ಕನ್ನಡ ನಾಡ ಸುತ್ತೋಣ – ಮಲೆನಾಡ ಬೆಡಗು: ಕಂತು-2

– ನಿತಿನ್ ಗೌಡ.

 ಕಂತು-1 , ಕಂತು-3

                                                                        

ಮೊದಲ ಕಂತಿನಲ್ಲಿ ಸ್ತಳಗಳ ಮೇಲ್ನೋಟವನ್ನು ನೋಡಿದ್ದೆವು. ಈಗ ಆ ಸ್ತಳಗಳನ್ನು ತಲುಪುವ ಬಗೆ ಮತ್ತು ಅವುಗಳ ಹಿರಿಮೆಯ ಬಗೆಗೆ ತಿಳಿಯೋಣ.

ಶಿವಮೊಗ್ಗ ತಲುಪುವುದು ಹೇಗೆ ?

ಶಿವಮೊಗ್ಗವು ಬಸ್ಸು, ರೈಲು ( ಶಿವಪ್ಪ ನಾಯಕ ರೈಲ್ವೇ ನಿಲ್ಡಾಣ) ಮತ್ತು ವಿಮಾನ (ಕುವೆಂಪು ವಿಮಾನ ನಿಲ್ದಾಣ) ಮೂರೂ ಬಗೆಯ ಸಾರಿಗೆ ಏರ್‍ಪಾಡನ್ನು ಹೊಂದಿದೆ.
ಸಾಮಾನ್ಯವಾಗಿ ನೋಡುಗರು ಬೆಂಗಳೂರಿನಿಂದ ಪಯಣಿಸುವರು ಎಂದಿಟ್ಟುಕೊಳ್ಳೋಣ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಅಂದಾಜು 300 ಕಿ.ಮೀ ದೂರವಿದ್ದು, ಎರಡು ದಾರಿಗಳಿಂದ ತಲುಪಬಹುದು. ಬೆಂಗಳೂರು-ತುಮಕೂರು-ಶಿರಾ-ಚಿತ್ರದುರ್‍ಗ-ಶಿವಮೊಗ್ಗ ಮೂಲಕ ಸಾಗುವ NH-48 ದಾರಿ ಮತ್ತು ಎರಡನೆಯದು ಕುಣಿಗಲ್-ಚೆನ್ನರಾಯಪಟ್ಟಣ-ಅರಸೀಕೆರೆ-ಕಡೂರು-ಶಿವಮೊಗ್ಗ ಮೂಲಕ ಸಾಗುವ NH-75 ಮತ್ತು NH-69 ಹಾದಿ. NH-48 ದಾರಿ ಚೆನ್ನಾಗಿದೆ.

ಶಿವಮೊಗ್ಗದಲ್ಲಿ ಸುತ್ತಾಟದ ತಾಣ ನೋಡ ಬಯಸುವವರು ಈ ಕೆಳಗಿನ ಹಾಗೆ ಮಾಡಬಹುದು.

ಆನೆ ಬಿಡಾರ ಸಕ್ರೆಬಯ್ಲು

ಮೊದಲಿಗೆ ಶಿವಮೊಗ್ಗೆಯಿಂದ ತೀರ‍್ತಹಳ್ಳಿ ಹಾದಿಯಲ್ಲಿ ಸಾಗಿ. 10 ಕಿ,ಮೀ ದೂರದಲ್ಲಿ ಸಕ್ಕರೆ ಬೈಲು ಆನೆ ಬಿಡಾರ ಸಿಗಲಿದ್ದು , ಮುಂಜಾನೆ 9-10ರ ಹೊತ್ತಿಗಾಗಲೆ ಅಲ್ಲಿ ಇರುವುದು ಒಳ್ಳೆಯದು. ಇಲ್ಲಿಗೆ ಕಾಡಿನಿಂದ ಆನೆಹಿಂಡುಗಳನ್ನು ಕರೆದುಕೊಂಡುಬರಲಾಗುತ್ತದೆ. ಜನರು ಈ ಆನೆಗಳಿಗೆ ಗಾಜನೂರು ಅಣೆಕಟ್ಟಿನ ಹಿನ್ನೀರಿನ ತಟದಲ್ಲಿ ಜಳಕ ಮಾಡಿಸಬಹುದು. ಹಿನ್ನೀರಿನಲ್ಲಿ ಅರೆ ಮುಳುಗಿದ ಮರಗಳು ಮತ್ತು ಅದರ ತಟದಲ್ಲಿ ಆನೆಗಳ ಜೊತೆ ಪೋಟೋ ಚೆನ್ನಾಗಿ ಬರುತ್ತದೆ. ಇಲ್ಲಿ ಕೆಲವು ಚಿಕ್ಕ ಆನೆಯ ಮರಿಗಳಿದ್ದು ಅವುಗಳ ಚೇಶ್ಟೆಯು ನೋಡಲು ಮಜವಾಗಿರುತ್ತದೆ.ಅಲ್ಲಿಂದ ಕೊನೆಗೆ ಹಾದಿಯಲ್ಲಿ ಮಂಡಗದ್ದೆಯ ಹಕ್ಕಿದಾಣ ನೊಡಿ ತೀರ‍್ತಹಳ್ಳಿ ತಲುಪಿ ಊಟ ಮಾಡಬಹುದು. ಮುಂದೆ ತೀರ‍್ತಹಳ್ಳಿಯಲ್ಲಿನ ಕವಿಮನೆ (ಕುವೆಂಪು ಅವರ ಮನೆ), ಕವಿಶೈಲ ಮತ್ತು ಚಿಕ್ಕ ಪುಟ್ಟ ಜಲಪಾತಗಳನ್ನು ನೋಡಬಹುದು. ಕವಿಮನೆ, ಮೂರು ಅಂತಸ್ತಿನ ಮನೆಯಾಗಿದ್ದು, ಮರದ ಏಣಿಯ ಮೂಲಕ ಅಟ್ಟ ಏರಬಹುದು. ಇದು ಅಂದಿನ ಮಲೆನಾಡ ಬಗೆಯ ಮನೆಯ ಚಿತ್ರಣವನ್ನು ನೋಡುಗರಿಗೆ ನೀಡುತ್ತದೆ. ಕವಿ ಮನೆಗೆ ಅಣತಿ ದೂರದಲ್ಲಿ ಚಿಕ್ಕ ಗುಡ್ಡಗಾಡು ಇದ್ದು, ಅದರ ಮೇಲೆ ‘ಕವಿಶೈಲ’ ವಿದೆ. ಇದನ್ನು ಕುವೆಂಪು ಅವರ ಅಗಲಿಕೆಯ ನಂತರ ಅವರ ನೆನಪಿಗಾಗಿ ಮಾಡಲಾಗಿದ್ದು, ಗುಂಡಾಕಾರದಲ್ಲಿ ದೊಡ್ಡ ಕಲ್ಲುಗಳನ್ನು ಇಲ್ಲಿ ಇಡಲಾಗಿದೆ. ಕವಿಶೈಲದ ಮೇಲೆ, ನಿಂತು ನೋಡಿದಾಗ ಸುತ್ತಣ ಪಡುವಣಗಟ್ಟಗಳ ಚೆಂದದ ನೋಟ ನೋಡುಗರ ಮನಸೂರೆಗೊಳಿಸುತ್ತದೆ. ಕುವೆಂಪು ಅವರು ಹಿಂದೆ ಇಲ್ಲಿ ಬಂದು ದ್ಯಾನ ಮಾಡಿ, ತಮ್ಮ ಕ್ರುತಿಗಳನ್ನು ರಚಿಸುತ್ತಿದ್ದರು.

ಕುಂದಾದ್ರಿ ಬೆಟ್ಟ

ಶಿವಮೊಗ್ಗದಿಂದ ಕುಪ್ಪಳ್ಳಿಗೆ ಹೋಗಲು ತೀರ್‍ತಹಳ್ಳಿ ಹೋಗಬೇಕೆಂದಿಲ್ಲ. ಶಿವಮೊಗ್ಗದಿಂದ ಸಾಗುವಾಗ, ಮುಡುಬಾ ಬಳಿ (ತುಂಗಾ ಸೇತುವೆ) ತಿರುವು ಪಡೆದು, ನೇರ ಕುಪ್ಪಳ್ಳಿ ತಲುಪಬಹುದು. ನಂತರ ಅಲ್ಲಿಂದ ಸಮಯವಿದ್ದರೆ ನೇರ ಕುಂದಾದ್ರಿ ತಲುಪಿ, ಅಲ್ಲಿನ ಜೈನ ಗುಡಿ, ಕೊಳ ಮತ್ತು ಬೆಟ್ಟಗಳ ನಡುವೆ ನೇಸರ ಮುಳುಗುವುದನ್ನು ನೋಡಬಹುದು. ಅಲ್ಲಿಂದ ತೀರ್‍ತಹಳ್ಳಿ ತಲುಪಿ ತಂಗಬಹುದು.

ಗೂಗಲ್ ಮ್ಯಾಪ್ ನ ಕೊಂಡಿ

ಮಾರನೆಯ ದಿನ ಕುಂದಾದ್ರಿ ಬೆಟ್ಟ ನೋಡದೇ ಇದ್ದ ಪಕ್ಶದಲ್ಲಿ; ಈ ಕೆಳಗಿನಂತೆ ಮಾಡಬಹುದು. ಮೊದಲು ತೀರ್‍ತಹಳ್ಳಿಯಿಂದ ಆಗುಂಬೆ ಗಟ್ಟವನ್ನು ಇಳಿದು, ಆಗುಂಬೆ ಸುತ್ತಾಮುತ್ತಾ ಇರುವ ಜಲಪಾತಗಳನ್ನು ನೋಡಬಹುದು. ಎತ್ತುಗೆಗೆ ಅಲ್ಲೇ ಕೆಲವೇ ಕಿಲೋ.ಮೀಟರ್ ಸುತ್ತಮುತ್ತ ಇರುವಂತಹ ಬರ್‍ಕಣ, ಜೋಗಿನ ಗುಂಡಿ ಮತ್ತು ಒನಕೆ ಅಬ್ಬಿ ಜಲಪಾತಗಳಿಗೆ ಬೇಟಿ ನೀಡಬಹುದು. ನಂತರ ಅಲ್ಲಿಂದ ಸಂಜೆ ಮರಳಿ ಕುಂದಾದ್ರಿ ತಲುಪಿ, ಅಲ್ಲಿ ನೇಸರ ಮುಳುಗುವುದನ್ನು ನೋಡಿಕೊಂಡು,ಅಲ್ಲಿಂದ ಶಿವಮೊಗ್ಗ ತಲುಪಿ, ನೀವು ಬೆಂಗಳೂರು ಮರಳಬಹುದು. ಆಗುಂಬೆಯ ಮುಂಜಾನೆಯ ನೇಸರನ ಬೆಳಕು ಪಡುವಣ ಗಟ್ಟಗಳ ಇಬ್ಬನಿಯ ನಸುಕನ್ನು ಸೀಳುವ ನೋಟ ಮತ್ತು ಮುಸ್ಸಂಜೆಯ ಕೆಂಪು ಬಣ್ಣದ ಬೆಳಕಿನ ಕಡಲ ನೋಟವು ಮೈನವಿರೇಳಿಸುತ್ತದೆ. ಇದಿಶ್ಟು ಎರಡು ದಿನ ತೆಗೆದುಕೊಳ್ಳುತ್ತದೆ.

ಗೂಗಲ್ ಮ್ಯಾಪ್ ನ ಕೊಂಡಿ

ಕವಲೇದುರ್‍ಗ ಕೋಟೆ

ಇಲ್ಲವಾದಲ್ಲಿ; ನಿಮ್ಮ ಬಳಿ ಇನ್ನೂ ಸಮಯವಿದ್ದಲ್ಲಿ, ತೀರ್‍ತಹಳ್ಳಿಯಲ್ಲಿ ತಂಗಿ; ಮಾರನೆಯ ದಿನ ಬೆಳಿಗ್ಗೆ ಕವಲೆದುರ್‍ಗ ಕೋಟೆ ತಲುಪಬಹುದು. ಅಲ್ಲಿ ನೀವು ಬತ್ತದ ನಟ್ಟಿಯಾಗುವ(ನಾಟಿ) ಹೊತ್ತಲ್ಲಿ ತಲುಪಿದ್ದರೆ, ಅಲ್ಲೇ ನಟ್ಟಿ ಗದ್ದೆಯ ಹಾದಿ ದಾಟಿ, ಕೆಳದಿ ನಾಯಕರ ಈ ಕೋಟೆಯನ್ನು ನೋಡಬಹುದು. ತಾಳಿಕೋಟೆ ಕದನದ ನಂತರ, ಕರ್‍ನಾಟ ಸಾಮ್ರಾಜ್ಯದಿಂದ(ವಿಜಯ ನಗರ ಸಾಮ್ರಾಜ್ಯ) ಹಲವು ಸಾಮಂತ ರಾಜಮನೆತನಗಳು ಸ್ವತಂತ್ರ ಗೋಶಿಸಿಕೊಳ್ಳುತ್ತವೆ. ಕೆಳದಿ ನಾಯಕರು ಕೂಡಾ ಇದರಲ್ಲಿ ಒಬ್ಬರು. ಕೆಳದಿ ನಾಯಕರು ಪೋರ್‍ಚುಗೀಸರು, ಬಿಜಾಪುರ ಸುಲ್ತಾನರು, ಮೈಸೂರು ರಾಜರು ಮತ್ತು ಮೊಗಲರ ದಾಳಿಗಳನ್ನು ಎದುರಿಸತ್ತಲೇ ಇರುತ್ತಾರೆ. ಹೀಗೆ ರಾಣಿ ಚೆನ್ನಮ್ಮ ಅವರ ಗಂಡ ಒಮ್ಮೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆಗ ಚೆನ್ನಮ್ಮ ಅವರು ಆಡಳಿತದ ಚುಕ್ಕಾಣಿ ಹಿಡಿಯುತ್ತಾರೆ. ಈ ಹೊತ್ತಲ್ಲಿ ಕನ್ನಡತಿ ಕೆಳದಿ ಚೆನ್ನಮ್ಮ ಈ ಕೋಟೆ ಬಳಿಯಲ್ಲೇ; ಮೊಗಲರನ್ನು ಎದುರಿಹಾಕಿಕೊಂಡದ್ದಲ್ಲದ್ದೇ, ಅವರನ್ನು ಸದೆಬಡಿದು; ಶಿವಾಜಿಯ ಮಗ ರಾಜಾರಾಮನಿಗೆ ಅಶ್ರಯ ನೀಡಿದ್ದಳು ಎಂದರೆ, ಆಕೆಯ ದಿಟ್ಟತನ ಎಶ್ಟಿತ್ತು ಎಂಬುದು ನೀವೇ ಅರಿಯಿರಿ. ಈ ಕಾದಾಟದಲ್ಲಿ ಆಕೆ ಗೋರಿಲ್ಲಾ ಕಾದಾಟ ತಂತ್ರಗಾರಿಕೆಯನ್ನು ಬಳಸಿದ್ದಳು. ಈ ಕೋಟೆಯ ಚಾರಣ( 5 ಕೀ.ಮೀ) ಆಗುತ್ತದೆ. ಆಮೇಲೆ ಇಲ್ಲಿಂದ ಹೊಸನಗರ ಜಿಲ್ಲೆಯ ಸುತ್ತಮುತ್ತಾ ಇರುವ ಚಕ್ರ ಆಣೆಕಟ್ಟು, ಮಾಣಿ, ಸಾವೆ ಹಕ್ಕಲು ಆಣೆಕಟ್ಟು ನೋಡಿ ಹೊಸನಗರದಲ್ಲಿ ತಂಗಬಹುದು. ಇಲ್ಲಿ ಮಾಣಿ ಆಣೆಕಟ್ಟು ನೋಡಲು ಅನುಮತಿ ಬೇಕಾಗುತ್ತದೆ. ಮತ್ತು ಮಳೆ ಹೆಚ್ಚಿದ್ದಲ್ಲಿ ಜಲಪಾತ ಮತ್ತು ಅಣೆಕಟ್ಟುಗಳ ಬಳಿ ಬಿಡದೇ ಇರುವ ಸಾದ್ಯತೆಗಳು ಹೆಚ್ಚು. ಇಲ್ಲಿ ಬರುವ ಮುನ್ನ, ಅಲ್ಲಿ ನಿಮಗೆ ಪರಿಚಯವಿರುವ ಜನರ ಬಳಿ ವಿಚಾರಿಸಿಕೊಂಡು ಹೊರಡಿ. ಮಳೆಗಾಲ ಇವುಗಳನ್ನು ನೋಡಲು ಹೇಳಿಮಾಡಿಸಿದ ಸಮಯ. ಮಳೆ ಕೊಂಚ ಕಡಿಮೆ ಇದ್ದಲ್ಲಿ, ಆ ಹಾದಿಗಳಲ್ಲಿ ಸಾಗುವ ಅನುಬವವೇ ಬೇರೆ. ತಲುಪೋ ಜಾಗಕ್ಕಿಂತ, ಸಾಗೋ ದಾರಿಯೇ ಚೆನ್ನಾಗಿರುತ್ತದೆ. ಇವುಗಳನ್ನು ನೋಡಿದ ಬಳಿಕ ಹೊಸನಗರದಲ್ಲಿ ತಂಗಬಹುದು. ಮಾರನೆಯ ದಿನ ಬೆಳಿಗ್ಗೆಯೇ ಕೊಡಚಾದ್ರಿ ಚಾರಣಕ್ಕೆ ತಲುಪಬಹುದು. ಅಲ್ಲಿ ಎರಡು ಆಯ್ಕೆಗಳಿವೆ; ಒಂದು ಒಟ್ಟೂ ಹಾದಿಯನ್ನು ಚಾರಣದ ಮೂಲಕ ಸಾಗಿ ತಲುಪುವುದು, ಹಾಗೆ ಸಾಗುವಾಗ ಹಿಡ್ಲುಮನೆ ಜಲಪಾತ ಒಳ್ಳೆಯ ಅನುಬವ ನೀಡುತ್ತದೆ. ಇನ್ನೊಂದು ಜೀಪ್ ಮೂಲಕ ತಲುಪಿ, ಕೊನೆಯ ಕೆಲವು ಕೀ.ಮೀ ದೂರವನ್ನು ನಡೆದು ತಲುಪಬಹುದು. ಇಶ್ಟು ಮಾಡುವುದರಲ್ಲಿ ನಮ್ಮ ಅರ್‍ದ ದಿನ ಕಳೆದಿರುತ್ತದೆ. ಎಶ್ಟು ಬೇಗ ಸಾದ್ಯವೋ ಅಶ್ಟು ಬೇಗ ತಲುಪಿದಲ್ಲಿ ಒಳ್ಳೆಯದು. ಈಗ ಇಲ್ಲಿಂದ ನೇರ ಸಾಗರ ( 47 ಕೀ.ಮಿ ) ತಲುಪಬಹುದು. ದಾರಿ ನಡುವಲ್ಲಿ ಎಲ್ಲಾದರೂ ಊಟ ಮಾಡಬಹುದು.

ಗೂಗಲ್ ಮ್ಯಾಪ್ ನ ಕೊಂಡಿ

ಕೆಳದಿಯ ಗಂಡ-ಬೇರುಂಡ

ಸಾಗರ ತಲುಪಿ; ಸಮಯವಿದ್ದಲ್ಲಿ ಸಾಗರದ ಕೆಳದಿಯ ರಾಮೇಶ್ವರ ಮತ್ತು ಇಕ್ಕೇರಿಯ ಅಗೋರೇಶ್ವರ ಗುಡಿಗಳನ್ನು ನೋಡಬಹುದು. ನಂತರ ಸಾಗರ ತಲುಪಿ ತಂಗಬಹುದು. ಕೆಳದಿಯು, ಕೆಳದಿ ನಾಯಕರ ಮೊದಲ ರಾಜದಾನಿಯಾಗಿತ್ತು. ಆ ನಂತರ ರಾಜದಾನಿ ಇಕ್ಕೀರಿಗೆ, ತದನಂತರ ಬಿದನೂರಿಗೆ ಬದಲಾಯಿತು. ರಾಮೇಶ್ವರ ಗುಡಿಯಲ್ಲಿ ಹೊಯ್ಸಳ-ದ್ರಾವಿಡ ವಾಸ್ತುಶಿಲ್ಪ ಬಳಸಲಾಗಿದೆ. ಈ ಗುಡಿ ಐನೂರು ವರುಶಕ್ಕೂ ಹಳೆಯ ಗುಡಿಯಾಗಿದೆ. ಇಕ್ಕೇರಿಯ ಆಗೋರೇಶ್ವರ ಗುಡಿಯು ಶಿವನಿಗೆ ಮುಡಿಪಾಗಿದ್ದು, ವಿಜಯನಗರ-ದ್ರಾವಿಡ ವಾಸ್ತುಶಿಲ್ಪ ಬಳಸಿ ಕಟ್ಟಲಾಗಿದೆ. ಇದು ಸಾಗರಕ್ಕೆ ಕೇವಲ 6 ಕೀ.ಮೀ ದೂರವಿದೆ. ನಿಮ್ಮ ಮಾಹಿತಿಗಾಗಿ, ಹೆಮ್ಮೆಯ ನೀನಾಸಂ ನಾಟಕ ಕಂಪನಿ ಇರುವುದು ಸಾಗರದ ಹೆಗ್ಗೋಡಿನಲ್ಲೇ! ಕರುನಾಡ ಹಲವು ನಟರಾದ ದರ್‍ಶನ್, ನೀನಾಸಂ ಸತೀಶ್ ಎಲ್ಲರ ನಟನೆಯ ಗರಡಿ ಇದೇ. ಮುಂದಿನ ಕಂತಿನಲ್ಲಿ ಇಲ್ಲಿಂದ ಇನ್ನೇನು ಮಾಡಬಹುದು ಎಂದು ನೋಡೋಣ.

 

ಕಂತು-1 , ಕಂತು-3

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: