ಅಸಹಾಯಕತೆಯ ಹನನ

– .

ನೋಡುವ ನೋಟದಲಿ ಬಾವಗಳ ಮೇಳವಿದೆ. ಅರೊಸೊತ್ತಿಗೆಯ ಏಕಚಕ್ರಾದಿಪತ್ಯದಲ್ಲಿ ಆಳುವ ಅರಸರ ಮನೋಬಾವ ಕ್ರೂರವಾಗಿಯೂ ಇರಬಹುದು, ಅವರ ಬುದ್ದಿ ತಿಕ್ಕಲುತನದಿಂದಲೂ, ಅಹಂಕಾರದಿಂದಲೂ ಕೂಡಿರಬಹುದು. ಜನಪರ ಆಳ್ವಿಕೆ ಮಾಡಿ ಜನರ ಮನಗೆದ್ದ ಜನಪ್ರಿಯ ಅರಸರು ಒಂದೆಡೆಯಾದರೆ, ಇನ್ನೊಂದೆಡೆ ಪ್ರಜಾಪೀಡಕ, ದುರಹಂಕಾರಿ, ಸ್ವಾರ‍್ತಲೋಲುಪ ಎಂಬ ಬಿರುದಾವಳಿ ಹೊದ್ದ ಕೆಟ್ಟ ಅರಸರು ರಾಜ್ಯ ಆಳಿ ಅಳಿದದ್ದು ಚರಿತ್ರೆ.

ಅರಸರು ತಮ್ಮ ಸೇವಕರೂ ಸಹ ಮನುಶ್ಯರು ಎಂದು ಪರಿಗಣಿಸದೆ ಗುಲಾಮರಂತೆ ಕ್ರೂರವಾಗಿ ನಡೆಸುಕೊಳ್ಳುವಾಗ ಆತನೊಳಗೆ ತಾಮಸ ಗುಣ ಮೇಲುಗೈ ಸಾದಿಸಿರುತ್ತದೆ. ಅರಸ ಹೇಳಿದ ಕೆಲಸ ಆಳುಮಕ್ಕಳು ಶಿರಸಾವಹಿಸಿ ಮಾಡಲೇ ಬೇಕು, ಹಾಗೆ ಕೆಲಸ ಮಾಡಿಸಿಕೊಳ್ಳುವಾಗ ಸೇವಕರಿಗೆ ಹಿಂಸೆಕೊಟ್ಟು ವಿಚಿತ್ರ ಆನಂದ ಅನುಬವಿಸುವ ಮನೋವ್ಯಸ್ತ ರಾಜರು ಇಲ್ಲದಿರಲಿಲ್ಲ.

ಹೆಚ್ಚು ಮೇಲರಿಮೆಯ ಅರಸ ತನ್ನ ಸೇವಕನನ್ನು ಕೀಳಾಗಿ ಕಂಡು ಆತನನ್ನು ತನ್ನ ಕಾಲಿನ ಬೂಟುಗಳ ಲೇಸನ್ನು ಕಟ್ಟುವಂತೆ ಹುಕುಂ ಮಾಡಿದಾಗ ಆತ ತಡವಿಲ್ಲದೆ ಅರಸನ ಬೂಟುಗಳ ಲೇಸನ್ನು ಕಟ್ಟಲು ಮುಂದಾದರೂ ಮನೋವ್ಯಸ್ತ ಅರಸನ ಮನಸ್ಸು ಸೇವಕ ಮಾಡುವ ಕೆಲಸದಲ್ಲಿ ವಿದೇಯತೆ ಇಲ್ಲ, ವಿನಯತೆ ಇಲ್ಲ, ಸ್ವಾಮಿ ನಿಶ್ಟೆಯಂತೂ ಮೊದಲೆ ಇಲ್ಲ ಎಂದು ಪರಿಬಾವಿಸಿ, ತನ್ನ ಸೊಂಟದಲ್ಲಿಟ್ಟಿದ್ದ ಕಟಾರಿ ತೆಗೆದು ಅಶಕ್ತ ಸೇವಕನ ಬೆನ್ನಿಗೆ ಇರಿಯುವುದರಲ್ಲೂ ಆತನಿಗೆ ಪರಮಾನಂದವಿರಬಹುದು. ರಾಜನ ತೀಟೆಗೆ, ತಿಕ್ಕಲುತನಕ್ಕೆ ಅಮಾಯಕನ ಪ್ರಾಣ ಬಲಿಯಾಗುತ್ತದೆ. ಇದು ಶೂರ ರಾಜನಿಗೆ ಸೂಕ್ತವೂ ಅಲ್ಲ ಸಮಂಜಸವೂ ಅಲ್ಲ ಎಂದು ನಾವು ನೀವು ಹಲುಬಿದರು ಅರಸನ ಈ ನಿರ‍್ವೀರ‍್ಯ ಶೂರತನಕ್ಕೆ ನ್ಯಾಯ ಹೇಳುವವರು ಯಾರು? ಇದನ್ನೇ ಬೇಲಿ ಎದ್ದು ಹೊಲ ಮೇಯುವುದು ಎಂದದ್ದು ನಮ್ಮ ಹಿರಿಕರು. ಪಾಪ ಸೇವಕ ಸತ್ತ, ಆತನ ಸಂಸಾರ ಮೂರಾಬಟ್ಟೆಯಾಯ್ತು, ಆತನ ಸಂಸಾರಕ್ಕೆ ಈಗ ನ್ಯಾಯ ಒದಗಿಸುವವರು ಯಾರು?

ಬೂತ ಕಾಲದಲ್ಲಾಗಲಿ, ವರ‍್ತಮಾನದಲ್ಲಾಗಲಿ ‘ಅಹಂ’ಗಳದ್ದೆ ಗರ‍್ಶಣೆ. ಇಬ್ಬರು ಪ್ರತಿಶ್ಟಿತರ ಅಹಂ ಮೇರೆ ಮೀರಿದಾಗ ಜಗಳ ಶುರುವಾಗಿ ಬಲಿಪಶುಗಳಾಗುವುದು ಅಮಾಯಕ ಪ್ರಜೆಗಳು. ಇಂದು ನಾವು ಜಗತ್ತಿನಾದ್ಯಂತ ನಡೆಯುತ್ತಿರುವುದನ್ನು ಕಾಣುತಿದ್ದೇವೆ. ದೇಶದೇಶಗಳ ಗಡಿರೇಕೆಯೋ ಮತ್ತೊಂದೋ ಸುಡುಗಾಡು ಕಾರಣಗಳಿಗೆ ಹೊತ್ತಿ ಉರಿಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇವರ ತಿಕ್ಕಲುತನದಿಂದ ಸುಟ್ಟು ಹೋಗುತ್ತಿರುವವರು ಅಮಾಯಕ ಪ್ರಜೆಗಳು.  ಅಬಯ ನೀಡಿ ಪ್ರಜೆಗಳ ಬದುಕು ಹಸನಾಗಿಸಿ ಹೀರೋಗಳಾಗ ಬೇಕಾದವರು, ತಮ್ಮ ಸ್ವಪ್ರತಿಶ್ಟೆಗಾಗಿ ಮಂಡಿಯೂರಿಸಿ ಸೇವೆ ಮಾಡಿಸಿಕೊಂಡು ಬೆನ್ನಿಗೆ ಇರಿಯುತ್ತಿದ್ದಾರೆ. ಮನುಶ್ಯತ್ವ ಮರೆತ ಜನ ಮೈಮರೆತು ನಡೆಯುತಿದ್ದರೆ ಜಗತ್ತು ವಿನಾಶದ ಅಂಚಿಗೆ ತಳ್ಳಲ್ಪಡುತ್ತದೆ. ಇವರದ್ದೇ ಸಂಕ್ಯೆ ಜಗದಲಿ ಹೆಚ್ಚಾದಂತೆ ಅಮಾಯಕರು ಬಲಿಯಾಗುತ್ತಾ, ಅವರ ಸಂಕ್ಯೆ ಕಡಿಮೆಯಾಗುತ್ತಾ ಸಾಗುತ್ತದೆ. ಉಳಿದ ಅಹಂಕಾರಿ ಮಂದಿ ಮುಂದೆ ಪ್ರತಿಶ್ಟೆಗಾಗಿ ಕೈಕೈ ಮಿಲಾಯಿಸಿ ಒಬ್ಬರಿಗೊಬ್ಬರು ಇರಿದು ಡೈನೊಸರ್ ಸಂತತಿ ನಾಶವಾದಂತೆ ಮನುಶ್ಯ ಸಂತತಿ ನಾಶವಾಗಿ ಈ ಜಗತ್ತು ಮನುಶ್ಯರಿಲ್ಲದ ಬೆಂಗಾಡಾಗುತ್ತದೆ. ಅಹಂ ತೊರೆಯಿರಿ, ಸ್ವಪ್ರತಿಶ್ಟೆ ಬದಿಗಿರಿಸಿ, ದ್ವೇಶ ಬಿಡಿ, ಮನುಶ್ಯತ್ವ ರೂಡಿಸಿಕೊಳ್ಳಿ, ಸಹನೆ ತಾಳ್ಮೆ ಮೂಲ ಮಂತ್ರವಾಗಿಸಿಕೊಂಡು ನಿಸ್ವಾರ‍್ತ ಜೀವನಕ್ಕೆ ಕಾಲಿಡುವ ಶಪತ ಮಾಡಿ. ಈ ಮುಕೇನ ಈ ಬೂಮಿಯ ಮೇಲೆ ಮನುಶ್ಯ ಕುಲವನ್ನು ಉಳಿಸಿ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: