C/o ಚಾರ‍್ಮಾಡಿ: ಒಂದು ಸುಂದರ ಪ್ರೇಮಕತೆ

– ಪ್ರಶಾಂತ. ಆರ್. ಮುಜಗೊಂಡ.

ಒಂದು ಕಾದಂಬರಿ ಒಬ್ಬ ಓದುಗನ ಮನಸ್ಸಿಗೆ ಬಹುಬೇಗ ಹತ್ತಿರವಾಗುತ್ತಾ, ಅವನನ್ನು ತನ್ನೆಡೆಗೆ ಸೆಳೆದುಕೊಂಡು, ಮುಂದೆ ಅವನ ಅಂತರಾಳದ ಆಲೋಚನೆಗಳೊಂದಿಗೆ ಏರಿಳಿದು, ಹೊಸ ಅನುಬವ, ವಿಚಾರ, ಹುರುಪುಗಳನ್ನು ನೀಡಲು ಪ್ರಯತ್ನಿಸಿ, ಯಶಸ್ವಿಯಾಗಿದ್ದರೆ – ಅಂತದುದೊಂದು ಪಟ್ಟಿಗೆ ಈ ಕಾದಂಬರಿಯು ಸೇರುವುದರಲ್ಲಿ ಎರಡು ಮಾತಿಲ್ಲ.

ಪುಸ್ತಕಗಳ ಲೋಕದಲ್ಲಿ ಸೆಲ್ಪ್‌ಹೆಲ್ಪ್ ಬುಕ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಒಂದೆಡೆಯಾದರೆ ಇಲ್ಲಿ ಓರ‍್ವ ಬರಹಗಾರ ಇಂದಿನ ತಲೆಮಾರಿನ ದೆವ್ವ-ದೈವಗಳೆರಡೂ ಆದ ಪ್ರೀತಿ ಎಂಬ ಎರಡಕ್ಶರದ ನಂಬಿಕೆಯನ್ನು ಇಟ್ಟುಕೊಂಡು, ಚಾರ‍್ಮಾಡಿ ಗಾಟಿನಲ್ಲಿ ಪ್ರೀತಿ ಮಾಡುವುದಾ ಬೇಡವಾ, ಮಾಡಿದರೆ ಮುಂದೇನು, ಇಲ್ಲವಾದರೆ ಇನ್ನೇನು ಎಂದು ತಲೆಕೆಡಿಸುವ ವಿಶಯವನ್ನು ಬಹಳ ಸೊಗಸಾಗಿ ಹೇಳ ಹೊರಟಿದ್ದಾರೆ.

ಮೇಲೆ ಹೇಳಿದಂತೆ ಇದೇನು ಕಂಪ್ಲೀಟ್ ಸೆಲ್ಪ್‌ಹೆಲ್ಪ್ ಪುಸ್ತಕವಲ್ಲ, ಆದರೆ ಅದೇ ಮಾರ‍್ಗದಲ್ಲಿ ಸಾಗುವ ಒಂದೊಳ್ಳೆ ಪ್ರೇಮ ಕತೆ ಮತ್ತು ಸ್ವಲ್ಪ ಸ್ವಲ್ಪ ರೋಚಕವಾದದ್ದು ಕೂಡ ಅನ್ನಬಹುದು.

ಈ ಪುಸ್ತಕಕ್ಕೆ C/o ಚಾರ‍್ಮಾಡಿ ಅಂತ ಹೆಸರು ಕೊಟ್ಟಿದ್ದು ಕತೆಯ ಬಹುಬಾಗ ಅಲ್ಲಿ ನಡೆದದ್ದು ಅಂತಲೋ ಅತವಾ ಪ್ರೇಯಸಿಯೊಬ್ಬಳು ಅಲ್ಲಿಯೇ ದೊರೆತ ಕಾರಣಕ್ಕೋ ಎಂಬುದು ಪ್ರಶ್ನೆಯಾಗಿಯೇ ಉಳಿಯಿತು. ಆದರೆ ಕತೆಯ ಹುಟ್ಟು ಯಾವಾಗಲೂ ಗುಟ್ಟಾಗಿದ್ದರೆ ಮಾತ್ರ ಚೆಂದ ಎಂಬ ಲೇಕಕರ ಅನಿಸಿಕೆಯಂತೆ ಅದನ್ನು ಬದಿಗಿಟ್ಟು ಕಾದಂಬರಿಯನ್ನು ಅನುಬವಿಸುವುದು ಒಂದೊಳ್ಳೆಯ ಆಯ್ಕೆ. ಮುಕಪುಟದಲ್ಲಿ ತೋರಿಸಿದ ಚಾರ‍್ಮಾಡಿ ಕಣಿವೆಯ ಅಂದ ಚೆಂದ ಕತೆಯ ಕೊನೆಯವರೆಗೂ ಮನಸ್ಸಿನಲ್ಲಿ ಪದೇ ಪದೇ ಮೂಡಿ, ಕತೆಗೊಂದು ಅದ್ಬುತವಾದ ರಂಗವನ್ನು ನಿರ‍್ಮಾಣ ಮಾಡುತ್ತಲೇ ಮುಂದುವರಿಯುತ್ತದೆ.

ಮಹಾನಗರಗಳಲ್ಲಿ ಬೆಳಿಗ್ಗೆ ಹುಟ್ಟಿ ಸಂಜೆ ಸಾಯುವ, ಒಂಟಿತನವನ್ನು ದೂರಗೊಳಿಸಲು ಪಾರಿಜಾತದಂತೆ ಕಾಯಿಸಿ ಬರುವ, ಬೇಡವೆಂದರೂ ವರ‍್ಶಾನುಗಟ್ಟಲೆ ಮುಂದೆ ತಳ್ಳಿಕೊಂಡು ಹೋಗುವ ಪ್ರೇಮಕತೆಗಳು ನಿಮ್ಮದಾಗಿದ್ದರೆ ಅದಕ್ಕೊಂದು ಉತ್ತಮ ತಳಹದಿಯನ್ನಿಡುವ ಅಬಿಪ್ರಾಯ ಇಲ್ಲಿ ಸಿಗದೇ ಹೋಗುವುದಿಲ್ಲ.

ಬೆಂಗಳೂರಿಗೆ ಕಾಲಿಟ್ಟ ಮೇಲೆ 99 ಬಗೆ ಬಗೆಯ ದೋಸೆಯನ್ನು ಕಂಡು ಅದರಲ್ಲಿ ಒಂದೆರಡು ವೆರೈಟಿಗಳನ್ನು ತಿಂದು ಟ್ರೈ ಮಾಡಿದಂತೆ, ನಮ್ಮ ಹುಡುಗರ ಲವ್ ಅನ್ನೋ ಸಬ್ಜೆಕ್ಟ್ಅನ್ನು ವಿದವಿದವಾಗಿ ಪ್ರಯತ್ನಿಸಿ, ಕೊನೆಗೆ ಅದನ್ನು ಪಾಸ್ ಮಾಡದೇ ಒದ್ದಾಟ ಮಾಡುತ್ತಾ, ಬೇಡದ ವ್ಯಸನಗಳನ್ನು ಅಪ್ಪಿಕೊಂಡು ಬಿಡುತ್ತಾರೆ. ಇಲ್ಲಿಯ ಕತೆಯು ಸ್ವಲ್ಪ ಹೀಗೆಯೇ ಹೇಳಿಕೊಂಡರೂ ಸ್ವಲ್ಪ ಬೇರೆ ತರಹದ ಟ್ವಿಸ್ಟ್ ನೊಂದಿಗೆ ಕುತೂಹಲ ಹುಟ್ಟಿಸುತ್ತಾ ಓದಿಸಿಕೊಳ್ಳುತ್ತದೆ.

ಒಂದು ಕಡೆ ಲೇಕಕರು ಹೇಳ್ತಾರೆ, “ಹೆಣ್ಣುಮಕ್ಕಳು ಗರ‍್ಬಿಣಿಯಾಗಿ ಮುಂದೆ ಮಗು ಆಗುವುತನಕ ಹೇಗೆ ಕೇರ್ ತೆಗೆದುಕೊಳ್ಳುತ್ತಾರೋ, ಹಾಗೆ ಗಂಡುಮಕ್ಕಳು ಲವ್ ಆದಾಗ ಅಶ್ಟೇ ಜಾಗರೂಕರಾಗಿ ಇರಬೇಕು” ಅಬ್ಬಾ! ಇದು ಸತ್ಯಕ್ಕೆ ಎಶ್ಟು ಹತ್ತಿರವಲ್ಲವೇ? ಇಂತಹ ನೂರಾರು ಪ್ರಶ್ನೆ-ಉತ್ತರಗಳು ಕಾದಂಬರಿಯ ಮೊದಲಿನಿಂದ ಕೊನೆಯವರೆಗೂ, ರೈಲಿನಲ್ಲಿ ಹೋಗುವಾಗ ಬರುವ ನಮ್ಮದಲ್ಲದ ರೈಲು ನಿಲ್ದಾಣಗಳಂತೆ ಬಂದು ಬಂದು ಸ್ವಲ್ಪ ನಿಂತು ನಿಂತು ಮುಂದೆ ಹೋಗುತ್ತವೆ.

ಪ್ರೀತಿಸುವುದಕ್ಕೆ ಹೊರಡುವುದಕ್ಕಿಂತ ಒಂದು ಮೂಲೆಯಲ್ಲಿ ಕುಳಿತು ಪ್ರೇಮಕತೆಯೊಂದನ್ನು ಬರೆಯುವುದೇ ಸುಲಬದ ಕೆಲಸವಂತೆ ನಮ್ಮ ಈ ಕಾದಂಬರಿಯ ಲೇಕಕರಿಗೆ, ಹಾಗಾಗಿ ಒಂದೊಳ್ಳೆ ಪ್ರೇಮ ಕತೆಯನ್ನು ಅವರು ಹೇಳಿದ ಮೂಲೆಯಲ್ಲಿಯೇ ಕುಳಿತು ಅದನ್ನು ಓದುತ್ತಾ ಅನುಬವಿಸುವ ಯೋಚನೆ ನಿಮ್ಮದಾಗಿದ್ದರೆ ಇದನ್ನೊಮ್ಮೆ ಓದಿ, ಅನುಬವಿಸಿ ನೋಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks