’ಬೀಳ ಮಗನ… ಕುಂಡಿ ಗಟ್ಟಿ ಅದಾನೋ ಇಲ್ಲೋ’

022-mukhyaprana-ustava-moortiಶ್ರೀನಿವಾಸ ವಯ್ದ್ಯರು ಬರೆದಿರುವ “ಹಳ್ಳ ಬಂತು ಹಳ್ಳ” ಕಾದಂಬರಿಯಲ್ಲಿ ಹೀಗೊಂದು ಪ್ರಸಂಗ. ಕತೆಯ ಮುಕ್ಯ ಪಾತ್ರವಾಗಿರುವ ವಾಸುದೇವಾಚಾರ್‍ಯ ಒಂದು ದಿನ ಪೂಜೆ ಮಾಡುತ್ತಿರುವಾಗ ಈ ಗಟನೆ ನಡೆಯುತ್ತದೆ:

ಮಂಗಳಾರತಿ ಮಾಡಿ ಇನ್ನೇನು ಕಟ್ಟೆಯಿಂದ ಕೆಳಗೆ ಇಳಿಯಬೇಕು. ಪ್ರಾಣದೇವರ ಮೂರ್‍ತಿ ಮತ್ತೆ ಗಡಕ್ ಅಂತ ಉರುಳಿ ಬಿತ್ತು. ಈಗ ವಾಸುದೇವಾಚಾರ ಸಹನೆ ಕಟ್ಟೆಯೊಡೆಯಿತು. ಅವರು ಕೋಪದಲ್ಲಿ ಹುಚ್ಚರಾಗಿ “ ಬೀಳತೀಯಾ ಲವಡೀ ಮಗನ … ಹಣಿಮ್ಯಾ.. ಬೀಳತೀಯಾ… ಮನಿಶಾರೂ ದೇವರೂ ಯಲ್ಲಾರೂ ಕೂಡಿ ನನ್ನ ಕಾಡಸತೀರೇನೋ… ಬೀಳ ಮಗನ… ಕುಂಡಿ ಗಟ್ಟಿ ಅದಾನೋ ಇಲ್ಲೋ ರಂಡೇ ಮಗನ ಹಿಂಗ್ಯಾಕ ಕಿಟ್ಟದಗೊಂಬೀ ಹಂಗ ಬೀಳತೀದಿ… ನೀ ಒಬ್ಬಾಂವ ಅರ ನನ್ನ ಪಾಲಿಗೆ ಇದ್ದೀ ಅಂತ ತಿಳಿದಿದ್ದೆ ನೀನೂ ಬೀಳತೀಯಾ.. ಬೀಳೂ… ಬೀಳೂ…” ಎನ್ನುತ್ತ ಆಂಜನೇಯನ ಕಂಚಿನ ಮೂರ್‍ತಿಯನ್ನು ದೇವರ ಕಟ್ಟೆಗೆ ಗಟ್ಟಿಸಿ ಗಟ್ಟಿಸಿ ಇಟ್ಟರು. ಆಮೇಲೆ ಕ್ಶಣ ಬಿಟ್ಟು ವಾಸುದೇವಾಚಾರ್‍ಯರಿಗೆ ತಮ್ಮ ತಪ್ಪಿನ ಅರಿವಾಯಿತು. ಆ ತಪ್ಪಿನ ಜೊತೆಗೆ ಅತ್ಯಂತ ಆತ್ಮಗ್ಲಾನಿಯೂ ವಿಪರೀತ ಕ್ಶೋಬೆಯು ಹೆದರಿಕೆಯೂ ಉಂಟಾದವು. ಎಶ್ಟೋ ಹೊತ್ತು ಅವರು ನಿರ್‍ವಿಣ್ಣರಾಗಿ ಹತಾಶರಾಗಿ ಸುಮ್ಮನೇ ಕುಳಿತು ಬಿಟ್ಟರು. ಕಣ್ಣು ತುಂಬ ನೀರು ತುಂಬಿತು. ಆಮೇಲೆ ಗಲ್ಲಗಲ್ಲ ಬಡಿದುಕೊಳ್ಳುತ್ತ …..

ಹೀಗೆ ಮುಂದೆ ಸಾಗುತ್ತದೆ ಕತೆ. ನಮ್ಮ ಬಾರತೀಯ ಆದ್ಯಾತ್ಮದಲ್ಲಿ ಅದರಲ್ಲೂ ಮುಕ್ಯವಾಗಿ ಹಳ್ಳಿಗಳಲ್ಲಿ ಅತವಾ ಸಾಮಾನ್ಯ ಮನುಶ್ಯನಲ್ಲಿ ಇರುವಂತಹ ದೇವರು ಹಾಗೂ ಆತನ ಸಂಬಂದವನ್ನು ಅರ್‍ತ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಬಹುತೇಕವಾಗಿ ನಾವು ನೋಡುವ ದೇವರ ಕುರಿತ ಸಾಹಿತ್ಯದಲ್ಲಿ ಮುಕ್ಯವಾಗಿ ದೇವರನ್ನು ಹೊಗಳುವ, ಆತನ ಸ್ಮರಣೆಯಿಂದ ಸಿಗಬಹುದಾದ ಮೋಕ್ಶದ ಕುರಿತು, ನಾವು ನಡೆಯಬೇಕಾಗಿರುವ ದಾರಿ, ಆತನ್ನನ್ನ ಒಲಿಸಿಕೊಳ್ಳಲು ಇರುವ ದಾರಿ… ಹೀಗೆ ಹಲವು ತರಹದ ಕವಲುಗಳನ್ನು ಕಾಣಬಹುದು. ಈ ಕವಲುಗಳ ಮೂಲಕ ದೇವರನ್ನು ಸೇರುವ ಅತವಾ ಮೋಕ್ಶ ಪಡೆಯುವ ಕುರಿತು ಬಹುಮಟ್ಟಿಗೆ ಸಾಹಿತ್ಯ ರಚಿತವಾಗಿದೆ.

ಆದರೆ ಒಬ್ಬ ಸಾಮಾನ್ಯನಿಗೆ, ಈ ತರಹದ ಸಾಹಿತ್ಯ ಓದದವರಿಗೆ ಇವುಗಳ ಕಲ್ಪನೆ ಬೇರೆಯವರಿಂದ ಕೇಳಿ ಅರ್‍ತ ಮಾಡಿಕೊಂಡಿರುವುದೇ ಆಗಿರುತ್ತದೆ. ಅವರಿಗೆ ದೇವರು ತಮ್ಮಿಂದೇನು ದೂರವಿಲ್ಲ, ಅವನು ತನ್ನ ಗೆಳೆಯನೇ ಅನ್ನೋ ಬಾವದ ಜೊತೆಗೆ ಹೆದರಿಕೆಯು ಇರುತ್ತದೆ. ಹಾಗಾಗಿಯೇ ತಮ್ಮ ಎಲ್ಲಾ ಕೆಲಸದ ಮೊದಲಿನಲ್ಲೂ ಅವನಿಗೆ ಮುಕ್ಯವಾದ ಪೂಜೆ ಸಲ್ಲುತ್ತದೆ. ದೇವರ ಸಾಹಿತ್ಯ ಓದದ ಜನರಿಗೆ ದೇವರು ತಮಗೆ ಎಟುಗದವನೇನಲ್ಲ ಎಂಬ ಅನಿಸಿಕೆ ಇರುತ್ತದೆ (ಅದು ಗೊತ್ತಿದ್ದೋ ಅತವಾ ಗೊತ್ತಿಲ್ಲದೋ ದೇವರು ಇವರಿಗೆ ಹತ್ತಿರ) ಹಾಗಾಗಿ ಇವರ ಪೂಜೆಗಳಲ್ಲಿ “ದೇವ್ರೆ ಈ ಕೆಲ್ಸ ಮಾಡಿಶಿಕೊಡಪ್ಪ ನಿನಗ ಕಣ್ಣು ಮಾಡಿ ಹಾಕುಸ್ತೀನಿ” ಇಲ್ಲಾ “ದೇವ್ರೆ ನನ್ನ ಮಗನಿಗೆ ವಾಸಿ ಆದ್ರ ನಿನಗ ದೀಡ್ ನಮಸ್ಕಾರ ಹಾಕ್ತೀನಿ” ಅನ್ನುವಶ್ಶಟರ ಮಟ್ಟಿಗೆ ಸಲುಗೆ/ ಕೊಟ್ಟು ತೆಗೆದುಕೊಳ್ಳುವ ಸಂಬಂದ ಇದೆ.

ಅದೇ ಇನ್ನೊಂದು ಕಡೆ ಅವರ ಹತ್ತಿರದವರೋ ಇಲ್ಲಾ ಮನೆಯವರೋ ತೀರಿ ಹೋದಾಗ ಅತವಾ ತಮಗೆ ಆಗಬೇಕಾಗಿರುವ ಕೆಲಸ ಆಗದಿದ್ದಾಗ ಕೋಪದಲ್ಲಿ “ ಆ ಸೂ*** ದೇವ್ರ ನಮಗ ಮೋಸ ಮಾಡ್ಬಿಟ್ಟ”, “ಇವಗ ದಿನಾ ಪೂಜಿ ಮಾಡ್ತೀನಲ್ಲಾ ಅದಕಾ ಸೊಕ್ಕು ಬಾಳಾ ಬಂದೇತಿ” ಅಂತಲೋ ತಮ್ಮ ಸಿಟ್ಟನ್ನ ಅವನ ಮೇಲೆ ತೋರಿಸುತ್ತಾರೆ. ಹಾಗಂತ ಈ ಸಿಟ್ಟು ಕೆಲವು ದಿನಗಳ ಮಟ್ಟಿಗೆ ಮಾತ್ರ. ಯಾಕಂದ್ರೆ ಆ ದೇವರಿಗೆ ಇವರನ್ನು ಬಿಟ್ಟರೆ ಬೇರಿಲ್ಲ ಹಾಗೇನೆ ಇವರಿಗೆ ಅವನ್ನನ್ನ ಬಿಟ್ಟರೆ ಗತಿಯಿಲ್ಲ ಅನ್ನೋ ರೀತಿಯ ಸಂಬಂದ. ಆದ್ಯಾತ್ಮ ಅನ್ನೋದು ದಿನನಿತ್ಯದ ಜೀವನದಲ್ಲಿ ಬೇರೆಯಾಗಿ ಮಾಡುವ ಪೂಜೆ ಅತವಾ ನಡೆಯಲ್ಲಿಲ್ಲ. ಅದು ಜೀವನದ ಒಂದು ಬಾಗ, ನಾವು ನಡೆಯುವ ದಾರಿ ತೋರಿಸುವ ದಾರಿ ತೋರುಕ, ಆಲಯವು ಬಯಲೊಳಗೋ ಬಯಲು ಆಲಯದೊಳಗೋ ಅನ್ನೋ ಹಿರಿಯರ ಮಾತಿನಂತೆ ಒಬ್ಬರನ್ನು ಬಿಟ್ಟು ಇನ್ನೊಬ್ಬರಿಗೆ ಅಸ್ತಿತ್ವವಿಲ್ಲ.

ಚೇತನ್ ಜೀರಾಳ್

(ಚಿತ್ರ: http://udupishiroormutt.in)

5 ಅನಿಸಿಕೆಗಳು

  1. ಚೇತನ್ ರವರೇ, ಮೊದಲಿಗೆ ನೀವು ಆಯ್ಕೆ ಮಾಡಿಕೊಂಡಿರುವ ವಿಶಯವನ್ನು ಮೆಚ್ಚುತ್ತ, ಮತ್ತೊಂದು ವಿಶಯದ ಬಗ್ಗೆ ನಿಮ್ಮ ಗಮನ ಸೆಳೆಯಬಯಸುತ್ತೇನೆ. ನಿಮ್ಮ ಬರೆಹದಲ್ಲಿ “ಬಾರತೀಯ ಆದ್ಯಾತ್ಮ”(ನಮ್ಮ ಬಾರತೀಯ ಆದ್ಯಾತ್ಮದಲ್ಲಿ ಅದರಲ್ಲೂ ಮುಕ್ಯವಾಗಿ ಹಳ್ಳಿಗಳಲ್ಲಿ ಅತವಾ ಸಾಮಾನ್ಯ ಮನುಶ್ಯನಲ್ಲಿ ಇರುವಂತಹ ದೇವರು ಹಾಗೂ ಆತನ ಸಂಬಂದವನ್ನು ಅರ್‍ತ ಮಾಡಿಕೊಳ್ಳಲು ಸಹಾಯಕವಾಗುತ್ತದೆ.) ಎನ್ನುವ ಪದ ಬಳಸಿದ್ದೀರಿ. ಹಾಗೆಂದರೇನು ಎಂದು ಹೇಳುವಿರಾ? ಶಿವರಾಮ ಕಾರಂತರು “ಯಾರು ಬಾರತೀಯ” ಎನ್ನುವ ಬಗ್ಗೆ ಬರೆಹವೊಂದನ್ನು ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ “ಬಾರತೀಯ” ಎನ್ನುವುದು ಬಹುಚರ್ಚೆಗೆ ಒಳಗಾಗಿದೆ. ಈ ಹಿಂದೆ ತೀನಂಶ್ರೀಯವರು ಬರೆದಿದ್ದ “ಬಾರತೀಯ ಕಾವ್ಯಮೀಮಾಂಸೆ”ಯು ಕನ್ನಡಕ್ಕೆ ಹೊಂದುವುದಿಲ್ಲ ಎಂದು ಹೇಳಿ, ಕನ್ನಡಕ್ಕೆ ಅದರದ್ದೇ ಆದ ಕಾವ್ಯ ಮೀಮಾಂಸೆಯನ್ನು ರೂಪಿಸುವ ಕೆಲಸಗಳೂ ನಡೆಯುತ್ತಿವೆ. “ಬಾರತೀಯ” ಎಂದು ಇಂದು ನಾವು ಯಾವುದನ್ನು ಕರೆಯುತ್ತೇವೆಯೋ ಅಂತದೊಂದು ಇಲ್ಲ ಎಂಬುದು ನಾವು ನಮ್ಮ ಹಿನ್ನಡವಳಿಯನ್ನು ನೋಡಿದರೆ ತಿಳಿಯುತ್ತದೆ. ಈ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ತಾವು ಗಮನಿಸಲೆಂದು ಇಲ್ಲಿ ತಮಗೆ ಅದರ ಕೊಂಡಿ ನೀಡುತ್ತಿದ್ದೇನೆ. http://ladaiprakashanabasu.blogspot.in/2013/04/blog-post_21.html

  2. ಶಶಿಕುಮಾರ್ ಅವರೇ, ನಿಮ್ಮೆ ಮೆಚ್ಚುಗೆಗೆ ನನ್ನಿ. ನಿಮ್ಮ ಕೇಳ್ವಿ ಸರಿಯಾಗಿದೆ. ಇಲ್ಲಿ ನಾನು ಬಾರತೀಯ ಆದ್ಯಾತ್ಮ ಅಂತ ಉಪಯೋಗಿಸಿರುವ ಪದ ತೀರ ಮೇಲ್ಮಟ್ಟದಲ್ಲಿದೆ. ನೀವು ಹೇಳಿರುವ ಹಾಗೆ ನಮಗೆ ಒಂದು ಬಾರತ ಅನ್ನುವ ಪೋಲಿಟಿಕಲ್ ಎಂಟಿಟಿ ಇರಲಿಲ್ಲ. ಹಾಗೆಯೇ ಆದ್ಯಾತ್ಮದಲ್ಲೂ ಕೂಡ ಏಕತೆಯನ್ನ ಹುಡುಕುವುದು ಕಶ್ಟ. ರಾಮ, ಕ್ರುಶ್ಣ, ವೆಂಕಟೇಶ್ವರ, ಸೀತಾ, ದುರ್ಗಾ… ಮುಂತಾದ ದೇವರುಗಳು ಒಂದೆಡೆಯಾದರೆ ಊರಿಗೊಬ್ಬ ಹನುಮಪ್ಪ, ದುರ್ಗವ್ವ, ದ್ಯಾಮವ್ವ, ಊರಮ್ಮ, ಪ್ಲೇಗಮ್ಮ, ಮಂಟೇಸಾಮಿ, ಮಲೆ ಮಹದೇಶ್ವರ, ಮೈಲಾರಲಿಂಗ, ಸವದತ್ತಿ ಎಲ್ಲವ್ವ, ಮಾರವ್ವ ಹೀಗೆ ಆಯಾ ಪ್ರದೇಶಕ್ಕೆ ಅನುಗುಣವಾಗಿರುವ ದೇವರುಗಳಿವೆ. ಇವೆರಡನ್ನೂ ಬೇರೆಯಾಗಿಯೇ ನೋಡಬೇಕು. ಇದು ಸರಿಯಾದ ದಾರಿ ಕೂಡಾ. ಇಲ್ಲಿ ಪೂಜೆ ಮಾಡುವ ವಿದಾನಗಳು, ದೇವರುಗಳ ಬಗ್ಗೆ ಇರುವ ಸಾಹಿತ್ಯ ಎಲ್ಲವೂ ಬೇರೆಯಾಗಿದೆ. ಇವೆಲ್ಲವನ್ನೂ ಬೇರೆಯಾಗಿಯೇ ನೋಡಬೇಕು. ನನ್ನ ಗಮನ ಸಾಮಾನ್ಯ ಜನರು ಹಾಗೂ ದೇವರುಗಳ ನಡುವೆ ಇರಬಹುದಾದ ಒಡನಾಟದ ಬಗ್ಗೆ ಹೇಳುವುದು ಆಗಿದ್ದರಿಂದ ಆ ಪದ ಉಪಯೋಗಿಸಿದ್ದೇನೆ.

  3. ನಿಮ್ಮ ಉತ್ತರಕ್ಕೆ ನನ್ನಿ. ಚೇತನ್. ನಾವು ಜನರಲೈಸ್ ಮಾಡುವ ಗೋಜಿಗೆ ಹೋದಾಗ ಹೀಗೆ ಎಡವಟ್ಟುಗಳಾಗುತ್ತವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಒಂದೊಂದು ಪದವನ್ನೂ ಹೆಚ್ಚೆಚ್ಚು ಯೋಚಿಸಿ ಬಳಸಬೇಕಾಗಿದೆ. ನಮ್ಮ ಉದ್ದೇಶ ಒಳ್ಳೆಯದೇ ಆಗಿದ್ದರೂ ಓದುವವರು ಬೇರೆಯದೇ ರೀತಿಯಲ್ಲಿ ಅದನ್ನು ತಿಳಿದುಕೊಳ್ಳಬಹುದು. ನಮ್ಮ ಇಡೀ ಪರಿಸರ ತುಂಬ ಸೆನ್ಸಿಟಿವ್ ಆಗ್ತಾ ಹೋಗ್ತಿದೆ. ಮಾತನಾಡೋದೆ ಕಶ್ಟವಾಗಿ ಹೋಗೋ ಸ್ತಿತಿ ತಲುಪಿಬಿಡ್ತಿವೇನೋ! ಇನ್ನು ವಿಶಯಕ್ಕೆ ಬರುವುದಾದರೆ ನೀವು ಹೆಸರಿಸಿದ ದೇವರುಗಳ ಬಗ್ಗೆ ಸರಿಯಾದ ಅದ್ಯಯನ ನಡೀಬೇಕಿದೆ. ಸೆಕ್ಯುಲರ್ ಆದ ರೀತಿಯಲ್ಲಿ. ನಾಡ ದೇವತೆಗಳು ಅಂದಾಗ ನನಗೆ ಸಿದ್ಧಲಿಂಗಯ್ಯನವರ “ಅವತಾರಗಳು” ನೆನಪಿಗೆ ಬರ್ತದೆ. ದಯಮಾಡಿ ತಾವು ನನ್ನ ಕೇಳ್ವಿಗೆ ನೀಡಿರುವ ಉತ್ತರವನ್ನು ದೊಡ್ಡದಾಗಿಸಿ ಮತ್ತೊಂದು ಬರೆಹವನ್ನು ಬರೆಯಿರಿ. ನಮ್ಮ ಅರಿವು, ತಿಳಿವಿನ ಹರಹನ್ನು ಹಿಗ್ಗಿಸಿಕೊಳ್ಳೋಣಂತೆ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.