಕ್ಕಾಚಾರ ಮಾಡಿಕೊಂಡು, ಅಗತ್ಯಕ್ಕೆ ಬೇಕಾದಶ್ಟು ಮಾತ್ರ ಸಾಲ ತೆಗೆದುಕೊಳ್ಳಿ.

ನಾವುಗಳು ನಮ್ಮ ಆಸೆಯ ಮಿತಿಯನ್ನು ಮೀರದೆ, ಇರುವ ದುಡಿಮೆಯಲ್ಲಿ ಬರುವ ಹಣದ ವ್ಯವಹಾರ ನೋಡಿಕೊಂಡು ಬದುಕುವ ಕಲೆಯನ್ನು ಕಲಿಯೋಣ. ಅವಶ್ಯಕತೆಗೆ ಮಾತ್ರ ಕರ‍್ಚು ಮಾಡೋಣ. ಅತಿಯಾಗಿ ಸಾಲ ಮಾಡದೆ ನಮ್ಮ ಬದುಕನ್ನು ನರಕ ಮಾಡಿಕೊಳ್ಳದೆ, ನಮ್ಮನ್ನು ನಂಬಿ ನಮ್ಮ ಬೆನ್ನ ಹಿಂದೆ ಇರುವ ನಮ್ಮ ಕುಟುಂಬಕ್ಕೋಸ್ಕರ, ನಮ್ಮ ಇತಿಮಿತಿಯೊಳಗೆ ಹಣದ ವ್ಯವಹಾರದ ಬಗ್ಗೆ ತಿಳಿದು ನೆಮ್ಮದಿಯ ನಾಳೆಗಾಗಿ, ನಮ್ಮವರಿಗಾಗಿ ಬದುಕೋಣ. ಕೊನೆಯದಾಗಿ ದೊಡ್ಡವರ ಒಂದು ಮಾತಿದೆ, “ಗಳಿಸಿದ ಹಣಕ್ಕಿಂತ, ಉಳಿಸಿದ ಹಣಕ್ಕೆ ಮೌಲ್ಯ ಜಾಸ್ತಿ” ಎನ್ನುವ ಮಾತನ್ನು ನಿಮ್ಮ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಹಾಗೂ ಆ ನಿಟ್ಟಿನಲ್ಲಿ ಅನಾವಶ್ಯಕ ಸಾಲದಿಂದ ದೂರ ಇರೋಣ ಎಂಬುದು ನನ್ನ ಆಶಯ.

(ಚಿತ್ರ ಸೆಲೆ: needpix.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: