ಬ್ರೆಕ್ಟ್ ಕವನಗಳ ಓದು – 12 ನೆಯ ಕಂತು
– ಸಿ.ಪಿ.ನಾಗರಾಜ.
*** ಪ್ರಜಾಹಿತೈಷಿ ನ್ಯಾಯಾಧೀಶ ***
(ಕನ್ನಡ ಅನುವಾದ: ಶಾ.ಬಾಲುರಾವ್)
ಲಾಸ್ ಏಂಜಲೀಸ್ ನಗರದಲ್ಲಿ
ಅಮೆರಿಕದ ಪೌರರಾಗಬಯಸುವವರನ್ನು
ತನಿಖೆ ಮಾಡುವ ನ್ಯಾಯಾಧೀಶನ ಮುಂದೆ
ಒಬ್ಬ ಮೂಲ ಇಟಲಿ ನಿವಾಸಿ
ಹೊಟೆಲ್ ನಡೆಸುವವ ಹಾಜರಾದಜೋರು ತಯಾರಿಮಾಡಿಕೊಂಡಿದ್ದರೂ
ದುರದೃಷ್ಟವಶಾತ್ ಇಂಗ್ಲಿಷ್ ಬಾರದ ಕಾರಣ
ಪರೀಕ್ಷೆಯಲ್ಲಿ ಹೀಗೆ ಉತ್ತರಿಸಿದ್ದ:
“ಎಂಟನೆ ತಿದ್ದುಪಡಿ ಯಾವುದು?”
ಇಟಲಿ ನಿವಾಸಿ ಹಿಂಜರಿಯುತ್ತ ಕೊಟ್ಟ ಉತ್ತರ: “1492”
ಅರ್ಜಿದಾರರಿಗೆ ದೇಶ ಭಾಷೆ ಗೊತ್ತಿರಬೇಕೆಂಬ ಕಾಯಿದೆಯಿಂದಾಗಿ
ಅವನ ಅರ್ಜಿ ತಿರಸ್ಕೃತವಾಯಿತು.ಅವನು ಮತ್ತೆ ಬಂದ
ಮೂರು ತಿಂಗಳ ಕಾಲ ಭಾಷಾಭ್ಯಾಸ ಮುಂದುವರಿಸಿ
ಆದರೂ ಭಾಷೆ ಬರದ ಕೊರತೆಯಿನ್ನೂ ಇದ್ದೇ ಇತ್ತು
ಈ ಬಾರಿ ಅವನು ಎದುರಿಸಿದ ಪ್ರಶ್ನೆ:
“ನಾಡಯುದ್ಧದಲ್ಲಿ ಗೆದ್ದ ಜನರಲ್ ಯಾರು?”
ಅವನ ಉತ್ತರ
ದನಿಯೆತ್ತರಿಸಿ ಸೌಜನ್ಯದಿಂದ ಕೊಟ್ಟಿದ್ದು: “1492”ಹಿಂತಿರುಗಿ ಹೋಗಿ ಮೂರನೆ ಸಲ ಬಂದಾಗ
ಅವನು ಉತ್ತರಿಸಿದ ಮೂರನೆ ಪ್ರಶ್ನೆ:
“ರಾಷ್ಟ್ರಾಧ್ಯಕ್ಷರನ್ನು ಎಷ್ಟು ವರ್ಷದ ಅವಧಿಗೆ ಆರಿಸಲಾಗುತ್ತೆ?”
ಮತ್ತೆ ಅದೇ ಉತ್ತರ: “1492”ಆ ಮನುಷ್ಯನನ್ನು ಮೆಚ್ಚಿಕೊಂಡಿದ್ದ ನ್ಯಾಯಾಧೀಶನಿಗೆ
ಅವನು ಹೊಸ ಭಾಷೆಯನ್ನು ಕಲಿಯಲಾರನೆಂದು
ಈಗ ಖಚಿತವಾಯಿತು
ಅವನು ಹೇಗೆ ಹೊಟ್ಟೆ ಹೊರೆಯುತ್ತಾನೆಂದು ಕೇಳಿದ್ದಕ್ಕೆ
ಕಷ್ಟದ ದುಡಿಮೆಯಿಂದ ಎಂದು ತಿಳಿದುಬಂತುಮತ್ತೆ ನಾಲ್ಕನೆ ಬಾರಿ ಹಾಜರಾದಾಗ
ನ್ಯಾಯಾಧೀಶ ಮುಂದಿಟ್ಟ ಪ್ರಶ್ನೆ:
“ಅಮೆರಿಕವನ್ನು ಕಂಡು ಹಿಡಿದಿದ್ದು ಯಾವಾಗ?”
ಅವನು ಸರಿಯಾಗಿ “1492” ಎಂದು ಉತ್ತರ ಕೊಟ್ಟನೆಂದು
ಅವನಿಗೆ ಪೌರತ್ವ ನೀಡಲಾಯಿತು.
ಒಳ್ಳೆಯ ರೀತಿಯಲ್ಲಿ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಿರುವ ವ್ಯಕ್ತಿಗೆ ದೇಶದಲ್ಲಿರುವ ಕಾನೂನು ನೆರವಾಗಬೇಕೆ ಹೊರತು ತೊಡಕಾಗಬಾರದು ಎಂಬ ನಿಲುವುಳ್ಳ ನ್ಯಾಯಾದೀಶರೊಬ್ಬರ ವ್ಯಕ್ತಿತ್ವವನ್ನು ಈ ಕವನದಲ್ಲಿ ಚಿತ್ರಿಸಲಾಗಿದೆ.
ಪ್ರಜಾಹಿತೈಶಿ=ಪ್ರಜೆಗಳಿಗೆ ಒಳಿತನ್ನು ಮಾಡುವವನು; ನ್ಯಾಯಾಧೀಶ=ದೇಶದ ಕಾನೂನಿಗೆ ಅನುಗುಣವಾಗಿ ಯಾವುದೇ ವ್ಯಕ್ತಿಯ ಇಲ್ಲವೇ ಪ್ರಸಂಗದಲ್ಲಿನ ಸರಿ/ತಪ್ಪುಗಳನ್ನು ಪರಿಶೀಲಿಸಿ, ಸರಿಯಾಗಿರುವುದರ ಪರವಾಗಿ ತೀರ್‍ಪನ್ನು ಕೊಡುವ ಕೆಲಸದಲ್ಲಿ ನಿರತನಾಗಿರುವ ವ್ಯಕ್ತಿ;
ಲಾಸ್ ಏಂಜಲೀಸ್ ನಗರ=ಉತ್ತರ ಅಮೆರಿಕ ದೇಶದಲ್ಲಿರುವ ಒಂದು ನಗರ; ಪೌರರು+ಆಗಬಯಸುವವರನ್ನು; ಪೌರ=ಒಂದು ದೇಶದ ಪ್ರಜೆ. ಹುಟ್ಟಿನಿಂದ ವ್ಯಕ್ತಿಯು ಸಹಜವಾಗಿಯೇ ಒಂದು ದೇಶದ ಪ್ರಜೆಯಾದರೆ, ಇತರ ದೇಶಗಳಿಂದ ವಲಸೆ ಬಂದವರು, ತಾವು ಬಂದು ನೆಲಸಿರುವ ದೇಶದ ಕಾನೂನಿಗೆ ಅನುಗುಣವಾಗಿ ಅಲ್ಲಿನ ಪೌರತ್ವವನ್ನು ಪಡೆಯಬೇಕು. ಈ ರೀತಿ ಪೌರತ್ವವನ್ನು ಪಡೆದ ನಂತರ ಆ ದೇಶದಲ್ಲಿನ ಇತರ ಪ್ರಜೆಗಳಂತೆ ಎಲ್ಲ ವ್ಯವಹಾರಗಳನ್ನು ಮಾಡುವ ಹಕ್ಕುಗಳನ್ನು ಹೊಂದುತ್ತಾರೆ;
ಬಯಸು=ಇಚ್ಚಿಸು; ತನಿಖೆ=ವಿಚಾರಣೆ; ಮೂಲ ಇಟಲಿ ನಿವಾಸಿ=ಇಟಲಿ ದೇಶದ ಪ್ರಜೆ; ಹಾಜರಾದ=ಬಂದನು; ಜೋರು=ಅತಿ ಹೆಚ್ಚಾಗಿ/ಬಹಳವಾಗಿ; ತಯಾರು=ಸಿದ್ದತೆ; ದುರದೃಷ್ಟವಶಾತ್=ಇಂಗ್ಲಿಶ್ ನುಡಿಯನ್ನು ಸರಿಯಾಗಿ ತಿಳಿದುಕೊಂಡು ಕಲಿಯಲಾಗದೆ; ಪರೀಕ್ಷೆ=ನ್ಯಾಯಾದೀಶರು ವಿಚಾರಣೆ ಮಾಡಿದಾಗ;
ಎಂಟನೆ ತಿದ್ದುಪಡಿ=ಅಮೆರಿಕ ದೇಶದ ಸಂವಿದಾನದಲ್ಲಿ ಕೆಲವೊಮ್ಮೆ ಮಾಡುವ ಬದಲಾವಣೆಗಳಲ್ಲಿ ಎಂಟನೆಯದು; ಹಿಂಜರಿ=ಅಳುಕುತ್ತ/ತಾನು ಹೇಳುತ್ತಿರುವುದು ಸರಿಯೊ ತಪ್ಪೊ ಎಂಬುದು ಗೊತ್ತಾಗದೆ ತಡವರಿಸುತ್ತ; ದೇಶ ಭಾಷೆ=ದೇಶದ ಶಾಸಕಾಂಗ-ಕಾರ್‍ಯಾಂಗ-ನ್ಯಾಯಾಂಗಗಳಲ್ಲಿ ಬಳಕೆಯಾಗುವ ನುಡಿ; ಕಾಯಿದೆ=ಕಾನೂನು; ತಿರಸ್ಕೃತ=ಕಡೆಗಣಿಸು/ಒಪ್ಪದಿರುವುದು;
ಅರ್ಜಿ ತಿರಸ್ಕೃತವಾಯಿತು=ಅಮೆರಿಕ ದೇಶದ ಪ್ರಜೆಯಾಗಬೇಕಾದರೆ ದೇಶದ ಆಡಳಿತ ನುಡಿಯಾದ ಇಂಗ್ಲಿಶನ್ನು ಕಲಿತಿರಲೇಬೇಕೆಂಬ ಕಾನೂನು ಇದೆ. ಈ ವ್ಯಕ್ತಿಗೆ ಇಂಗ್ಲಿಶ್ ಬಾರದ ಕಾರಣ ಕಾನೂನಿನ ಎಲ್ಲೆಯೊಳಗೆ ಇವನ ಕೋರಿಕೆಯನ್ನು ನಿರಾಕರಿಸಲಾಯಿತು;
ಭಾಷಾ+ಅಭ್ಯಾಸ; ಅಭ್ಯಾಸ=ಕಲಿಕೆ; ನಾಡ ಯುದ್ಧ=ಅಮೆರಿಕದ ದೇಶದಲ್ಲಿದ್ದ ಪ್ರಜೆಗಳ ನಡುವೆಯೇ ನಡೆದಿದ್ದ ಕಾಳೆಗ; ಜನರಲ್=ಸೇನಾನಿ; ದನಿ+ಎತ್ತರಿಸಿ; ದನಿಯೆತ್ತರಿಸಿ=ಕೇಳುವವರಿಗೆ ಚೆನ್ನಾಗಿ ತಿಳಿಯುವಂತೆ ಗಟ್ಟಿಯಾದ ದನಿಯಲ್ಲಿ; ಸೌಜನ್ಯ=ವಿನಯಶೀಲತೆಯಿಂದ; ರಾಷ್ಟ್ರಾಧ್ಯಕ್ಷ=ಅಮೆರಿಕ ದೇಶದ ಪ್ರೆಸಿಡೆಂಟ್; ಅವಧಿ=ಕಾಲ/ಸಮಯ; ಆರಿಸು=ಆಯ್ಕೆಮಾಡುವುದು;
ಆ ಮನುಷ್ಯನನ್ನು ಮೆಚ್ಚಿಕೊಂಡಿದ್ದ ನ್ಯಾಯಾಧೀಶನಿಗೆ=ಇಟಲಿಯಿಂದ ವಲಸೆ ಬಂದಿರುವ ವ್ಯಕ್ತಿಯು ಅಮೆರಿಕದ ಪ್ರಜೆಯಾಗುವುದಕ್ಕೆ ಎಡೆಬಿಡದೆ ನಡೆಸುತ್ತಿರುವ ಪ್ರಯತ್ನಶೀಲತೆ ಮತ್ತು ಅವನ ವಿನಯವಂತಿಕೆಯು ನ್ಯಾಯಾದೀಶನ ಮೆಚ್ಚುಗೆಗೆ ಪಾತ್ರವಾಗಿದೆ; ಖಚಿತ=ನಿಶ್ಚಿತ;
ಅವನು ಹೊಸಭಾಷೆಯನ್ನು ಕಲಿಯಲಾರನೆಂದು ಈಗ ಖಚಿತವಾಯಿತು=ಈ ವ್ಯಕ್ತಿಯು ಇಂಗ್ಲಿಶ್ ನುಡಿಯನ್ನು ಕಲಿಯಲಾರನೆಂಬ ವಾಸ್ತವ ನ್ಯಾಯಾದೀಶರಿಗೆ ಮನದಟ್ಟಾಯಿತು; ನ್ಯಾಯಾದೀಶರು ಇಂಗ್ಲಿಶ್ ನುಡಿಯಲ್ಲಿ ಕೇಳಿದ ಪ್ರಶ್ನೆಗಳು ಈತನಿಗೆ ತಿಳಿಯುತ್ತಿರಲಿಲ್ಲ. ಇಟಲಿ ದೇಶದಿಂದ ಅಮೆರಿಕ ದೇಶಕ್ಕೆ ಬಂದಿದ್ದ ಈ ವ್ಯಕ್ತಿಯು “1492”ಎಂಬ ಸಂಕೆಯನ್ನು ಇಂಗ್ಲಿಶಿನಲ್ಲಿ ಹೇಳುವುದೊಂದನ್ನು ಮಾತ್ರ ಕಲಿತಿದ್ದ. ಆದ್ದರಿಂದ ನ್ಯಾಯಾದೀಶರು ಕೇಳುವ ಯಾವುದೇ ಬಗೆಯ ಪ್ರಶ್ನೆಗಳಿಗೆ ತನಗೆ ಗೊತ್ತಿದ್ದ ಇದೊಂದು ಸಂಕೆಯನ್ನು ಮಾತ್ರ ಹೇಳುತ್ತಿದ್ದ;
ಹೊಟ್ಟೆ ಹೊರೆಯುವುದು=ಇದೊಂದು ನುಡಿಗಟ್ಟು. ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಕಟ್ಟಿಕೊಳ್ಳುವುದಕ್ಕಾಗಿ ಯಾವ ಬಗೆಯ ದುಡಿಮೆಯ ಮೂಲಕ ಹಣವನ್ನು ಗಳಿಸುತ್ತಾನೆ ಎಂಬ ಸಂಗತಿ; ಕಷ್ಡದ ದುಡಿಮೆ=ಪರಿಶ್ರಮದಿಂದ ಕೂಡಿದ ಕೆಲಸ;
ಅವನು ಹೇಗೆ ಹೊಟ್ಟೆಹೊರೆಯುತ್ತಾನೆಂದು ಕೇಳಿದ್ದಕ್ಕೆ ಕಷ್ಟದ ದುಡಿಮೆಯಿಂದ ಎಂದು ತಿಳಿದುಬಂತು=ಅವನಿಗೆ ಅಮೆರಿಕಾದ ದೇಶ ಬಾಶೆಯಾದ ಇಂಗ್ಲಿಶಿನಲ್ಲಿ ವ್ಯವಹರಿಸಲು ಬಾರದಿದ್ದರೂ, ಪರಿಶ್ರಮದ ದುಡಿಮೆಯಿಂದ ತನ್ನ ಜೀವನವನ್ನು ಅಮೆರಿಕಾದಲ್ಲಿ ಕಟ್ಟಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿಯು ನ್ಯಾಯಾದೀಶರಿಗೆ ಅವನ ಅರ್‍ಜಿಯಲ್ಲಿದ್ದ ಕಸುಬಿನ ವಿವರದ ಮೂಲಕ ತಿಳಿದುಬಂದಿತು;
1492 ರಲ್ಲಿ ಕ್ರಿಸ್ಟೋಪರ್ ಕೊಲಂಬಸ್ ಎಂಬ ಹೆಸರಿನ ಇಟಲಿ ದೇಶದ ನಾವಿಕನು ಅಮೆರಿಕ ದೇಶವನ್ನು ಗುರುತಿಸಿದನು ಎಂದು ಚರಿತ್ರೆಯಲ್ಲಿ ಮಾಹಿತಿಯಿದೆ;
ಮತ್ತೆ ನಾಲ್ಕನೆಯ ಬಾರಿ ಹಾಜರಾದಾಗ ನ್ಯಾಯಾಧೀಶ ಮುಂದಿಟ್ಟ ಪ್ರಶ್ನೆ: “ಅಮೆರಿಕವನ್ನು ಕಂಡು ಹಿಡಿದಿದ್ದು ಯಾವಾಗ?”. ಅವನು ಸರಿಯಾಗಿ “1492” ಎಂದು ಉತ್ತರ ಕೊಟ್ಟನೆಂದು ಅವನಿಗೆ ಪೌರತ್ವ ನೀಡಲಾಯಿತು=ಅವನಿಗೆ ಗೊತ್ತಿರುವ ಒಂದೇ ಒಂದು ಇಂಗ್ಲಿಶ್ ಪದಕ್ಕೆ ಸರಿಹೊಂದುವ ಅಮೆರಿಕ ದೇಶದ ಸಂಗತಿಯನ್ನು ಕುರಿತು ನ್ಯಾಯಾದೀಶರು ಈಗ ಪ್ರಶ್ನೆಯನ್ನು ಕೇಳಿ, ಕಾನೂನಿನ ಪ್ರಕಾರ ಸರಿಯಾದ ಉತ್ತರವನ್ನು ಪಡೆದು, ಅಮೆರಿಕ ದೇಶದ ಪ್ರಜೆಯಾಗುವ ಅವಕಾಶವನ್ನು ಕಲ್ಪಿಸುವ ತೀರ್ಪು ನೀಡಿದರು.
ಈ ಕವನದಲ್ಲಿ ಚಿತ್ರಣಗೊಂಡಿರುವ ಸಂಗತಿಯು ನ್ಯಾಯಾದೀಶರ ಮಾನವೀಯ ನಿಲುವನ್ನು ಎತ್ತಿಹಿಡಿಯುವುದರ ಜತೆಗೆ, ಜಗತ್ತಿನ ದೇಶಗಳಲ್ಲಿ ಮಾನವರೇ ನಿಯೋಜಿಸಿಕೊಂಡಿರುವ ಕಾನೂನುಗಳು ಜಾತಿ, ಮತ, ಜನಾಂಗ, ಪ್ರಾಂತ್ಯ ಮತ್ತು ನುಡಿಗಳೆಂಬ ಎಲ್ಲೆಯನ್ನು ಮೀರಿ ಸಹಮಾನವರ ಬಗ್ಗೆ ಪ್ರೀತಿ, ಕರುಣೆ, ಸಮಾನತೆ ಮತ್ತು ಗೆಳೆತನದ ನಡೆನುಡಿಗಳಿಂದ ಕೂಡಿರಬೇಕು ಎಂಬುದನ್ನು ಪ್ರತಿಪಾದಿಸುತ್ತದೆ.
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು