ಬರಹ ಕನ್ನಡ ಮತ್ತು ಆಡುಗನ್ನಡ

– ಡಿ.ಎನ್.ಶಂಕರ ಬಟ್

nudi_inuku

ನುಡಿಯರಿಮೆಯ ಇಣುಕುನೋಟ – 1

ಆಡುನುಡಿಯೆಂಬುದು ಜಾಗದಿಂದ ಜಾಗಕ್ಕೆ ಬದಲಾಗುವುದು ಸಹಜ. ನಮ್ಮ ನಲ್ಮೆಯ ಕನ್ನಡ ನುಡಿಗೂ ಈ ಮಾತು ಒಪ್ಪುತ್ತದೆ. ಬೇರೆ ಬೇರೆ ಊರುಗಳಲ್ಲಿರುವ ಕನ್ನಡಿಗರು ಬೇರೆ ಬೇರೆ ಆಡುಗನ್ನಡಗಳನ್ನು ಬಳಸುವುದು ನಮ್ಮೆಲ್ಲರ ಗಮನಕ್ಕೆ ಬಂದಿರುತ್ತದೆ. ಹಾಗೆಯೇ ಜಾತಿಯಿಂದ ಜಾತಿಗೂ ಆಡುಗನ್ನಡ ಬದಲಾಗುವುದನ್ನೂ ನಾವೆಲ್ಲರೂ ಕಂಡಿರುತ್ತೇವೆ. ಎತ್ತುಗೆಗಾಗಿ, ಮಯ್ಸೂರಿನ ಆಡುಗನ್ನಡಕ್ಕೂ ಹುಬ್ಬಳ್ಳಿಯ ಆಡುಗನ್ನಡಕ್ಕೂ ನಡುವೆ, ಮತ್ತು ಮಯ್ಸೂರಿನಲ್ಲೇನೇ ಬ್ರಾಹ್ಮಣರ ಆಡುಗನ್ನಡಕ್ಕೂ ಒಕ್ಕಲಿಗರ ಆಡುಗನ್ನಡಕ್ಕೂ ನಡುವೆ ವ್ಯತ್ಯಾಸವಿದೆ.

ಆದರೆ, ಬರಹ ಕನ್ನಡ ಹೀಗೆ ಬೇರೆ ಬೇರೆಯಾಗಿ ಇರುವಂತಿಲ್ಲ. ಅದು ಎಲ್ಲರಿಗೂ ಸಮನಾಗಿದ್ದು, ‘ಎಲ್ಲರ ಕನ್ನಡ’ವಾಗಿರಬೇಕಾಗುತ್ತದೆ; ಯಾಕೆಂದರೆ, ಜಾಗ ಮತ್ತು ಜಾತಿಗಳ ಎಲ್ಲೆಗಳನ್ನು ಮೀರಿ ಜನರನ್ನು ಬೆಸೆಯುವ ಒಂದು ವಿಶೇಶವಾದ ಕೆಲಸ ಅದರದು. ಹಲವು ಬಗೆಯ ಆಡುಗನ್ನಡಗಳನ್ನು ಬಳಸುವ ಎಲ್ಲಾ ಕನ್ನಡಿಗರಿಗೂ ಸಮಾನವಾಗಿರಬೇಕಾದಂತಹ ಬರಹ ಕನ್ನಡ ಅವರೆಲ್ಲರ ಆಡುಗನ್ನಡಕ್ಕಿಂತಲೂ ಬೇರಾಗಿಯೇ ಇರಬೇಕಾಗುತ್ತದೆ ಎಂದು ಸುಲಬವಾಗಿ ಕಾಣಬಹುದು.

ಬರಹ ಕನ್ನಡ ಬೇರೆ ಬೇರೆ ಆಡುಗನ್ನಡಗಳಿಗಿಂತ ಬೇರಾಗಿರಬೇಕಾದುದು ಅನಿವಾರ‍್ಯ ಎಂದ ಮಾತ್ರಕ್ಕೆ ಅದು ಅವುಗಳಿಗಿಂತ ತುಂಬಾ ದೂರದಲ್ಲಿರುವುದೂ ಅನಿವಾರ‍್ಯ ಎಂದೇನಿಲ್ಲ; ಆದಶ್ಟು ಹತ್ತಿರವೂ ಇರಬಹುದು. ಅದು ನಮ್ಮೆಲ್ಲರಿಗಿಂತ ದೂರದಲ್ಲಿರಬೇಕೋ ಹತ್ತಿರದಲ್ಲಿರಬೇಕೋ ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ, ಯಾರೂ ‘ದೂರದಲ್ಲಿರಬೇಕು’ ಎಂಬ ಉತ್ತರವನ್ನು ಕೊಡಲಾರರು. ಬರಹ ಕನ್ನಡವನ್ನು ಎಲ್ಲಾ ಆಡುಗನ್ನಡಗಳಿಗೂ ಆದಶ್ಟು ಹತ್ತಿರವಿರುವಂತೆ ಮಾಡಿದಲ್ಲಿ, ಕನ್ನಡವನ್ನು ಓದಲು ಮತ್ತು ಬರೆಯಲು ಕಲಿಯುವ ಕೆಲಸ ಎಲ್ಲಾ ಕನ್ನಡಿಗರಿಗೂ ಸುಲಬವಾಗುತ್ತದೆ ಎಂದು ಯಾರಾದರೂ ಕಾಣಬಹುದು. ಆದುದರಿಂದ ಹಾಗೆ ಮಾಡಬೇಕಾಗಿರುವುದು ಕನ್ನಡದ ಮತ್ತು ಅದರ ಮೂಲಕ ಕನ್ನಡಿಗರ ಏಳಿಗೆಗೆ ಬಹಳ ಮುಕ್ಯವಾದ ಕೆಲಸ.

ಎಲ್ಲರಿಗೂ ಆದಶ್ಟು ಹತ್ತಿರವಿರುವ ಬರಹ ಕನ್ನಡದಲ್ಲಿ ಸಂಸ್ಕ್ರುತ, ಇಂಗ್ಲಿಶ್, ಹಿಂದಿ ಮೊದಲಾದ ಬೇರೆ ನುಡಿಗಳಿಂದ ಪಡೆಯುವ ಎರವಲು ಪದಗಳನ್ನು ಒಂದು ಮಿತಿಯಲ್ಲಿರಿಸಿಕೊಳ್ಳುವುದು ಅನಿವಾರ‍್ಯವೆಂದು ಹೇಳಬೇಕಾಗಿಯೇ ಇಲ್ಲ. ಜಾಗ ಮತ್ತು ಜಾತಿಯ ತಾರತಮ್ಯವಿಲ್ಲದೆ ಎಲ್ಲರೂ ಬರಹವನ್ನು ಬಳಸತೊಡಗಿದಾಗ, ಅಂತಹ ಎರವಲು ಪದಗಳು ಒಂದು ಮಿತಿಯಲ್ಲಿ ಇದ್ದೇ ಇರುತ್ತವೆ; ಬಹುಶಹ ನೂರಕ್ಕೆ ಅಯ್ದು ಇಲ್ಲವೇ ಹತ್ತಕ್ಕಿಂತ ಹೆಚ್ಚು ಇರಲಾರವು. ತನ್ನ ಸೊಗಡನ್ನು ಉಳಿಸಿಕೊಂಡಿರುವ ಅಂತಹ ಬರಹಗಳನ್ನು ಓದುವ ಮತ್ತು ಬರೆಯುವ ಕೆಲಸ ಕೆಲವರಿಗಶ್ಟೇ ಅಲ್ಲ, ಎಲ್ಲರಿಗೂ ಸುಲಬದ್ದಾಗುತ್ತದೆ.

ಹಲವು ಕಡೆ ಕನ್ನಡದ್ದೇ ಆದ ಪದಗಳನ್ನು ಬರಹ ಕನ್ನಡದಲ್ಲಿ ಬಳಸುವುದು ಒಳ್ಳೆಯ ಬರವಣಿಗೆಯ ಗುರುತಲ್ಲ ಎಂಬ ಒಂದು ವಿಚಿತ್ರವಾದ ಅನಿಸಿಕೆ ಕೆಲವರಲ್ಲಿದೆ; ಕನ್ನಡದ್ದೇ ಆದ ಪದಗಳ ಬದಲು ಸಂಸ್ಕ್ರುತದ ಎರವಲುಗಳನ್ನು ಬಳಸುವುದರಿಂದ ಬರಹ ಮೇಲ್ಮಟ್ಟದ್ದಾಗುತ್ತದೆಯೆಂಬ ಬ್ರಮೆ ಅದೇಕೋ ಅವರಲ್ಲಿದೆ. ‘ನಾಯಿ’ ಎಂದು ಬರೆಯುವ ಬದಲು ‘ಶ್ವಾನ’ ಎಂದು ಬರೆಯುವುದು, ‘ಕೂದಲು’ ಎಂಬುದರ ಬದಲು ‘ಕೇಶ’ ಎನ್ನುವುದು, ‘ಹಲ್ಲು’ ಎನ್ನುವ ಬದಲು ‘ದಂತ’ ಎನ್ನುವುದು, ‘ಕೂಡಿಸುವುದು’ ಎನ್ನುವ ಬದಲು ‘ಸಂಕಲನ’ ಎನ್ನುವುದು, ಇವೆಲ್ಲ ಮೇಲ್ಮಟ್ಟದ ಕನ್ನಡ ಬರವಣಿಗೆಯ ಗುರುತುಗಳು ಎಂದು ಹಲವರು ತಿಳಿದಿದ್ದಾರೆ. ಆದರೆ ಈ ರೀತಿಯ ಬಳಕೆಗಳು ಬರಹ ಕನ್ನಡವನ್ನು ಎಲ್ಲರಿಗೂ ಆದಶ್ಟು ಹತ್ತಿರವಾಗಿಸುವಂತವಲ್ಲ, ದೂರವಾಗಿಸುವಂತವು ಎಂದು ತಿಳಿದುಕೊಳ್ಳಲು ಕಶ್ಟವಿಲ್ಲ.

ಹೊಸ ಹೊಸ ಪದಗಳನ್ನು ಉಂಟುಮಾಡಬೇಕಾದಾಗಲಂತೂ ಸಂಸ್ಕ್ರುತವನ್ನು ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂದು ಹೆಚ್ಚಿನ ಕನ್ನಡದ ಬರಹಗಾರರೂ ತಿಳಿದಿದ್ದಾರೆ. ಆದರೆ ಅಂತಹ ಪದಗಳನ್ನು ಬಳಸಿರುವ ಕನ್ನಡ ಬರಹ ಎಲ್ಲರಿಗೂ ಹತ್ತಿರವಾಗುವ ಬದಲು ದೂರ ಉಳಿಯುತ್ತದೆ, ಮತ್ತು ಅದನ್ನು ಕಲಿಯುವ ಮತ್ತು ಬಳಸುವ ಕೆಲಸ ಹೆಚ್ಚಿನ ಕನ್ನಡಿಗರಿಗೂ ತೊಡಕಿನದಾಗುತ್ತದೆ. ಹೊಸ ಪದಗಳನ್ನು ಉಂಟುಮಾಡುವುದರ ಗುರಿ ಕನ್ನಡಿಗರಿಗೆಲ್ಲ ಆ ಪದಗಳು ಸೂಚಿಸುವ ವಿಶಯ ಇಲ್ಲವೇ ವಸ್ತುವಿನ ಪರಿಚಯ ಮಾಡಿಸುವುದು ಎಂಬುದನ್ನು ನೆನಪಿನಲ್ಲಿಟ್ಟರೆ ಹೆಜ್ಜೆಹೆಜ್ಜೆಗೂ ಸಂಸ್ಕ್ರುತವನ್ನು ಮೊರೆಹೊಗುವುದು ತಾನೇ ನಿಲ್ಲುತ್ತದೆ.

ಹೊಸ ಪದಗಳನ್ನು ಉಂಟುಮಾಡಲು ಕನ್ನಡದ್ದೇ ಆದ ಪದಗಳನ್ನು ಮತ್ತು ಬೇರುಗಳನ್ನು ಬಳಸಬಹುದು; ಇವು ಹೊಸಗನ್ನಡದಲ್ಲಿ ಸಿಗದಿದ್ದರೆ ಹಳೆಗನ್ನಡದಿಂದ, ಇಲ್ಲವೇ ಆಡುಗನ್ನಡಗಳಿಂದ ಪಡೆದುಕೊಳ್ಳಬಹುದು. ಹೆಚ್ಚಿನವರೂ ಕೇಳಿಲ್ಲದ ಪದಗಳನ್ನು ಇಲ್ಲವೇ ಬೇರುಗಳನ್ನು ಅವು ಸಂಸ್ಕ್ರುತದವು ಎಂಬ ಒಂದೇ ಕಾರಣಕ್ಕಾಗಿ ಬಳಸಿ ಹೊಸ ಪದಗಳನ್ನು ಉಂಟುಮಾಡುವುದಕ್ಕಿಂತಲೂ, ಹೆಚ್ಚಿನವರೂ ಕೇಳಿರುವ ಪದಗಳನ್ನು ಇಲ್ಲವೇ ಬೇರುಗಳನ್ನು ಅವು ಯಾವ ನುಡಿಯವಾಗಿದ್ದರೂ (ಎತ್ತುಗೆಗೆ ಇಂಗ್ಲೀಶಿನವಾಗಿದ್ದರೂ) ಎರವಲಾಗಿ ಪಡೆದು ಬಳಸಿಕೊಳ್ಳಬಹುದು.

ಇವತ್ತು ಕನ್ನಡ ಬರಹದಲ್ಲಿ ಕನ್ನಡಕ್ಕೆ ನಿಜಕ್ಕೂ ಬೇಡದಿರುವ ಹಲವು ಬರಿಗೆಗಳನ್ನು (ಅಕ್ಶರಗಳನ್ನು) ಬಳಸಲಾಗುತ್ತದೆ; ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತದಲ್ಲಿ ಇರುವ ಹಾಗೆಯೇ ಬರೆಯಬೇಕು (ಕೆಲವು ಅಪವಾದಗಳನ್ನು ಹೊರತುಪಡಿಸಿ) ಎಂಬ ಕಟ್ಟಲೆಯೊಂದನ್ನು ಉಳಿಸಿಕೊಳ್ಳುವುದಕ್ಕಾಗಿ ಹತ್ತು ಮಹಾಪ್ರಾಣ ಬರಿಗೆಗಳು, ಋಕಾರ, ಷಕಾರ, ಐ, ಔ, ಙ, ಞ, ವಿಸರ‍್ಗ ಎಂಬಂತಹ ಒಟ್ಟು ಹದಿನೇಳು ಹೆಚ್ಚಿನ ಬರಿಗೆಗಳನ್ನು ಕನ್ನಡ ಬರಹದಲ್ಲಿ ಬಳಸಲಾಗುತ್ತಿದೆ. (ಇದಲ್ಲದೆ ರಕಾರಕ್ಕೆ ಎಂಬ ಒಂದು ಹೆಚ್ಚಿನ ರೂಪವನ್ನೂ ಬಳಸಲಾಗುತ್ತಿದೆ.)

ಇವುಗಳಲ್ಲಿ ಹೆಚ್ಚಿನವೂ ಕನ್ನಡ ಬರಹದ ಓದಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಓದಿನಲ್ಲಿಲ್ಲದ ಬರಿಗೆಗಳನ್ನು ಬರಹದಲ್ಲಿ ಕಾಣಿಸುವುದು ತುಂಬಾ ತೊಡಕಿನ ಕೆಲಸ; ಎಶ್ಟು ತೊಡಕಿನ ಕೆಲಸವೆಂಬುದು ಇವತ್ತಿನ ಕನ್ನಡ ಬರಹಗಳನ್ನು ಪರಿಶೀಲಿಸಿದಲ್ಲಿ ಗೊತ್ತಾಗುತ್ತದೆ: ಅವುಗಳಲ್ಲಿ ಅತಿ ಹೆಚ್ಚು ತಪ್ಪುಗಳು ಕಾಣಿಸಿಕೊಳ್ಳುವುದು ಮಹಾಪ್ರಾಣದಂತಹ ಈ ಹೆಚ್ಚಿನ ಬರಿಗೆಗಳನ್ನು ಬಳಸುವುದರಲ್ಲೇ ಆಗಿದೆ.

ಬರಹದ ಕನ್ನಡವನ್ನು ಎಲ್ಲಾ ಆಡುಗನ್ನಡಗಳಿಗೆ ಹತ್ತಿರ ತರಲು ಬೇಡದ ಈ ಹದಿನೇಳು ಬರಿಗೆಗಳನ್ನು ಬಿಟ್ಟುಬಿಡುವುದೇ ಒಳಿತು. ಹಾಗೆಯೇ ಇಂಗ್ಲಿಶ್, ಹಿಂದಿ, ಮರಾಟಿ, ಉರ‍್ದು, ಮೊದಲಾದ ಬೇರೆ ನುಡಿಗಳಿಂದ ಎರವಲು ಪಡೆದ ಪದಗಳ ಹಾಗೆ, ಸಂಸ್ಕ್ರುತದಿಂದ ಎರವಲು ಪಡೆದ ಪದಗಳನ್ನೂ ಹೆಚ್ಚಿನ ಕನ್ನಡಿಗರೂ ಓದುವ ಹಾಗೆಯೇ ಬರೆಯುವುದು ಒಳಿತು. ಅವನ್ನು ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯಬೇಕೆಂಬ ಕಟ್ಟಳೆಯನ್ನು ಉಳಿಸಿಕೊಳ್ಳಬೇಕಾಗಿಲ್ಲ.

ಹಳೆಗನ್ನಡದ ಸಮಯದಲ್ಲಿ ಕನ್ನಡಿಗರಿಗೆ ಇಂತಹದೊಂದು ಸ್ವಾತಂತ್ರ್ಯವಿತ್ತು; ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಅವರು ಸಂಸ್ಕ್ರುತದಲ್ಲಿರುವ ಹಾಗೆಯೇ ಬೇಕಿದ್ದರೂ ಬರೆಯಬಲ್ಲವರಾಗಿದ್ದರು; ಇಲ್ಲವೇ ಕನ್ನಡದ ಸ್ವರೂಪಕ್ಕೆ ಹೊಂದಿಕೆಯಾಗುವ ಹಾಗೆ ಅದರಲ್ಲಿ ಮಾರ‍್ಪಾಡುಗಳನ್ನು ಮಾಡಿಯೂ ಬಳಸಬಲ್ಲವರಾಗಿದ್ದರು.
ಬರಹದ ಕನ್ನಡವನ್ನು ಎಲ್ಲರಿಗೂ ಆದಶ್ಟು ಹತ್ತಿರವಾಗಿಸಲು ಈಗ ಕನ್ನಡಿಗರು ಮಾಡಬೇಕಿರುವ ಮಾರ‍್ಪಾಡು ಇದಕ್ಕಿಂತ ಬೇರಾದುದೇನಲ್ಲ. ಮಿತಿಯಿಲ್ಲದೆ ಸಂಸ್ಕ್ರುತದಿಂದ ಎರವಲಾಗಿ ಪಡೆಯುವುದನ್ನು ಕಡಿಮೆ ಮಾಡುವುದು, ಮತ್ತು ಸಂಸ್ಕ್ರುತ ಬಲ್ಲವರು ಮಾತ್ರವಲ್ಲದೆ ಎಲ್ಲರೂ ಬರಹ ಕನ್ನಡದಿಂದ ಪಡೆಯುವುದನ್ನು ಪಡೆಯುವುದಶ್ಟೇ ಅಲ್ಲದೆ, ಬರಹ ಕನ್ನಡದ ಮೂಲಕ ಕೊಡುವುದನ್ನು ಎಲ್ಲರೂ ಕೊಡುವಂತೆಯೂ ಮಾಡುವುದು ಕನ್ನಡದ ಏಳಿಗೆಗೆ ಇಂದು ಅನಿವಾರ‍್ಯವಾಗಿದೆ.

ಈ ಇಪ್ಪತ್ತೊಂದನೆಯ ಶತಮಾನದಲ್ಲೂ ಹಲವು ಮಂದಿ ಕನ್ನಡಿಗರು ಬರವಣಿಗೆಯ ಪ್ರಪಂಚದಲ್ಲಿ ಆಟಕ್ಕಶ್ಟೇ ಅಲ್ಲ, ಲೆಕ್ಕಕ್ಕೆ ಬರುವಂತೆಯೂ ಪಾಲ್ಗೊಳ್ಳಲು ಆಗದಿರಲು ಹಲವು ಬಗೆಯ ತೊಡಕುಗಳು ಕಾರಣವಾಗಿವೆ. ಎತ್ತುಗೆಗಾಗಿ, ಕೆಳವರ‍್ಗದ ಜನರ ಬಡತನ ಮತ್ತು ಅರಿಯಮೆಗಳು ಅವರ ಮಕ್ಕಳನ್ನು ಶಾಲೆಗಳಿಂದ ದೂರ ಇರಿಸುತ್ತವೆ. ಹಲವರಾದ ಅವರ ಕನ್ನಡಕ್ಕಿಂತ ಕೆಲವರಾದ ತಮ್ಮ ಕನ್ನಡಕ್ಕೆ ಹತ್ತಿರವಿರುವಂತೆಯೇ ಬರಹದ ಕನ್ನಡವನ್ನು ಇಟ್ಟುಕೊಳ್ಳಲು ಮೇಲ್ವರ‍್ಗದವರು ಬಯಸುವುದು ಇದಕ್ಕೆ ಒತ್ತಾಸೆಯಾಗಿರುತ್ತದೆ. ಕೆಳವರ‍್ಗದವರನ್ನು ಅವರಿರುವಲ್ಲಿಯೇ ಇರಲು ಬಿಡುವುದು ಮೇಲ್ವರ‍್ಗದವರ ಮನದಾಳದ ಬಯಕೆಯಾಗಿರಲಿಕ್ಕಿಲ್ಲ; ಕನ್ನಡಿಗರ ನೆತ್ತರಿನಲ್ಲಿ ಇಂತಹ ನಂಜಿಲ್ಲ. ಆದರೂ ಅವರು ಇರುವಲ್ಲೇ ಇರುವಂತೆ ಮಾಡುತ್ತಿರುವ ಕೆಲವು ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿಕೊಳ್ಳುವುದು ಹಿರಿಮೆಯಾದೀತು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

>> ನುಡಿಯರಿಮೆಯ ಇಣುಕುನೋಟ – 2

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 13/08/2013

    […] << ನುಡಿಯರಿಮೆಯ ಇಣುಕುನೋಟ – 1 […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *