’ಬುದ್ದಿಯೋರು ಬಂದ್ರು, ಗಾಡಿ ನಿಲ್ಲಿಸಿ!’

Bangalore-traffic-jam

ಏನು ಅಂತೀರಾ? ಸುಮಾರು ಒಂದು ವರ್‍ಶದಿಂದ ಕೆಲಸಕ್ಕೆಂದು ಹೆಬ್ಬಾಳಕ್ಕೆ ಬಸ್ಸಿನಲ್ಲಿ ದಿನವೂ ಹೋಗಿಬರುತ್ತೇನೆ. ಆದರೆ ತಿಂಗಳಿಗೆ 5 ರಿಂದ 6 ದಿನಗಳ ಕಾಲ ಟ್ರಾಪಿಕ್ ಜಾಮ್ ನಿಂದಾಗಿ ಜನ ಸಾಮಾನ್ಯರು ಬೇಸತ್ತಿದ್ದಾರೆ. ಕಾರಣ? ರಸ್ತೆಗಳ ದುರಸ್ತಿ, ಗಾಡಿಗಳು ಕೆಟ್ಟು ನಿಲ್ಲುವುದರಿಂದಲ್ಲ ಸಾರ್ ನಮ್ಮ ರಾಜಕಾರಣಿಗಳು, ಮಂತ್ರಿ ಮಾನ್ಯರು!!! ನನಗೆ ಒಂದು ವಿಶಯ ತಿಳಿಯುತ್ತಿಲ್ಲ. ನಮ್ಮ ರಾಜ್ಯದಲ್ಲಿ ಯಾವ ಪಕ್ಶ ಬಂದರೂ ಏನು ಸುದಾರಣೆಗಳು ಕಂಡುಬಂದಿಲ್ಲ. ಆದರೆ ಅವರುಗಳು ಒಂದು ಕಡೆಯಿಂದ ಇನ್ನೊಂದು ಕಡೆ ಓಡಾಡುವಾಗ ಜನಸಾಮಾನ್ಯರನ್ನು ನಿಲ್ಲಿಸಿ ಸಾಮಾನ್ಯರಿಗೆ ತೊಂದರೆ ಕೊಡುವುದು ಎಶ್ಟರ ಮಟ್ಟಿಗೆ ಸರಿ?

ಇವರಿಗೆ ಸಾಮಾನ್ಯ ಜನರ ಓಡಾಟ ನಿಲ್ಲಿಸಿ ಹೋಗುವ ಅವಶ್ಯಕತೆ ಇದೆಯೇ? ಇದ್ದರೂ ಅವರು ಮಾಡುವ ಮಹಾನ್ ಕೆಲಸವಾದರೂ ಏನು ಅನ್ನೋದನ್ನ ದಯಮಾಡಿ ತಿಳಿಸಬೇಕಾಗಿದೆ. ಯಾಕಂದರೆ ಇಲ್ಲಿ ಟಾಪಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಜನಸಾಮಾನ್ಯರಿಗೆ ಕೆಲಸಗಳು ಇರೋದಿಲ್ವೇ? ನಾನು ನೋಡಿದ ಹಾಗೆ ಹಲವಾರು ಬಾರಿ ರೋಗಿಗಳನ್ನು ಹೊತ್ತಿರುವ ಆಂಬುಲನ್ಸ್ ಕೂಡ ಗಂಟೆಗಟ್ಟಲೆ ಈ ಮಹಾನ್ ನಾಯಕರು ಹೋಗುವ ತನಕ ಟ್ರಾಪಿಕ್ ನಲ್ಲಿ ಸಿಕ್ಕಿಹಾಕಿಕ್ಕೊಂಡಿರುತ್ತವೆ. ಅದರಲ್ಲಿರುವ ರೋಗಿಗಳ ಗತಿ ಏನು? ಇದಲ್ಲದೇ ಏರ್ ಪೋರ್‍ಟಿಗೆ ಹೋಗುವವರು, ಕೆಲಸಕ್ಕೆ ಹೋಗುವವರು, ಬೇರೆ ಯಾವುದೋ ತುರ್‍ತು ಕೆಲಸಗಳಿಗೆ ಹೋಗುವವರು ಈ ರಾಜಕಾರಣಿಗಳು ಹೋಗುವ ತನಕ ಕಾಯುತ್ತಾ ಬಿದ್ದಿರಬೇಕಾಗಿದೆ. ಈ ರಾಜಕಾರಣಿಗಳಿಗೆ ಮಾತ್ರ ಮುಕ್ಯವಾದ ಕೆಲಸಗಳು ಇರತ್ತವಾ?

ನಿಜಕ್ಕೂ ನನಗೆ ಬ್ರಿಟಿಶ್ ವ್ಯವಸ್ತೆ ನೆನಪಾಗುತ್ತಿದೆ. ನಮ್ಮಿಂದಲೇ ಆರಿಸಲ್ಪಟ್ಟಿರುವ ಈ ಜನಪ್ರತಿನಿದಿಗಳು ನಮ್ಮ ಸೇವಕರು ಅನ್ನೋ ಸತ್ಯವನ್ನೇ ಮರೆತಿದ್ದಾರೆ. ಎಲ್ಲರೂ ಸಮಾನರು ಎಂದು ಹೇಳುವ ಈ ದೇಶದಲ್ಲಿ ಈ ಪ್ರತ್ಯೇಕ ವ್ಯವಸ್ತೆ ಅವರಿಗೆ ಮಾತ್ರ ಯಾಕೆ? ಬದ್ರತೆಯ ನೆಪದಲ್ಲಿ ಜನರಿಗೆ ಒಳಿತಿಗಿಂತ ಸಮಸ್ಯೆಗಳೇ ಜಾಸ್ತಿಯಾಗುತ್ತಿವೆ. ಇಂದಿನ ತಂತ್ರಜ್ನಾನದ ಯುಗದಲ್ಲಿ ಸಿಗುವ ಸವ್ಲಬ್ಯಗಳನ್ನು ಇವರು ಯಾಕೆ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ? ನಮ್ಮ ಹಾಗೆಯೇ ಇವರು ಸಹ ಹೋಗುವ ಜಾಗಕ್ಕೆ ಸಮಯಕ್ಕಿಂತ ಮೊದಲಿಗೆ ಯಾಕೆ ಹೊರಡುವುದಿಲ್ಲ? ಜನರಿಗೆ ತೊಂದರೆ ಕೊಡುವಂತಹ ಇಂತಹ ವ್ಯವಸ್ತೆಗಳು ಬದಲಾಗಬೇಕಿದೆ ಎಂಬುದು ನನ್ನ ಅನಿಸಿಕೆ. ನಿಮ್ಮ ಅನಿಸಿಕೆ ಏನು?

ಶ್ವೇತಾ ಸಿ ಜೀರಾಳ್

(ಚಿತ್ರ: http://hkshyam.blogspot.in/)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: