ನಾ ನೋಡಿದ ಸಿನೆಮಾ: ಮೂರನೇ ಕ್ರಿಶ್ಣಪ್ಪ

– ಕಿಶೋರ್ ಕುಮಾರ್.

ಕನ್ನಡ ಚಿತ್ರರಂಗದಲ್ಲಿ ಬೆಂಗಳೂರು ಕೇಂದ್ರಿತ ಸಿನೆಮಾಗಳೇ ಹೆಚ್ಚು. ಒಮ್ಮೊಮ್ಮೆ ಬಡಗಣ ಕರ‍್ನಾಟಕ, ಮಂಡ್ಯ ಹಾಗೂ ಕರಾವಳಿ ಬಾಗದ ಮೇಲೆ ಕೇಂದ್ರೀಕರಿಸಿದ ಸಿನೆಮಾಗಳು ಬರುತ್ತವೆ. ಆದರೆ ಈ ಬಾರಿ ಆಶ್ಚರ್‍ಯ ಹಾಗೂ ಮೊದಲು ಎನ್ನುವಂತೆ ಆನೇಕಲ್ ಬಾಗದ ಒಂದು ಹಳ್ಳಿಯಲ್ಲಿ ನಡೆಯುವ ಕತೆಯನ್ನು ಸಿನೆಮಾ ಮಾಡಿ ಅಲ್ಲಿನ ಮಾತಿನ ಶೈಲಿ ಹಾಗೂ ಹಳ್ಳಿಯ ಸೊಗಡನ್ನು ಮಂದಿಯ ಮುಂದಿಟ್ಟಿದೆ “ಮೂರನೇ ಕ್ರಿಶ್ಣಪ್ಪ” ಚಿತ್ರತಂಡ.

ಇದೊಂದು ಹಾಸ್ಯ ತುಂಬಿದ ಹಾಗೂ ಆಳ್ಮೆಗಾರರಿಗೆ (ರಾಜಕಾರಣಿಗಳಿಗೆ) ಒಂದು ಸಂದೇಶ ನೀಡುವ ಸಿನೆಮಾ ಆಗಿದೆ. ಆನೇಕಲ್ ಬಾಗದ ಒಂದು ಹಳ್ಳಿ ನಾರಾಯಣಗಟ್ಟ, ಅಲ್ಲಿನ ಪ್ರೆಸಿಡೆಂಟ್ ವೀರಣ್ಣ (ರಂಗಾಯಣ ರಗು) ಮುಂದಿನ ಆಯ್ಕುಳಿ (ಚುನಾವಣೆ) ಯನ್ನು ತಲೆಯಲ್ಲಿಟ್ಟುಕೊಂಡು ಒಂದು ದೇವಸ್ತಾನ ಕಟ್ಟಿ ಜನರ ಮತ ಸೆಳೆದು ಮತ್ತೊಮ್ಮೆ ಪ್ರೆಸಿಡೆಂಟ್ ಆಗುವ ಯೋಚನೆಯಲ್ಲಿರುತ್ತಾನೆ. ಕಟ್ಟಿರುವ ಹೊಸ ದೇವಸ್ತಾನದ ಉದ್ಗಾಟನೆಗೆ ಬರಬೇಕಿದ್ದ ಸಿನೆಮಾ ನಟ ಸಾವಿಗೀಡಾದ್ದರಿಂದ, ಯಾರದೋ ಮಾತು ಕೇಳಿ ಮತ್ತೊಂದು ಯೋಜನೆ ಸಿದ್ದ ಮಾಡಲು ಊರಿನ ಶಾಲೆಯ ಲೆಕ್ಕ ಕಲಿಸುಗ (ಗಣಿತ ಶಿಕ್ಶಕ) ಕ್ರಿಶ್ಣಪ್ಪನ ಮೊರೆ ಹೋಗುತ್ತಾನೆ. ಸಹಾಯ ಮಾಡಲೊಪ್ಪಿದ ಕ್ರಿಶ್ಣಪ್ಪನ (ಸಂಪತ್ ಮೈತ್ರೇಯ) ಯೋಜನೆ ಅಂದುಕೊಂಡ ಹಾಗೆ ಆಗುವುದೇ, ಇಲ್ಲವೇ. ಒಬ್ಬ ಆಳ್ಮೆಗಾರ ಎಲ್ಲವನ್ನೂ ಆಯ್ಕುಳಿ ದ್ರುಶ್ಟಿಯಿಂದಲೇ ನೋಡಿದರೆ ಆಗುವ ತೊಂದರೆಗಳೇನು, ಯಾವುದು ಆಳ್ಮೆಗಾರನ ಆಯ್ಕೆಗಳಾಗಿರಬೇಕು ಇದಕ್ಕೆಲ್ಲ ಉತ್ತರ ಸಿನೆಮಾದಲ್ಲಿದೆ.

ಪಾತ್ರವರ್‍ಗಕ್ಕೆ ಬಂದರೆ ಪ್ರೆಸಿಡೆಂಟ್ ವೀರಣ್ಣನಾಗಿ ರಂಗಾಯಣ ರಗು ಎಂದಿನಂತೆ ಮಿಂಚಿದ್ದು, ಕಿರುತೆರೆಯಿಂದ ಹಿರಿತೆರೆಗೆ ಬಂದಿರುವ ಸಂಪತ್ ಮೈತ್ರೇಯ  ತಮ್ಮ ಅಬಿನಯದಲ್ಲಿ ಗೆದ್ದಿದ್ದಾರೆ. ಉಳಿದಂತೆ ಉಗ್ರಂ ಮಂಜು, ತುಕಾಲಿ ಸಂತೋಶ್, ಕಿರು ಚಿತ್ರಗಳಲ್ಲಿ ಮಿಂಚಿರುವ ನಟ ಸಿದ್ದು ಮಂಡ್ಯ ಹಾಗೂ ಇತರರು ನಟಿಸಿದ್ದಾರೆ.

ಒಂದು ಹಳ್ಳಿಯ ಕತೆಯನ್ನು ಹಾಸ್ಯಮಯವಾಗಿ ಕೊಂಡೊಯ್ದು, ಮುಂದೆ ಒಂದು ಸಂದೇಶವನ್ನೂ ಸಹ ನೀಡಿದ್ದಾರೆ ನಿರ್‍ದೇಶಕ ನವೀನ್ ನಾರಾಯಣಗಟ್ಟ. ನವೀನ್ ನಾರಾಯಣ ಗಟ್ಟ ಅವರ ಚಿತ್ರಕತೆ ಹಾಗೂ ಯೋಗಿ ಅವರ ಸಿನೆಮಾಟೋಗ್ರಪಿ ಚಿತ್ರಕ್ಕಿದ್ದು, ರೆಡ್ ಡ್ರ‍್ಯಾಗನ್ ಪಿಲಮ್ ಅವರು ಚಿತ್ರವನ್ನು ನಿರ‍್ಮಿಸಿದ್ದಾರೆ. 24 ಮೇ 2024 ಬಿಡುಗಡೆಯಾಗಿರುವ ಈ ಸಿನಿಮಾವನ್ನು ಈಗ ಮನೆಮಂದಿಯೆಲ್ಲಾ ಕೂತು ಅಮೇಜಾನ್ ಪ್ರೈಮ್ ನಲ್ಲಿ ನೋಡಬಹುದು.

(ಚಿತ್ರಸೆಲೆ: in.bookmyshow.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications