ಕೂಚ್ ಬಿಹಾರ್ ಟ್ರೋಪಿ: ಇತಿಹಾಸ ಬರೆದ ಕರ‍್ನಾಟಕ

– ರಾಮಚಂದ್ರ ಮಹಾರುದ್ರಪ್ಪ.

ಬಾರತದ ಒಂದು ದೇಸೀ ಕ್ರಿಕೆಟ್ ರುತುವಿನಲ್ಲಿ ಪ್ರತಿಶ್ಟಿತ ರಣಜಿ ಟೂರ‍್ನಿಯೊಂದಿಗೆ ಇನ್ನೂ ಹತ್ತು ಹಲವಾರು ಪಂದ್ಯಾವಳಿಗಳನ್ನು ಬಿ.ಸಿ.ಸಿ.ಐ. ಅತ್ಯಂತ ವ್ರುತ್ತಿಪರತೆಯಿಂದ ಚಾಚೂತಪ್ಪದೆ ನಡೆಸುತ್ತದೆ. ಅದರಲ್ಲಿ ಹತ್ತೊಂಬತ್ತು ವರುಶದ ಒಳಗಿನ ಆಟಗಾರರಿಗಾಗಿ ಆಯೋಜಿಸಲ್ಪಡುವ ಕಿರಿಯರ ಬಹು-ದಿನಗಳ ಪಂದ್ಯಾವಳಿಯೇ ಹೆಚ್ಚು ಪ್ರಾಮುಕ್ಯತೆ ಹೊಂದಿರುವ ಕೂಚ್ ಬಿಹಾರ್ ಟ್ರೋಪಿ. 1945/46 ರಲ್ಲಿ ಮೊದಲ್ಗೊಂಡ ಈ ಪಂದ್ಯಾವಳಿ 1986/87 ರ ವರೆಗೂ ಶಾಲಾ ಪೋಟಿಯಾಗಿ ಹೆಸರು ಗಳಿಸಿತ್ತು. ಆ ಬಳಿಕ ಕೂಚ್ ಬಿಹಾರ್ ಟ್ರೋಪಿಯನ್ನು (ಹತ್ತೊಂಬತ್ತರ ವಯೋಮಿತಿಯ) ಕಿರಿಯರ ಪಂದ್ಯಾವಳಿಯನ್ನಾಗಿ ಮಾರ‍್ಪಡಿಸಲಾಯಿತು. ಈ ಟ್ರೋಪಿಯನ್ನು ‘ಕೂಚ್ ಬಿಹಾರ್’ ಪ್ರಾಂತ್ಯದ ಮಹಾರಾಜ ದೇಣಿಗೆಯಾಗಿ ನೀಡಿದ್ದರಿಂದ ಅವರ ಹೆಸರಿನಲ್ಲೇ ಟೂರ‍್ನಿ ಆರಂಬವಾದದ್ದು ಈಗ ಇತಿಹಾಸ. ತಮ್ಮ ರಾಜ್ಯದ ರಣಜಿ ತಂಡಗಳಲ್ಲಿ ಎಡೆ ಪಡೆಯಲು ಈ ಟೂರ‍್ನಿಯ ಪ್ರದರ‍್ಶನವೇ ಇಂದಿಗೂ ಮಾನದಂಡವಾಗಿರುವುದರಿಂದ ಯುವ ಆಟಗಾರರು ಪ್ರತೀ ವರುಶ ಅತೀ ಉತ್ಸಾಹದಿಂದ ಕಣಕ್ಕಿಳಿಯುವುದುನ್ನು ನಾವು ಇಂದಿಗೂ ಕಾಣಬಹುದು. ಮೊಹಿಂದರ್ ಅಮರ‍್ನಾತ್, ಸಚಿನ್ ತೆಂಡುಲ್ಕರ್, ದೋನಿ ಹಾಗೂ ಯುವರಾಜ್ ಸಿಂಗ್ ರಂತಹ ದಿಗ್ಗಜರ ಪ್ರತಿಬೆಯನ್ನು ಕ್ರಿಕೆಟ್ ಜಗತ್ತು ಮೊದಲಿಗೆ ಕಂಡದ್ದು ಅವರ ಬ್ಯಾಟ್ ಕೂಚ್ ಬಿಹಾರ್ ಪಂದ್ಯಗಳಲ್ಲಿ ಸದ್ದು ಮಾಡಿದಾಗಲೇ ಎಂಬುದು ಗಮನಿಸಬೇಕಾದ ಅಂಶ! ಹಾಗಾಗಿ ಕ್ರಿಕೆಟ್ ವಿಮರ‍್ಶಕರೊಟ್ಟಿಗೆ ಕೊಂಚ ಮಟ್ಟಿಗೆ ಅಬಿಮಾನಿಗಳೂ ಸಹ ತಮ್ಮ ನಾಡಿನ ಹೊಸ ಪ್ರತಿಬೆಗಳ ಚಳಕವನ್ನು ನೋಡಲು ಈ ಪಂದ್ಯಾವಳಿಗಾಗಿ ಕಾಯುತ್ತಾರೆ.

ಕೂಚ್ ಬಿಹಾರ್ ಟೂರ‍್ನಿಯಲ್ಲಿ ಕರ‍್ನಾಟಕ

ಬಾರತ ತಂಡಕ್ಕೆ ದಶಕಗಳಿಂದ ದಿಗ್ಗಜರನ್ನು ಕೊಡುಗೆಯಾಗಿ ನೀಡುತ್ತಿರುವ ಹೆಮ್ಮೆಯ ಕರ‍್ನಾಟಕಕ್ಕೆ ಎಳೆಯರ ಕೂಚ್ ಬಿಹಾರ್ ಟ್ರೋಪಿ ಮಾತ್ರ ಸದಾ ಗಗನ ಕುಸುಮವಾಗಿಯೇ ಉಳಿದಿತ್ತು. ಇತ್ತೀಚಿಗೆ ಸತತವಾಗಿ ನಾಕೌಟ್ ಹಂತವನ್ನು ತಲುಪಿದರೂ ಪ್ರಮುಕ ಗಟ್ಟದಲ್ಲಿ, ಕರ‍್ನಾಟಕ ಎಡವಿ ಬರಿಗೈಯಲ್ಲಿ ಮರಳುವುದು ಸಾಮಾನ್ಯವಾಗಿತ್ತು. ಹಲವು ಕ್ರೀಡಾ ವಿಶ್ಲೇಶಕರು ಹಾಗೂ ಟೂರ‍್ನಿಯನ್ನು ವರದಿ ಮಾಡುವ ಪತ್ರಕರ‍್ತರು, ಉತ್ತರದ ತಂಡಗಳು ಬೇಕೆಂದೇ ಆಟಗಾರರ ವಯಸ್ಸನ್ನು ಮೋಸದಿಂದ ಮಾರ‍್ಪಡಿಸಿ ತಮ್ಮ ತಂಡಗಳನ್ನು ಕಣಕ್ಕಿಳಿಸುತ್ತವೆ; ಅವರ ತಂಡಗಳಲ್ಲಿ ಕಡಿಮೆ ಎಂದರೂ ಐದಾರು ಮಂದಿ 21 ವಯಸ್ಸಿನ ಮೇಲ್ಪಟ್ಟ ಆಟಗಾರರೇ ಇರುತ್ತಾರೆ ಎಂದು ಅದಿಕ್ರುತವಾಗಿ ವರದಿ ಮಾಡಿರುವುದರಲ್ಲಿ ಹುರುಳಿಲ್ಲದೆ ಇಲ್ಲ. ಈ ಕುಟಿಲತನದಿಂದ ಸಹಜವಾಗಿಯೇ ಆ ತಂಡಗಳು ಪ್ರಾಬಲ್ಯ ಮೆರೆದಿವೆ ಎನ್ನದೆ ವಿದಿಯಿಲ್ಲ. ಆದರೆ ಕರ‍್ನಾಟಕದಲ್ಲಿ ಆಟಗಾರರನ್ನು ಕಡ್ಡಾಯವಾಗಿ ‘ಬೋನ್ ಮ್ಯಾರೋ’ ಪರೀಕ್ಶೆಗೆ ಒಳಪಡಿಸಿ ಕಿರಿಯರ ತಂಡವನ್ನು ಆರಿಸುವ ರೂಡಿ ಇದ್ದು, ಈ ಕಟಿಣ ನಿಯಮ ಎಲ್ಲರಿಂದ ಮೆಚ್ಚುಗೆ ಗಳಿಸಿದೆ. ಅರ‍್ದ ಶತಮಾನದಿಂದ ಟ್ರೋಪಿ ಬರ ಅನುಬವಿಸುತ್ತಿದ್ದ ಕನ್ನಡಿಗರ ಪಡೆಗೆ 2022/23 ರ ರುತುವಿನಲ್ಲಿ ಮಾಜಿ ಕರ‍್ನಾಟಕ ಆಟಗಾರ ಕೆ.ಬಿ. ಪವನ್ ಮುಕ್ಯ ಕೋಚ್ ಆಗಿ ಆಯ್ಕೆಯಾಗಿ ಬಂದದ್ದು ತಂಡಕ್ಕೆ ಹೊಸ ಬಗೆಯ ಹುರುಪು ನೀಡಿತು. ಬೌಲಿಂಗ್ ಕೋಚ್ ಎಸ್.ಎಲ್. ಅಕ್ಶಯ್ ರೊಂದಿಗೆ ಬಲಿಶ್ಟ ತಂಡವನ್ನು ಕಟ್ಟುವ ಪಣತೊಟ್ಟು ಮುನ್ನುಗ್ಗಿದ ಪವನ್ ರ ಪರಿಶ್ರಮಕ್ಕೆ ಯಶಸ್ಸು ಸಿಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ.

2023/24 ರ ಕೂಚ್ ಬಿಹಾರ್ ಟ್ರೋಪಿ – ಇತಿಹಾಸ ಬರೆದ ಕರ‍್ನಾಟಕ!

ಕಳೆದ 2022/23 ರ ಸಾಲಿನಲ್ಲಿ ಸೆಮಿಪೈನಲ್ ನಲ್ಲಿ ವಿದರ‍್ಬ ಎದುರು ಇನ್ನಿಂಗ್ಸ್ ಹಿನ್ನಡೆ ಅನುಬವಿಸಿ ಹೊರನಡೆದಿದ್ದ ಕರ‍್ನಾಟಕ, ಬಹುತೇಕ ಅದೇ ತಂಡದೊಂದಿಗೆ 2023/24 ರ ಕೂಚ್ ಬಿಹಾರ್ ಟ್ರೋಪಿ ಗೆದ್ದದ್ದು ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ ಸುವರ‍್ಣಾಕ್ಶರಗಳಲ್ಲಿ ಬರೆಯಬೇಕಾದ ಸಾದನೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಆಲ್ರೌಂಡರ್ ದೀರಜ್ ಗೌಡ ಮುಂದಾಳ್ತನದ ಕರ‍್ನಾಟಕ ಕಿರಿಯರ ತಂಡ ಅಂಜಿಕೆಯಿಲ್ಲದೆ ಆಡಿದ ಆಕ್ರಮಣಕಾರಿ ಆಟ, ಕ್ರಿಕೆಟ್ ವಲಯದಲ್ಲಿ ಮೆಚ್ಚುಗೆ ಗಳಿಸುವುದರ ಜೊತೆಗೆ ತವರಿನ ಅಬಿಮಾನಿಗಳ ನಲಿವಿಗೂ ಕಾರಣವಾಯಿತು. ದೆಹಲಿ ಎದುರು ಮೊದಲ ಲೀಗ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 23 ರನ್ ಗಳ ಜಯ ದಾಕಲಿಸಿದ ತಂಡ ಬಳಿಕ ಹಿಮಾಚಲ್ ಪ್ರದೇಶದ ಎದುರು 5 ವಿಕೆಟ್ ಗಳಿಂದ, ಉತ್ತರಾಕಂಡದ ಎದುರು ಇನ್ನಿಂಗ್ಸ್ ಮತ್ತು 47 ರನ್ ಗಳಿಂದ ಹಾಗೂ ಜಮ್ಮು ಕಾಶ್ಮೀರ ಎದುರು ಇನ್ನಿಂಗ್ಸ್ ಮತ್ತು 130 ರನ್ ಗಳ ಬರ‍್ಜರಿ ಗೆಲುವುಗಳನ್ನು ಸಾದಿಸಿತು. ಉತ್ತರ ಪ್ರದೇಶದ ಎದುರು ಒಳ್ಳೆ ಪೈಪೋಟಿ ನೀಡಿ, ನಂತರ ಕೇವಲ ಒಂದು ಗಂಟೆಯ ನಿರ‍್ಲಕ್ಶತೆಯ ಆಟದಿಂದ 93 ರನ್ ಗಳಿಂದ ಸೋತದ್ದನ್ನು ಹೊರತು ಪಡಿಸಿದರೆ, ತಂಡ ಯಾವುದೇ ಹಂತದಲ್ಲಿ ಹಿನ್ನಡೆ ಅನುಬವಿಸಲಿಲ್ಲ. ಬಳಿಕ ಮದ್ಯ ಪ್ರದೇಶದ ಎದುರು ಕ್ವಾರ‍್ಟರ್ ಪೈನಲ್ ಪಂದ್ಯದಲ್ಲಿ ನಾಯಕ ದೀರಜ್ ರ ಸೊಗಸಾದ ಆಲ್ ರೌಂಡ್ ಆಟ (6/77 ಮತ್ತು 157 ರನ್ ಗಳು) ಹಾಗೂ ಎಡಗೈ ಸ್ಪಿನ್ನರ್ ಹಾರ‍್ದಿಕ್ ರಾಜ್ ರ (5/45) ಸ್ಪೆಲ್, ತಂಡವನ್ನು ಸೆಮಿಪೈನಲ್ ಹೊಸ್ತಿಲಿಗೆ ತಂದು ನಿಲ್ಲಿಸಿತು. ಹಿಂದಿನ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ಮಿಂಚಿದ್ದ ಹಾರ‍್ದಿಕ್, ತಮಿಳು ನಾಡು ಎದುರು ಸೆಮೀಸ್ ನಲ್ಲಿ ಬ್ಯಾಟ್ ನಿಂದ ಮಿಂಚಿ (100) ಸಾಂಪ್ರದಾಯಿಕ ಎದುರಾಳಿಯ ಪತನಕ್ಕೆ ಮುನ್ನುಡಿ ಬರೆದರೆ, ಅಗಸ್ತ್ಯ ರಾಜು ಕೂಡ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಪಡೆದು ತಂಡಕ್ಕೆ ನೆರವಾದರು. ಟೂರ‍್ನಿಯಲ್ಲಿ ಒಂದಿಬ್ಬರ ಮೇಲಶ್ಟೇ ಅವಲಂಬಿತರಾಗದೆ ಒಟ್ಟಾರೆ ತಂಡವಾಗಿ ಒಳ್ಳೆ ಪ್ರದರ‍್ಶನ ನೀಡಿದ್ದ ಕರ‍್ನಾಟಕ, ಸ್ವಾಬಾವಿಕವಾಗಿಯೇ ಶಿವಮೊಗ್ಗದಲ್ಲಿ ಮುಂಬೈ ಎದುರು ನಡೆಯಲಿದ್ದ ಪೈನಲ್ ನಲ್ಲಿ ಸೆಣೆಸಲು ತನ್ನಂಬಿಕೆಯಿಂದ ಪ್ರಯಾಣ ಬೆಳೆಸಿತು.

‘ಪ್ರಕರ’ ನ ಮಿಂಚಿನ ಬ್ಯಾಟಿಂಗ್ ಗೆ ಕಮರಿದ ಮುಂಬೈ ಕನಸು!

ಮೊದಲಿಗೆ, ಕೂಚ್ ಬಿಹಾರ್ ಪಂದ್ಯವೊಂದನ್ನು ಮೊದಲ ಬಾರಿಗೆ ನೇರ ಪ್ರಸಾರದ ಮೂಲಕ ದೇಶದಾದ್ಯಂತ ತಲುಪಿಸಿದ ಬಿ.ಸಿ.ಸಿ.ಐ. ಗೆ ಮೆಚ್ಚುಗೆ ಸೂಚಿಸಲೇಬೇಕು. ಈ ನಡೆಯಿಂದ ಅಳವುಳ್ಳ ಎಳೆ ಆಟಗಾರರ ಚಳಕವನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ನಮ್ಮೆಲರಿಗೂ ದೊರೆಯಿತು. ಶಿವಮೊಗ್ಗದ ಕೆ.ಎಸ್.ಸಿ.ಎ ನವುಲೆ ಅಂಗಳದ ಪಿಚ್ ನ ಮರ‍್ಮವನ್ನರಿತ್ತಿದ್ದ ಕರ‍್ನಾಟಕ, ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಮುಂಬೈ ತಂಡವನ್ನು ತುಂಬಾ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಲಾಗದಿದ್ದರೂ ಹಾರ‍್ದಿಕ್ ರಾಜ್ ರ (4/80), ವೇಗಿಗಳಾದ ಸಮಿತ್ ದ್ರಾವಿಡ್ ರ 2/60 ಮತ್ತು ಸಮರ‍್ತ್ ರ 2/56 ಶಿಸ್ತಿನ ದಾಳಿಗೆ ಎದುರಾಳಿಯ ಹೋರಾಟ 380 ಕ್ಕೆ ಕೊನೆಗೊಂಡಿತು. “ಎರಡನೇ ದಿನದಿಂದ ಪಿಚ್ ಬ್ಯಾಟಿಂಗ್ ಗೆ ಹೇಳಿಮಾಡಿಸಿದಂತಾಗುತ್ತದೆ, ಹಾಗಾಗಿ ಹೆಚ್ಚು ಪ್ರಯಾಸ ಪಡದೆ ಸ್ವಾಬಾವಿಕ ಆಟ ಆಡಿ, ಕಂಡಿತ ರನ್ ಹೊಳೆ ಹರಿಸುತ್ತೀರ”, ಎಂಬ ಕೋಚ್ ಪವನ್ ರ ಸಲಹೆಯನ್ನು ಕೇಳಿದ ರಾಜ್ಯ ತಂಡದ ಬ್ಯಾಟರ್ ಗಳು ಮುಂಬೈ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡುತ್ತಾರೆ. ಬಲಗೈ ಆರಂಬಿಕ ಬ್ಯಾಟರ್ ಪ್ರಕರ್ ಚತುರ‍್ವೇದಿ ಅಬ್ಬರದ 404* ರನ್ ಬಾರಿಸಿ, ಈ ಟೂರ‍್ನಿಯ ಪೈನಲ್ ನಲ್ಲಿ ಹಿಂದಿದ್ದ ಯುವರಾಜ್ ಸಿಂಗ್ ರ 358 ರನ್ ಗಳ ದಾಕಲೆಯನ್ನು ಅಳಸಿ ಹಾಕಿದರು. ಹದಿನೆಂಟರ ಪ್ರಾಯದ ಈ ಹುಡುಗ ಎಲ್ಲೂ ವಿಚಲಿತನಾಗದೆ, ಒಂದೂ ಕೆಟ್ಟ ಹೊಡೆತ ಆಡದೆ, ಒಟ್ಟು 638 ಚೆಂಡುಗಳನ್ನು ಸಂಯಮದಿಂದ ಎದುರಿಸಿ, 3 ಸಿಕ್ಸರ್ ಹಾಗೂ 46 ಬೌಂಡರಿಗಳಿಂದ ಬರೋಬ್ಬರಿ 404 ಪೇರಿಸಿ ನಾಲ್ಕನೇ ದಿನದ ಕೊನೆಗೆ ಔಟಾಗದೆ ಉಳಿದಾಗ, ಮುಂಬೈ ಶರಣಾಗಲೇಬೇಕಾಯಿತು. ಪ್ರಕರ್ ಒಟ್ಟಿಗೆ ಜೊತೆಯಾದ ಹರ‍್ಶಿಲ್ ರ 169 ರನ್ ಗಳ ನೆರವಿನಿಂದ ಕರ‍್ನಾಟಕ ತಂಡ 890/8 ತಲುಪಿ, ಇನ್ನಿಂಗ್ಸ್ ಮುನ್ನಡೆಯ ಆದಾರದ ಮೇಲೆ ಚೊಚ್ಚಲ ಬಾರಿಗೆ ಪ್ರತಿಶ್ಟಿತ “ಕೂಚ್ ಬಿಹಾರ್ ಟ್ರೋಪಿ” ಯನ್ನು ಮುಡಿಗೇರಿಸಿಕೊಂಡಿತು. ಟ್ರೋಪಿಯೊಂದಿಗೆ ನಾಡದ್ವಜವನ್ನೂ ಹಿಡಿದು ‘ಕರ‍್ನಾಟಕ’ ಎಂದು ಜೈಕಾರ ಕೂಗುತ್ತಾ ಮುಗುಳ್ನಗುತ್ತಾ ಪೋಟೋ ತೆಗೆಸಿಕೊಂಡ ತಂಡ ಇನ್ನೊಮ್ಮೆ ಕನ್ನಡಿಗರ ಮನಗೆದ್ದಿತು. ಪಂದ್ಯದ ಬಳಿಕ ಮಾತಿಗಿಳಿದ ಮುಕ್ಯ ಕೋಚ್ ಪವನ್, ದೊಡ್ಡ ಮುನ್ನಡೆಯ ಬಳಿಕವೂ ಡಿಕ್ಲೇರ್ ಮಾಡದ ತಮ್ಮ ನಡೆಯನ್ನು ಪಿಚ್ ನ ಗುಣದ ಮೇಲೆ ತೆಗೆದುಕೊಂಡ ತೀರ‍್ಮಾನ ಎಂದು ಸಮರ‍್ತಿಸಿಕೊಂಡು, ಟೀಕಾಕಾರರಿಗೆ ಕ್ರಿಕೆಟ್ ನುಡಿಯಲ್ಲೇ ಉತ್ತರಿಸಿದರು. ನಾನು ಈ ತಂಡದ ಚುಕ್ಕಾಣಿ ಹಿಡಿದಾಗ ಗೆಲುವೊಂದನ್ನೇ ಗುರಿಯಾಗಿಟ್ಟುಕೊಳ್ಳದೆ ಆಟಗಾರರ ಪ್ರತಿಬೆಯನ್ನರಿತು ಎಲ್ಲಾ ಬಗೆಯ ಸವಾಲುಗಳನ್ನು ಎದುರಿಸಬಲ್ಲ ಪರಿಪೂರ‍್ಣ ತಂಡ ಕಟ್ಟಲು ಒಂದು ರೂಪುರೇಶಿಯನ್ನು ಅಣಿ ಮಾಡಿದೆ; ಅದು ಎರಡನೇ ವರ‍್ಶವೇ ಈ ಎಳೆಯರ ಪರಿಶ್ರಮದಿಂದ ಪಲಿಸಿತು ಎಂದು ಪವನ್ ಸಂತಸದಿಂದ ತಮ್ಮ ಹುಡುಗರ ಸಾದನೆಯನ್ನು ಹೊಗಳಿದರು!

ಪಂದ್ಯಾವಳಿಯಲ್ಲಿ ಕರ‍್ನಾಟಕದ ಪರ ಪ್ರಕರ್ ಚತುರ‍್ವೇದಿ ಎರಡು ಶತಕಗಳಿಂದ ಅತ್ಯದಿಕ 795 ರನ್ ಗಳಿಸಿದರೆ, ಅವರ ಹಿಂದೆ ಕಾರ‍್ತಿಕೇಯ ಕೂಡ ಎರಡು ಶತಕಗಳೊಂದಿಗೆ 459 ರನ್ ಪೇರಿಸಿದರು. ಆಲ್ರೌಂಡರ್ ಗಳಲ್ಲಿ ದೀರಜ್ ಗೌಡ 363 ರನ್ ಗಳೊಂದಿಗೆ 33 ವಿಕೆಟ್ ಗಳನ್ನೂ ಪಡೆದರೆ, ಸಮಿತ್ ದ್ರಾವಿಡ್ ಕೂಡ 362 ರನ್ ಗಳನ್ನು ಗಳಿಸಿ 16 ವಿಕೆಟ್ ಗಳನ್ನು ಕೆಡವಿದರು. ಇನ್ನು ಸ್ಪಿನ್-ಆಲ್ರೌಂಡರ್ ಹಾರ‍್ದಿಕ್ ರಾಜ್ ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ 299 ರನ್ ಗಳೊಂದಿಗೆ 28 ವಿಕೆಟ್ ಗಳನ್ನೂ ತಮ್ಮ ಸ್ಪಿನ್ ಚಳಕದಿಂದ ಕಬಳಿಸಿ, ತಂಡಕ್ಕೆ ಸಮತೋಲನ ನೀಡಿದರು. ಇಲ್ಲಿ ವೇಗಿಗಳ ಪೈಕಿ ಸಮರ‍್ತ್ ರ 25 ವಿಕೆಟ್ ಗಳನ್ನು ಕಡೆಗಣಿಸುವಂತಿಲ್ಲ. ಒಟ್ಟಾರೆಯಾಗಿ ಈ ತಂಡದ ಪ್ರದರ‍್ಶನ ಗಮನಿಸಿದರೆ, ಒಳ್ಳೆ ಗುಣಮಟ್ಟವುಳ್ಳ ಮೂವರು ಆಲ್ರೌಂಡರ್ ಗಳು ತಂಡದಲ್ಲಿದ್ದರೆ ಏನಾಗಬಹುದು ಎಂಬುದು ತಿಳಿಯುತ್ತದೆ. ಈಗಾಗಲೇ ದೀರಜ್, ಪ್ರಕರ್ ಮತ್ತು ಹಾರ‍್ದಿಕ್ ಕರ‍್ನಾಟಕದ ರಣಜಿ ತಂಡದಲ್ಲಿ ಎಡೆ ಪಡೆಯುವ ಮಟ್ಟಕ್ಕೆ ಪಕ್ವಗೊಂಡಿದ್ದಾರೆ ಎಂದು ರಾಜ್ಯದ ಮಾಜಿ ದಿಗ್ಗಜ ಆಟಗಾರ ಕೆ.ಜೆಶ್ವಂತ್ ಹೇಳಿರುವುದು ಈ ಯುವ ಆಟಗಾರರ ಅಗಾದ ಪ್ರತಿಬೆಗೆ ಎತ್ತುಗೆಯಾಗಿದೆ. ಟ್ರೋಪಿ ಗೆದ್ದ ತಂಡಕ್ಕೆ ಶುಬಾಶಯ ಕೋರಿ, ನಂತರ ನಾಯಕ ದೀರಜ್ ರನ್ನು ನಾಡಿನ ಮುಕ್ಯಮಂತ್ರಿ ಸಿದ್ದರಾಮಯ್ಯನವರು ಬೇಟಿ ಮಾಡಿದ್ದು ಈ ಗೆಲುವಿನ ಮಹತ್ವವನ್ನು ಸಾರಿ ಹೇಳುತ್ತದೆ. ಇತಿಹಾಸ ಹುಟ್ಟುಹಾಕಿದ ಈ ಯಶಸ್ವಿ ತಂಡದ ಹಲವಾರು ಆಟಗಾರರು ಮುಂಬರುವ ದಿನಗಳಲ್ಲಿ ರಾಜ್ಯದ ರಣಜಿ ತಂಡವನ್ನು ಕಂಡಿತ ಪ್ರತಿನಿದಿಸಲಿದ್ದಾರೆ. ಹಾಗೆಯೇ, ರಾಜ್ಯದ ಬವ್ಯ ಕ್ರಿಕೆಟ್ ಪರಂಪರೆಯನ್ನು ಈ ಪೀಳಿಗೆಯ ಹುಡುಗರು ಮುಂದುವರಿಸಿಕೊಂಡು ಹೋಗಲಿ ಎಂಬುದೇ ಕನ್ನಡಿಗರೆಲ್ಲರ ಆಶಯ! ಅಂತೆಯೇ, ಕಿರಿಯರ ಕ್ರಿಕೆಟ್ ನ ಹಲವು ದಶಕಗಳ ಟ್ರೋಪಿ ಬರವನ್ನು ನೀಗಿಸಿ ಮುಂಬರುವ ಆಟಗಾರರಿಗೆ ಸ್ಪೂರ‍್ತಿ ತುಂಬುವ ಕೆಲಸ ಮಾಡಿದ ಕೂಚ್ ಬಿಹಾರ್ ಟ್ರೋಪಿ ವಿಜೇತ ತಂಡವನ್ನು ಮತ್ತೊಮ್ಮೆ ನೆನೆಯುತ್ತಾ, ಆಟಗಾರರನ್ನು ಹರಸೋಣ.

(ಚಿತ್ರ ಸೆಲೆ: ಕೆ. ಬಿ. ಪವನ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: