ಕವಿತೆ: ಸುಗ್ಗಿಯ ಸಗ್ಗ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್.

ಸಂಕ್ರಾಂತಿ, Sankranti

 

ವರುಶದ ಜೊತೆಗೆ ಹರುಶವ ಬೆರೆಸಿ
ಹೊಸತನದ ಕಳೆ ತುಂಬುವ ಸಂಕ್ರಾಂತಿ
ಜನಪದ ಸೊಗಡಲಿ ಜಗಮಗಿಸೋ
ಸುಗ್ಗಿಯ ಸಗ್ಗವೀ ಸಂಕ್ರಾಂತಿ

ಬಣ್ಣ ಬಣ್ಣದ ರಂಗವಲ್ಲಿಯ ರಂಗಲ್ಲಿ
ರಂಗೇರುವ ಹಬ್ಬವೀ ಸಂಕ್ರಾಂತಿ
ರೈತನ ಪಸಲಿಗೆ ಬಕ್ತಿಯಿಂ ನಮಿಸಿ
ಬೂತಾಯಿಯ ಸ್ಮರಿಸುವ ಸಂಕ್ರಾಂತಿ

ಮಾಗಿಯ ಚಳಿಗೆ ಹುಗ್ಗಿಯ ಸವಿದು
ಮೈ ನವಿರೇಳಿಸೋ ಸಂಕ್ರಾಂತಿ
ಕಬ್ಬಿನ ಜಲ್ಲೆಯ ಸಿಹಿಯನು ಹೀರುತಾ
ಬಾಳಿಗೆ ನಲಿವನು ಬೆಸೆಯುವ ಸಂಕ್ರಾಂತಿ

ಗೆಜ್ಜೆಯ ಕಟ್ಟಿದ ರಾಸುಗಳ
ಕಿಚ್ಚನು ಹಾಯಿಸೋ ಸಂಕ್ರಾಂತಿ
ಎಳ್ಳು ಬೆಲ್ಲವ ಬೀರುತಾ
ಸಮರತೆಯ ಸಾರುವ ಸಂಕ್ರಾಂತಿ

ನೇಸರನ ಪತಸಂಚಲನಕೆ
ಜೊತೆಯಾಗುವ ಸಂಕ್ರಾಂತಿ
ಬದುಕಿನ ಹೆಜ್ಜೆಗೆ ಬರವಸೆಯ
ಬೆಳಕನು ಚೆಲ್ಲುವ ಸಂಕ್ರಾಂತಿ

( ಚಿತ್ರ ಸೆಲೆ: apk-cloud.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications