ಚಾರಣ – ಒಂದು ಪಾಟ
“ದೇಶ ಸುತ್ತಿನೋಡು, ಕೋಶ ಓದಿ ನೋಡು” ಎಂಬ ಗಾದೆಯ ಮಾತನ್ನು ನಾವು ಓದಿಯೇ ಇರುತ್ತೇವೆ. ನಾವು ಇರುವ ಮಣ್ಣಿನ ಪರಿಚಯ ನಮಗೆ ಇರುವ ಹಾಗೆ, ನಾವು ಇರುವ ಸ್ತಳದ ಜೊತೆಗೆ ಸುತ್ತಲಿನ ಪ್ರದೇಶದ ಬಗ್ಗೆಯೂ ತಿಳಿದಿರಬೇಕು. ಅಂತೆಯೇ ನಮ್ಮ ಪೂರ‍್ವಜರ ಇತಿಹಾಸವನ್ನು ನಾವು ಪುಸ್ತಕಗಳಲ್ಲಿ ಓದಿ ತಿಳಿಯುವ ಹಾಗೆ ಪ್ರವಾಸದಿಂದಲೂ ಕೂಡ ನಾವು ತಿಳಿಯುವುದು, ಕಲಿಯುವುದು ಸಾಕಶ್ಟಿದೆ.
ಕಳೆದ ವರ‍್ಶದ ಚಳಿಗಾಲದಲ್ಲಿ ಸ್ನೇಹಿತರೆಲ್ಲಾ ಸೇರಿ ಪ್ರವಾಸಕ್ಕೆ ಯೋಜನೆ ಹಾಕಿದ್ದೆವು, ಆದರೆ ಹೋಗಿದ್ದು ಮಾತ್ರ 2024 ರ ಜನವರಿ 3ನೇ ತಾರೀಕು. ಮೊದಲಿಗೆ 8 ಜನರ ಗುಂಪಿನಲ್ಲಿ ಪ್ರವಾಸದ ಕುರಿತು ಚರ‍್ಚಿಸಲಾಯಿತು. ವಿಪರ‍್ಯಾಸ ನೋಡಿ! ಪ್ರವಾಸಕ್ಕೆ ಹೊರಡುವಾಗ 4 ಜನ ಮಾತ್ರ ಸಿದ್ದರಾದೆವು.
ಪ್ರವಾಸ ಅಂದಮೇಲೆ ಮುಕ್ಯವಾಗಿ ಬೇಕಾದದ್ದು ಯೋಜನೆ ಅಲ್ಲವೇ.. ಎಲ್ಲಿಗೆ.?, ಹೇಗೆ ಹೋಗುವುದು.? ಎನ್ನುವುದು ಮುಕ್ಯ. ಆದರೆ ಈ ಬಾರಿ ಹಾಗೇ ಆಗಲಿಲ್ಲ. ನಾವು ಮೊದಲಿಗೆ ಯೋಜನೆ ಹಾಕಿದ್ದು ಶನಿವಾರಸಂತೆ ಎನ್ನುವ ಪ್ರೇಕ್ಶಣೀಯ ಸ್ತಳಕ್ಕೆ, ಅಲ್ಲಿನ ಉಚ್ಚಂಗಿ ಎನ್ನುವ ಸ್ತಳಕ್ಕೆ ಚಾರಣ ಹೋಗುವ ಯೋಜನೆ. ಆದರೆ ನಾವು ಕಾರು ಹತ್ತಿ 50 ಕಿಲೋಮೀಟರ್ ಹೋಗಿದ್ದೆವು, ಅಶ್ಟರಲ್ಲಿ ನಮ್ಮ ಮೆದುಳಿಗೆ ಕೆಲಸ ಜಾಸ್ತಿ ಆಯ್ತು. ನಾವು ಹೋಗುವ ಸ್ತಳಕ್ಕಿಂತ ಮೂಡಿಗೆರೆಯ ಹತ್ತಿರ ಇರುವ ಎತ್ತಿನಬುಜ ಎನ್ನುವ ಸ್ತಳ ಚಾರಣಕ್ಕೆ ಸೂಪರ್ ಇದೆ, ಅಲ್ಲಿಗೆ ಹೋಗೋಣ ಎನ್ನುವ ವಿಚಾರ ಬಂದಾಗ ಎಲ್ಲರೂ ಅದಕ್ಕೆ ಒಪ್ಪಿ ನಮ್ಮ ಪ್ರವಾಸದ ದಿಕ್ಕನ್ನು ಬದಲಾಯಿಸಲಾಯಿತು .
ಶನಿವಾರಸಂತೆ, ಶುಕ್ರವಾರಸಂತೆ ಮೂಲಕ ಸಕಲೇಶಪುರ ತಲುಪುವ ವೇಳೆಗೆ ರಾತ್ರಿ 8 ಗಂಟೆಯಾಯಿತು. ನಾವು ರಾತ್ರಿ ಊಟದ ಬುತ್ತಿಯೊಡನೆ ಸುಮಾರು 10 ರಿಂದ 15 ಕಿಲೋಮೀಟರ್ ಹೋದ ನಂತರ ನಮಗೆ ಹೇಮಾವತಿ ಹೋಮ್ ಸ್ಟೇ ಕಂಡಿತು. ಅದಾಗಲೇ ಸಮಯ ರಾತ್ರಿ 10 ಗಂಟೆಯಾಗಿದ್ದರಿಂದ ಅಲ್ಲಿಯೇ ಉಳಿಯುವ ಎಂದು ತೀರ‍್ಮಾನ ಮಾಡಿದೆವು. ಹೋಮ್ ಸ್ಟೇ ನಲ್ಲಿ ಎಲ್ಲರೂ ರೀಪ್ರೆಶ್ ಆಗಿ ಮತ್ತೆ ಪೈರ್ ಕ್ಯಾಂಪ್ ಗೆ ತೆರಳಿದೆವು. ಅಲ್ಲಿಯೇ ನಮ್ಮ ರಾತ್ರಿ ಊಟ. ಬೆಂಕಿಯ ಮುಂದೆ ಕುಳಿತು ರಾತ್ರಿಯ ಊಟ ಮಾಡುವುದೇ ಒಂದು ಸುಂದರ ಅನುಬವ. ನಾವು ಮತ್ತೆ ನಮ್ಮ ರೂಮಿಗೆ ಬಂದು ಮಲುಗುವ ವೇಳೆಗೆ 1 ಗಂಟೆಯಾಗಿತ್ತು.
ರಾತ್ರಿ ಮಲಗಿದ್ದು ತಡವಾದ್ದರಿಂದ ಬೆಳಗ್ಗೆ 7ಕ್ಕೆ ಎದ್ದು, ನಂತರ ನಾವು ಎತ್ತಿನಬುಜ ಚಾರಣದ ಸ್ತಳಕ್ಕೆ ತೆರಳಿದೆವು. ಮಾರ‍್ಗಮದ್ಯೆ ತಿಂಡಿ ತಿಂದು ಎತ್ತಿನಬುಜ ತಲುಪಲು 11 ಗಂಟೆಯಾಯಿತು. ಆದರೆ ನೋಡಿ ಇಂದು ಹವಾಮಾನ ವೈಪರೀತ್ಯದಿಂದ ಸಣ್ಣ ಜಟಿ ಮಳೆಯು ಬೀಳುತ್ತಲೇ ಇತ್ತು. ಇದನ್ನು ಲೆಕ್ಕಿಸದೆ ಚಾರಣ ಶುರು ಮಾಡಿದೆವು.
ಮಳೆಯಲ್ಲಿ ನಾವು ನೆನೆಯುತ್ತಾ ಕಾಡಿನ ಆದಿಯಲ್ಲಿ ನಮ್ಮಿಶ್ಟದ ಪೋಟೋಗಳನ್ನು ಕ್ಲಿಕ್ಕಿಸುತ್ತಾ ಹರಟೆ ಹೊಡೆಯುತ್ತಾ, ಕೇವಲ ಮುಂದಿನ 50 ಅಡಿಯಲ್ಲಿ ಏನಿದೆ ಎನ್ನುವುದೂ ಕಾಣದಶ್ಟು ದಟ್ಟ ಮಂಜು ಜೊತೆಗೆ ಜಟಿಯ ಮಳೆ ನಡುವೆ ಕಾಣದ ದಾರಿಯಲ್ಲಿ ಸವೆದ ಹುಲ್ಲಿನ ಹಾದಿಯ ಮಾರ‍್ಗವನ್ನು ಹಿಂಬಾಲಿಸುತ್ತಾ ಸಾಗಿದೆವು. ಸುಮಾರು 3 ಕಿಲೋ ಮೀಟರ್ ನ ಚಾರಣವು ನಮಗೆ ಕುಶಿ ನೀಡಿತ್ತೂ ಕೂಡ. ಈ ಚಾರಣದಲ್ಲಿ ಸುಮಾರು 1.5 ಕಿಲೋಮೀಟರ್ ಕಾಡಿನಲ್ಲಿ ಸಂಚರಿಸಿದ ನಂತರ ನಮಗೆ ಬೆಟ್ಟದ ಪ್ರದೇಶ ಸಿಗುತ್ತದೆ. ಇದು ಹಚ್ಚ ಹಸಿರಿನಿಂದ ತುಂಬಿದ ಹುಲ್ಲುಗಾವಲು ಪ್ರದೇಶ. ಮುಂದೆ ಎತ್ತಿನ ಬುಜದ ಹತ್ತಿರದಲ್ಲಿ ಕಲ್ಲು ಬಂಡೆಗಳ ರಾಶಿ. ಕಶ್ಟ ಪಟ್ಟು ಕೊನೆಗೂ ನಮ್ಮ ಗುರಿಯನ್ನು ಮುಟ್ಟಿದೆವು. ಅಲ್ಲಿ ತಲುಪಿದ ನಂತರ ಇದೊಂದು ನಮಗೆ ಅವಿಸ್ಮರಣೀಯ ಸಮಯವಾಗಿದ್ದಂತು ಸುಳ್ಳಲ್ಲ.
ಆನೆಗಳ ಹಿಂಡು ಆಗಾಗ ಈ ಪ್ರದೇಶದ ಕಡೆ ಬರುತ್ತವಂತೆ. ಆ ಸಮಯದಲ್ಲಿ ಚಾರಣ ನಿಶಿದ್ದ ಎಂದು ಅಲ್ಲಿನ ಅರಣ್ಯ ಅದಿಕಾರಿಗಳು ಹೇಳಿದರು. ನಮ್ಮ ಅದ್ರುಶ್ಟಕ್ಕೆ ಅಂತಹ ಸನ್ನಿವೇಶ ನಮಗೆ ಎದುರಾಗಲಿಲ್ಲ. ಚಾರಣ ಮುಗಿಸಿ ನಾವು 1 ಗಂಟೆಗೆ ವಾಪಾಸು ಬಂದೆವು. ಇಲ್ಲಿಂದ 30 ಕಿಲೋ ಮೀಟರ್ ದೂರದಲ್ಲಿ ಸುಮಾರು 1000 ವರ‍್ಶಗಳಶ್ಟು ಹಳೆಯ ಹೊಯ್ಸಳರ ಕಾಲದ, ಬೆಟ್ಟದ ಬೈರವೇಶ್ವರ ಎನ್ನುವ ದೇವಸ್ತಾನಕ್ಕೆ ಬಂದೆವು. ಎಂತಹ ರಮಣೀಯ ನೋಟ ಎಂದರೆ, ಎಲ್ಲಿ ನೋಡಿದರೂ ಬೆಟ್ಟದ ಸಾಲುಗಳು, ಸುಂದರ ಪರಿಸರ. ನಂತರ ಅಲ್ಲಿಂದ ನಮ್ಮ ಮುಂದಿನ ಯೋಜನೆಯಾದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಕ್ಶೇತ್ರಕ್ಕೆ ತೆರಳಿದೆವು. ಮಾರ‍್ಗದ ನಡುವೆ ಆದ ಒಂದು ಕೆಟ್ಟ ಅನುಬವ ನಮ್ಮ ಪ್ರವಾಸದ ಸುಂದರ ಕ್ಶಣವನ್ನು ನುಂಗಲು ಬಿಡದೆ, ಕುಶಿಯಿಂದ ಕುಕ್ಕೆ ಕ್ಶೇತ್ರ ತಲುಪುವ ವೇಳೆಗೆ ಸಂಜೆ 5:30 ಆಗಿತ್ತು.
ಶ್ರೀ ಕ್ಶೇತ್ರ ತಲುಪಿದ ನಾವು ಪವಿತ್ರ ನದಿಯಾದ ನೇತ್ರಾವತಿಯಲ್ಲಿ ಸ್ನಾನ ಮಾಡಿ ದೇವಳದ ಅಂಗಳಕ್ಕೆ ಬಂದೆವು. ನಂತರ ದೇವರ ದರ‍್ಶನ ಪಡೆದು ಬರುವಾಗ ಕನ್ನಡ ಚಿತ್ರರಂಗದ ಕ್ಯಾತ ನತಿಯಾದ ರಕ್ಶಿತಾ ಪ್ರೇಮ್ ಅವರನ್ನು ಕಂಡು ಹಾಗೆ ಒಂದೆರಡು ಸೆಲ್ಪಿ ಕ್ಲಿಕ್ಕಿಸಿಕೊಂಡೆವು. ಮುಂದೆ ಮಕ್ಕಳಿಗೆಂದು ಆಟದ ಸಾಮಾನುಗಳನ್ನು ಕರೀದಿಸಿ, ಪ್ರಸಾದ ತೆಗೆದುಕೊಂಡು ರಾತ್ರಿ 8 ಗಂಟೆಗೆ ಅಲ್ಲಿಂದ ನಮ್ಮ ಊರಿನ ಕಡೆಗೆ ಹೊರಟೆವು. ಮಾರ‍್ಗ ಮದ್ಯೆ ಸುಳ್ಯದಲ್ಲಿ ಸಂತ್ರುಪ್ತಿ ಎನ್ನುವ ಹೋಟೆಲ್ ನಲ್ಲಿ ಸಂತ್ರುಪ್ತಿಯಾಗಿ ರಾತ್ರಿ ಬೋಜನ ಮಾಡಿ ಮನೆಗೆ ಬರುವ ಹೊತ್ತಿಗೆ ತಡರಾತ್ರಿ 2:30 ಆಗಿತ್ತು.
ಪ್ರವಾಸ ಎಂದರೆ ಹೇಗಿರಬೇಕು, ನಾವು ಹೇಗೆ ತಯಾರಿ ಮಾಡಿಕೊಳ್ಳಬೇಕು, ಅಲ್ಲಿ ಏನೆಲ್ಲಾ ತಿಳಿದುಕೊಳ್ಳಬೇಕು, ಅವಸರ ಮಾಡದೆ ಪ್ರವಾಸದ ಕ್ಶಣವನ್ನು ಅನುಬವಿಸಬೇಕು, ಹೀಗೆ ಅನೇಕ ವಿಶಯಗಳನ್ನು ಕಲಿತೆವು. ಈ ಪ್ರವಾಸ ನಮಗೆ ಕೇವಲ ಕುಶಿಯನ್ನಶ್ಟೇ ಅಲ್ಲದೆ, ಕೆಲವು ಜೀವನದ ಪಾಟಗಳನ್ನು ಹೇಳಿಕೊಟ್ಟಿದೆ ಅಂದರೆ ತಪ್ಪಿಲ್ಲ.
(ಚಿತ್ರಸೆಲೆ: pixabay.com )
ಸುಂದರ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಸುಂದರವಾದ ಬರಹ.