ಬ್ರೆಕ್ಟ್ ಕವನಗಳ ಓದು – 14 ನೆಯ ಕಂತು
– ಸಿ.ಪಿ.ನಾಗರಾಜ.
*** ಕ್ರಿಟಿಕಲ್ ಧೋರಣೆಯ ಬಗ್ಗೆ ***
(ಕನ್ನಡ ಅನುವಾದ: ಯು. ಆರ್. ಅನಂತಮೂರ್‍ತಿ)
ಕ್ರಿಟಿಕಲ್ ಧೋರಣೆ ಬಹುತೇಕರಿಗೆ
ನಿಷ್ಫಲವೆನ್ನಿಸಬಹುದು
ಕಾರಣ
ರಾಜ್ಯ ವ್ಯವಸ್ಥೆ ತಮ್ಮ ವಿಮರ್ಶೆಗೆ
ಕಿಮ್ಮತ್ತಿನ ಬೆಲೆ ಕೊಡದೆ
ನಿರ್ಲಕ್ಷಿಸುತ್ತಾರೆ ಅಂತ.
ಕಾಣೋದಕ್ಕೆ ನಿಷ್ಫಲ ಎನ್ನಿಸೋದು
ನಮ್ಮ ದೌರ್ಬಲ್ಯದ ಫಲವೇ ಇರಬಹುದಲ್ಲವೆ
ವಿಮರ್ಶೆಗೆ ತೋಳ್ಬಲ ಸಿಗಲಿ
ಆಗ ನೋಡಿ
ಹೇಗೆ ವ್ಯವಸ್ಥೆಗಳು ಉರುಳುತ್ತವೆ.ಒಂದು ನದಿಯ ದಿಕ್ಕು ಬದಲಿಸೋದು
ಒಂದು ಹಣ್ಣಿನ ಗಿಡವನ್ನು ಕಸಿ ಮಾಡೋದು
ಮನುಷ್ಯನ್ನ ವಿದ್ಯಾವಂತ ಮಾಡೋದು
ರಾಜ್ಯ ವ್ಯವಸ್ಥೆಯನ್ನ ಬದಲಿಸೋದು
ಇವೆಲ್ಲ ಅರ್ಥಪೂರ್ಣ
‘ಕ್ರಿಟಿಕಲ್ ಧೋರಣೆಯ ’ ಉದಾಹರಣೆಗಳಷ್ಟೇ ಅಲ್ಲ
ಕಲಾತ್ಮಕ ಕ್ರಿಯೆ ಕೂಡ.
ದುಡಿಯುವ ಶ್ರಮಜೀವಿಗಳ ಹಸಿವು, ಬಡತನ, ಅಪಮಾನ ಮತ್ತು ಸಾವು ನೋವಿಗೆ ಕಾರಣವಾಗಿರುವ ರಾಜಕೀಯ, ಸಾಮಾಜಿಕ, ದಾರ್ಮಿಕ ಮತ್ತು ಸಂಪತ್ತಿನ ಒಡೆತನದ ವ್ಯವಸ್ತೆಗಳಲ್ಲಿರುವ ಕೆಡುಕುಗಳನ್ನು ಗುರುತಿಸಿ, ಅವನ್ನು ತೊಡೆದುಹಾಕುವ ನಿಲುವನ್ನು ತಳೆದು, ಅದಕ್ಕೆ ಅನುಗುಣವಾಗಿ ಕ್ರಿಯಾಶೀಲರಾಗಿ ಬಾಳಬೇಕೆಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.
ಕ್ರಿಟಿಕಲ್ / CRITICAL=ಇದು ಒಂದು ಇಂಗ್ಲಿಶ್ ಪದ. ಯಾವುದೇ ಒಂದು ವಸ್ತುವಿನಲ್ಲಿರುವ / ಸಂಗತಿಯಲ್ಲಿರುವ / ವ್ಯಕ್ತಿಯಲ್ಲಿರುವ / ವ್ಯವಸ್ತೆಯಲ್ಲಿರುವ ಸರಿ-ತಪ್ಪುಗಳನ್ನು ಮತ್ತು ಒಳಿತು-ಕೆಡುಕನ್ನು ಗುರುತಿಸಿ, ತಪ್ಪುಗಳನ್ನು ಮತ್ತು ಕೆಡುಕನ್ನು ತೊಡೆದುಹಾಕಿ, ಸರಿಯಾದ ಮತ್ತು ಒಳಿತಿನ ವಿಚಾರಗಳನ್ನು ಎತ್ತಿಹಿಡಿಯುವುದು.
ಧೋರಣೆ=ನಿಲುವು/ಆಲೋಚನೆಯ ರೀತಿ; ಬಹುತೇಕರು=ಹೆಚ್ಚಿನ ಮಂದಿ; ನಿಷ್ಫಲ+ಎನ್ನಿಸಬಹುದು; ನಿಷ್ಫಲ=ಪ್ರಯೋಜನವಿಲ್ಲದ್ದು/ಉಪಯುಕ್ತವಲ್ಲದ್ದು;
ಕ್ರಿಟಿಕಲ್ ಧೋರಣೆ=ಜನಸಮುದಾಯದ ನಡೆನುಡಿಯನ್ನು ರೂಪಿಸುತ್ತಿರುವ ಮತ್ತು ನಿಯಂತ್ರಿಸುತ್ತಿರುವ ವ್ಯವಸ್ತೆಗಳಲ್ಲಿನ ಕಟ್ಟುಕಟ್ಟಳೆಗಳನ್ನು ಮತ್ತು ಸಂಪ್ರದಾಯಗಳನ್ನು ಒರೆಹಚ್ಚಿ ನೋಡಿ, ಅವುಗಳಲ್ಲಿ ಜನರ ಬದುಕಿಗೆ ಕೇಡನ್ನು ಬಗೆಯುವ ಸಂಗತಿಗಳನ್ನು ತೊಡೆದುಹಾಕಬೇಕೆಂಬ ನಿಲುವನ್ನು ತಳೆಯುವುದು. ಉದಾಹರಣೆ: ಜನಾಂಗದ ಮೇಲರಿಮೆ; ಮೇಲು-ಕೀಳಿನ ಜಾತಿ ವ್ಯವಸ್ತೆ; ಲಿಂಗ ತಾರತಮ್ಯ; ಸಂಪತ್ತಿನ ವಿತರಣೆಯಲ್ಲಿನ ಅಸಮಾನತೆ;
ಕ್ರಿಟಿಕಲ್ ಧೋರಣೆ ಬಹುತೇಕರಿಗೆ ನಿಷ್ಫಲವೆನ್ನಿಸಬಹುದು=ಕ್ರಿಟಿಕಲ್ ದೋರಣೆಯನ್ನು ಕುರಿತು ಸಮಾಜದಲ್ಲಿ ಬಹಳಶ್ಟು ಮಂದಿ “ಇದರಿಂದ ಸಮಾಜದಲ್ಲಿ ಏನೊಂದು ಬದಲಾವಣೆಯಾಗುವುದಿಲ್ಲ… ಇದು ಯಾರ ಮೇಲೂ ಯಾವುದೇ ಪರಿಣಾಮವನ್ನು ಬೀರುವುದಿಲ್ಲ” ಎಂದು ನಿರಾಶೆಯಿಂದ ನುಡಿಯುತ್ತಾರೆ;
ಕಾರಣ=ಏಕೆಂದರೆ; ರಾಜ್ಯ=ರಾಜನೊಬ್ಬನ ಇಲ್ಲವೇ ಸರಕಾರದ ಆಡಳಿತಕ್ಕೆ ಒಳಪಟ್ಟ ನಾಡು; ವ್ಯವಸ್ಥೆ=ಏರ‍್ಪಾಡು/ಕಟ್ಟಳೆ/ನಿಯಮ;
ರಾಜ್ಯ ವ್ಯವಸ್ಥೆ=ಜಗತ್ತಿನಲ್ಲಿರುವ ಪ್ರತಿಯೊಂದು ದೇಶದಲ್ಲಿಯೂ ರಾಜಕೀಯ / ಸಾಮಾಜಿಕ / ದಾರ್‍ಮಿಕ / ಸಂಪತ್ತಿನ ವಿತರಣೆಯಲ್ಲಿ ಅನೇಕ ಬಗೆಯ ಕಟ್ಟುಕಟ್ಟಲೆಗಳಿರುತ್ತವೆ; ರಾಜಕೀಯವಾಗಿ ಪ್ರಜಾಪ್ರಬುತ್ವ / ಮಿಲಿಟೆರಿ ಆಡಳಿತ / ಸಮತಾವಾದ (ಕಮ್ಯುನಿಸಮ್) / ಸಮಾಜವಾದ (ಸೋಶಿಯಲಿಸಮ್) / ನಿರಂಕುಶ ಆಡಳಿತ ಇರುತ್ತದೆ; ಸಾಮಾಜಿಕವಾಗಿ ಮತ್ತು ದಾರ್‍ಮಿಕವಾಗಿ ಬಹುಬಗೆಯ ಬುಡಕಟ್ಟುಗಳು, ಜನಾಂಗಗಳು, ದರ್‍ಮಗಳು ಮತ್ತು ಜಾತಿಗಳು ಇರುತ್ತವೆ; ಸಂಪತ್ತಿನ ಒಡೆತನದಲ್ಲಿ ಬಡವರು / ಮದ್ಯಮ ವರ್‍ಗದವರು / ಸಿರಿವಂತರು ಇರುತ್ತಾರೆ. ಈ ಸಂಗತಿಗಳೆಲ್ಲವೂ ಒಂದಕ್ಕೊಂದು ಹೆಣೆದುಕೊಂಡು ಮಾನವ ಸಮಾಜ ರೂಪುಗೊಂಡಿದೆ.
ಇಂತಹ ವ್ಯವಸ್ತೆಯಲ್ಲಿ ರಾಜಕೀಯ ಅದಿಕಾರವಿರುವ, ಜನಾಂಗ ಜಾತಿ ದರ್‍ಮದ ಬಲವುಳ್ಳ ಮತ್ತು ದೊಡ್ಡ ಪ್ರಮಾಣದ ಆಸ್ತಿ ಒಡವೆ ವಸ್ತುಗಳನ್ನು ಹೊಂದಿರುವ ವ್ಯಕ್ತಿಗಳ ವಂಚನೆ, ಸುಲಿಗೆ ಮತ್ತು ದಬ್ಬಾಳಿಕೆಯಿಂದ ಕೋಟಿಗಟ್ಟಲೆ ಶ್ರಮಜೀವಿಗಳು ಹಸಿವು, ಬಡತನ ಮತ್ತು ಅಪಮಾನದಲ್ಲಿ ಸಿಲುಕಿ ನರಳುತ್ತ, ಜೀವನಕ್ಕೆ ಅತ್ಯಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ ಮತ್ತು ಆರೋಗ್ಯದಿಂದ ವಂಚಿತರಾಗಿರುತ್ತಾರೆ;
ವಿಮರ್ಶೆ=ಸರಿ / ತಪ್ಪುಗಳನ್ನು ಒರೆಹಚ್ಚಿ ನೋಡುವುದು; ಕಿಮ್ಮತ್ತು=ಜೀವನದಲ್ಲಿ ಒಳ್ಳೆಯದೆಂದು ತಿಳಿಯುವುದು; ಕಿಮ್ಮತ್ತಿನ ಬೆಲೆ=ಇದೊಂದು ನುಡಿಗಟ್ಟು. ಜನರ ಒಳ್ಳೆಯ ನಡೆನುಡಿಗಳನ್ನು ಕಂಡಾಗ ಆನಂದಗೊಂಡು ಮೆಚ್ಚುಗೆಯನ್ನು ಸೂಚಿಸುವುದು; ಕೊಡದೆ=ನೀಡದೆ; ನಿರ್ಲಕ್ಷಿಸು=ಕಡೆಗಣಿಸುವುದು;
ಕಿಮ್ಮತ್ತಿನ ಬೆಲೆ ಕೊಡದೆ ನಿರ್ಲಕ್ಷಿಸು=ಸಂಪೂರ್‍ಣವಾಗಿ ಕಡೆಗಣಿಸು/ತಿರಸ್ಕರಿಸು;
ಕಾರಣ… ರಾಜ್ಯ ವ್ಯವಸ್ಥೆ ತಮ್ಮ ವಿಮರ್ಶೆಗೆ ಕಿಮ್ಮತ್ತಿನ ಬೆಲೆ ಕೊಡದೆ ನಿರ್ಲಕ್ಷಿಸುತ್ತಾರೆ ಅಂತ=ತಮ್ಮ ಕಣ್ಣ ಮುಂದಿನ ರಾಜ್ಯ ವ್ಯವಸ್ತೆಯಲ್ಲಿ ಅನೇಕ ತಪ್ಪುಗಳು ಕಂಡು ಬಂದರೂ, ಬಹುತೇಕ ಮಂದಿ ವ್ಯವಸ್ತೆಯಲ್ಲಿನ ಕೆಡುಕುಗಳ ಬಗ್ಗೆ ದನಿ ಎತ್ತುವುದಿಲ್ಲ. ಇದಕ್ಕೆ ಕಾರಣವೇನೆಂದರೆ ವ್ಯವಸ್ತೆಯಲ್ಲಿನ ಕೆಡುಕುಗಳನ್ನು ಗುರುತಿಸಿ ಆಡುವ ಮಾತುಗಳನ್ನು ಆಡಳಿತದ ಗದ್ದುಗೆಯಲ್ಲಿರುವವರು, ಜಾತಿ ಮತದ ಗುರುಗಳು ಮತ್ತು ಸಿರಿವಂತರು ಕಿವಿಯ ಮೇಲೆ ಹಾಕಿಕೊಳ್ಳುವುದಿಲ್ಲ ಮತ್ತು ಆ ರೀತಿ ಮಾತನಾಡುವವರನ್ನು ಕೀಳಾಗಿ ಕಾಣುತ್ತಾರೆ;
ಕಾಣೋದಕ್ಕೆ=ಕಾಣುವುದಕ್ಕೆ/ಮೇಲು ನೋಟಕ್ಕೆ; ನಿಷ್ಫಲ=ಪರಿಣಾಮಕಾರಿಯಲ್ಲದುದು/ಪ್ರಯೋಜನವಿಲ್ಲದುದು; ಎನ್ನಿಸೋದು=ಎನ್ನಿಸುವುದು; ದೌರ್ಬಲ್ಯ=ಬಲಹೀನತೆ/ಶಕ್ತಿಯಿಲ್ಲದಿರುವುದು; ಫಲ=ಪರಿಣಾಮ/ಪ್ರಯೋಜನ;
ಕಾಣೋದಕ್ಕೆ ನಿಷ್ಫಲ ಎನ್ನಿಸೋದು ನಮ್ಮ ದೌರ್ಬಲ್ಯದ ಫಲವೇ ಇರಬಹುದಲ್ಲವೆ=ದೇಶಕ್ಕೆ / ಜನತೆಗೆ ಒಳಿತನ್ನು ಉಂಟುಮಾಡುವಂತಹ ರೀತಿಯಲ್ಲಿ ಹೇಳಿದ ಮಾತುಗಳಿಗೆ ಯಾವುದೇ ಬೆಲೆಯಿಲ್ಲ ಮತ್ತು ಜನಸಮುದಾಯದ ಒಳಿತನ್ನು ಚಿಂತಿಸುವ ವ್ಯಕ್ತಿಗಳಿಗೆ ಮನ್ನಣೆಯಿಲ್ಲ ಎಂದು ನಿರಾಶೆಯಿಂದ ನುಡಿಯುವುದು ನಮ್ಮ ಶಕ್ತಿಗುಂದಿದ ಹೇಡಿತನವನ್ನು ಸಂಕೇತಿಸುತ್ತದೆ. ಆದ್ದರಿಂದಲೇ ನಮ್ಮ ರಾಜ್ಯ ವ್ಯವಸ್ತೆಯಲ್ಲಿರುವ ಕೆಡುಕುಗಳು ನಮಗೆ ಗೊತ್ತಿದ್ದರೂ, ಅವನ್ನು ಹೇಳಿದರೆ “ದೇಶದ್ರೋಹಿ / ದರ್‍ಮದ್ರೋಹಿ / ಬಯೋತ್ಪಾದಕ” ಎಂಬ ಆಪಾದನೆಗೆ ಗುರಿಯಾಗಿ, ಸೆರೆವಾಸ ಇಲ್ಲವೇ ಸಾವು ನೋವಿಗೆ ಬಲಿಯಾಗಬೇಕಾಗುವುದೋ ಎಂಬ ಅಂಜಿಕೆಯಿಂದ ಗಟ್ಟಿಯಾದ ದನಿಯಲ್ಲಿ ಹೇಳಲು ಶಕ್ತಿಯಿಲ್ಲದೆ ಅವುಗಳ ಬಗ್ಗೆ ತುಟಿಬಿಚ್ಚದೆ ಮೂಕರಾಗಿದ್ದೇವೆ;
ತೋಳ್ಬಲ ಸಿಗುವುದು=ಈ ನುಡಿಗಟ್ಟು ಒಂದು ರೂಪಕವಾಗಿ ಬಳಕೆಯಾಗಿದೆ. ದೇಶದ ಜನರು ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಪಡೆದು ರಾಜ್ಯ ವ್ಯವಸ್ತೆಯಲ್ಲಿನ ಕೆಡುಕನ್ನು ಎದುರಿಸಲು ಸಿದ್ದರಾಗಿ ಒಗ್ಗಟ್ಟಿನಿಂದ ಕ್ರಿಯಾಶೀಲರಾಗ ಮುನ್ನಡೆದಾಗ ಅಪಾರವಾದ ಶಕ್ತಿಯು ದೊರಕುತ್ತದೆ; ಉರುಳು=ಕೆಳಕ್ಕೆ ಬೀಳುವುದು/ನಾಶವಾಗು;
ವಿಮರ್ಶೆಗೆ ತೋಳ್ಬಲ ಸಿಗಲಿ… ಆಗ ನೋಡಿ… ಹೇಗೆ ವ್ಯವಸ್ಥೆಗಳು ಉರುಳುತ್ತವೆ= ರಾಜ್ಯ ವ್ಯವಸ್ತೆಯ ಕಾರಣದಿಂದಾಗಿ ವಂಚನೆ, ಸುಲಿಗೆ ಮತ್ತು ಕ್ರೂರತನದ ಹಿಂಸಾಚಾರಕ್ಕೆ ಒಳಗಾಗಿ ನರಳುತ್ತಿರುವ ಜನರೆಲ್ಲರೂ ಚಿಂತನಶೀಲರ ಮಾತುಗಳನ್ನು ಕೇಳಿ, ಎಚ್ಚೆತ್ತು ಅವನ್ನು ತೊಡೆದುಹಾಕಲು ಒಗ್ಗಟ್ಟಿನಿಂದ ಕ್ರಿಯಾಶೀಲರಾದರೆ, ವ್ಯವಸ್ತೆಯಲ್ಲಿನ ಕೆಡುಕುಗಳು ನಾಶಗೊಳ್ಳುತ್ತವೆ/ಇಲ್ಲವಾಗುತ್ತವೆ;
ಒಂದು ನದಿಯ ದಿಕ್ಕು ಬದಲಿಸೋದು=ಹರಿಯುತ್ತಿರುವ ನದಿಗೆ ಅಣೆಕಟ್ಟನ್ನು ಕಟ್ಟಿ, ನೀರನ್ನು ಜನಹಿತಕ್ಕಾಗಿ ಮತ್ತು ಬೇಸಾಯಕ್ಕಾಗಿ ಬಳಸುವ ಕೆಲಸ;
ಕಸಿ ಮಾಡು/ಕಸಿ ಕಟ್ಟು=ಗಿಡ ಮರ ಬಳ್ಳಿಗಳ ರೆಂಬೆಯನ್ನು ಕತ್ತರಿಸಿ, ಮತ್ತೊಂದು ರೆಂಬೆಗೆ ಅಂಟಿಸಿ, ಬೆಳೆಯುವಂತೆ ಮಾಡುವ ಕ್ರಿಯೆ; ಮಾಡೋದು=ಮಾಡುವುದು;
ಒಂದು ಹಣ್ಣಿನ ಗಿಡವನ್ನು ಕಸಿ ಮಾಡೋದು=ಒಂದೇ ಗುಂಪಿಗೆ ಸೇರಿದ ಎರಡು ಹಣ್ಣಿನ ಗಿಡಗಳ ರೆಂಬೆಗಳನ್ನು ಕತ್ತರಿಸಿ, ಮತ್ತೆ ಅವನ್ನು ಜತೆಗೂಡಿಸಿ ಕಟ್ಟಿ ಬೆಳೆಯುವಂತೆ ಮಾಡಿದಾಗ, ಕಸಿಕಟ್ಟಿದ ಗಿಡವು ಈ ಎರಡು ಹಣ್ಣಿನ ಗಿಡಗಳ ಒಳ್ಳೆಯ ಅಂಶವನ್ನು ಪಡೆದುಕೊಂಡು ಬೆಳೆದು ಮೊದಲಿನ ಎರಡು ಗಿಡಗಳಿಗಿಂತಲೂ ರುಚಿಕರವಾದ ಮತ್ತು ಗುಣಮಟ್ಟದ ಹಣ್ಣುಗಳನ್ನು ಬಿಡುತ್ತದೆ;
ಮನುಷ್ಯನ್ನ=ವ್ಯಕ್ತಿಯನ್ನು; ವಿದ್ಯಾವಂತ=ವಿದ್ಯೆಯನ್ನು ಕಲಿತವನು;
ಮನುಷ್ಯನ್ನ ವಿದ್ಯಾವಂತ ಮಾಡೋದು=ವ್ಯಕ್ತಿಯನ್ನು ಅಕ್ಕರದ ಕಲಿಕೆಯ ಮೂಲಕ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಪಡೆದವನನ್ನಾಗಿ ರೂಪಿಸುವುದು;
ರಾಜ್ಯ ವ್ಯವಸ್ಥೆಯನ್ನು ಬದಲಿಸೋದು=ರಾಜ್ಯದಲ್ಲಿರುವ ರಾಜಕೀಯ / ಸಾಮಾಜಿಕ / ದಾರ್‍ಮಿಕ / ಸಂಪತ್ತಿನ ವಿತರಣೆಯಲ್ಲಿನ ತಪ್ಪುಗಳನ್ನು ತೊಡೆದುಹಾಕಿ, ಪ್ರಜೆಗಳೆಲ್ಲರಿಗೂ ಅನ್ನ-ಬಟ್ಟೆ-ವಸತಿ-ವಿದ್ಯೆ-ಉದ್ಯೋಗ-ಆರೋಗ್ಯ ದೊರಕುವಂತಹ ಸರ್‍ವಸಮಾನತೆಯ, ಸ್ವಾತಂತ್ರ್ಯದ ಮತ್ತು ಪ್ರೀತಿ ಕರುಣೆ ಗೆಳೆತನದಿಂದ ಕೂಡಿದ ಬದುಕಿನ ಅವಕಾಶಗಳನ್ನು ಕಲ್ಪಿಸುವುದು;
ಇವೆಲ್ಲ ಅರ್ಥಪೂರ್ಣ=ನದಿಯ ದಿಕ್ಕನ್ನು ಬದಲಿಸುವ, ಹಣ್ಣಿನ ಗಿಡವನ್ನು ಕಸಿಮಾಡುವ, ವ್ಯಕ್ತಿಯನ್ನು ವಿದ್ಯಾವಂತನನ್ನಾಗಿ ರೂಪಿಸುವ ಮತ್ತು ರಾಜ್ಯದ ವ್ಯವಸ್ತೆಯಲ್ಲಿನ ಕೆಡುಕನ್ನು ನಾಶಪಡಿಸುವ ಕೆಲಸಗಳೆಲ್ಲವೂ ಅಪಾರವಾದ ಕುಶಲತೆ, ಪರಿಶ್ರಮ ಮತ್ತು ಸದುದ್ದೇಶದಿಂದ ಮಾನವ ಸಮುದಾಯದ ಹಿತಕ್ಕಾಗಿ ಮಾಡುವ ಕೆಲಸಗಳಾಗಿರುತ್ತವೆ;
ಕಲೆ=ವ್ಯಕ್ತಿಯ ಮನದಲ್ಲಿ ಮೂಡುವ ಕಲ್ಪನೆ ಮತ್ತು ಚಿಂತನೆಯಿಂದ ಜತೆಗೂಡಿ, ನೋಡುವವರ ಮತ್ತು ಕೇಳುವವರ ಕಣ್ಮನಗಳನ್ನು ಸೆಳೆಯುವ ರೀತಿಯಲ್ಲಿ ಕುಶಲತೆಯಿಂದ ಹೊರಹೊಮ್ಮಿರುವ ಕಾವ್ಯ / ನಾಟಕ / ಚಿತ್ರ / ಶಿಲ್ಪ / ನಾಟ್ಯ /ಸಂಗೀತವನ್ನು ಕಲೆಯೆಂದು ಕರೆಯುತ್ತಾರೆ; ಕಲಾತ್ಮಕ=ಕಲೆಯಿಂದ ಕೂಡಿದ; ಕ್ರಿಯೆ=ಕೆಲಸ; ಕೂಡ=ಜತೆಯಲ್ಲಿರುವುದು/ಕೂಡಿಕೊಂಡಿರುವುದು/ಆಗಿರುವುದು;
ಇವೆಲ್ಲ ಅರ್ಥಪೂರ್ಣ ‘ಕ್ರಿಟಿಕಲ್ ಧೋರಣೆಯ ಉದಾಹರಣೆಗಳಷ್ಟೇ ಅಲ್ಲ… ಕಲಾತ್ಮಕ ಕ್ರಿಯೆ ಕೂಡ=ಕಾವ್ಯವನ್ನು ಒಳಗೊಂಡಂತೆ ಎಲ್ಲ ಕಲೆಗಳು ವ್ಯಕ್ತಿಯ ಪ್ರತಿಬೆ,ಪರಿಶ್ರಮ ಮತ್ತು ನಿರಂತರ ತರಬೇತಿಯಿಂದ ಹೇಗೆ ಹೊರಹೊಮ್ಮುತ್ತವೆಯೋ ಅಂತೆಯೇ ಕ್ರಿಟಿಕಲ್ ದೋರಣೆಯಿಂದ ಹೊರಹೊಮ್ಮುವ ವಿಚಾರಗಳು ಕೂಡ ಜನರ ನಿರಂತರ ಕ್ರಿಯಾಶೀಲತೆಯಿಂದ ಮಾತ್ರ ಕಾರ್‍ಯರೂಪಕ್ಕೆ ಬರುತ್ತವೆ.
ಈ ಕವನದ ಆಶಯವನ್ನು ಬ್ರೆಕ್ಟ್ ಕವಿಯ ಜೀವನದ ಹಿನ್ನೆಲೆಯಿಂದ ಪರಿಶೀಲಿಸಿದಾಗ ಇನ್ನು ಹಲವಾರು ಸಂಗತಿಗಳು ನಮಗೆ ತಿಳಿದುಬರುತ್ತವೆ.
1. ‘ಕ್ರಿಟಿಕಲ್ ಧೋರಣೆಯ ಬಗ್ಗೆ’ ಎಂಬ ಈ ಕವನವನ್ನು ಬ್ರೆಕ್ಟ್ ಅವರು 1935 ರಲ್ಲಿ ರಚಿಸಿದ್ದಾರೆ. ಈ ಕವನವನ್ನು ರಚಿಸಿದ ಕಾಲದಲ್ಲಿ ಬ್ರೆಕ್ಟ್ ಅವರು ದೇಶಾಂತರವಾಸಿಯಾಗಿ ಡೆನ್ಮಾರ್‍ಕ ದೇಶದಲ್ಲಿ ನೆಲೆಸಿದ್ದರು. ಜರ್‍ಮನಿಯಲ್ಲಿ ಸರ್‍ವಾದಿಕಾರಿಯಾಗಿದ್ದ ಹಿಟ್ಲರನ ದಬ್ಬಾಳಿಕೆ ಮತ್ತು ಕ್ರೂರತನ ಹಲ್ಲೆಯಿಂದ ಪಾರಾಗಿ, ಬ್ರೆಕ್ಟ್ ಅವರು ತಾಯ್ನಾಡನ್ನು ತೊರೆದು ಬಂದಿದ್ದರೂ, ತಾಯ್ನಾಡಿನಲ್ಲಿ ನಾಜಿ ಸೇನೆಯ ಆಕ್ರಮಣಕ್ಕೆ ಗುರಿಯಾಗಿ ಲಕ್ಶಾಂತರ ಮಂದಿ ಯಹೂದಿಗಳು ಗ್ಯಾಸ್ ಚೇಂಬರಿನಲ್ಲಿ ನಂಜಿನ ಗಾಳಿಯಿಂದ ಉಸಿರು ಕಟ್ಟಿ ಸಾಯುತ್ತಿರುವ, ಮದ್ದುಗುಂಡಿನ ದಾಳಿಗೆ ಸಿಲುಕಿ ಚಿದ್ರಚಿದ್ರಗೊಂಡು ಸಾವು ನೋವಿಗೆ ಗುರಿಯಾಗುತ್ತಿರುವ, ತಮ್ಮ ಕಣ್ಣಮುಂದೆಯೇ ತಾಯಿ ತಂದೆ ಮಕ್ಕಳು ಗಂಡ ಹೆಂಡತಿ ಅಣ್ಣತಮ್ಮಂದಿರನ್ನು ಮತ್ತು ಆತ್ಮೀಯರೆಲ್ಲರನ್ನೂ ಕಳೆದುಕೊಳ್ಳುತ್ತಿರುವ ಸಂಗತಿಗಳೆಲ್ಲವೂ ಬ್ರೆಕ್ಟ್ ಅವರ ಮಯ್ ಮನಸ್ಸನ್ನು ತೀವ್ರವಾಗಿ ಕಾಡುತ್ತಿದ್ದವು.
ಕವಿ, ಕತೆಗಾರ, ನಾಟಕಕಾರ ಮತ್ತು ನಾಟಕದ ನಿರ್‍ದೇಶಕರಾಗಿದ್ದ ಬ್ರೆಕ್ಟ್ ಅವರ ಪಾಲಿಗೆ ಸಾಹಿತ್ಯವನ್ನು ಒಳಗೊಂಡಂತೆ ಕಲೆಯೆಂಬುದು ಕೇವಲ ಮನರಂಜನೆಯ ಪ್ರಕಾರವಾಗಿರಲಿಲ್ಲ. “ಕಲೆಯು ಸಮಾಜಕ್ಕೆ ಹಿಡಿದ ಕನ್ನಡಿಯಲ್ಲ; ಸಮಾಜವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಲು ಬಳಸಬೇಕಾದ ಸುತ್ತಿಗೆ. ಕಲೆಯೆಂಬುದು ರಾಜ್ಯ ವ್ಯವಸ್ತೆಯಲ್ಲಿನ ಕೆಡುಕುಗಳನ್ನು ಮತ್ತು ಮಾನವರ ನಡುವಣ ಅಸಮಾನತೆಯನ್ನು ಗುರುತಿಸಿ ಜನರ ಗಮನಕ್ಕೆ ತರಲು ಮತ್ತು ಅವನ್ನು ಬುಡಮಟ್ಟ ಕಿತ್ತೆಸೆಯಲು ಜನಮನವನ್ನು ಪ್ರೇರೇಪಿಸುವ ಅರಿವು ಮತ್ತು ಎಚ್ಚರದ ಹತಾರವಾಗಬೇಕು. ಬರಹಗಾರರು ಮತ್ತು ಕಲಾವಿದರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕು” ಎಂಬ ನಿಲುವನ್ನು ಬ್ರೆಕ್ಟ್ ಅವರು ಹೊಂದಿದ್ದರು. ಜನರಲ್ಲಿ ಕ್ರಿಟಿಕಲ್ ದೋರಣೆಯು ಇದ್ದ ಮಾತ್ರಕ್ಕೆ ಮಾನವ ಸಮುದಾಯವನ್ನು ಕಾಡುತ್ತಿರುವ ಕೆಡುಕುಗಳು ನಾಶವಾಗುವುದಿಲ್ಲ. ಕೆಡುಕುಗಳ ನಾಶಕ್ಕೆ ಜನರ ರಚನಾತ್ಮಕವಾದ ಯೋಜನೆಗಳಿಂದ ಕಾರ‍್ಯರೂಪಕ್ಕೆ ಬರುವ ಕ್ರಿಯಾಶೀಲತೆಯು ಅತ್ಯಗತ್ಯವೆಂಬುದನ್ನು ಈ ಕವನದಲ್ಲಿ ಪ್ರತಿಪಾದಿಸಿದ್ದಾರೆ.
2. ಕ್ರಿಟಿಕಲ್ ದೋರಣೆಯನ್ನು ಹೊಂದಿರುವ ವ್ಯಕ್ತಿಗಳು ಕ್ರಿಯಾಶೀಲರಾದಾಗ ಸಮಾಜದಲ್ಲಿ ಎಂತಹ ಪರಿವರ್‍ತನೆಯಾಗುತ್ತದೆ ಎಂಬುದಕ್ಕೆ ಹತ್ತೊಂಬತ್ತನೆಯ ಶತಮಾನದಲ್ಲಿ ಇಂಡಿಯಾ ದೇಶದ ಮಹಾರಾಶ್ಟ್ರ ರಾಜ್ಯದಲ್ಲಿ ಜ್ಯೋತಿ ಬಾ ಪುಲೆ ಮತ್ತು ಸಾವಿತ್ರಿ ಬಾಯಿ ಪುಲೆ ದಂಪತಿಗಳು ಮಾಡಿದ ಸಮಾಜ ಸುದಾರಣೆಯ ಕಾರ್‍ಯಗಳು ಸಾಕ್ಶಿಯಾಗಿವೆ. ಹಿಂದೂ ದರ್‍ಮದ ಸಾಮಾಜಿಕ ವ್ಯವಸ್ತೆಯಲ್ಲಿ ಜಾತಿಯೊಂದರ ಕಾರಣಕ್ಕಾಗಿಯೇ ಸಾವಿರಾರು ವರುಶಗಳಿಂದ ತುಳಿತಕ್ಕೆ ಒಳಗಾಗಿ ವಿದ್ಯೆ, ಅದಿಕಾರ ಮತ್ತು ಸಂಪತ್ತಿನ ಒಡೆತನದಿಂದ ವಂಚಿತರಾಗಿದ್ದ ದಲಿತರಿಗೆ ಮತ್ತು ಎಲ್ಲ ಜಾತಿಮತದ ಹೆಂಗಸರಿಗೆ ಶಾಲೆಗಳನ್ನು ತೆರೆದು, ಅಕ್ಕರದ ವಿದ್ಯೆಯನ್ನು ಕಲಿಸುವ ಮೂಲಕ ಜನರಲ್ಲಿ ಅರಿವು ಮತ್ತು ಎಚ್ಚರವನ್ನು ಮೂಡಿಸುವ ಕಾರ್‍ಯವನ್ನು ಕಯ್ಗೊಂಡರು. ವಿದ್ಯೆಯ ಪ್ರಸಾರದಲ್ಲಿ ಪುಲೆ ದಂಪತಿಗಳು ತೊಡಗಿದಾಗ ಮೇಲು ಜಾತಿಯ ಕೆಲವು ಕೆಟ್ಟ ವ್ಯಕ್ತಿಗಳಿಂದ ಹತ್ತಾರು ಬಗೆಯಲ್ಲಿ ಹಿಂಸೆ ಮತ್ತು ಅಪಮಾನವಾದರೂ ಹಿಂಜರಿಯದೆ ಕೆಳಜಾತಿ ಮತ್ತು ಕೆಳವರ್‍ಗದ ಜನರ ಪರವಾಗಿ ನಿಂತು, ತಮ್ಮ ಕಾರ್‍ಯವನ್ನು ಮುಂದುವರಿಸಿದರು.
ಪುಲೆ ದಂಪತಿಗಳ ಈ ಹೋರಾಟ ಮತ್ತು ಸಮಾಜ ಸುದಾರಣೆಯ ಕಾರ್‍ಯಗಳೇ ಇಪ್ಪತ್ತನೆಯ ಶತಮಾನದಲ್ಲಿ ಮಹಾ ಮಾನವತಾವಾದಿ ಬಿ.ಆರ್.ಅಂಬೇಡ್ಕರ್ ಅವರಿಗೆ ಪ್ರೇರಣೆಯಾಗಿ ದಾರಿದೀಪವಾಯಿತು. ಅಂಬೇಡ್ಕರ್ ಅವರ “ವಿದ್ಯೆಯ ಗಳಿಕೆ-ಸಂಗಟನೆ-ಹೋರಾಟದಿಂದಾಗಿ” ಇಂದು ಕೆಳಜಾತಿ ಮತ್ತು ಕೆಳವರ‍್ಗಕ್ಕೆ ಸೇರಿದ ಕೋಟಿಗಟ್ಟಲೆ ಜನರು ತಲೆಯೆತ್ತಿ ಬಾಳುವಂತಹ ಬದುಕನ್ನು ರೂಪಿಸಿಕೊಳ್ಳಲು ನೆರವಾಗಿದೆ.
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು