ದಕ್ಶಿಣ ಕಾಶಿ ಶಿವಗಂಗೆ (ಕಂತು – 2)

– ಶ್ಯಾಮಲಶ್ರೀ.ಕೆ.ಎಸ್.

ಕಂತು – 1ಕಂತು-3, ಕಂತು-4

ಶಿವಗಂಗೆ ಬೆಟ್ಟದಲ್ಲಿ ಹಲವು ನೋಡತಕ್ಕ ಜಾಗಗಳಿವೆ. ಕುಮುದ್ವತಿ ನದಿಯು ಹುಟ್ಟುವುದು ಇದೇ ಶಿವಗಂಗೆಯಲ್ಲಿ ಎಂಬುದು ಈ ಬೆಟ್ಟದ ಹಿರಿಮೆಗಳಲ್ಲೊಂದು. ಕುಮುದ್ವತಿ ನದಿಯು ಅರ‍್ಕಾವತಿ ನದಿಯ ಉಪನದಿಯಾಗಿದೆ.

ಈ ಕ್ಶೇತ್ರಕ್ಕೆ ಕಕುದ್ಗಿರಿ ಎಂಬ ಮತ್ತೊಂದು ವಿಶೇಶವಾದ ಹೆಸರಿದೆ. ‌ ಮೈಸೂರು ಅರಸ ಚಿಕ್ಕದೇವರಾಯರ ಕಾಲದಲ್ಲಿ ಕಳಲೆಯ ನಂಜರಾಜ ಎಂಬ ದಳವಾಯಿಯೋರ‍್ವ ಕವಿಯೂ ಆಗಿದ್ದನಂತೆ. ಆತನ ಬರಹದಲ್ಲಿ ಗಿರಿಶಿಕರಗಳನ್ನು ವರ‍್ಣಿಸುವಾಗ ಶಿವಗಂಗೆಯನ್ನು ಕಕುದ್ಗಿರಿ ಎಂದು ಕರೆದಿದ್ದನಂತೆ. ಪುರಾಣದ ಪ್ರಕಾರ ಶಿವನ ಆಣತಿಯಂತೆ ಪಾರ‍್ವತಿಯನ್ನು ಬೂಲೋಕ ಸಂಚಾರ ಮಾಡಿಸುವಾಗ ನಂದೀಶ್ವರನು ಈ ಬೆಟ್ಟದ ಸೌಂದರ‍್ಯಕ್ಕೆ ಮನಸೋತು ತನ್ನ ಕುತ್ತಿಗೆ ಮೇಲೆ ದೀರ‍್ಗಕಾಲ ಬೆಟ್ಟವನ್ನು ಹೊತ್ತಿದ್ದನೆಂಬ ಕಾರಣಕ್ಕೆ ಕಕುದ್ಗಿರಿ ಎಂಬ ಹೆಸರು ಬಂತು ಎಂಬ ನಂಬಿಕೆಯಿದೆ. ಶಿವಗಂಗೆಯಲ್ಲಿ ಶಿವನ ರೂಪದಲ್ಲಿರುವ ಲಿಂಗ, ಬೆಟ್ಟದಲ್ಲಿ ಗಂಗೆ ರೂಪದಲ್ಲಿ ಉದ್ಬವಿಸಿರುವ ಅನೇಕ ಜಲಮೂಲಗಳಿರುವುದರಿಂದ ಶಿವಗಂಗೆ ಎಂಬ ಹೆಸರು ಬಂದಿತು ಎಂಬ ಮಾತಿದೆ. ಇನ್ನೊಂದು ಮೂಲದ ಪ್ರಕಾರ ಕಣಾದ ಎಂಬ ರುಶಿ ಏಕಪಾದದಲ್ಲಿ ನಿಂತು ನೀರಿಗಾಗಿ ತಪಸ್ಸು ಮಾಡಿದ ಅವನ ತಪೋಶಕ್ತಿಯಿಂದ ಶಿವನ ಜಟೆಯಲ್ಲಿದ್ದ ನೀರು ಬೂಮಿಗೆ ಹರಿದು ಬಂತು. ಹಾಗಾಗಿ ಇದು ಶಿವಗಂಗೆ ಎಂದು ಹೆಸರು ಪಡೆಯಿತೆಂಬ ಪುರಾಣ ಕತೆಗಳಿವೆ.

ಪ್ರತಿ ವರ‍್ಶವು ಮಕರ ಸಂಕ್ರಾತಿಯ ಹಬ್ಬದ ದಿನದಂದೆ ಇಲ್ಲಿ ಜಾತ್ರೆ ನಡೆಯುತ್ತದೆ ಇದನ್ನು ಶಿವಗಂಗೆ ಜಾತ್ರೆ ಅತವಾ ಗಂಗಾದರೇಶ್ವರನ ಜಾತ್ರೆ ಎನ್ನುವರು (ಬೆಂಗಳೂರಿನಲ್ಲಿಯೂ ಸಹ ಪ್ರಸಿದ್ದ ಗವಿಗಂಗಾದರೇಶ್ವರನ ದೇವಾಸ್ತಾನವಿರುವುದರಿಂದ ಶಿವಗಂಗೆ ಗಂಗಾದರೇಶ್ವರನ ಜಾತ್ರೆ ಎನ್ನುವರು).

ಇಲ್ಲಿ ವರ‍್ಶವಿಡೀ ಜಲದಾರೆಯಿರುತ್ತದೆ ಎನ್ನುವ ಮಾತಿದೆ. ಇಲ್ಲಿರುವ ರಹಸ್ಯ ಸುರಂಗ ಮಾರ‍್ಗದಲ್ಲಿ ಸಾಗಿದರೆ ಶ್ರೀರಂಗಪಟ್ಟಣವನ್ನೂ ತಲುಪಬಹುದಂತೆ ಹಾಗೂ ಬೆಂಗಳೂರಿನ ಗವಿಗಂಗಾದರೇಶ್ವರ ದೇವಾಲಯಕ್ಕೂ ನೇರ ಸಂಪರ‍್ಕವಿದೆ ಎನ್ನಲಾಗುತ್ತದೆ. ಆದರೆ ಇದು ಇಂದು ಶಿತಿಲಾವಸ್ತೆಯಲ್ಲಿದ್ದು ಮುಚ್ಚಿಹೋಗಿದೆ. ಪಾಳುಬಿದ್ದ ಈ ಸುರಂಗ ಹಾವು ಚೇಳುಗಳಂತಹ ವಿಶ ಜಂತುಗಳ ಆವಾಸಸ್ತಾನದ ಜೊತೆಗೆ ಉಸಿರಾಟದ ತೊಂದರೆಯಾಗಿ ಅಪಾಯ ಸಂಬವಿಸಬಹುದು ಎನ್ನುವ ಉದ್ದೇಶದಿಂದ ಬಕ್ತಾದಿಗಳು ಸುರಂಗದೊಳಗೆ ಪ್ರವೇಶಿಸುವುದು ನಿಶೇದಿಸಲಾಗಿದೆ.

ಇಲ್ಲಿನ ಗಂಗಾದರೇಶ್ವರನ ಉದ್ಬವ ಶಿವಲಿಂಗದ ಮೇಲೆ ಅಬಿಶೇಕದ ವೇಳೆ ತುಪ್ಪ ಸವರಿದರೆ ಬೆಣ್ಣೆಯಾಗಿ ಪರಿವರ‍್ತನೆಯಾಗುವ ಅಚ್ಚರಿ ಸಂಗತಿಯೊಂದಿದೆ. ಬೆಟ್ಟದ ಶಿವಲಿಂಗದ(ಗಂಗಾದರೇಶ್ವರ) ಎದುರು ನಂದಿ ವಿಗ್ರಹವಿದೆ. ಎಡಕ್ಕೆ ಪಾರ‍್ವತಿ ದೇವಸ್ತಾನ, ಮುಂಬಾಗದಲ್ಲಿ ಕೆಂಪೇಗೌಡರ ಕಜಾನೆ ಇದ್ದ ಗುಹೆಯಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಸುಂದರ ಕೆತ್ತನೆಯ ಏಕಶಿಲಾ ಸ್ತಂಬಗಳಿಂದ ನಿರ‍್ಮಾಣವಾದ ಕೆಂಪೇಗೌಡರ ಹಜಾರ, ಕಲ್ಯಾಣ ಮಂಟಪ, ಸಪ್ತ ಮಾತ್ರುಕೆ, ನವಗ್ರಹ ವಿಗ್ರಹಗಳಿವೆ,

ಇದಲ್ಲದೆ ಕೆಂಪೇಗೌಡರು ಶಿವಗಂಗೆಯ ಗಂಗಾದರೇಶ್ವರನ ಪರಮ ಬಕ್ತನಾಗಿದ್ದು ದೇಗುಲವನ್ನು ಅವರು ಒಂದು ನ್ಯಾಯಾಸ್ತಾನ ಎಂದು ಪರಿಗಣಿಸಿದ ಬಗ್ಗೆ ಐತಿಹ್ಯಗಳಿವ. ಜತೆಗೆ ಅಲ್ಲಿರುವ ಕೆಂಪೇಗೌಡರ ಹಜಾರವಂತೂ ತುಂಬಾ ಪ್ರಸಿದ್ದವಾದುದಾಗಿದೆ. ಅಲ್ಲಿನ ಒಂದು ಕಂಬದ ಮೇಲೆ ಉಬ್ಬುಶಿಲ್ಪವಿದೆ, ಅದು ಕೆಂಪೇಗೌಡರದ್ದೇ ಚಿತ್ರ ಎಂದು ಹೇಳಲಾಗುತ್ತದೆ.

12ನೇ ಶತಮಾನದಲ್ಲಿ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಾಗ ವಿಶ್ಣುವರ‍್ದನನು ಇಲ್ಲಿಗೆ ಹಲವು ಬಾರಿ ಬೇಟಿ ನೀಡಿದ್ದಾನೆ ಎಂದು ಶಾಸನಗಳಿಂದ ತಿಳಿದು ಬರುತ್ತದೆ. ವಿಶ್ಣುವರ‍್ದನನ ಪಟ್ಟದರಸಿ ಶಾಂತಲೆ ಬೆಟ್ಟದ ಮೇಲಿಂದ ಕೆಳಕ್ಕೆ ಬಿದ್ದು ಸತ್ತಳು ಎಂಬ ಐತಿಹ್ಯವಿದೆ. ಆದರೆ ಶಾಸನದಾರಿತ ದಾಕಲೆಯಂತೆ ಕ್ರಿಸ್ತ ಶಕ-1131ರಲ್ಲಿ ಸಲ್ಲೇಕನ ವ್ರತ ಮಾಡಿ ದೇಹತ್ಯಾಗ ಮಾಡಿದ್ದು ಇದೆ ಶಿವಗಂಗೆ ಬೆಟ್ಟದಲ್ಲಿ ಎಂದು ಶ್ರವಣಬೆಳಗೊಳದ ಶಾಸನದಿಂದ ತಿಳಿದು ಬರುತ್ತದೆ. ಆ ಸ್ತಳವನ್ನು ಈಗ ಶಾಂತಲಾ ಡ್ರಾಪ್ ಎಂದು ಕರೆಯಲಾಗುತ್ತದೆ.

(ಮುಂದುವರೆಯುವುದು)

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks