ಕವಿತೆ: ಹೊಂಗೆ ಮರವೇ
ಹೊಂಗೆ ಮರವೇ ಹೊಂಗೆ ಮರವೇ
ಹೇಗೆ ಬಣ್ಣಿಸಲಿ
ಈ ನಿನ್ನ ಚೆಲುವ ಪರಿಯ
ತಿರುತಿರುಗಿ ನೋಡಿದರೂ
ಕಣ್ಸೆಳೆವ ನಿನ್ನ ಹಸಿರ ಸಿರಿಯ
ಅಂದು ಮಾಗಿ ಚಳಿಗೆ
ಹಣ್ಣೆಲೆ ಕಳಚಿ ಬೀಳುವಾಗ
ಕಂಬನಿ ಮಿಡಿಯಿತೇ ನಿನ್ನ ಮನವು
ರಾಶಿ ರಾಶಿ ತರಗೆಲೆ ನೆಲವ ಮುತ್ತಿದಾಗ
ಸೊರಗಿ ಬಾಡಿತೇ ನಿನ್ನ ತನುವು
ಇಂದು ವಸಂತ ಬಂದಿಹನೆಂದು
ಮತ್ತೆ ಚಿಗುರಿ ನಿಂದಿಹೆ
ಮಳೆರಾಯ ಬಾರದಿಹನೆಂದು
ನಿನ್ನ ಹೂಮಳೆ ಸುರಿಸಿ
ಇಳೆಯ ತುಂಬಾ ಹಾಸಿ ನಲಿದಿಹೆ
ರೆಂಬೆ ಕೊಂಬೆಯೆಲ್ಲಾ ಹಸಿರು ತುಂಬಿ
ಸಾಲುಗಟ್ಟಿ ನಗುತಿಹವು ಮರಬಳ್ಳಿ
ಚಿಗುರೆಲೆ ರಸದ ಜೇನ ಸವಿಗೆ
ನಿನ್ನಾಸರೆಯ ಬಯಸಿ ಬಂದಿವೆ
ಮರಿದುಂಬಿ, ಕಿರುಗುಬ್ಬಿ, ಹಕ್ಕಿ, ಗಿಳಿ
ಬಿಸಿಲ ಬೇಗೆ, ಬಿಸಿ ಗಾಳಿ ತಡೆದು
ಅಪ್ಪನಂತೆ ಆಸರೆ ನೀನಾಗಿಹೆ
ತಂಗಾಳಿ ಎರೆದು, ತಣ್ಣನೆ ನೆಳಲ ತೊಯ್ದು
ಹಕ್ಕಿ ದನಿಯ ಇಂಚರದ ಇಂಪಿನಲ್ಲಿ
ಅಮ್ಮನ ಮಡಿಲ ಸಿಹಿನೆನಪು ತಂದಿಹೆ
( ಚಿತ್ರಸೆಲೆ : territorynativeplants.com )
ಇತ್ತೀಚಿನ ಅನಿಸಿಕೆಗಳು