ಈ ಆಲದ ಮರದ ಬಂದನವಾಗಿ ನೂರಕ್ಕೂ ಹೆಚ್ಚು ವರುಶಗಳು ಕಳೆದಿವೆ!

 ಕೆ.ವಿ.ಶಶಿದರ.

ಆಲದ ಮರ, Banyan Tree

ಇಂದಿನ ಪಾಕಿಸ್ತಾನದಲ್ಲಿನ ಸೈನ್ಯದ ಕಂಟೋನ್ಮೆಂಟ್ ಪ್ರದೇಶ ಲಾಂಡಿಕೋಟಾಲ್‍ನಲ್ಲಿ ಒಂದು ವಿಚಿತ್ರವಾದ ಆಲದ ಮರ ಇದೆ. ಈ ಮರ ಅಲ್ಲಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು ಹಲವಾರು ಸರಪಳಿಗಳಿಂದ ಬಂದಿಸಿರುವುದು ಕಂಡುಬರುತ್ತದೆ. ವಿಚಿತ್ರವಾಗಿ ಕಾಣುತ್ತದಲ್ಲ? ಆದರೆ ಇದು ನಿಜ.

ಯಾಕೆ ಈ ಮರವನ್ನು ಬಂದಿಸಲಾಯಿತು? ಚಲನ ಶಕ್ತಿ ಇಲ್ಲದ ಮರ ತಪ್ಪಿಸಿಕೊಳ್ಳಲು ಸಾದ್ಯವೇ? ಇದನ್ನು ಬಂದಿಸುವಂತೆ ಆದೇಶಿಸಿದ ಆ ಮಹಾನ್ ವ್ಯಕ್ತಿ ಯಾರು? ಅಶ್ಟಕ್ಕೂ ಈ ಮರದಿಂದ ಆದ ಅಪರಾದವಾದರೂ ಏನು? ಬಂದನದ ಹಿಂದಿರುವ ಉದ್ದೇಶವೇನು? ಎಂಬಿತ್ಯಾದಿ ಪ್ರಶ್ನೆಗಳು ತಂತಾನೆ ಉದ್ಬವಿಸುತ್ತವೆ.

ಆಲದ ಮರವನ್ನು ಸೆರೆಯಾಗಿಸಿರುವ ಕಾರಣವಾದರೂ ಏನು?

ಇದರ ಕತೆಯನ್ನು ಹುಡುಕುತ್ತಾ ಹೋದಲ್ಲಿ ಅದು ಎಡತಾಕುವುದು 1898ರಲ್ಲಿ ನಡೆದ ಒಂದು ಗಟನೆಗೆ. ಜೇಮ್ಸ್ ಸ್ಕ್ವಿಡ್ ಎಂಬ ಬ್ರಿಟಿಶ್‍ ಸೈನ್ಯಾದಿಕಾರಿ ಲಾಂಡಿಕೋಟಾಲ್‍ನ ಕಂಟೋನ್ಮೆಂಟ್‍ನಲ್ಲಿದ್ದ. ಒಮ್ಮೆ ಈತ ಕುಡಿದ ಅಮಲಿನಲ್ಲಿ ಬರುವಾಗ ಈ ಆಲದಮರ ವಾಲುತ್ತಾ ತನ್ನತ್ತ ಬಂದ ಅನುಬವವಾಯಿತಂತೆ ಅವನಿಗೆ. ಮರದ ಈ ನಡವಳಿಕೆಯಿಂದ  ಸೆರೆಯಾದ ಮರ, Arrested treeವಿಚಲಿತನಾದ ಸ್ಕ್ವಿಡ್, ಮೆಸ್ ಸರ‍್ಜೆಂಟ್‍ನನ್ನು ಕರೆದು ಕೂಡಲೇ ಮರವನ್ನು ಬಂದಿಸುವಂತೆ ಆದೇಶಿಸಿದ. ಮೇಲದಿಕಾರಿಗಳ ಆದೇಶವನ್ನು ಪ್ರಶ್ನಿಸುವಂತಿರಲಿಲ್ಲ. ಆದೇಶ ತಪ್ಪೋ ಸರಿಯೋ ಪಾಲಿಸಬೇಕಾದ್ದು ಅದೀನ ಅದಿಕಾರಿಗಳ ಆದ್ಯ ಕರ‍್ತವ್ಯ. ಅದರಂತೆ ಸರ‍್ಜೆಂಟ್‍ ಸ್ಕ್ವಿಡ್‍ ನ ಆದೇಶವನ್ನು ಅನುಸರಿಸಿ ಅಪರಾದಿ ಮರವನ್ನು ಸರಪಳಿಯಿಂದ ಬಂದಿಸಿದ.

ವರುಶಗಳು ಉರುಳಿದರೂ ಈ ಮರದ ಅಪರಾದ ಏನು? ಎಂದು ಯಾರೂ ಪ್ರಶ್ನಿಸಿಲ್ಲ. ಯಾರೂ ಇದರ ಪರವಾಗಿ ವಾದಿಸಿಲ್ಲ. ಇದಕ್ಕೆ ಜಾಮೀನು ಕೊಡಿಸಲು ಪ್ರಯತ್ನಿಸಿಲ್ಲ! ಪರಿಸರವಾದಿಗಳೂ ಕಣ್ಣು ಮುಚ್ಚಿ ಕುಳಿತಿದ್ದಾರೆ. ಹಾಗಾಗಿ ನೂರಕ್ಕೂ ಹೆಚ್ಚು ವರ‍್ಶಗಳಿಂದ ಬಂದಿತವಾಗಿರುವ ಈ ಆಲದ ಮರಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಸರಪಳಿಯ ಬಿಗಿತದಿಂದ ಬಿಡುಗಡೆ ಬಾಗ್ಯ ಕಂಡಿಲ್ಲ.

ಬ್ರಿಟೀಶರ ಮಸಲತ್ತು?

ಇದರ ಹಿಂದೆ ಬ್ರಿಟೀಶರ ಮಸಲತ್ತಿದೆಯೇ? ಎಂಬ ಅನುಮಾನ ಹುಟ್ಟುವುದು ಸಹಜ. ಬ್ರಿಟೀಶ್ ಸಾಮ್ರಾಜ್ಯದ ವಿರುದ್ದವಾಗಿ ಯಾರಾದರೂ, ಅದರಲ್ಲೂ ಆ ಪ್ರದೇಶದ ಬುಡಕಟ್ಟು ಜನಾಂಗದವರು ನಡೆದುಕೊಂಡರೆ ಅವರಿಗೂ ಸಹ ಇದೇ ರೀತಿಯ ಶಿಕ್ಶೆ ಗ್ಯಾರಂಟಿ ಎಂಬ ಸಂದೇಶವಿದ್ದಿರಬಹುದು ಎಂದು ಸೈನ್ಯದ ಕಂಟೋನ್ಮೆಂಟ್ ಪ್ರದೇಶದಲ್ಲಿ ವಾಸಿಸುವವರ ಅಂಬೋಣ. ಬಂದಿತವಾಗಿರುವ ಮರ ಬ್ರಿಟೀಶ್ ಆಳ್ವಿಕೆಗೆ ಪಶ್ತೂನ್‍ನರ ವಿರೋದವನ್ನು ಅಡಗಿಸುವ ಉದ್ದೇಶದಿಂದ ಗೋಶಿಸಲ್ಪಟ್ಟ ‘ಗಡಿ ಪ್ರದೇಶದ ಅಪರಾದಗಳ ನಿಯಂತ್ರಣ ಕಾನೂನಿನ’ ಒಂದು ಕರಾಳ ಮುಕ. ಬುಡಕಟ್ಟು ಜನಾಂಗದ ಯಾವೊದೇ ಒಬ್ಬ್ಬ ವ್ಯಕ್ತಿ ಅಪರಾದವೆಸಗಿದರೆ ಬ್ರಿಟೀಶರು ಇಡೀ ಕುಟುಂಬ ಅತವಾ ಇಡೀ ಗುಂಪನ್ನು ವಿಚಾರಣೆಯಿಲ್ಲದೆ ಒಟ್ಟಾಗಿ ಶಿಕ್ಶಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ.

ಬ್ರಿಟೀಶರ ಕಾಲದ ಕಾಯ್ದೆ ಇನ್ನೂ ಜಾರಿಯಲ್ಲಿದೆ!

ಆಶ್ಚರ‍್ಯಕರ ವಿಶಯವೆಂದರೆ ವಾಯುವ್ಯ ಪಾಕಿಸ್ತಾನದ ಪೆಡರೆಲ್ ಆಡಳಿತದ (FCR) ಬುಡಕಟ್ಟು ಪ್ರದೇಶದಲ್ಲಿ ಈ ಕಾನೂನು ಈಗಲೂ ಜಾರಿಯಲ್ಲಿರುವುದು. ಇದರನ್ವಯ ಈ ಪ್ರದೇಶದಲ್ಲಿ ವಾಸವಿರುವ ಬುಡಕಟ್ಟು ಜನರಿಗೆ ಮನವಿ ಮಾಡುವ ಹಕ್ಕನ್ನು, ಕಾನೂನುಬದ್ದ ಪ್ರಾತಿನಿದ್ಯದ ಹಕ್ಕನ್ನು, ತರ‍್ಕಬದ್ದ ಸಾಕ್ಶ್ಯವನ್ನು ಪ್ರಸ್ತುತ ಪಡಿಸುವ ಹಕ್ಕನ್ನು ತಿರಸ್ಕರಿಸುವ ಹಾಗೂ ನ್ಯಾಯಸಮ್ಮತವಾದ ವಿಚಾರಣೆಯನ್ನು ನಿರಾಕರಿಸುವ ಹಕ್ಕನ್ನು ಸರ‍್ಕಾರ ಕಾಯ್ದಿರಿಸಿಕೊಂಡಿದೆ. ಎಸಗಿರುವ ಅಪರಾದವನ್ನು ತಿಳಿಸದೇ ನಿವಾಸಿಗಳನ್ನು ಯಾವಾಗ ಬೇಕಾದರೂ ಬಂದಿಸಬಹುದು ಎಂದೂ ಕಾನೂನಿನಲ್ಲಿದೆ. ಇದರೊಂದಿಗೆ ಅಪರಾದಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿ ವಶಪಡಿಸಿಕೊಳ್ಳುವ ಆದಿಕಾರವನ್ನು ಸರ‍್ಕಾರವು ತನ್ನಲ್ಲಿರಿಸಿಕೊಂಡಿದೆ. ಈ ಕಾನೂನಿನಲ್ಲಿ ಮೂಲಬೂತ ಮಾನವ ಹಕ್ಕುಗಳ ಸಮಗ್ರ ಉಲ್ಲಂಗನೆ ಅಡಕವಾಗಿರುವುದು ಸ್ಪಶ್ಟವಾಗಿ ಗೋಚರಿಸುತ್ತದೆ.

2008ರಲ್ಲಿ ಪಾಕಿಸ್ತಾನದ ಆಗಿನ ಪ್ರದಾನಿ ಯೂಸಪ್‍ ರಾಜಾ ಗಿಲಾನಿ ಈ FCR ಅನ್ನು ರದ್ದು ಮಾಡುವ ಆಶಯವನ್ನು ವ್ಯಕ್ತಪಡಿಸಿದ್ದರು. ಆದರೆ ಇದರಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ.  2011ರಲ್ಲಿ ಈ FCR ಕಾನೂನಿಗೆ ಕೆಲವು ತಿದ್ದುಪಡಿಗಳನ್ನು ತಂದು ಸುದಾರಣೆ ಮಾಡಲಾಯಿತು. ಅದರಲ್ಲಿ ಜಾಮೀನು ನೀಡುವ ಅವಕಾಶ, ತಪ್ಪಾಗಿ ಬಂದಿಸಿದಲ್ಲಿ ಸೂಕ್ತ ಪರಿಹಾರ, ಮಕ್ಕಳು, ಮಹಿಳೆಯರು ಮತ್ತು ಹಿರಿಯರಿಗೆ ವಿನಾಯಿತಿ ಮುಂತಾದವುಗಳು ಸೇರಿಸಲ್ಪಟ್ಟವು.

( ಮಾಹಿತಿ ಮತ್ತು ಚಿತ್ರ ಸೆಲೆ:  scoopwhoop.com, amusingplanet.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: