ಕವಿತೆ: ನಿದಿರೆ ಓ ನಿದಿರೆ
ನಿದಿರೆ ಓ ನಿದಿರೆ
ಸದ್ದಿಲ್ಲದ ಇರುಳಲಿ ಕದ್ದು ಬರುವೆಯಾ
ಕಣ್ಣ ರೆಪ್ಪೆಯಲಿ ಜೋಕಾಲಿ ಆಡುವೆಯಾ
ಕಾರಿರುಳ ಚಿಂತೆ ಮರೆತು ಜಾರುವೆಯಾ
ನಿದಿರೆ ಓ ನಿದಿರೆ
ಕಲ್ಪನೆಯ ಗೂಡಲ್ಲಿ ಬಂದಿಯಾಗಿ
ಕನಸುಗಳ ಮೆಲುಕು ಹಾಕುವೆಯಾ
ಚಂದಿರನ ಚೆಲುವ ಚುಂಬಿಸಿ
ತಂಗಾಳಿಯ ಸೋಕಿಗೆ ಮೈಮರೆವೆಯಾ
ನಿದಿರೆ ಓ ನಿದಿರೆ
ಬೆಳದಿಂಗಳ ಬೆಳಕಿನ ರಂಗೋಲಿಯಲಿ
ರಾತ್ರಿ ಪೂರ ಕಂಗಳ ತಣಿಸುವೆಯಾ
ದಣಿವನು ದೂರ ಇಡುವೆಯಾ
ನಿದಿರೆ ಓ ನಿದಿರೆ
ನೀನಿಲ್ಲದೆ ಚಡಪಡಿಸಿದ್ದು ಅದೆಶ್ಟೋ
ಬೇಡದ ಚಿಂತೆ ಕಾಡಿ ಮರುಗಿದೆಶ್ಟೋ
ನಿದಿರೆ ಓ ನಿದಿರೆ
ಸನಿಹದಿ ಇದ್ದು ಕಣ್ಣೀರ ಒರೆಸುವೆಯಾ
ಮನಸಿನ ಬಾರವ ಹಗುರಾಗಿಸಿ
ನೋವುಗಳ ನಂದಿಸುವೆಯಾ
ನಿದಿರೆ ಓ ನಿದಿರೆ
ಕದ್ದೊಯ್ದ ರಾತ್ರಿಗಳ ಮರಳಿಸಿ
ನಯನಗಳ ಆವರಿಸುವೆಯಾ
ಸಿಹಿ ನೆನಪುಗಳ ತರುವೆಯಾ
ಉತ್ಸಾಹದ ಚಿಲುಮೆ ನೀನಾಗುವೆಯಾ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು