ಸಣ್ಣ ಕತೆ: ನಿಯತ್ತು

– ಶ್ಯಾಮಲಶ್ರೀ.ಕೆ.ಎಸ್.

ಅಲ್ಲೊಂದು ನಾಲ್ಕು ದಾರಿ ಕೂಡುವ ಟ್ರಾಪಿಕ್ ಜಂಕ್ಶನ್ ನಲ್ಲಿ ವಯಸ್ಸಾದ ಮುದುಕನೊಬ್ಬ ನಿತ್ಯ ಕೈಯೊಡ್ಡಿ ಬೇಡುತ್ತಿದ್ದ. ಯಾವ ಕಡೆ ಕೆಂಪು ಸಿಗ್ನಲ್ ಬೀಳುತ್ತಿತ್ತೋ ಆ ಹಾದಿಯನ್ನು ಹಿಡಿಯುತ್ತಿದ್ದ. ಕೆಲವರು ಈ ಮುದುಕ ಅಡ್ಡ ಬರುವನಲ್ಲ ಎಂದು ಒಳಗೊಳಗೇ ಗೊಣಗಿದರೆ, ಇನ್ನೂ ಕೆಲವರು ಅಯ್ಯೋ ಪಾಪ ಎಂದು ಚಿಲ್ಲರೆ ಕಾಸು ನೀಡುತ್ತಿದ್ದರು. ಹಸಿರು ಸಿಗ್ನಲ್ ಬೀಳುತ್ತಿದ್ದಂತೆ ಗಾಬರಿಯಿಂದ ನಡುಗುತ್ತ ಪಕ್ಕದಲ್ಲಿನ ಪುಟ್ ಪಾತ್ ಏರಿ ನಿಲ್ಲುತ್ತಿದ್ದ. ಅಲ್ಲಿಯೇ ರಸ್ತೆ ಬದಿಯಲ್ಲಿ ಇದ್ದ ಟೀ ಅಂಗಡಿಗೆ ಹೋಗಿ ಒಂದು ಬನ್ನು, ಒಂದು ಗ್ಲಾಸ್ ಟೀ ಕೊಂಡು ತಿಂದು, ಅಲ್ಲೇ ಒಂದು ಗೋಡೆಗೆ ಒರಗಿ ಕುಳಿತು ಆಕಾಶದೆಡೆಗೆ ನೋಡಿ ನಿಟ್ಟುಸಿರು ಬಿಡುತ್ತಿದ್ದ. ಯಾರೂ ಇಲ್ಲದ ಇಳಿ ವಯಸ್ಸಿನ ಅಜ್ಜನಿಗೆ ಬೀದಿ ನಾಯಿಯೊಂದು ಜೊತೆಯಾಗಿತ್ತು. ಅಜ್ಜ ತಾನು ತಿನ್ನುವ ಬನ್ನಲ್ಲೇ ತುಂಡು ಚೂರು ನಾಯಿಗೆ ದಿನ ಹಾಕುತ್ತಿದ್ದ. ಆ ಅಜ್ಜನನ್ನು ಕಂಡರೆ ಆ ಮೂಕ ಪ್ರಾಣಿಗೂ ಎಲ್ಲಿಲ್ಲದ ಅಕ್ಕರೆ.

ಇಳಿ ವಯಸ್ಸಿನ ಆ ಅಜ್ಜನ ಮನಸ್ಸಿನ ನೋವು ಕಣ್ಣಲ್ಲಿ ಆಗಾಗ್ಗೆ ಕಣ್ಣೀರಿನ ಮೂಲಕ ಇಣುಕುತ್ತಿತ್ತು. ಆಗೊಮ್ಮೆ ಈಗೊಮ್ಮೆ ದಾರಿಹೋಕರು ಯಾರಾದರೂ ಆ ಅಜ್ಜನಿಗೆ ಊಟ ನೀಡುತ್ತಿದ್ದರು. ರಾತ್ರಿಯ ಹೊತ್ತು ರಸ್ತೆ ಪಕ್ಕದ ಕಾಂಪ್ಲೆಕ್ಸ್ ನ ನೆಲ ಮಹಡಿಯೊಂದರಲ್ಲಿ ಮಲಗುತ್ತಿದ್ದ. ಯಾರೋ ಪುಣ್ಯಾತ್ಮರು ಆ ಅಜ್ಜನಿಗೆ ಹೊದಿಕೆಯೊಂದನ್ನು ನೀಡಿದ್ದರು. ದಿನವೂ ಹೇಗೋ ತನ್ನ ಬದುಕಿನ ದಾರಿಯ ಸವೆಸುತ್ತಿದ್ದ. ಇದನ್ನೆಲ್ಲ ಗಮನಿಸಿದ್ದ ಟೀ ಅಂಗಡಿಯವನಿಗೂ ತಾತನ ಬಗ್ಗೆ ಕರುಣೆ ಬಂದು, ಕಾಸು ಕೇಳದೇ ತಾನೇ ಎರಡು ಹೊತ್ತು ಟೀ ಮತ್ತು ಬನ್ನು ಕೊಡುತ್ತಿದ್ದ. ಟೀ ಅಂಗಡಿಯವನಿಗೆ ‘ನೀನು ಚೆನ್ನಾಗಿರಪ್ಪ’ ಎಂದು ಅಜ್ಜ ದಿನವೂ ಮನದಲ್ಲೇ ಆಶೀರ‍್ವದಿಸುತ್ತಿದ್ದ.

ಒಮ್ಮೆ ಇದ್ದಕ್ಕಿದ್ದ ಹಾಗೇ ಆ ಇಳಿ ವಯಸ್ಸಿನ ಅಜ್ಜ ಮಾಯವಾಗಿದ್ದ. ಬಾಲ ಅಲ್ಲಾಡಿಸುತ್ತಾ ನಾಯಿಯೂ ಆ ಕಡೆ ಈ ಕಡೆ ಪರದಾಡುತ್ತಿತ್ತು. ಟೀ ಅಂಗಡಿಯವನು ಆ ದಿನ ಅಜ್ಜ ಬರುವುದನ್ನೇ ಎದುರು ನೋಡುತ್ತಿದ್ದ. ಆಮೇಲೆ ತಿಳಿಯಿತು ಆ ಮುದುಕನ ಮಕ್ಕಳು ಆಗಾಗ್ಗೆ ಬಂದು ಆಸ್ತಿ ಪತ್ರಕ್ಕೆ ರುಜು ಹಾಕುವಂತೆ ಪೀಡಿಸುತ್ತಿದ್ದರಂತೆ. ತನಗೆ ಆಶ್ರಯ ನೀಡದೆ ಹೊರದಬ್ಬಿದ್ದ ಮಕ್ಕಳಿಗೆ ಆಸ್ತಿಯನ್ನು ನೀಡಲು ಒಲ್ಲದ ಮನಸ್ಸಿನಿಂದಲೇ ಅಂದು ಒತ್ತಡಕ್ಕೆ ಮಣಿದು ಸಹಿ ಹಾಕಿದ. ಸಹಿ ಸಿಕ್ಕಿದ ಕೂಡಲೇ ತನ್ನ ಕಡೆ ತಿರುಗಿ ನೋಡದ ಮಕ್ಕಳ ವರ‍್ತನೆಗೆ ಬಹಳ ಬೇಸರಗೊಂಡ ಅಜ್ಜ ಆಗಾತವಾಗಿ ರಸ್ತೆಯ ಬದಿಯಲ್ಲೇ ಸತ್ತುಬಿದ್ದಿದ್ದ. ಆ ಸ್ತಿತಿಯಲ್ಲಿ ಅಜ್ಜನನ್ನು ಕಂಡ ಮೂಕಪ್ರಾಣಿ ಓಡಿ ಬಂದು ಸಪ್ಪೆ ಮೋರೆ ಹಾಕಿ ತಾತನ ಬಳಿ ಒರಗಿ ಮಲಗಿತು. ನಾಯಿಗೆ ಇರುವ ನಿಯತ್ತು ಮನುಶ್ಯನಿಗೆ ಇಲ್ಲವೆಂಬುದು ಆ ಅಜ್ಜನ ಮಕ್ಕಳ ವರ‍್ತನೆಯಲ್ಲಿ ತಿಳಿದು ಬರುತ್ತದೆಯಲ್ಲವೇ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಚೆನ್ನಾಗಿದೆ, ಪುಟ್ಕತೆ

ಅನಿಸಿಕೆ ಬರೆಯಿರಿ: