ಕಟ್ಟುಜಾಣ್ಮೆಯ ಕ್ರಾಂತಿ: ಓಪನ್ ಎ.ಐ – ಚಾಟ್ ಜಿ.ಪಿ.ಟಿ ಮತ್ತು ಸೋರಾ

– ನಿತಿನ್ ಗೌಡ.

ಅರಿಮೆ ಮತ್ತು ಚಳಕ ಹರಿಯೋ ನದಿ ತರಹ. ಆದ್ದರಿಂದ ನಮ್ಮ ಮುಂದೆ ಎರಡು ಆಯ್ಕೆ. ಈ ಬದಲಾವಣೆಗೆ ಹೊಂದಿಕೊಳ್ಳದೇ; ಈ ನದಿಯ ಪ್ರವಾಹದಲ್ಲಿ ಕೊಚ್ಚಿಹೋಗುವುದು. ಇಲ್ಲವೇ ಈ ನದಿಯಲ್ಲಿ ಹರಿಯೋ ನೀರಿನ ಆಸರೆ ಪಡೆದು ನಾವು ನಮ್ಮ ಏಳ್ಗೆಯ ದೋಣಿ ಏರಿ ಸ್ರುಜನಾತ್ಮಕವಾಗಿ ನಮ್ಮ ನಾಳುಗಳನ್ನು ಕಟ್ಟಿಕೊಳ್ಳುತ್ತಾ, ಇದರಿಂದ ದೊರೆಯುವ ಆರ್‍ತಿಕ ಪಸಲನ್ನು ಕೂಡಾ ಪಡೆದುಕೊಳ್ಳುತ್ತಾ ,ನಮ್ಮ ದಡ ಸೇರಬೇಕು.

ಚಾಟ್ ಜಿಪಿಟಿ( CHAT GPT )

ಇತ್ತೀಚಿಗೆ ಕಟ್ಟುಜಾಣ್ಮೆಯ ಹರವಿನಲ್ಲಿ ಬಹಳಶ್ಟು ಸದ್ದು ಮಾಡಿದ ಚಾಟ್ ಜಿಪಿಟಿ( CHAT GPT ) ಬಗೆಗೆ ಕೇಳಿರಬಹುದು. ಚಾಟ್ ಜಿಪಿಟಿಯಲ್ಲಿ ಹಲವು ಅವತರಣಿಕೆಗಳು ಇವೆ ಹಾಗೂ ಅದಕ್ಕೆ ತಕ್ಕಂತೆ ಅದರ ಕಸುವು ಹೆಚ್ಚುತ್ತಾ ಸಾಗುತ್ತದೆ. ಮೂಲವಾಗಿ ಅದು ನಮ್ಮಿಂದ ಕೇಳ್ವಿ ಪಡೆದು ಅದಕ್ಕೆ ಹೊಂದಬಹುದಾದ ಮಾಹಿತಿಯನ್ನು ಪಟ್ಯದ ಮೂಲಕ ನೀಡುತ್ತದೆ. ಎತ್ತುಗೆಗೆ, “ಇಮ್ಮಡಿ ಪುಲಕೇಶಿ ಬಗೆಗೆ ತಿಳಿಸು” ಎಂದೊಡನೆ; ನಮಗೆ ಅವರ ಬಗ್ಗೆ ಮಾಹಿತಿ ದೊರೆಯುತ್ತದೆ. ಅಲ್ಲದೇ ಇದು ಹಲವು ಎಡೆಗಳಲ್ಲಿ ಸಾಪ್ಟ್ವೇರ‍್ ಡೆವಲಪ್ಮೆಂಟ್ , ಕೊಳ್ಳುಗ ಸೇವೆಗಳು( customer services and product personalization, recommendation ), ಆರೋಗ್ಯ(Healthcare), ಟೆಲಿಕಮ್ಯುನಿಕೇಶನ್, ಕಲಿಕೆ, ಸಾರಿಗೆ , ಮಾದ್ಯಮ ಮತ್ತು ಮನೋರಂಜನೆ, ಉತ್ಪಾದನೆ, ಸಂಪನ್ಮೂಲ ನಿರ್‍ವಹಣೆ ಇತ್ಯಾದಿ ಹರವುಗಳಲ್ಲಿ ಜನರ ಕೆಲಸಗಳನ್ನು ಸುಲಬಗೊಳಿಸಲು ಸಹಕಾರಿಯಾಗುತ್ತಿದೆ. ಇದನ್ನು ಕಟ್ಟಿದ ಕಂಪನಿ ಓಪನ್ ಎ.ಐ ( Open AI). ಓಪನ್ ಎ.ಐ ನ ಬತ್ತಳಿಕೆಯಲ್ಲಿ ಇಂತಹ ಹಲವು ಹಮ್ಮುಗೆಗಳಿದ್ದು, ಸದ್ಯಕ್ಕೆ ಮುನ್ನಲೆಗೆ ಬರಲು ಸಜ್ಜಾಗಿರುವುದು ಸೋರಾ( Sora ).

ಸೋರಾ ( SORA )

ಸೋರಾ ಇದು ಬಳಸುಗರಿಂದ ಪಟ್ಯದ ಮೂಲಕ ಕೇಳ್ವಿ/ಮಾಹಿತಿ ಪಡೆದು, ಅದನ್ನು ಹಲವು ನೆಲಗಟ್ಟಲ್ಲಿ ಅರಿತುಕೊಂಡು, ಅದಕ್ಕೆ ಸರಿಹೊಂದುವ ವೀಡಿಯೋ(ಓಡುತಿಟ್ಟ) ವನ್ನು ಕಟ್ಟಿಕೊಡುತ್ತದೆ. ಜಗತ್ತು ಜಟಿಲತೆಯಿಂದ ಕೂಡಿದ್ದು, ಇಲ್ಲಿ ನಡೆಯುವ ಹಲವು ಬಗೆಯ ಒಡನಾಟಗಳನ್ನು, ಕಟ್ಟು ಜಾಣ್ಮೆಗೆ ಕಲಿಸಬೇಕಾಗುತ್ತದೆ. ಈ ಕಲಿಕೆಯನ್ನು ಬಳಸಿ ಸೋರಾ ದಿಟ ಜಗತ್ತಿನ ಅಣಕು(Simulate) ಮಾಡಿ, ವೀಡಿಯೋ ಗಳನ್ನು ಕಟ್ಟಿಕೊಡುವ ಮೊಗಸು ಮಾಡುತ್ತದೆ. ಅಲ್ಲದೇ ಇದರಿಂದ ಕಲಿತದ್ದನ್ನು ತರಬೇತಿ ಮಾದರಿಗಳನ್ನಾಗಿ ಸಿದ್ದಪಡಿಸಿಕೊಂಡು ಜಗತ್ತಿನ ದಿಟ ಸಮಸ್ಯೆಗಳನ್ನು, ಬೇಕು-ಬೇಡಗಳನ್ನು ಬಗೆಹರಿಸಲು ಬಳಸಲಾಗುತ್ತದೆ.

ಸದ್ಯಕ್ಕೆ ಸೋರಾ ಬಳುಸುಗರಿಂದ ಪಡೆದ ಮಾಹಿತಿಯಿಂದ, ಅದಕ್ಕೆ ಸರಿಹೊಂದುವ ಒಂದು ನಿಮಿಶದ ವರೆಗಿನ ವೀಡಿಯೋವನ್ನು ತಯಾರಿಸಿ ಕೊಡುತ್ತದೆ. ಸದ್ಯಕ್ಕೆ ಇದನ್ನು ರೆಡ್ ಟೀಮರ್‍ಸ್ ( Cyber security professional), ವಿನ್ಯಾಸಕರು, ಚಿತ್ರ ಕಲಾವಿದರು, ಸಿನಿಮಾದವರು ಇಂತಹವರಿಗೆ ಬಳಸಲು ನೀಡಲಾಗಿದ್ದು. ಇವರಿಂದ ದೊರೆತ ಹಿನ್ನುಣಿಕೆಗಳನ್ನು ಬಳಸಿ, ಇನ್ನೂ ಸ್ರುಜನಾತ್ಮಕವಾಗಿ ಮುಂದಿನ ಹಂತಕ್ಕೆ ಬೆಳೆಯಲು ಬಳಸಿಕೊಳ್ಳಲಾಗುತ್ತಿದೆ. ಸದ್ಯಕ್ಕೆ ಸೋರಾ ಹಲವು ಪಾತ್ರ, ಹಿನ್ನೆಲೆಗಳನ್ನು ಒಳಗೊಂಡ ಜಟಿಲವಾದ ಸೀನ್ ಗಳನ್ನು, ಮತ್ತು ಆ ಸೀನ್ ಅಲ್ಲಿ ಇರುವಂತಹ ಹಲಬಗೆಯ ಚಲನೆಗಳನ್ನು ಅರಿತು ವೀಡಿಯೋ ತಯಾರಿಸಬಲ್ಲದು. ಇದು ಬಳಸುಗ ಏನು ಕೇಳುತ್ತಾನೋ ಅಶ್ಟೇ ಅಲ್ಲದೆ; ಆ ಕೇಳ್ವಿ ಯಾವ ಕಾಲಗಟ್ಟದ್ದಿರಬಹುದು, ಆಗಿನ ಕಾಲದ ಜಗತ್ತಿನ ವಾಸ್ತವಗಳು ಹೇಗಿರಬಹುದು ಎಂಬುದನ್ನು ಅಂದಾಜಿಸಿ ವೀಡಿಯೋ ತಯಾರಿಸಿಕೊಡುತ್ತದೆ. ಬಳಸುಗರರ ಕೋರಿಕೆಯಲ್ಲಿನ ಬಾಶೆಯನ್ನು ಚೆನ್ನಾಗಿ ಅರಿತು ಅದರಲ್ಲಿನ ಪಾತ್ರಗಳ ಹಾವಬಾವವನ್ನು ಚೆನ್ನಾಗಿ ಅರಿತುಕೊಂಡು ಉತ್ತರಿಸುತ್ತದೆ.

 

ಓಪನ್ ಎಐ ನಿಂದ ತಯಾರಾದ ಒಂದು ವೀಡಿಯೋ ಚಿಕ್ಕ ತುಣುಕು

ಮುಂದಿನ ಕಂತಿನಲ್ಲಿ ಸೋರಾ ನ ಸಾದ್ಯತೆಗಳು ಮತ್ತು ಅದರ ಮಂದಿನ ಸವಾಲುಗಳನ್ನು ಬಗ್ಗೆ ಬೆಳಕು ಚೆಲ್ಲೋಣ.

( ಮಾಹಿತಿಸೆಲೆ ಮತ್ತು ಚಿತ್ರಸೆಲೆ openai.com , bing.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: