ಸುತ್ತಾಟ: ಹಚ್ಚ ಹಸಿರಿನ ಅರಕು ವ್ಯಾಲಿ – ಕಂತು 2

ಹನುಮಗೌಡ ಕಲಿಕೇರಿ.

ಕಂತು-1

ಹಿಂದಿನ ದಿನ ಅರಕು ಕಣಿವೆ ಹಾಗೂ ಮಾಡಗಡಕ್ಕೆ ಬೇಟಿ ನೀಡಿದ್ದ ನಾವು, ಮರುದಿನ ಬೆಳಗ್ಗೆ ಕಟಕಿ ಜಲಪಾತ ನೋಡಲು ಹೊರಟೆವು. ಇದು ಅರಕು ಕಣಿವೆಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿದೆ. ಮುಕ್ಯರಸ್ತೆಯನ್ನು ಬಿಟ್ಟು ನಮ್ಮ ಕಾರು ಕಟಕಿ ಜಲಪಾತಕ್ಕೆ ಹೋಗುವ ಕಣಿವೆಯ ಆಳಕ್ಕೆ ಇಳಿಯುತ್ತಿದ್ದಂತೆ ವಿಶಾಲ ಹಸಿರು ತಪ್ಪಲಿನ ಪರ‍್ವತ ಶ್ರೇಣಿ ಕಣ್ಮನಸೂರೆಗೊಂಡಿತು. ಈ ರಸ್ತೆಯಲ್ಲಿ ಸುಮಾರು ಅರ‍್ದ ಗಂಟೆಯ ಪ್ರಯಾಣದ ನಂತರ ಸ್ವಲ್ಪ ದೂರ ನಡೆದು ಜಲಪಾತದ ನೀರು ಬೀಳುವ ಜಾಗ ತಲುಪಿದೆವು. ಎತ್ತರದ ಪರ‍್ವತದಿಂದ ಎರಡು ಹಂತಗಳಲ್ಲಿ ನೀರು ಕೆಳಕ್ಕೆ ಹರಿಯುತ್ತದೆ. ಆ ನೀರು ಬಹಳ ತಂಪಾಗಿತ್ತು. ಮಕ್ಕಳು ಮತ್ತೆ ಯುವಕರು ನೀರಿನಲ್ಲಿ ಆಟವಾಡುತ್ತಿದ್ದರು. ನೀರು ದಿನಂಪ್ರತಿ ಹರಿದರೂ ಅಶ್ಟಾಗಿ  ಬಂಡೆಗಳ ಮೇಲೆ ಪಾಚಿ ಇರಲಿಲ್ಲ ಎಂಬುದೇ ವಿಶೇಶ. ನನಗೆ ಆ ಶುದ್ದ ನೀರು ವಿಶೇಶ  ಅನುಬೂತಿ ನೀಡಿತು.

ನಂತರ ನಾವು ನೋಡಲು ಹೊರಟಿದ್ದು ಅರಕು ಕಾಪಿ ಮ್ಯೂಸಿಯಂ. ಇದು ಅರಕು ಬಸ್ ಸ್ಟ್ಯಾಂಡಿನ ಹಿಂದೆಯೇ ಇದೆ. ಇಲ್ಲಿ ವಿವಿದ ಚಾಯಾಚಿತ್ರಗಳ ಮುಕಾಂತರ ಕಾಪಿಯ ಉಗಮ, ಬೆಳವಣಿಗೆ, ಅದನ್ನು ಬೆಳೆಯುವ ರೀತಿ, ಸಂಸ್ಕರಣೆ, ಅದರ ಬಾರತದ ಪ್ರವೇಶವನ್ನು ಸುದೀರ‍್ಗವಾಗಿ ತಿಳಿಸಲಾಗಿದೆ. ಈ ಮ್ಯೂಸಿಯಂ‍ನಲ್ಲಿ ಅಲಂಕಾರಿಕ ವಸ್ತುಗಳನ್ನು ಕರೀದಿಸಬಹುದು. ಹಲವು ಬಗೆಯ ಕಾಪಿ ಪುಡಿ ಮತ್ತು ಕಾಪಿಯಿಂದ ತಯಾರಿಸಿದ ಚಾಕೊಲೇಟ್ಗಳನ್ನೂ ಸಹ ಕರೀದಿಸಬಹುದು.

ಅರಕುವಿನ ಮತ್ತೊಂದು ಆಕರ‍್ಶಣೆ ಪ್ರತಿ ಶುಕ್ರವಾರ ನಡೆಯುವ ಗಿರಿಜನರ ಸಂತೆ. ಈ ಸಂತೆಗೆ ಸುತ್ತಲಿನ ಪರ‍್ವತ ಶ್ರೇಣಿಗಳ ಬುಡಕಟ್ಟು ಜನರು ವಿವಿದ ಬಗೆಯ ತಾಜಾ ತರಕಾರಿಗಳನ್ನು ತರುತ್ತಾರೆ. ಪಕ್ಕದ ಒರಿಸ್ಸಾದಿಂದಲೂ ಗಿರಿಜನರು ಈ ಸಂತೆಯಲ್ಲಿ ಬಾಗಿಯಾಗುತ್ತಾರೆ. ಹಲವಾರು ರೀತಿಯ ಗೆಡ್ಡೆ ಗೆಣಸುಗಳು, ಹಸಿ ಸೊಪ್ಪು, ಚೆರ‍್ರಿ ಟೊಮೆಟೊ, ಹಸಿರು ಬಾಳೆಕಾಯಿ ಗೊಂಚಲು ಹಾಗೂ ಸಾವಯವ ಅಕ್ಕಿ ಕಡಿಮೆ ದರದಲ್ಲಿ ಸಿಗುತ್ತವೆ. ಅರಕು ಕಣಿವೆಯ ಸಗಟು ವ್ಯಾಪಾರಿಗಳು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಕರೀದಿಸುತ್ತಾರೆ. ಗ್ರಾಮೀಣ ಜನರು ನಿತ್ಯ ಜೀವನದಲ್ಲಿ ಬಳಸುವ ಎಲ್ಲ ವಸ್ತುಗಳೂ ಇಲ್ಲಿ ಸಿಗುತ್ತವೆ. ಕುರಿ, ಮೇಕೆಗಳ ಮಾರಾಟವೂ ಜೋರಾಗಿರುತ್ತದೆ. ಗಿರಿಜನರ ಉಡುಗೆ ತೊಡುಗೆ, ಮೂಗಿನ ಮೂರು ಮೂಗುತಿಗಳು, ಹೊಸ ರೂಪದ ಬಂಗಾರದ ಒಡವೆಗಳು ನೋಡುಗರಿಗೆ ವಿಸ್ಮಯ  ತರಿಸುತ್ತವೆ.

ಅರಕು ಹತ್ತಿರದಲ್ಲಿ ಬೊರ‍್ರಾ ಗುಹೆಗಳು, ಚಾಪರೈ ಜಲಪಾತ, ತಡಿಮದ ಜಲಪಾತ, ಪದ್ಮಪುರಮ್  ಗಾರ‍್ಡನ್ಸ್, ದುಡುಮ ಜಲಪಾತ ಮತ್ತು ಲಂಬಾಸಿಂಗಿ ಹಿಲ್ ಸ್ಟೇಶನ್ ನೋಡಬಹುದು. ಇದೆಲ್ಲವನ್ನು ನೋಡಿಕೊಂಡು ನಾವು ಹೊಸ ಅನುಬವದೊಂದಿಗೆ ನಮ್ಮೂರಿನತ್ತ ದಾಪುಗಾಲು ಹಾಕಿದೆವು. ಪ್ರವಾಸ ಎಂದರೆ ಅದೇ ಅಲ್ಲವೆ, ಕಳೆದ ಕುಶಿಯ ಕ್ಶಣಗಳನ್ನು ಮರೆಯಲಾಗದ ನೆನಪುಗಳಾಗಿ ಮಾರ‍್ಪಡಿಸುವುದು.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks