ಕವಿತೆ: ಎಲ್ಲವೂ ಕ್ಶಣಿಕ
– ಮಹೇಶ ಸಿ. ಸಿ.
ನಗುವ ಮೊಗವೊಂದು
ಔಶದಿಯು ಮನಕೆ,
ನೂರು ಕಶ್ಟಗಳ
ನೂಕುವುದು ಹೊರಗೆ
ನನ್ನ ನಂಬಿಕೆ ಎಂದೂ
ಇರಲಿ ಸರಿಯಾದ ದಾರಿ,
ಸತ್ಯ ಮಾರ‍್ಗವ ಬಿಟ್ಟು
ಹೋಗದಿರು ಪರದಾರಿ
ಅಂದು ನೀನ್ಯಾರೋ ನಾನ್ಯಾರೋ
ಯಾರಿಗೆ ಗೊತ್ತಿತ್ತು,
ಇಂದು ನಮ್ಮ ನಡುವೆ ಹಬ್ಬಿದೆ
ಸ್ನೇಹವೆಂಬ ಬಳ್ಳಿಯ ಸುತ್ತು
ಸ್ನೇಹಕ್ಕೆ ಮಾಡದಿರು
ಕನಸಲ್ಲೂ ವಂಚನೆ,
ಆತ್ಮವಂಚಿಸಿ ನಡೆದರೆ
ಮುಂದಿದೆ ಬಹು ದೊಡ್ಡ ದಂಡನೆ
ಅನ್ಯರ ಬಗೆಗೆ ನೀ
ನುಡಿಯದಿರು ಮಿತ್ಯ,
ನಿನಗೆ ಸಿಗದೂ ಏನೂ
ಸುಳ್ಳನ್ನೇ ನುಡಿದರೂ ನಿತ್ಯ
ನೀನ್ನ ಊಹೆಯು ನಿನಗೆ
ಕುಶಿಯ ನೀಡಬಹುದಿಂದು,
ಆ ಕೆಟ್ಟ ಅಮಲಲ್ಲಿ
ನಿನ್ನತನ ಮಣ್ಣಾಗುವುದೆಂದು
ನಿನ್ನ ನಡೆ ನುಡಿಯು
ನಿನ್ನ ಏಳಿಗೆಗೆ ಇರಲಿ,
ಹೋದ ನಂಬಿಕೆ ಮತ್ತೆಂದೂ
ಬಾರದು ಮನಸಿಗೆ ಮರಳಿ
ನೇರ ನುಡಿಯುವವನಿಗಿದೆ
ಕಶ್ಟದಾ ಮಾಲೆ,
ಕೊನೆಗೆ ಸತ್ಯಕ್ಕೆ ಜಯವಂತೆ
ಅದರಲ್ಲಿಲ್ಲ ಯಾವ ಲೀಲೆ
ಇದ್ದಶ್ಟೇ ದಿನ ಮಾತ್ರ
ನಲಿವು-ನೋವಿನ ಮರುಕ,
ನನ್ನ ಬಾಳಲಿ ಬಂದ
ಅವರೂ-ಇವರೂ ಎಲ್ಲವೂ ಕ್ಶಣಿಕ
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು