ನಾ ನೋಡಿದ ಸಿನೆಮಾ: ಕರಟಕ ದಮನಕ

– ಕಿಶೋರ್ ಕುಮಾರ್.

ಹಳ್ಳಿ ಬಿಟ್ಟು ಪಟ್ಟಣ ಸೇರುವ ಅನಿವಾರ‍್ಯತೆ ಎಂದಿನಿಂದಲೋ ಇದೆ, ಇಂದಿಗೂ ಇದೆ. ಆದ್ರೆ ಪಟ್ಟಣ ಸೇರಿದವರಲ್ಲಿ ಎಶ್ಟು ಮಂದಿ ತಮ್ಮ ಊರುಗಳಿಗೆ ಮರಳುತ್ತಾರೆ, ಮರಳದಿದ್ದರೂ ಎಶ್ಟರ ಮಟ್ಟಿಗೆ ತಮ್ಮ ಊರಿನೊಡನೆ ನಂಟನ್ನು ಉಳಿಸಿಕೊಂಡಿದ್ದಾರೆ ಎಂದು ಕೇಳಿದರೆ ನಮ್ಮಲ್ಲಿ ಸರಿಯಾದ ಉತ್ತರ ಸಿಗುವುದು ಕಶ್ಟ. ಈ ವಿಶಯವನ್ನೇ ಇಟ್ಟುಕೊಂಡು ಹೆಣೆಯಲಾದ ಕತೆಯೇ ಕರಟಕ ದಮನಕ

ತಮ್ಮ ಊರಲ್ಲಿ ದುಡಿಮೆ ಕಡಿಮೆ, ಹೊಲ ಇದ್ದರೂ ನೀರಿಲ್ಲ, ನೀರಿದ್ದರೂ ಬೇಸಾಯ ಲಾಬ ತರುತ್ತಿಲ್ಲ, ಮಕ್ಕಳ ಕಲಿಕೆ ಹೀಗೆ ಹಲವಾರು ಕಾರಣಗಳಿಂದ ಹಳ್ಳಿಗಳಿಂದ ಪಟ್ಟಣ ಸೇರುವ ಮಂದಿ, ಮುಂದೆ ಆ ಹಳ್ಳಿಯ ಗತಿ ತೀರಾ ಕೆಟ್ಟರೂ ಹಿಂದಿರುಗುವ ಸೂಚನೆಯೇ ಇರುವುದಿಲ್ಲ, ಇದರೊಟ್ಟಿಗೆ ಅಲ್ಲಿನ ರಾಜಕೀಯ ನಾಯಕನ ದುರಾಡಳಿತ. ಇವೆಲ್ಲವನ್ನು ಸರಿ ಪಡಿಸಲು ಮಗನ ಮೊರೆ ಹೋಗುವ ಹಳ್ಳಿಯ ಹಿರಿಯ. ಆ ಹಿರಿಯರ ಮಗ ತಾನು ಆ ಕೆಲಸ ಮಾಡಲಾಗದೆ, ತಮ್ಮ ಹೆತ್ತವರನ್ನು ಆ ಊರಿನಿಂದ ಕರೆತರುವ ಕೆಲಸವನ್ನುಈ ಸಿನೆಮಾದ ನಾಯಕರಿಗೆ ವಹಿಸುತ್ತಾನೆ. ಆ ಕೆಲಸ ಮಾಡುತ್ತೇವೆ ಎಂದು ಒಪ್ಪಿಕೊಂಡು ಬಂದ ಕರಟಕ ದಮನಕರು (ಸಿನೆಮಾ ನಾಯಕರು) ಏನೆಲ್ಲಾ ಮಾಡುತ್ತಾರೆ, ಅವರು ಆ ಹಿರಿಯರನ್ನು ಕರೆತರುತ್ತಾರೆಯೇ?, ಕೆಲಸ ಹರಸಿ ಪಟ್ಟಣಕ್ಕೆ ಬಂದಿರುವ ಮಂದಿ ತಮ್ಮ ಹಳ್ಳಿಗೆ ಹಿಂದಿರುಗುವರೆ ಎಂದು ತಿಳಿಯ ಬೇಕೆಂದರೆ ಸಿನೆಮಾದಲ್ಲಿದೆ ಉತ್ತರ.

ಸಿನೆಮಾದ ಕತೆಯ ಬಗ್ಗೆ ಹೇಳುವುದಾದರೆ ಆರಿಸಿಕೊಂಡಿರುವ ವಿಶಯದಲ್ಲಿ ಹೊಸತನವೇನೋ ಇದೆ, ಆದರೆ ಕತೆಯಲ್ಲಲ್ಲ. ಸಿನೆಮಾ ಮುಂದುವರೆದಂತೆ ಮುಂದೇನಾಗುವುದು ಎಂಬುದನ್ನು ಊಹಿಸಬಹುದು. ಇನ್ನು ಇಡಲೇ ಬೇಕು ಅಂತ ಸೇರಿಸಿರೋ ಹಾಡುಗಳು ಹಾಗೂ ಪೈಟ್ ಗಳು ಮತ್ತದೇ ಪಾರ‍್ಮುಲಾ ಚಿತ್ರಗಳನ್ನು ನೆನಪಿಸುತ್ತವೆ. ಆದರೆ ಪ್ರಬುದೇವಾ ಅವರ ಚಾಮರಾಜನಗರ ಕಡೆಯ ಮಾತಿನ ಶೈಲಿ ನೋಡುಗರನ್ನು ನಗುವಿನ ಕಡಲಲ್ಲಿ ತೇಲಿಸುತ್ತದೆ. ಇದರಿಂದ ಸಿನೆಮಾದಲ್ಲಿ ನಗುವಿಗಂತು ಬರವಿಲ್ಲ. ಹಾಗೆ ರವಿಶಂಕ‍ರ್ ಅವರ ಉತ್ತರ ಕರ‍್ನಾಟಕ ಶೈಲಿಯ ಮಾತು ಗಮನ ಸೆಳೆಯುತ್ತದೆ.

ಪಾತ್ರವರ‍್ಗಕ್ಕೆ ಬಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾ‍ರ್ ಹಾಗೂ ಪ್ರಬುದೇವಾ ಅವರು ಮುಕ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರಿಗೆ ಜೋಡಿಯಾಗಿ ಪ್ರಿಯಾ ಆನಂದ್ ಹಾಗೂ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಇನ್ನುಳಿದಂತೆ ರವಿಶಂಕ‍ರ್, ದೊಡ್ಡಣ್ಣ, ರಾಕ್ಲೈನ್ ವೆಂಕಟೇಶ್ ಹಾಗೂ ಇತರರು ನಟಿಸಿದ್ದಾರೆ. ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪರಮಾತ್ಮನ, ಡ್ರಾಮಾ, ಮುಗುಳುನಗೆಯಂತ ಸಿನೆಮಾಗಳನ್ನು ಕೊಟ್ಟ ಯೋಗರಾಜ್ ಬಟ್ಟರ ಸಿನೆಮಾ ಎಂದರೆ ಎಲ್ಲರಿಗೂ ಹೆಚ್ಚಿನ ನಿರೀಕ್ಶೆ ಇರುತ್ತದೆ ಆದರೆ ಈ ಸಿನೆಮಾ ಆ ಮಟ್ಟಕ್ಕೆ ಇಲ್ಲವೆಂದು ಹೇಳಬಹುದು. ಯೋಗರಾಜ್ ಬಟ್ ಹಾಗೂ ಸುಬ್ರಮಣ್ಯ ಎಂ.ಕೆ. ಅವರ ಚಿತ್ರಕತೆ ಇದ್ದು. ವಿ. ಹರಿಕ್ರಿಶ್ಣ ಅವರ ಸಂಗೀತವಿದೆ. ರಾಕ್ಲೈನ್ ಬ್ಯಾನ‍ರ್ ಅಡಿಯಲ್ಲಿ ಈ ಚಿತ್ರ ಮೂಡಿಬಂದಿದ್ದು. ಮಾರ‍್ಚ್ 8 ರಂದು ಬಿಡುಗಡೆಯಾಗಿದೆ. ಯಾವುದೇ ರೀತಿಯ ನಿರೀಕ್ಶೆ ಇಲ್ಲದೆ ಒಂದು ಕಾಮಿಡಿ ಸಿನೆಮಾ ನೋಡಬಯಸುವವರು ಒಮ್ಮೆ ನೋಡಬಹುದಾದ ಸಿನೆಮಾ.

(ಚಿತ್ರ ಸೆಲೆ: in.bookmyshow.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: