ಕವಿತೆ: ಸ್ನೇಹ ಬಾಂದವ್ಯ
– ಮಹೇಶ ಸಿ. ಸಿ.
ವಯಸ್ಸಿನ ಮಿತಿಯಿಲ್ಲ, ಯಾರದೇ ಹಂಗಿಲ್ಲ
ಸಿರಿತನ-ಬಡತನವ ದಾಟಿ ನಿಲ್ಲುವುದಲ್ಲ
ದೂರವ ಲೆಕ್ಕೆಸದೆ ಸಾಗಿ ಹೋಗುವುದಲ್ಲ
ಸ್ನೇಹ ಬಾಂದವ್ಯವಿದು ಮತ್ತೇನಲ್ಲ
ಹೆಗಲ ಮೇಲೆ ಕೈ ಇಟ್ಟಾಗಲೇ ತಿಳಿವುದು
ಬೇಡದ ನಾಚಿಕೆಯ ದೂರ ತಳ್ಳುವುದು
ಜೊತೆಗಿದ್ದಾಗ ನೂರಾನೆ ಬಲ ಸೇರುವುದು
ಸ್ನೇಹ ಬಾಂದವ್ಯವಿದು ಮತ್ತೇನಲ್ಲ
ನೀನ್ಯಾರು-ನಾನ್ಯಾರು ಇಲ್ಲಿ ಬೇಕಿಲ್ಲ
ವರ‍್ಣಬೇದವು ಇಲ್ಯಾರಿಗೂ ತಿಳಿದಿಲ್ಲ
ಜಾತಿ ದರ‍್ಮಗಳ ಪೀಡೆಯ ಸುಳಿವಿಲ್ಲ
ಸ್ನೇಹ ಬಾಂದವ್ಯವಿದು ಮತ್ತೇನಲ್ಲ
ಕಿತ್ತಾಟ ಗುದ್ದಾಟ ಮಾಮೂಲಿ ಇಲ್ಲಿ
ಹಂಚಿ ತಿನ್ನೋದು ಆತ್ಮೀಯರ ಕಯಾಲಿ
ಸ್ನೇಹವೆಂದರೆ ಅದು ಸುಂದರ ಜೋಕಾಲಿ
ಸ್ನೇಹ ಬಾಂದವ್ಯವಿದು ಮತ್ತೇನಲ್ಲ
ನಾ ಮೊದಲು ನೀ ಮೊದಲು ಎಂಬೋರು ಇಲ್ಲ
ಕಶ್ಟಕ್ಕೆ ಮಿಡಿಯುವ ಸವಿಹ್ರುದಯವೇ ಎಲ್ಲಾ
ಸವಿದಶ್ಟು ಸಿಹಿನೀಡೋ ಸವಿಯಾದ ಬೆಲ್ಲ
ಸ್ನೇಹ ಬಾಂದವ್ಯವಿದು ಮತ್ತೇನಲ್ಲ
(ಚಿತ್ರ ಸೆಲೆ: maxpixel.net)
ಇತ್ತೀಚಿನ ಅನಿಸಿಕೆಗಳು